Skip to content
Opens in a new window
Listen to this chapter • 9:03

[1] ಯೋಷೀಯನು ಅರಸನಾದಾಗ ಎಂಟು ವರ್ಷದವನಾಗಿದ್ದನು, ಅವನು ಮೂವತ್ತೊಂದು ವರ್ಷ ಯೆರೂಸಲೇಮಿನಲ್ಲಿ ಆಳಿದನು.

[2] ಅವನು ಯೆಹೋವ ದೇವರ ದೃಷ್ಟಿಗೆ ಒಳ್ಳೆಯದನ್ನು ಮಾಡಿ, ಎಡಕ್ಕಾಗಲಿ ಬಲಕ್ಕಾಗಲಿ ತಿರುಗದೆ ತನ್ನ ಪೂರ್ವಜನಾದ ದಾವೀದನ ಮಾರ್ಗಗಳಲ್ಲಿಯೇ ನಡೆದನು.

[3] ಅವನು ಇನ್ನೂ ಬಾಲಕನಾಗಿರುವಾಗ, ತನ್ನ ಆಳ್ವಿಕೆಯ ಎಂಟನೆಯ ವರ್ಷದಲ್ಲಿ ತನ್ನ ಪೂರ್ವಜನಾದ ದಾವೀದನ ದೇವರನ್ನು ಹುಡುಕಲು ಆರಂಭಿಸಿದನು. ಅವನ ಆಳ್ವಿಕೆಯ ಹನ್ನೆರಡನೆಯ ವರ್ಷದಲ್ಲಿ ಉನ್ನತ ಪೂಜಾಸ್ಥಳಗಳನ್ನೂ, ಅಶೇರ ಸ್ತಂಭಗಳನ್ನೂ, ಕೆತ್ತಿದ ವಿಗ್ರಹಗಳನ್ನೂ ತೆಗೆದುಹಾಕಿ, ಯೆಹೂದ ಮತ್ತು ಯೆರೂಸಲೇಮನ್ನು ಶುಚಿಮಾಡಲು ಆರಂಭಿಸಿದನು.

[4] ಅವರು ಬಾಳನ ಬಲಿಪೀಠಗಳನ್ನು ಅವನ ಸಮ್ಮುಖದಿಂದ ಕೆಡವಿಹಾಕಿದರು. ಅವುಗಳ ಮೇಲಿರುವ ಸೂರ್ಯ ಸ್ತಂಭಗಳನ್ನು ಕಡಿದುಹಾಕಿ; ಅಶೇರ ಸ್ತಂಭಗಳನ್ನೂ, ಕೆತ್ತಿದ ವಿಗ್ರಹಗಳನ್ನೂ, ಎರಕ ಹೊಯ್ದ ವಿಗ್ರಹಗಳನ್ನೂ ಒಡೆದುಬಿಟ್ಟು ಪುಡಿಪುಡಿಮಾಡಿ, ಅವುಗಳಿಗೆ ಬಲಿ ಅರ್ಪಿಸಿದವರ ಸಮಾಧಿಗಳ ಮೇಲೆ ಚಿಲ್ಲಿಸಿ,

[5] ಪೂಜಾರಿಗಳ ಎಲುಬುಗಳನ್ನು ಅವರ ಬಲಿಪೀಠಗಳ ಮೇಲೆ ಸುಟ್ಟುಬಿಟ್ಟು; ಯೆಹೂದ ಪ್ರಾಂತ್ಯವನ್ನೂ, ಯೆರೂಸಲೇಮ ಪಟ್ಟಣವನ್ನೂ ಶುಚಿಮಾಡಿದರು.

[6] ಹೀಗೆಯೇ ಅವರು ತಮ್ಮ ಗುದ್ದಲಿಗಳಿಂದ ಮನಸ್ಸೆ, ಎಫ್ರಾಯೀಮ್, ಸಿಮೆಯೋನ್, ನಫ್ತಾಲಿ ಪ್ರಾಂತ್ಯಗಳ ಪಟ್ಟಣಗಳ ಸುತ್ತಲೂ ಶುಚಿಮಾಡಿದರು.

[7] ಅವನು ಬಲಿಪೀಠಗಳನ್ನೂ, ಅಶೇರ ಸ್ತಂಭಗಳನ್ನೂ ಕೆಡವಿಹಾಕಿ, ಕೆತ್ತಿದ ವಿಗ್ರಹಗಳನ್ನು ಕುಟ್ಟಿ ಪುಡಿಪುಡಿಮಾಡಿ, ಇಸ್ರಾಯೇಲ್ ದೇಶದಲ್ಲೆಲ್ಲಿಯೂ ಇರುವ ಸಮಸ್ತ ವಿಗ್ರಹಗಳನ್ನು ಕೆಡವಿದ ತರುವಾಯ ಯೆರೂಸಲೇಮಿಗೆ ಹಿಂದಿರುಗಿದನು.

[8] ಯೋಷೀಯನ ಆಳ್ವಿಕೆಯ ಹದಿನೆಂಟನೆಯ ವರ್ಷದಲ್ಲಿ, ಅವನು ದೇಶವನ್ನೂ, ಆಲಯವನ್ನೂ ಶುಚಿ ಮಾಡಿದ ತರುವಾಯ ತನ್ನ ದೇವರಾದ ಯೆಹೋವ ದೇವರ ಆಲಯವನ್ನು ದುರಸ್ತಿ ಮಾಡುವುದಕ್ಕೆ ಅಚಲ್ಯನ ಮಗನಾದ ಶಾಫಾನನನ್ನೂ, ಪಟ್ಟಣದ ಅಧಿಪತಿಯಾದ ಮಾಸೇಯನನ್ನೂ, ರಾಜಲೇಖಕನಾಗಿದ್ದ ಯೋವಾಹಾಜನ ಮಗನಾದ ಯೋವಾಹನನ್ನೂ ಕಳುಹಿಸಿದನು.

[9] ಇವರು ದ್ವಾರಪಾಲಕರಾದ ಲೇವಿಯರು ಮನಸ್ಸೆ, ಎಫ್ರಾಯೀಮ್ ಜನರಿಂದಲೂ, ಇಸ್ರಾಯೇಲಿನ ಉಳಿದವರಿಂದಲೂ, ಯೆಹೂದ ಬೆನ್ಯಾಮೀನರಿಂದಲೂ ಯೆರೂಸಲೇಮಿನ ಎಲ್ಲಾ ನಿವಾಸಿಗಳಿಂದಲೂ ಕೂಡಿಸಿದ ಹಣವನ್ನು ತೆಗೆದುಕೊಂಡು ದೇವರ ಆಲಯಕ್ಕೆ ತಂದು ಮಹಾಯಾಜಕನಾದ ಹಿಲ್ಕೀಯನಿಗೆ ಕೊಟ್ಟರು.

[10] ಯೆಹೋವ ದೇವರ ಆಲಯದ ಕೆಲಸಕ್ಕೆ ನೇಮಕಗೊಂಡ ಮೇಲ್ವಿಚಾರಕರ ಕೈಯಲ್ಲಿ ಅದನ್ನು ಒಪ್ಪಿಸಿದರು. ಇವರು ಯೆಹೋವ ದೇವರ ಆಲಯವನ್ನು ಭದ್ರಮಾಡಿ, ದುರಸ್ತಿ ಮಾಡುವವರಿಗೆ ಅದನ್ನು ಕೊಟ್ಟರು.

[11] ಕೆತ್ತಿದ ಕಲ್ಲುಗಳನ್ನೂ, ತೊಲೆಗಳಿಗೋಸ್ಕರ ಮರಗಳನ್ನೂ, ಯೆಹೂದದ ಅರಸರ ಅಲಕ್ಷ್ಯದಿಂದ ಹಾಳಾಗಿದ್ದ ಕಟ್ಟಡಗಳಿಗೆ ಹಲಿಗೆಗಳನ್ನು ಕೊಂಡುಕೊಳ್ಳಲೂ, ಬಡಗಿಯರಿಗೂ, ಕಲ್ಲುಕೆಲಸದವರಿಗೂ ಆ ಹಣವನ್ನು ಕೊಟ್ಟರು.

[12] ಈ ಮನುಷ್ಯರು ಕೆಲಸವನ್ನು ನಂಬಿಕೆಯಿಂದ ಮಾಡಿದರು. ಅವರ ವಿಚಾರಣೆಯ ಮೇಲ್ವಿಚಾರಕರು ಯಾರೆಂದರೆ ಮೆರಾರೀಯ ಪುತ್ರರಲ್ಲಿ ಲೇವಿಯರಾದ ಯಹಾತನೂ, ಓಬದ್ಯನೂ; ಕೊಹಾತ್ಯರ ಮಕ್ಕಳಲ್ಲಿ ಜೆಕರ್ಯನೂ, ಮೆಷುಲ್ಲಾಮನೂ; ಗೀತವಾದ್ಯಗಳಲ್ಲಿ ಬುದ್ಧಿಯುಳ್ಳವರಾದ ಲೇವಿಯರೆಲ್ಲರೂ ಅದನ್ನು ನಡೆಸುತ್ತಾ ಇದ್ದರು.

[13] ಇದಲ್ಲದೆ ಕಾರ್ಮಿಕರ ಮೇಲೆಯೂ, ಬೇರೆ ಬೇರೆ ಸೇವೆಯ ಕೆಲಸವನ್ನು ಮಾಡುವವರ ಮೇಲೆಯೂ ಅವರು ಮೇಲ್ವಿಚಾರಕರಾಗಿದ್ದರು. ಲೇವಿಯರಲ್ಲಿ ಕೆಲವರು ಕಾರ್ಯದರ್ಶಿಗಳೂ, ಬರಹಗಾರರೂ, ದ್ವಾರಪಾಲಕರೂ ಆಗಿದ್ದರು.

[14] ಯೆಹೋವ ದೇವರ ಆಲಯಕ್ಕೆ ತಂದ ಹಣವನ್ನು ಅವರು ಹೊರಗೆ ತೆಗೆದುಕೊಂಡು ಬರುವಾಗ, ಯಾಜಕನಾದ ಹಿಲ್ಕೀಯನು ಮೋಶೆಯ ಕೈಯಿಂದಾದ ಯೆಹೋವ ದೇವರ ನಿಯಮದ ಗ್ರಂಥವನ್ನು ಕಂಡುಕೊಂಡನು.

[15] ಆಗ ಹಿಲ್ಕೀಯನು ಉತ್ತರಕೊಟ್ಟು ಕಾರ್ಯದರ್ಶಿಯಾದ ಶಾಫಾನನಿಗೆ, “ಯೆಹೋವ ದೇವರ ಆಲಯದಲ್ಲಿ ನಿಯಮ ಗ್ರಂಥವು ನನಗೆ ಸಿಕ್ಕಿತು,” ಎಂದು ಹೇಳಿದನು. ಹಿಲ್ಕೀಯನು ಆ ಗ್ರಂಥವನ್ನು ಶಾಫಾನನಿಗೆ ಒಪ್ಪಿಸಿದನು.

[16] ಶಾಫಾನನು ಆ ಗ್ರಂಥವನ್ನು ಅರಸನ ಬಳಿಗೆ ತೆಗೆದುಕೊಂಡುಹೋಗಿ, ಅರಸನಿಗೆ ಈ ಮಾತನ್ನು ತಿರುಗಿ ಹೇಳಿದನು. “ನಿನ್ನ ಸೇವಕರ ಕೈಗೆ ಒಪ್ಪಿಸಿದ್ದನ್ನೆಲ್ಲಾ ಅವರು ಮಾಡುತ್ತಿದ್ದಾರೆ.

[17] ಇದಲ್ಲದೆ ಅವರು ಯೆಹೋವ ದೇವರ ಆಲಯದಲ್ಲಿ ದೊರಕಿದ ಹಣವನ್ನು ತೆಗೆದು ಮೇಲ್ವಿಚಾರಕರ ಕೈಯಲ್ಲಿ ಮತ್ತು ಕೆಲಸದವರ ಕೈಯಲ್ಲಿ ಒಪ್ಪಿಸಿದ್ದಾರೆ.

[18] ಕಾರ್ಯದರ್ಶಿಯಾದ ಶಾಫಾನನು ಅರಸನಿಗೆ ಯಾಜಕನಾದ ಹಿಲ್ಕೀಯನು ನನಗೆ ಗ್ರಂಥವನ್ನು ಕೊಟ್ಟಿದ್ದಾನೆ,” ಎಂದು ತಿಳಿಸಿದನು. ಆಗ ಶಾಫಾನನು ಅದನ್ನು ಅರಸನ ಮುಂದೆ ಓದಿದನು.

[19] ಅರಸನು ದೇವರ ನಿಯಮದ ವಾಕ್ಯಗಳನ್ನು ಕೇಳಿದಾಗ, ತನ್ನ ವಸ್ತ್ರಗಳನ್ನು ಹರಿದುಕೊಂಡನು.

[20] ಹಿಲ್ಕೀಯನಿಗೂ, ಶಾಫಾನನ ಮಗನಾದ ಅಹೀಕಾಮನಿಗೂ, ಮೀಕನ ಮಗನಾದ ಅಬ್ದೋನನಿಗೂ, ಕಾರ್ಯದರ್ಶಿಯಾದ ಶಾಫಾನನಿಗೂ, ಅರಸನ ಸೇವಕನಾದ ಅಸಾಯನಿಗೂ ಆಜ್ಞಾಪಿಸಿ,

[21] “ನೀವು ಹೋಗಿ ಸಿಕ್ಕಿದ ಈ ಗ್ರಂಥದ ವಾಕ್ಯಗಳ ಕುರಿತು ನನಗೋಸ್ಕರವೂ, ಇಸ್ರಾಯೇಲ್ ಮತ್ತು ಯೆಹೂದದಲ್ಲಿ ಉಳಿದವರಿಗೋಸ್ಕರವೂ ಯೆಹೋವ ದೇವರ ಬಳಿಯಲ್ಲಿ ವಿಚಾರಿಸಿರಿ. ಏಕೆಂದರೆ ನಮ್ಮನ್ನು ಕುರಿತು ಬರೆದಿರುವ ಎಲ್ಲವನ್ನೂ ಕೈಗೊಂಡು ನಡೆಯಲು ನಮ್ಮ ಪಿತೃಗಳು ಈ ಗ್ರಂಥದ ಮಾತುಗಳನ್ನು ಕೇಳದೆ ಹೋದುದರಿಂದ, ನಮ್ಮ ಮೇಲೆ ಸುರಿದ ಯೆಹೋವ ದೇವರ ಕೋಪವು ದೊಡ್ಡದಾಗಿದೆ,” ಎಂದು ಹೇಳಿದನು.

[22] ಆಗ ಹಿಲ್ಕೀಯನೂ ಅರಸನ ಜನರೂ ಹಸ್ರನ ಮಗನೂ ತೊಕ್ಹತನ ಮಗನೂ ಪ್ರವಾದಿನಿ ಹುಲ್ದಳ ಬಳಿಗೆ ಹೋಗಿ ವಿಚಾರಿಸಿದರು. ಆಕೆಯು ರಾಜವಸ್ತ್ರಗಳ ಮೇಲ್ವಿಚಾರಕನೂ ಆದ ಶಲ್ಲೂಮನ ಹೆಂಡತಿ, ಅವಳು ಯೆರೂಸಲೇಮಿನೊಳಗೆ ಹೊಸದಾದ ನಿರ್ಮಿತ ಭಾಗದಲ್ಲಿ ವಾಸವಾಗಿದ್ದಳು.

[23] ಹುಲ್ದಳು ಅವರಿಗೆ, “ನಿಮ್ಮನ್ನು ನನ್ನ ಬಳಿಗೆ ಕಳುಹಿಸಿದವನಿಗೆ ನೀವು ಇಸ್ರಾಯೇಲ್ ದೇವರಾದ ಯೆಹೋವ ದೇವರ ಮಾತುಗಳನ್ನು ತಿಳಿಸಿರಿ:

[24] ‘ನಾನು ಈ ಸ್ಥಳದ ಮೇಲೆಯೂ ಅದರ ನಿವಾಸಿಗಳ ಮೇಲೆಯೂ ಕೇಡನ್ನೂ, ಯೆಹೂದದ ಅರಸನ ಮುಂದೆ ಅವರು ಓದಿದ ಗ್ರಂಥದಲ್ಲಿ ಬರೆದಿರುವ ಎಲ್ಲಾ ಶಾಪಗಳನ್ನೂ ಬರಮಾಡುವೆನು.

[25] ಏಕೆಂದರೆ ಅವರು ನನ್ನನ್ನು ಬಿಟ್ಟುಬಿಟ್ಟು, ತಮ್ಮ ಸಮಸ್ತ ಕ್ರಿಯೆಗಳಿಂದ ನನಗೆ ಕೋಪವನ್ನು ಎಬ್ಬಿಸುವಂತೆ ಇತರ ದೇವರುಗಳಿಗೆ ಧೂಪವನ್ನು ಸುಟ್ಟಿದ್ದಾರೆ. ಆದ್ದರಿಂದ ನನ್ನ ಕೋಪವು ಈ ಸ್ಥಳದ ಮೇಲೆ ಸುರಿಯುವುದು, ಅದು ಆರಿಹೋಗುವುದಿಲ್ಲ.’

[26] ಆದರೆ ಯೆಹೋವ ದೇವರನ್ನು ವಿಚಾರಿಸಲು ನಿಮ್ಮನ್ನು ಕಳುಹಿಸಿದ ಯೆಹೂದದ ಅರಸನಿಗೆ ನೀವು ಹೇಳಬೇಕಾದದ್ದು ಇದೇ, ‘ನೀವು ಕೇಳಿದ ಮಾತುಗಳನ್ನು ಕುರಿತು ಇಸ್ರಾಯೇಲಿನ ದೇವರಾದ ಯೆಹೋವ ದೇವರು ಹೇಳುವುದೇನೆಂದರೆ,

[27] ಈ ಸ್ಥಳಕ್ಕೆ ವಿರೋಧವಾಗಿಯೂ ಅದರ ನಿವಾಸಿಗಳ ವಿರೋಧವಾಗಿಯೂ ದೇವರು ಹೇಳಿದ ಮಾತುಗಳನ್ನು ನೀನು ಕೇಳಿದಾಗ, ನಿನ್ನ ಹೃದಯವು ಮೃದುವಾಗಿ, ನಿನ್ನನ್ನು ನನ್ನ ಮುಂದೆ ತಗ್ಗಿಸಿಕೊಂಡೆ. ನಿನ್ನ ವಸ್ತ್ರಗಳನ್ನು ಹರಿದುಕೊಂಡು ನನ್ನ ಸಮ್ಮುಖದಲ್ಲಿ ಕಣ್ಣೀರು ಸುರಿಸಿದ್ದರಿಂದ, ನಾನು ನಿನ್ನ ಮೊರೆಯನ್ನು ಕೇಳಿದೆನು,

[28] ಆದ್ದರಿಂದ ನಾನು ನಿನ್ನನ್ನು ನಿನ್ನ ಪಿತೃಗಳ ಬಳಿಯಲ್ಲಿ ಸೇರಿಸಿಕೊಳ್ಳುವೆನು. ನೀನು ಸಮಾಧಾನದಿಂದ ನಿನ್ನ ಸಮಾಧಿಗೆ ಸೇರುವೆ. ನಾನು ಈ ಸ್ಥಳದ ಮೇಲೆಯೂ ಅದರ ನಿವಾಸಿಗಳ ಮೇಲೆಯೂ ಬರಮಾಡುವ ಕೇಡನ್ನು ನಿನ್ನ ಕಣ್ಣುಗಳು ಕಾಣುವುದಿಲ್ಲ,’ ಎಂದು ಯೆಹೋವ ದೇವರು ಹೇಳುತ್ತಾರೆ,” ಎಂದಳು. ಅವರು ಹೋಗಿ ಈ ಉತ್ತರವನ್ನು ಅರಸನಿಗೆ ತಿಳಿಸಿದರು.

[29] ಅನಂತರ ಅರಸನಾದ ಯೋಷೀಯನು ಯೆಹೂದದ, ಯೆರೂಸಲೇಮಿನ ಹಿರಿಯರೆಲ್ಲರನ್ನು ಕರೆಕಳುಹಿಸಿ ತನ್ನ ಬಳಿಯಲ್ಲಿ ಒಟ್ಟಾಗಿ ಕೂಡಿಸಿದನು.

[30] ಆಗ ಅರಸನೂ ಅವನ ಸಂಗಡ ಯೆಹೂದದ ಜನರೂ, ಯೆರೂಸಲೇಮಿನ ನಿವಾಸಿಗಳೂ ಯಾಜಕರೂ ಲೇವಿಯರೂ ಹಿರಿಕಿರಿಯರಾದ ಸಮಸ್ತ ಜನರೂ ಯೆಹೋವ ದೇವರ ಆಲಯಕ್ಕೆ ಹೋದರು. ಅರಸನು ಯೆಹೋವ ದೇವರ ಆಲಯದಲ್ಲಿ ದೊರಕಿದ ಒಡಂಬಡಿಕೆಯ ಗ್ರಂಥದ ಮಾತುಗಳನ್ನೆಲ್ಲಾ ಅವರು ಕೇಳುವಂತೆ ಓದಿದನು.

[31] ಅರಸನು ತನ್ನ ಸ್ತಂಭದಲ್ಲಿ ನಿಂತುಕೊಂಡು ಯೆಹೋವ ದೇವರನ್ನು ಹಿಂಬಾಲಿಸುವುದಕ್ಕೂ, ದೇವರ ಆಜ್ಞೆಗಳನ್ನೂ, ದೇವರ ಸಾಕ್ಷಿಗಳನ್ನೂ, ಕಟ್ಟಳೆಗಳನ್ನೂ ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದಲೂ ಕೈಗೊಳ್ಳುವುದಕ್ಕೂ, ಈ ಗ್ರಂಥದಲ್ಲಿ ಬರೆದಿರುವ ಒಡಂಬಡಿಕೆಯ ವಾಕ್ಯಗಳನ್ನು ನೆರವೇರಿಸುವುದಕ್ಕೂ ಯೆಹೋವ ದೇವರ ಮುಂದೆ ಒಡಂಬಡಿಕೆಯನ್ನು ಮಾಡಿದನು.

[32] ಇದಲ್ಲದೆ ಅವನು ಯೆರೂಸಲೇಮಿನಲ್ಲಿಯೂ, ಬೆನ್ಯಾಮೀನಿನಲ್ಲಿಯೂ ಪ್ರತಿಯೊಬ್ಬರನ್ನು ಅದಕ್ಕೆ ಒಪ್ಪುವಂತೆ ಮಾಡಿದನು. ಹಾಗೆಯೇ ಯೆರೂಸಲೇಮಿನ ನಿವಾಸಿಗಳು ತಮ್ಮ ಪಿತೃಗಳ ದೇವರ ಒಡಂಬಡಿಕೆಯ ಪ್ರಕಾರ ಮಾಡಿದರು.

[33] ಹೀಗೆ ಯೋಷೀಯನು ಇಸ್ರಾಯೇಲರಿಗೆ ಇದ್ದ ಎಲ್ಲಾ ದೇಶಗಳೊಳಗಿಂದ ಸಮಸ್ತ ಅಸಹ್ಯಗಳನ್ನು ತೆಗೆದುಹಾಕಿ, ಇಸ್ರಾಯೇಲಿನಲ್ಲಿ ಸಿಕ್ಕಿದವರೆಲ್ಲರೂ ತಮ್ಮ ದೇವರಾದ ಯೆಹೋವ ದೇವರನ್ನು ಸೇವಿಸುವ ಹಾಗೆ ಮಾಡಿದನು. ಅವನ ದಿವಸಗಳೆಲ್ಲಾ ಅವರು ತಮ್ಮ ಪಿತೃಗಳ ದೇವರಾದ ಯೆಹೋವ ದೇವರನ್ನು ಹಿಂಬಾಲಿಸುವುದನ್ನು ಬಿಡದೆ ಇದ್ದರು.

2 ಪೂರ್ವಕಾಲ ವೃತ್ತಾಂತ — Chapters