[1] ಸೊಲೊಮೋನನು ತನ್ನ ಪ್ರಾರ್ಥನೆಯನ್ನು ಮುಗಿಸಿದ ಕೂಡಲೆ, ಬೆಂಕಿಯು ಆಕಾಶದಿಂದ ಇಳಿದು ದಹನಬಲಿಗಳನ್ನೆಲ್ಲಾ ದಹಿಸಿಬಿಟ್ಟಿತು. ಯೆಹೋವ ದೇವರ ಮಹಿಮೆಯು ಆಲಯವನ್ನು ತುಂಬಿತು.
[2] ಯೆಹೋವ ದೇವರ ಮಹಿಮೆಯು ಆಲಯವನ್ನು ತುಂಬಿದ್ದರಿಂದ ಯಾಜಕರು ಆಲಯದಲ್ಲಿ ಹೋಗಲಾರದೆ ಇದ್ದರು.
[3] ಇಸ್ರಾಯೇಲರೆಲ್ಲರೂ ಬೆಂಕಿಯು ಇಳಿದದ್ದನ್ನೂ, ಆಲಯದ ಮೇಲೆ ಇರುವ ಯೆಹೋವ ದೇವರ ಮಹಿಮೆಯನ್ನೂ ಕಂಡಾಗ, ಅವರು ನೆಲಕ್ಕೆ ತಮ್ಮ ಮುಖಗಳನ್ನು ಬಾಗಿ, ನೆಲಗಟ್ಟಿನ ಮೇಲೆ ಮೊಣಕಾಲೂರಿ ಆರಾಧಿಸುತ್ತಾ, ಯೆಹೋವ ದೇವರನ್ನು ಕೊಂಡಾಡಿ ಹೇಳಿದ್ದೇನೆಂದರೆ, “ಯೆಹೋವ ದೇವರು ಒಳ್ಳೆಯವರು, ಅವರ ಪ್ರೀತಿಯು ಯುಗಯುಗಕ್ಕೂ ಇರುವುದು.”
[4] ಆಗ ಅರಸನೂ, ಸಮಸ್ತ ಜನರೂ ಯೆಹೋವ ದೇವರ ಮುಂದೆ ಬಲಿಗಳನ್ನು ಅರ್ಪಿಸಿದರು.
[5] ಅರಸನಾದ ಸೊಲೊಮೋನನು 22,000 ಹೋರಿಗಳನ್ನೂ, 1,20,000 ಕುರಿಗಳನ್ನೂ ಬಲಿಯಾಗಿ ಅರ್ಪಿಸಿದನು. ಹೀಗೆಯೇ ಅರಸನೂ, ಸಮಸ್ತ ಜನರೂ ದೇವರ ಆಲಯವನ್ನು ಪ್ರತಿಷ್ಠೆ ಮಾಡಿದರು.
[6] ಯಾಜಕರು ತಮ್ಮ ತಮ್ಮ ಸೇವೆಯಲ್ಲಿ ನಿಂತರು. ಹಾಗೆಯೇ ಲೇವಿಯರು ಯೆಹೋವ ದೇವರ ಗೀತವಾದ್ಯಗಳನ್ನು ಹಿಡಿದುಕೊಂಡು ನಿಂತರು. ಅರಸನಾದ ದಾವೀದನು ಯೆಹೋವ ದೇವರನ್ನು ಕೊಂಡಾಡುವುದಕ್ಕೆ ಇವುಗಳನ್ನು ಮಾಡಿಸಿದ್ದನು. “ಯೆಹೋವ ದೇವರ ಪ್ರೀತಿಯು ಯುಗಯುಗಕ್ಕೂ ಇರುವುದು,” ಎಂಬುದಾಗಿ ಆ ವಾದ್ಯಗಳೊಡನೆ ಭಜಿಸುತ್ತಿದ್ದರು. ಯಾಜಕರು ಲೇವಿಯರ ಮುಂದೆ ನಿಂತು ತುತೂರಿಗಳನ್ನು ಊದುತ್ತಿದ್ದರು. ಸಮಸ್ತ ಇಸ್ರಾಯೇಲರೂ ನಿಂತಿದ್ದರು.
[7] ಸೊಲೊಮೋನನು ಮಾಡಿಸಿದ ಕಂಚಿನ ಬಲಿಪೀಠದ ಮೇಲೆ ದಹನಬಲಿಗಳನ್ನೂ, ಧಾನ್ಯ ಸಮರ್ಪಣೆಯ ಕೊಬ್ಬನ್ನೂ ಇಡುವುದಕ್ಕೆ ಸ್ಥಳ ಸಾಲದೆ ಇದ್ದುದರಿಂದ, ಸೊಲೊಮೋನನು ಯೆಹೋವ ದೇವರ ಆಲಯದ ಮುಂದಿರುವ ಮಧ್ಯದ ಅಂಗಳವನ್ನು ಪ್ರತಿಷ್ಠೆಮಾಡಿ, ಅಲ್ಲಿ ಅವನು ದಹನಬಲಿಗಳನ್ನೂ, ಸಮಾಧಾನದ ಬಲಿಗಳ ಕೊಬ್ಬನ್ನೂ ಅರ್ಪಿಸಿದನು.
[8] ಅದೇ ಕಾಲದಲ್ಲಿ ಸೊಲೊಮೋನನೂ, ಅವನ ಸಂಗಡ ಲೆಬೊ ಹಮಾತಿನ ಪ್ರದೇಶ ಮೊದಲುಗೊಂಡು ಈಜಿಪ್ಟಿನ ನದಿಯವರೆಗೆ ಇರುವ ಮಹಾ ಜನಾಂಗವಾಗಿ ಕೂಡಿಬಂದಿದ್ದ ಸಮಸ್ತ ಇಸ್ರಾಯೇಲರೂ ಅವನ ಸಂಗಡ ಏಳು ದಿವಸ ಹಬ್ಬವನ್ನು ಮಾಡಿದರು.
[9] ಎಂಟನೆಯ ದಿನದಲ್ಲಿ ಪರಿಶುದ್ಧ ಸಮೂಹವನ್ನು ನಡೆಸಿದರು. ಏಕೆಂದರೆ ಏಳು ದಿವಸ ಬಲಿಪೀಠದ ಪ್ರತಿಷ್ಠೆಯನ್ನು ಮತ್ತು ಇನ್ನು ಏಳು ದಿವಸ ಹಬ್ಬವನ್ನು ಆಚರಿಸಿದರು.
[10] ಏಳನೆಯ ತಿಂಗಳಿನ ಇಪ್ಪತ್ತಮೂರನೆಯ ದಿವಸದಲ್ಲಿ ಅವನು ಜನರಿಗೆ ಅವರವರ ಡೇರೆಗಳಿಗೆ ಹೋಗುವುದಕ್ಕೆ ಅಪ್ಪಣೆಕೊಡಲು, ಆಗ ಅವರು ಯೆಹೋವ ದೇವರು ದಾವೀದನಿಗೂ, ಸೊಲೊಮೋನನಿಗೂ, ತನ್ನ ಜನರಾದ ಇಸ್ರಾಯೇಲರಿಗೂ ಮಾಡಿದ ಉಪಕಾರದ ನಿಮಿತ್ತ ಅವರು ಹೃದಯದಲ್ಲಿ ಆನಂದಭರಿತರಾಗಿ ಸಂತೋಷಪಡುತ್ತಾ ಹೋದರು.
[11] ಸೊಲೊಮೋನನು ಯೆಹೋವ ದೇವರ ಆಲಯವನ್ನೂ, ಅರಮನೆಯನ್ನೂ ಕಟ್ಟಿಸಿ ತೀರಿಸಿದನು. ಅವನು ಯೆಹೋವ ದೇವರ ಆಲಯದಲ್ಲಿಯೂ, ತನ್ನ ಅರಮನೆಯಲ್ಲಿಯೂ ಮಾಡಬೇಕಾದ ತನ್ನ ಮನಸ್ಸಿನಲ್ಲಿ ಇದ್ದ ಯೋಜನೆಯನ್ನು ಈಡೇರಿಸುವಲ್ಲಿ ಯಶಸ್ವಿಯಾದನು.
[12] ಯೆಹೋವ ದೇವರು ರಾತ್ರಿಯಲ್ಲಿ ಸೊಲೊಮೋನನಿಗೆ ಪ್ರತ್ಯಕ್ಷರಾಗಿ ಅವನಿಗೆ, “ನಾನು ನಿನ್ನ ಪ್ರಾರ್ಥನೆಯನ್ನು ಕೇಳಿ ಬಲಿಯನ್ನು ಅರ್ಪಿಸುವ ಆಲಯವಾಗಿ ನನಗೆ ಈ ಸ್ಥಳವನ್ನು ಆಯ್ದುಕೊಂಡಿದ್ದೇನೆ.
[13] “ಮಳೆಯಿಲ್ಲದಂತೆ ನಾನು ಆಕಾಶವನ್ನು ಮುಚ್ಚಿದರೂ ದೇಶವನ್ನು ತಿಂದುಬಿಡಲು ಮಿಡತೆಗಳಿಗೆ ಆಜ್ಞಾಪಿಸಿದರೂ, ಇಲ್ಲವೆ ನನ್ನ ಜನರ ಮಧ್ಯದಲ್ಲಿ ಘೋರ ವ್ಯಾಧಿಯನ್ನು ಕಳುಹಿಸಿದರೂ,
[14] ನನ್ನ ಹೆಸರಿನಿಂದ ಕರೆಯಲಾದ ನನ್ನ ಜನರು ತಮ್ಮನ್ನು ತಗ್ಗಿಸಿಕೊಂಡು ಪ್ರಾರ್ಥನೆಮಾಡಿ, ನನ್ನನ್ನು ಹುಡುಕಿ ತಮ್ಮ ದುರ್ಮಾರ್ಗಗಳಿಂದ ತಿರುಗಿದರೆ, ಆಗ ನಾನು ಪರಲೋಕದಿಂದ ಕೇಳಿ ಅವರ ಪಾಪವನ್ನು ಮನ್ನಿಸಿ, ಅವರ ದೇಶವನ್ನು ಗುಣ ಮಾಡುವೆನು.
[15] ಈಗ ಈ ಸ್ಥಳದ ಪ್ರಾರ್ಥನೆಗೆ ನನ್ನ ಕಣ್ಣುಗಳು ತೆರೆದಿರುವುವು, ನನ್ನ ಕಿವಿಗಳು ಆಲೈಸುತ್ತಿರುವುವು.
[16] ನನ್ನ ನಾಮವು ಯುಗಯುಗಾಂತರಕ್ಕೂ ಅಲ್ಲಿರುವ ಹಾಗೆ ಈ ಆಲಯವನ್ನು ಆಯ್ದುಕೊಂಡು ಪರಿಶುದ್ಧ ಮಾಡಿದ್ದೇನೆ. ನನ್ನ ಕಣ್ಣುಗಳೂ, ನನ್ನ ಹೃದಯವೂ ನಿತ್ಯವಾಗಿ ಅಲ್ಲಿರುವುವು.
[17] “ನೀನು ನಿನ್ನ ತಂದೆಯಾದ ದಾವೀದನಂತೆ, ನಾನು ನಿನಗೆ ಆಜ್ಞಾಪಿಸಿದ ನನ್ನ ಕಟ್ಟಳೆಗಳನ್ನೂ ನ್ಯಾಯಗಳನ್ನೂ ನಿಷ್ಠೆಯಿಂದ ಕೈಗೊಂಡು ನಡೆದರೆ,
[18] ‘ಇಸ್ರಾಯೇಲಿನ ಸಿಂಹಾಸನದ ಮೇಲೆ ಕುಳಿತುಕೊಳ್ಳಲು ನಿನಗೆ ಉತ್ತರಾಧಿಕಾರಿಯ ಕೊರತೆಯಾಗುವುದಿಲ್ಲ,’ ಎಂದು ನಾನು ನಿನ್ನ ತಂದೆ ದಾವೀದನ ಸಂಗಡ ಮಾಡಿದ ಒಡಂಬಡಿಕೆಯ ಪ್ರಕಾರ ನಿನ್ನ ರಾಜ್ಯದ ಸಿಂಹಾಸನವನ್ನು ಸ್ಥಿರಪಡಿಸುತ್ತೇನೆ.
[19] “ಆದರೆ ನೀವು, ನಾನು ನಿಮಗೆ ಕೊಟ್ಟಿರುವ ಆಜ್ಞೆಗಳನ್ನೂ ಕಟ್ಟಳೆಗಳನ್ನೂ ತೊರೆದುಬಿಟ್ಟು, ನನ್ನಿಂದ ದೂರಹೋಗಿ ಅನ್ಯದೇವರುಗಳನ್ನು ಸೇವಿಸಿ ಅವುಗಳಿಗೆ ಅಡ್ಡಬಿದ್ದರೆ,
[20] ಆಗ ನಾನು ಇಸ್ರಾಯೇಲಿಗೆ ಕೊಟ್ಟ ನನ್ನ ದೇಶದೊಳಗಿಂದ ಅವರನ್ನು ಕಿತ್ತುಹಾಕಿ, ನನ್ನ ನಾಮಕ್ಕೋಸ್ಕರ ಪ್ರತಿಷ್ಠಿಸಿಕೊಂಡ ಈ ಆಲಯವನ್ನು ನಾನು ನಿರಾಕರಿಸುವೆನು. ಅದನ್ನು ಸಮಸ್ತ ಜನರಲ್ಲಿ ಗಾದೆಯಾಗಿಯೂ, ಅಪಹಾಸ್ಯಕ್ಕೆ ಆಸ್ಪದವಾಗುವಂತೆ ಮಾಡುವೆನು.
[21] ಇದಲ್ಲದೆ ಉನ್ನತವಾಗಿರುವ ಈ ಆಲಯದ ಮಾರ್ಗವಾಗಿ ಹೋಗುವವರೆಲ್ಲರೂ ಅದಕ್ಕೆ ಆಶ್ಚರ್ಯಪಟ್ಟು, ‘ಯೆಹೋವ ದೇವರು, ಈ ದೇಶಕ್ಕೂ, ಈ ಆಲಯಕ್ಕೂ ಹೀಗೆ ಏಕೆ ಮಾಡಿದರು?’ ಎಂದು ಕೇಳುವರು.
[22] ಅದಕ್ಕೆ ಜನರು, ‘ತಮ್ಮ ತಂದೆಗಳನ್ನು ಈಜಿಪ್ಟ್ ದೇಶದೊಳಗಿಂದ ಬರಮಾಡಿದ ತಮ್ಮ ದೇವರಾದ ಯೆಹೋವ ದೇವರನ್ನು ಬಿಟ್ಟು, ಅನ್ಯದೇವರುಗಳನ್ನು ಹಿಂಬಾಲಿಸಿ, ಅವುಗಳಿಗೆ ಅಡ್ಡಬಿದ್ದು ಸೇವಿಸಿದ್ದರಿಂದ, ಅವರು ಈ ಕೇಡನ್ನೆಲ್ಲಾ ಅವರ ಮೇಲೆ ಬರಮಾಡಿದ್ದಾರೆಂದು ಹೇಳುವರು,’ ” ಎಂದರು.