[1] ಆಗ ಯೆಹೂದ ಜನರೆಲ್ಲರು ಹದಿನಾರು ವರ್ಷದವನಾದ ಉಜ್ಜೀಯನನ್ನು ತೆಗೆದುಕೊಂಡು, ಅವನನ್ನು ಅವನ ತಂದೆ ಅಮಚ್ಯನಿಗೆ ಬದಲಾಗಿ ಅರಸನನ್ನಾಗಿ ಮಾಡಿದರು.
[2] ಅರಸನು ತನ್ನ ಪಿತೃಗಳ ಜೊತೆ ಸೇರಿದ ತರುವಾಯ, ಉಜ್ಜೀಯನು ಏಲೋತ್ ಪಟ್ಟಣವನ್ನು ಕಟ್ಟಿಸಿ, ಅದನ್ನು ಯೆಹೂದಕ್ಕೆ ತಿರುಗಿ ಸೇರಿಸಿದನು.
[3] ಉಜ್ಜೀಯನು ಅರಸನಾದಾಗ, ಹದಿನಾರು ವರ್ಷದವನಾಗಿದ್ದು, ಯೆರೂಸಲೇಮಿನಲ್ಲಿ ಐವತ್ತೆರಡು ವರ್ಷ ಆಳಿದನು. ಅವನ ತಾಯಿಯ ಹೆಸರು ಯೆಕೊಲ್ಯಳು, ಅವಳು ಯೆರೂಸಲೇಮಿನವಳು.
[4] ಅವನು ತನ್ನ ತಂದೆಯಾದ ಅಮಚ್ಯನಂತೆ ಯೆಹೋವ ದೇವರ ದೃಷ್ಟಿಯಲ್ಲಿ ಒಳ್ಳೆಯದನ್ನು ಮಾಡಿದನು.
[5] ದೇವರ ದರ್ಶನಗಳಲ್ಲಿ ಗ್ರಹಿಕೆಯುಳ್ಳವನಾದ ಜೆಕರ್ಯನ ದಿವಸಗಳಲ್ಲಿ ಅವನು ದೇವರನ್ನು ಹುಡುಕಿದನು. ಯೆಹೋವ ದೇವರನ್ನು ಹುಡುಕುವ ದಿವಸಗಳ ಮಟ್ಟಿಗೂ, ದೇವರು ಅವನನ್ನು ಅಭಿವೃದ್ಧಿ ಪಡಿಸಿದರು.
[6] ಅವನು ಹೊರಟುಹೋಗಿ ಫಿಲಿಷ್ಟಿಯರ ಮೇಲೆ ಯುದ್ಧಮಾಡಿ, ಗತ್‌ನ ಗೋಡೆಯನ್ನೂ, ಯಬ್ನೆಯ ಗೋಡೆಯನ್ನೂ, ಅಷ್ಡೋದಿನ ಗೋಡೆಯನ್ನೂ ಕೆಡವಿಬಿಟ್ಟು, ಅಷ್ಡೋದಿನ ಮತ್ತು ಫಿಲಿಷ್ಟಿಯರ ಪ್ರಾಂತ್ಯಗಳಲ್ಲಿ ಪಟ್ಟಣಗಳನ್ನು ಕಟ್ಟಿಸಿದನು.
[7] ಇದಲ್ಲದೆ ಫಿಲಿಷ್ಟಿಯರ ಮೇಲೆಯೂ, ಗುರ್ಬಾಳಿನಲ್ಲಿ ವಾಸವಾಗಿದ್ದ ಅರಬಿಯರ ಮೇಲೆಯೂ, ಮೆಗೂನ್ಯರ ಮೇಲೆಯೂ ಅವನು ಯುದ್ಧಮಾಡಿದಾಗ, ದೇವರು ಅವನಿಗೆ ಸಹಾಯ ಮಾಡಿದರು.
[8] ಅಮ್ಮೋನ್ಯರು ಉಜ್ಜೀಯನಿಗೆ ಕಪ್ಪವನ್ನು ಕೊಟ್ಟರು. ಆದ್ದರಿಂದ ಅವನ ಹೆಸರು ಈಜಿಪ್ಟಿನ ಪ್ರದೇಶದವರೆಗೂ ಬಹಳವಾಗಿ ಹಬ್ಬಿತು. ಅವನು ಬಹಳವಾಗಿ ಬಲಪಡಿಸಿಕೊಂಡಿದ್ದನು.
[9] ಉಜ್ಜೀಯನು ಯೆರೂಸಲೇಮಿನಲ್ಲಿ ಮೂಲೆ ಬಾಗಿಲ ಬಳಿಯಲ್ಲಿಯೂ, ತಗ್ಗಿನ ಬಾಗಿಲ ಬಳಿಯಲ್ಲಿಯೂ, ಕೋಟೆಯ ಮೂಲೆಯಲ್ಲಿಯೂ ಬುರುಜುಗಳನ್ನು ಕಟ್ಟಿಸಿದನು.
[10] ತಗ್ಗಿನ ದೇಶದಲ್ಲಿಯೂ, ಬಯಲು ದೇಶದಲ್ಲಿಯೂ ಅವನಿಗೆ ಬಹು ಪಶುಗಳಿದ್ದವು. ಆ ಅಡವಿಯಲ್ಲಿ ಬುರುಜುಗಳನ್ನು ಕಟ್ಟಿಸಿ ಅನೇಕ ಬಾವಿಗಳನ್ನು ತೋಡಿಸಿದನು. ಹಾಗೆಯೇ ಪರ್ವತಗಳಲ್ಲಿಯೂ, ಕರ್ಮೆಲಿನಲ್ಲಿಯೂ ಅವನಿಗೆ ಒಕ್ಕಲಿಗರೂ, ದ್ರಾಕ್ಷಿ ವ್ಯವಸಾಯದವರೂ ಇದ್ದರು. ಏಕೆಂದರೆ ಅವನು ವ್ಯವಸಾಯದಲ್ಲಿ ಇಷ್ಟವುಳ್ಳವನಾಗಿದ್ದನು.
[11] ಇದಲ್ಲದೆ ಲೇಖಕನಾದ ಯೆಹೀಯೇಲನ ಕೈಯಿಂದಲೂ, ಅಧಿಪತಿಯಾದ ಮಾಸೇಯನ ಕೈಯಿಂದ ಬರೆದಿರುವ ಲೆಕ್ಕದ ಪ್ರಕಾರ, ಗುಂಪುಗುಂಪಾಗಿ ಯುದ್ಧಕ್ಕೆ ಹೋಗುವ ಯುದ್ಧವೀರರ ಸೈನ್ಯವು ಉಜ್ಜೀಯನಿಗೆ ಇತ್ತು. ಆ ಸೈನ್ಯವು ಅರಸನ ಪ್ರಧಾನರಲ್ಲಿ ಒಬ್ಬನಾದ ಹನನ್ಯನ ಕೈಕೆಳಗೆ ಇತ್ತು.
[12] ಪರಾಕ್ರಮಶಾಲಿಗಳಲ್ಲಿ ಕುಟುಂಬಗಳ ಮುಖ್ಯಸ್ಥರ ಲೆಕ್ಕವು 2,600 ಮಂದಿ.
[13] ಅವರ ಕೈಕೆಳಗೆ ಅರಸನಿಗೆ ಸಹಾಯವಾಗಿ ಶತ್ರುವಿನ ಮೇಲೆ ಬಹಳ ಪರಾಕ್ರಮದಿಂದ ಯುದ್ಧಮಾಡುವ 3,07,500 ಮಂದಿಯುಳ್ಳ ಸೈನ್ಯವಿತ್ತು.
[14] ಉಜ್ಜೀಯನು ಸಮಸ್ತ ದಂಡಿನಲ್ಲಿ ಅವರ ನಿಮಿತ್ತ ಗುರಾಣಿಗಳನ್ನೂ, ಈಟಿಗಳನ್ನೂ, ಶಿರಸ್ತ್ರಾಣಗಳನ್ನೂ, ಉಕ್ಕಿನ ಕವಚಗಳನ್ನೂ, ಬಿಲ್ಲುಗಳನ್ನೂ, ಕವಣೆಗಳನ್ನೂ ಸಿದ್ಧಮಾಡಿದನು.
[15] ಇದಲ್ಲದೆ ಬಾಣಗಳನ್ನೂ, ದೊಡ್ಡ ಕಲ್ಲುಗಳನ್ನೂ ಎಸೆಯುವ ನಿಮಿತ್ತ ಬುರುಜುಗಳ ಮೇಲೆಯೂ, ಮಣ್ಣುದಿಬ್ಬಗಳ ಮೇಲೆಯೂ ಇರಲು, ಪ್ರವೀಣರಿಂದ ಮಾಡಿದ ಯಂತ್ರಗಳನ್ನೂ ಯೆರೂಸಲೇಮಿನಲ್ಲಿ ಮಾಡಿಸಿದನು. ಆದ್ದರಿಂದ ಅವನ ಹೆಸರು ಬಹಳ ದೂರದವರೆಗೆ ಪ್ರಸಿದ್ಧಿಯಾಯಿತು. ಬಹು ಬಲಿಷ್ಠನಾಗುವ ಪರ್ಯಂತರ ಅವನು ಬಹು ಆಶ್ಚರ್ಯಕರವಾಗಿ ಸಹಾಯ ಪಡೆಯುತ್ತಿದ್ದನು.
[16] ಆದರೆ ಅವನು ಬಲ ಹೊಂದಿದ ಮೇಲೆ ಅವನ ಗರ್ವವು ನಾಶಕ್ಕೆ ನಡೆಸಿತು. ಅವನು ಧೂಪಪೀಠದ ಮೇಲೆ ಧೂಪಸುಡುವುದಕ್ಕೂ, ಯೆಹೋವ ದೇವರ ಆಲಯದಲ್ಲಿ ಪ್ರವೇಶಿಸಿ ತನ್ನ ದೇವರಾದ ಯೆಹೋವ ದೇವರಿಗೆ ವಿರೋಧವಾಗಿ ಅಪರಾಧ ಮಾಡಿದನು.
[17] ಆಗ ಯಾಜಕನಾದ ಅಜರ್ಯನೂ, ಅವನ ಸಂಗಡ ಯೆಹೋವ ದೇವರ ಪರಾಕ್ರಮವುಳ್ಳ ಯಾಜಕರಾದ ಎಂಬತ್ತು ಮಂದಿಯೂ ಅರಸನಾದ ಉಜ್ಜೀಯನ ಹಿಂದೆ ಪ್ರವೇಶಿಸಿ,
[18] ಅವನನ್ನು ಎದುರಿಸಿ, “ಉಜ್ಜೀಯನೇ, ಯೆಹೋವ ದೇವರಿಗೆ ಧೂಪ ಸುಡುವುದು ಪ್ರತಿಷ್ಠಿತರಾದ ಯಾಜಕರಾದ ಆರೋನನ ಮಕ್ಕಳಿಗೆ ಸೇರಿದ್ದು. ನೀನು ಪರಿಶುದ್ಧ ಸ್ಥಳದಿಂದ ಹೊರಟು ಹೋಗು, ಅಪರಾಧ ಮಾಡಿದೆ. ದೇವರಾದ ಯೆಹೋವ ದೇವರಿಂದ ನಿನಗೆ ಗೌರವ ದೊರಕದು,” ಎಂದನು.
[19] ಆಗ ಉಜ್ಜೀಯನು ಕೋಪಿಸಿಕೊಂಡನು. ಧೂಪವನ್ನು ಸುಡಲು ಅವನ ಕೈಯಲ್ಲಿ ಧೂಪಾರತಿ ಇತ್ತು. ಆದರೆ ಅವನು ಯಾಜಕರ ಮೇಲೆ ಕೋಪ ಮಾಡುತ್ತಿರುವಾಗಲೇ, ಯೆಹೋವ ದೇವರ ಮಂದಿರದಲ್ಲಿರುವ ಧೂಪಪೀಠದ ಬಳಿಯಲ್ಲಿ ನಿಂತ ಯಾಜಕರ ಮುಂದೆ ಅವನ ಹಣೆಯಲ್ಲಿ ಕುಷ್ಠವು ಬಂದಿತು.
[20] ಆಗ ಮುಖ್ಯಯಾಜಕನಾದ ಅಜರ್ಯನೂ, ಯಾಜಕರೆಲ್ಲರೂ ಅವನನ್ನು ದೃಷ್ಟಿಸಿ ನೋಡಿದಾಗ ಅವನ ಹಣೆಯಲ್ಲಿ ಕುಷ್ಠವು ಕಂಡುಬಂದದ್ದರಿಂದ ಅವರು ಅವನನ್ನು ಶೀಘ್ರವಾಗಿ ಅಲ್ಲಿಂದ ಹೊರಹಾಕಿದರು. ಯೆಹೋವ ದೇವರು ತನ್ನನ್ನು ಬಾಧಿಸಿದ್ದರಿಂದ ಅವನು ಸ್ವತಃ ಹೊರಗೆ ಹೋಗಲು ತ್ವರೆಪಟ್ಟನು.
[21] ಅರಸನಾದ ಉಜ್ಜೀಯನು ಮರಣದ ದಿವಸದವರೆಗೂ ಕುಷ್ಠರೋಗಿಯಾಗಿದ್ದು ಯೆಹೋವ ದೇವರ ಆಲಯದಿಂದ ಬಹಿಷ್ಕೃತನಾದನು. ಅವನು ಕುಷ್ಠರೋಗದ ನಿಮಿತ್ತ ಪ್ರತ್ಯೇಕವಾದ ಮನೆಯಲ್ಲಿ ವಾಸವಾಗಿದ್ದನು. ಅವನ ಮಗ ಯೋತಾಮನು ರಾಜಗೃಹಾಧಿಪತ್ಯವನ್ನು ಮತ್ತು ಪ್ರಜಾಪಾಲನೆಯನ್ನೂ ನೋಡಿಕೊಳ್ಳುತ್ತಿದ್ದನು.
[22] ಉಜ್ಜೀಯನ ಇತರ ಕ್ರಿಯೆಗಳನ್ನು, ಮೊದಲನೆಯದಿಂದ ಕಡೆಯವರೆಗೆ ಆಮೋಚನ ಮಗನಾದ ಯೆಶಾಯನೆಂಬ ಪ್ರವಾದಿಯು ಬರೆದನು.
[23] ಉಜ್ಜೀಯನು ಮೃತನಾಗಿ ತನ್ನ ಪಿತೃಗಳ ಬಳಿಗೆ ಸೇರಿದನು. ಅವನು ಕುಷ್ಠರೋಗಿಯಾಗಿದ್ದರಿಂದ, ಅವರು ಅವನ ಶವವನ್ನು ರಾಜಕುಟುಂಬದ ಸ್ಮಶಾನ ಭೂಮಿಯ ಹತ್ತಿರದ ಹೊಲದಲ್ಲಿ ಸಮಾಧಿಮಾಡಿದರು. ಅವನಿಗೆ ಬದಲಾಗಿ ಅವನ ಮಗನಾದ ಯೋತಾಮನು ಅರಸನಾದನು.