Skip to content
Opens in a new window
Listen to this chapter • 3:38

[1] ಹೀಗೆಯೇ ಸೊಲೊಮೋನನು ಯೆಹೋವ ದೇವರ ಆಲಯಕ್ಕೋಸ್ಕರ ಮಾಡಿಸಿದ ಕೆಲಸವೆಲ್ಲಾ ಮುಗಿಯಿತು. ಆಗ ಸೊಲೊಮೋನನು ತನ್ನ ತಂದೆ ದಾವೀದನು ಪ್ರತಿಷ್ಠೆ ಮಾಡಿದ ಬೆಳ್ಳಿಯನ್ನೂ, ಬಂಗಾರವನ್ನೂ, ಎಲ್ಲಾ ಸಲಕರಣೆಗಳನ್ನೂ ದೇವರ ಆಲಯದ ಭಂಡಾರಕ್ಕೆ ಸೇರಿಸಿದನು.

[2] ಆಗ ಚೀಯೋನೆಂಬ ದಾವೀದನ ಪಟ್ಟಣದಿಂದ ಯೆಹೋವ ದೇವರ ಒಡಂಬಡಿಕೆಯ ಮಂಜೂಷವನ್ನು ತರುವ ನಿಮಿತ್ತ, ಸೊಲೊಮೋನನು ಇಸ್ರಾಯೇಲರಲ್ಲಿ ಶ್ರೇಷ್ಠರಾಗಿರುವ ಪಿತೃಗಳಾದ ಇಸ್ರಾಯೇಲಿನ ಹಿರಿಯರನ್ನೂ, ಗೋತ್ರಗಳ ಮುಖ್ಯಸ್ಥರನ್ನೂ ಯೆರೂಸಲೇಮಿನಲ್ಲಿ ತನ್ನ ಬಳಿಗೆ ಕೂಡಿಬರುವಂತೆ ಮಾಡಿದನು.

[3] ಆದ್ದರಿಂದ ಏಳನೆಯ ತಿಂಗಳಿನ ಹಬ್ಬದಲ್ಲಿ ಇಸ್ರಾಯೇಲಿನ ಸಮಸ್ತ ಜನರು ಅರಸನ ಬಳಿಗೆ ಕೂಡಿಬಂದರು.

[4] ಇಸ್ರಾಯೇಲಿನ ಹಿರಿಯರೆಲ್ಲರೂ ಬಂದ ತರುವಾಯ, ಲೇವಿಯರು ಯೆಹೋವ ದೇವರ ಮಂಜೂಷವನ್ನು ಎತ್ತಿಕೊಂಡರು.

[5] ಒಡಂಬಡಿಕೆಯ ಮಂಜೂಷವನ್ನೂ, ದೇವದರ್ಶನದ ಗುಡಾರವನ್ನೂ, ಗುಡಾರದಲ್ಲಿದ್ದ ಸಮಸ್ತ ಪರಿಶುದ್ಧವಾದ ಸಲಕರಣೆಗಳನ್ನೂ ತಂದರು. ಇವುಗಳನ್ನು ಯಾಜಕರಾದ ಲೇವಿಯರು ಹೊತ್ತುಕೊಂಡು ತಂದರು.

[6] ಆಗ ಅರಸನಾದ ಸೊಲೊಮೋನನೂ ಅವನ ಬಳಿಯಲ್ಲಿ ಕೂಡಿದ ಇಸ್ರಾಯೇಲ್ ಜನರೆಲ್ಲರೂ ಮಂಜೂಷದ ಮುಂದೆ ನಿಂತು ಎಣಿಸಲಾಗದಷ್ಟು ಕುರಿಗಳನ್ನೂ, ಪಶುಗಳನ್ನೂ ಬಲಿಯಾಗಿ ಅರ್ಪಿಸಿದರು.

[7] ಯಾಜಕರು ಯೆಹೋವ ದೇವರ ಒಡಂಬಡಿಕೆಯ ಮಂಜೂಷವನ್ನು ಮಹಾಪರಿಶುದ್ಧ ಸ್ಥಳವಾದ ಗರ್ಭಗುಡಿಯಲ್ಲಿ ಕೆರೂಬಿಗಳ ರೆಕ್ಕೆಗಳ ಕೆಳಗಿದ್ದ ಅದರ ಸ್ಥಳದಲ್ಲಿ ಇಟ್ಟರು.

[8] ಕೆರೂಬಿಗಳು ಮಂಜೂಷವಿದ್ದ ಸ್ಥಳದ ಮೇಲೆ ತಮ್ಮ ರೆಕ್ಕೆಗಳನ್ನು ಚಾಚಿಕೊಂಡಿದ್ದವು. ಹೀಗೆಯೇ ಕೆರೂಬಿಗಳು ಮಂಜೂಷವನ್ನೂ, ಅದರ ಕೋಲುಗಳನ್ನೂ ಮೇಲಿನಿಂದ ಮುಚ್ಚಿಕೊಂಡಿದ್ದವು.

[9] ಆ ಕೋಲುಗಳು ಮಂಜೂಷಕ್ಕಿಂತಲೂ ಬಹಳ ಉದ್ದವಾಗಿದ್ದುದರಿಂದ ಅವುಗಳ ತುದಿಗಳು ಗರ್ಭಗುಡಿಯ ಮುಂಭಾಗದಲ್ಲಿರುವ ಪರಿಶುದ್ಧ ಸ್ಥಳದಲ್ಲಿ ನಿಂತವರಿಗೆ ಕಾಣಿಸುತ್ತಿದ್ದವು, ಆದರೆ ಅವು ಹೊರಗೆ ನಿಂತವರಿಗೆ ಕಾಣಿಸುತ್ತಿರಲಿಲ್ಲ. ಅವು ಇಂದಿನವರೆಗೂ ಅಲ್ಲಿಯೇ ಇವೆ.

[10] ಇಸ್ರಾಯೇಲರು ಈಜಿಪ್ಟ್ ದೇಶದಿಂದ ಹೊರಬಂದ ನಂತರ, ಯೆಹೋವ ದೇವರು ಅವರ ಸಂಗಡ ಒಡಂಬಡಿಕೆ ಮಾಡಿದಾಗ ಮೋಶೆಯು ಹೋರೇಬ್ ಬೆಟ್ಟದ ಬಳಿಯಲ್ಲಿ ಮಂಜೂಷದೊಳಗೆ ಇಟ್ಟ ಕಲ್ಲಿನ ಎರಡು ಹಲಗೆಗಳ ಹೊರತು ಅದರಲ್ಲಿ ಮತ್ತೇನೂ ಇರಲಿಲ್ಲ.

[11] ಅಲ್ಲಿ ಇದ್ದ ಸಮಸ್ತ ಯಾಜಕರು ವರ್ಗವ್ಯತ್ಯಾಸವಿಲ್ಲದೆ ತಮ್ಮನ್ನು ಶುದ್ಧಪಡಿಸಿಕೊಂಡಿದ್ದರು.

[12] ತಮ್ಮನ್ನು ಪ್ರತಿಷ್ಠಿಸಿಕೊಂಡಿದ್ದ ಯಾಜಕರು ಪರಿಶುದ್ಧ ಸ್ಥಳದಿಂದ ಹೊರಟಾಗ, ನಯವಾದ ನಾರು ಬಟ್ಟೆಗಳನ್ನು ಧರಿಸಿಕೊಂಡಿದ್ದ ಲೇವಿಯ ಗಾಯಕರಾದ ಆಸಾಫ್, ಹೇಮಾನ್, ಯೆದುತೂನ್ ಹಾಗೂ ಇವರ ಮಕ್ಕಳೂ ಸಹೋದರರೂ ತುತೂರಿಗಳನ್ನು ಊದತಕ್ಕ ನೂರಿಪ್ಪತ್ತು ಮಂದಿ ಯಾಜಕರೂ ಬಲಿಪೀಠದ ಪೂರ್ವದಿಕ್ಕಿನಲ್ಲಿ ನಿಂತುಕೊಂಡರು.

[13] ತುತೂರಿ ಊದುವವರೂ, ಸಂಗೀತಗಾರರೂ ಯೆಹೋವ ದೇವರನ್ನು ಕೊಂಡಾಡುತ್ತಾ, ಹೊಗಳುತ್ತಾ ಧ್ವನಿ ಎತ್ತಿ ಸ್ತೋತ್ರ ಮಾಡುವಂತೆ ತುತೂರಿಗಳೂ, ತಾಳಗಳೂ ಮೊದಲಾದ ಗೀತ ವಾದ್ಯಗಳಿಂದ ಕೀರ್ತಿಸಿದರು: “ಯೆಹೋವ ದೇವರು ಒಳ್ಳೆಯವರು, ಅವರ ಕೃಪೆಯು ಯುಗಯುಗಕ್ಕೆ ಇರುವುದು,” ಎಂದು ಯೆಹೋವ ದೇವರನ್ನು ಹೊಗಳುತ್ತಿದ್ದ ಹಾಗೆ, ಯೆಹೋವ ದೇವರ ಆಲಯವು ಮೇಘದಿಂದ ತುಂಬಿತು.

[14] ಯೆಹೋವ ದೇವರ ತೇಜಸ್ಸಿನಿಂದ ವ್ಯಾಪಿಸಿದ್ದ ಆ ಮೋಡವು ದೇವಾಲಯದಲ್ಲಿ ತುಂಬಿಕೊಂಡದ್ದರಿಂದ ಯಾಜಕರು ಅಲ್ಲಿ ನಿಂತು ಸೇವೆ ಮಾಡಲಾರದೆ ಹೋದರು.

2 ಪೂರ್ವಕಾಲ ವೃತ್ತಾಂತ — Chapters