[1] ರೆಹಬ್ಬಾಮನು ಯೆರೂಸಲೇಮಿಗೆ ಬಂದ ತರುವಾಯ, ರಾಜ್ಯವನ್ನು ತಿರುಗಿ ಪಡೆಯುವ ಹಾಗೆ ಇಸ್ರಾಯೇಲಿಗೆ ವಿರೋಧವಾಗಿ ಯುದ್ಧಮಾಡಲು, ಯೆಹೂದ ಮತ್ತು ಬೆನ್ಯಾಮೀನವರ ಕುಟುಂಬಗಳಿಂದ 1,80,000 ಸಮರ್ಥ ಸೈನಿಕರನ್ನು ಆಯ್ದುಕೊಂಡು ಒಟ್ಟುಗೂಡಿಸಿದನು.
[2] ಆದರೆ ಯೆಹೋವ ದೇವರ ವಾಕ್ಯವು ದೇವರ ಮನುಷ್ಯನಾಗಿರುವ ಶೆಮಾಯನಿಗೆ ಉಂಟಾಗಿ,
[3] “ನೀನು ಯೆಹೂದದ ಅರಸನಾದ ಸೊಲೊಮೋನನ ಮಗನಾಗಿರುವ ರೆಹಬ್ಬಾಮನಿಗೂ, ಯೆಹೂದ ಬೆನ್ಯಾಮೀನರಲ್ಲಿರುವ ಸಮಸ್ತ ಇಸ್ರಾಯೇಲರಿಗೂ ಹೇಳಬೇಕಾದದ್ದೇನೆಂದರೆ,
[4] ‘ನೀವು ನಿಮ್ಮ ಸಹೋದರರಿಗೆ ವಿರೋಧವಾಗಿ ಯುದ್ಧಮಾಡಲು ಹೋಗಬೇಡಿರಿ. ಪ್ರತಿ ಮನುಷ್ಯನು ತನ್ನ ಮನೆಗೆ ಹಿಂದಿರುಗಲಿ. ಏಕೆಂದರೆ ಈ ಕಾರ್ಯವು ತಮ್ಮಿಂದ ಉಂಟಾಯಿತೆಂದು ಯೆಹೋವ ದೇವರು ಹೇಳುತ್ತಾರೆ,’ ” ಎಂದನು. ಆದ್ದರಿಂದ ಅವರು ಯೆಹೋವ ದೇವರ ವಾಕ್ಯವನ್ನು ಕೇಳಿ, ಯಾರೊಬ್ಬಾಮನ ಮೇಲೆ ಹೋಗದೆ ಹಿಂದಿರುಗಿ ಹೋದರು.
[5] ರೆಹಬ್ಬಾಮನು ಯೆರೂಸಲೇಮಿನಲ್ಲಿ ವಾಸಮಾಡಿ, ಯೆಹೂದದಲ್ಲಿ ಕೋಟೆಯುಳ್ಳ ಪಟ್ಟಣಗಳನ್ನು ಕಟ್ಟಿಸಿದನು.
[6] ಅವನು ಬೇತ್ಲೆಹೇಮನ್ನೂ, ಏಟಾಮನ್ನೂ, ತೆಕೋವನ್ನೂ,
[7] ಬೇತ್ ಚೂರ್ ಪಟ್ಯಣವನ್ನೂ, ಸೋಕೋನನ್ನೂ, ಅದುಲ್ಲಾಮನ್ನೂ,
[8] ಗತ್ ಊರನ್ನೂ ಮಾರೇಷಾವನ್ನೂ ಜೀಫನ್ನೂ,
[9] ಅದೋರೈಮನ್ನೂ, ಲಾಕೀಷನ್ನೂ, ಅಜೇಕವನ್ನೂ,
[10] ಚೊರ್ಗವನ್ನೂ, ಅಯ್ಯಾಲೋನನ್ನೂ, ಹೆಬ್ರೋನನ್ನೂ ಕಟ್ಟಿಸಿದನು. ಇವು ಯೆಹೂದದಲ್ಲಿಯೂ, ಬೆನ್ಯಾಮೀನರಲ್ಲಿಯೂ ಕೋಟೆಯುಳ್ಳ ಪಟ್ಟಣಗಳಾಗಿವೆ.
[11] ಇದಲ್ಲದೆ ಅವನು ಕೋಟೆಗಳನ್ನು ಬಲಪಡಿಸಿ, ಅವುಗಳಲ್ಲಿ ನಾಯಕರನ್ನೂ, ಆಹಾರ, ಎಣ್ಣೆ, ದ್ರಾಕ್ಷಾರಸ ಇರುವ ಉಗ್ರಾಣಗಳನ್ನೂ ಇಟ್ಟನು.
[12] ಪ್ರತಿ ಪಟ್ಟಣದಲ್ಲಿ ಖೇಡ್ಯಗಳನ್ನೂ, ಈಟಿಗಳನ್ನೂ ಇಟ್ಟು ಯೆಹೂದ ಬೆನ್ಯಾಮೀನವರು ಅವನ ಕಡೆ ಇದ್ದುದರಿಂದ, ಅವುಗಳನ್ನು ಭದ್ರಪಡಿಸಿದನು.
[13] ಸಮಸ್ತ ಇಸ್ರಾಯೇಲಿನಲ್ಲಿದ್ದ ಯಾಜಕರೂ, ಲೇವಿಯರೂ ತಮ್ಮ ಸಮಸ್ತ ಪ್ರಾಂತಗಳಿಂದ ಅವನ ಬಳಿಗೆ ಪುನಃ ಬಂದರು.
[14] ಲೇವಿಯರು ತಮ್ಮ ಹುಲ್ಲುಗಾವಲು ಮತ್ತು ಆಸ್ತಿಯನ್ನು ತ್ಯಜಿಸಿ ಯೆಹೂದ ಮತ್ತು ಯೆರೂಸಲೇಮಿಗೆ ಬಂದರು, ಏಕೆಂದರೆ ಯಾರೊಬ್ಬಾಮನೂ ಅವನ ಮಕ್ಕಳು ಯೆಹೋವ ದೇವರಿಗೆ ಯಾಜಕ ಸೇವೆ ಮಾಡದ ಹಾಗೆ ತಿರಸ್ಕರಿಸಿದನು.
[15] ಉನ್ನತ ಸ್ಥಳಗಳಿಗೋಸ್ಕರವೂ ದೆವ್ವಗಳಿಗೋಸ್ಕರವೂ, ಯಾರೊಬ್ಬಾಮನು ಮಾಡಿದ ಕರುಗಳ ಮೂರ್ತಿಪೂಜೆಗಾಗಿ ತಾನೇ ಯಾಜಕರನ್ನು ನೇಮಿಸಿದ್ದರಿಂದ,
[16] ಇಸ್ರಾಯೇಲಿನ ದೇವರಾದ ಯೆಹೋವ ದೇವರನ್ನು ಹುಡುಕುವ ಮನಸ್ಸು ಮಾಡಿದ ಇಸ್ರಾಯೇಲಿನ ಪ್ರತಿಯೊಂದು ಕುಲಗಳಿಂದ ಕೆಲವರು ತಮ್ಮ ಪೂರ್ವಜರ ದೇವರಾದ ಯೆಹೋವ ದೇವರಿಗೆ ಯಜ್ಞಗಳನ್ನು ಅರ್ಪಿಸಲು ಲೇವಿಯರನ್ನು ಹಿಂಬಾಲಿಸಿ ಯೆರೂಸಲೇಮಿಗೆ ಬಂದರು.
[17] ಹೀಗೆ ಅವರು ಯೆಹೂದ ರಾಜ್ಯವನ್ನು ದೃಢಪಡಿಸಿ, ಸೊಲೊಮೋನನ ಮಗ ರೆಹಬ್ಬಾಮನನ್ನು ಮೂರು ವರ್ಷಗಳವರೆಗೂ ಬಲಪಡಿಸಿದರು. ಅವರು ಮೂರು ವರ್ಷಗಳವರೆಗೂ ದಾವೀದನ, ಸೊಲೊಮೋನನ ಮಾರ್ಗದಲ್ಲಿ ನಡೆದರು.
[18] ರೆಹಬ್ಬಾಮನು ಮಹಲತ್ ಎಂಬಾಕೆಯನ್ನು ಮದುವೆಮಾಡಿಕೊಂಡನು. ಈ ಮಹಲತ್ ದಾವೀದನ ಮಗ ಯೆರೀಮೋತ್ ಹಾಗು ಅಬೀಹೈಲರ ಮಗಳು. ಈ ಅಬೀಹೈಲಳು ಇಷಯನ ಮೊಮ್ಮಗಳೂ, ಎಲೀಯಾಬನ ಮಗಳೂ ಆಗಿದ್ದಳು.
[19] ಅಬೀಹಾಯಿಲಳು ಯೆಗೂಷ್, ಶೆಮರ್ಯ, ಜಹಾಮ್ ಎಂಬ ಮಕ್ಕಳನ್ನು ಅವನಿಗೆ ಹೆತ್ತಳು.
[20] ಇವಳ ತರುವಾಯ ಅವನು ಅಬ್ಷಾಲೋಮನ ಮಗಳಾದ ಮಾಕ ಎಂಬವಳನ್ನು ಮದುವೆಮಾಡಿಕೊಂಡನು. ಇವಳು ಅವನಿಗೆ ಅಬೀಯನನ್ನೂ, ಅತ್ತೈಯನ್ನೂ, ಜೀಜನನ್ನೂ, ಶೆಲೋಮೀತನನ್ನೂ ಹೆತ್ತಳು.
[21] ರೆಹಬ್ಬಾಮನಿಗೆ ಹದಿನೆಂಟು ಮಂದಿ ಹೆಂಡತಿಯರೂ, ಅರವತ್ತು ಮಂದಿ ಉಪಪತ್ನಿಯರೂ ಇದ್ದರು. ಅವನು ಇಪ್ಪತ್ತೆಂಟು ಮಂದಿ ಪುತ್ರರನ್ನೂ, ಅರವತ್ತು ಮಂದಿ ಪುತ್ರಿಯರನ್ನೂ ಪಡೆದನು. ಆದರೆ ಅವನು ತನ್ನ ಎಲ್ಲಾ ಹೆಂಡತಿಯರಿಗಿಂತಲೂ, ಉಪಪತ್ನಿಯರಿಗಿಂತಲೂ ಅಬ್ಷಾಲೋಮನ ಮಗಳಾದ ಮಾಕ ಎಂಬವಳನ್ನು ಹೆಚ್ಚಾಗಿ ಪ್ರೀತಿಮಾಡಿದನು.
[22] ರೆಹಬ್ಬಾಮನು ಮಾಕ ಎಂಬವಳ ಮಗನಾದ ಅಬೀಯನನ್ನು ಅವನ ಸಹೋದರರಲ್ಲಿ ಯುವರಾಜನನ್ನಾಗಿ ಮಾಡಿದನು. ಏಕೆಂದರೆ ಅವನನ್ನು ಅರಸನಾಗಿ ಮಾಡಲು ಮನಸ್ಸುಳ್ಳವನಾಗಿದ್ದನು.
[23] ಇದಲ್ಲದೆ ಅವನು ವಿವೇಕವಾಗಿ ನಡೆದು ತನ್ನ ಎಲ್ಲಾ ಮಕ್ಕಳನ್ನು ಯೆಹೂದ ಬೆನ್ಯಾಮೀನಿನ ದೇಶಗಳಲ್ಲಿ ಇರುವ ಎಲ್ಲಾ ಬಲವಾದ ಪಟ್ಟಣಗಳಲ್ಲಿ ಚದರಿಸಿ, ಅವರಿಗೆ ಬಹಳ ದವಸಧಾನ್ಯಗಳನ್ನು ಕೊಟ್ಟನು. ಅವರಿಗೆ ಅನೇಕ ಹೆಂಡತಿಯರನ್ನು ಕೊಟ್ಟನು.