[1] ಇದರ ತರುವಾಯ ಮೋವಾಬ್ಯರೂ, ಅಮ್ಮೋನಿಯರೂ, ಮೆಗೂನ್ಯರೂ ಯೆಹೋಷಾಫಾಟನ ಮೇಲೆ ಯುದ್ಧಮಾಡಲು ಬಂದರು.
[2] ಆಗ ಕೆಲವರು ಬಂದು ಯೆಹೋಷಾಫಾಟನಿಗೆ, “ಅರಾಮಿನ ಈಚೆಯಲ್ಲಿರುವ ಲವಣ ಸಮುದ್ರದ ಆಚೆಯಿಂದ ನಿನಗೆ ವಿರೋಧವಾಗಿ ಮಹಾ ಸಮೂಹವೊಂದು ಬರುತ್ತದೆ. ಅವರು ಏನ್ಗೆದಿ ಎಂಬ ಹಜಜೋನ್ ತಾಮಾರಿನಲ್ಲಿ ಇದ್ದಾರೆ,” ಎಂದು ತಿಳಿಸಿದರು.
[3] ಇದನ್ನು ಕೇಳಿ ಯೆಹೋಷಾಫಾಟನು ಭಯಪಟ್ಟು ಯೆಹೋವ ದೇವರನ್ನು ಹುಡುಕಲು ನಿರ್ಣಯಿಸಿಕೊಂಡು ಸಮಸ್ತ ಯೆಹೂದದಲ್ಲಿ ಉಪವಾಸ ಮಾಡಬೇಕೆಂದು ಸಾರಿದನು.
[4] ಆದ್ದರಿಂದ ಯೆಹೂದದವರು ಯೆಹೋವ ದೇವರಿಂದ ಸಹಾಯವನ್ನು ಕೇಳಿಕೊಳ್ಳಲು ಸಮಸ್ತ ಯೆಹೂದದ ಪಟ್ಟಣಗಳಿಂದ ಕೂಡಿಬಂದರು.
[5] ಆಗ ಯೆಹೋಷಾಫಾಟನು ಹೊಸ ಅಂಗಳದ ಮುಂದೆ ಯೆಹೋವ ದೇವರ ಮಂದಿರದಲ್ಲಿರುವ ಯೆಹೂದದ ಯೆರೂಸಲೇಮಿನ ಜನಸಮೂಹದ ಮಧ್ಯದಲ್ಲಿ ನಿಂತು:
[6] “ನಮ್ಮ ಪಿತೃಗಳ ದೇವರಾದ ಯೆಹೋವ ದೇವರೇ, ಪರಲೋಕದಲ್ಲಿರುವ ದೇವರು ನೀವಲ್ಲವೋ? ನೀವು ಜನಾಂಗಗಳ ಸಕಲ ರಾಜ್ಯಗಳ ಮೇಲೆ ಆಳುತ್ತೀರಲ್ಲವೋ? ಯಾವನೂ ನಿಮ್ಮನ್ನು ಎದುರಿಸಲಾಗದ ಹಾಗೆ ನಿಮ್ಮ ಕೈಯಲ್ಲಿ ಶಕ್ತಿಯೂ, ಪರಾಕ್ರಮವೂ ಇಲ್ಲವೋ?
[7] ನೀವು ನಿಮ್ಮ ಜನವಾದ ಇಸ್ರಾಯೇಲಿನ ಎದುರಿನಿಂದ ಈ ದೇಶದ ನಿವಾಸಿಗಳನ್ನು ಓಡಿಸಿಬಿಟ್ಟು, ಅದನ್ನು ನಿಮ್ಮ ಸ್ನೇಹಿತನಾದ ಅಬ್ರಹಾಮನ ಸಂತತಿಗೆ ಎಂದೆಂದಿಗೂ ಕೊಟ್ಟ ನೀವು, ನಮ್ಮ ದೇವರಲ್ಲವೋ?
[8] ಅವರು ಅದರಲ್ಲಿ ನಿವಾಸಮಾಡಿ, ಅದರಲ್ಲಿ ನಿಮ್ಮ ಹೆಸರಿಗೆ ಪರಿಶುದ್ಧವಾದ ಸ್ಥಳವನ್ನು ಕಟ್ಟಿಸಿ,
[9] ‘ನಿಮ್ಮ ಹೆಸರು ಈ ಆಲಯದಲ್ಲಿರುವುದರಿಂದ ಖಡ್ಗವೂ ನ್ಯಾಯತೀರಿಸುವ ಶಿಕ್ಷೆಯೂ, ಘೋರವ್ಯಾಧಿಯೂ ಬರವೇನಾದರೂ ನಮ್ಮ ಮೇಲೆ ಬಂದರೆ, ನಾವು ಈ ಆಲಯದ ಮುಂದೆಯೂ, ನಿಮ್ಮ ಸಮ್ಮುಖದಲ್ಲಿಯೂ ನಿಂತು, ನಮ್ಮ ಇಕ್ಕಟ್ಟಿನಲ್ಲಿ ನಿಮ್ಮನ್ನು ಕೂಗುವಾಗ, ನೀವು ಕೇಳಿ ರಕ್ಷಿಸುವಿರಿ,’ ಎಂದು ಹೇಳಲಿಲ್ಲವೇ?
[10] “ಈಗ, ಅಮ್ಮೋನ್ ಮೋವಾಬ್, ಸೇಯೀರ್ ಬೆಟ್ಟದ ಜನರು, ಇಸ್ರಾಯೇಲರು ಈಜಿಪ್ಟ್ ದೇಶದೊಳಗಿಂದ ಹೊರಟು ಬರುವಾಗ, ಅವರ ಕಡೆಗೆ ಹೋಗಲು ನೀವು ಇವರಿಗೆ ಅಪ್ಪಣೆ ಕೊಡದೆ ಇದ್ದುದರಿಂದ, ಇವರು ಅವರನ್ನು ಬಿಟ್ಟು ತೊಲಗಿ ಅವರನ್ನು ನಾಶಮಾಡದೆ ಹೋದರು.
[11] ಅವರು ಬಂದು, ನೀವು ನಮಗೆ ಸ್ವಾಧೀನಮಾಡಿಕೊಳ್ಳಲು ಕೊಟ್ಟ ನಿಮ್ಮ ಸ್ವಾಸ್ತ್ಯದೊಳಗಿಂದ ನಮ್ಮನ್ನು ಹೊರಡಿಸುವುದರಿಂದ ನಮಗೆ ಪ್ರತೀಕಾರ ಮಾಡುತ್ತಾರೆ.
[12] ನಮ್ಮ ದೇವರೇ, ನೀವು ಅವರಿಗೆ ನ್ಯಾಯತೀರಿಸುವುದಿಲ್ಲವೋ? ನಮಗೆ ವಿರೋಧವಾಗಿ ಬರುವ ಈ ಮಹಾ ಗುಂಪನ್ನು ಎದುರಿಸಲು ನಮಗೆ ಶಕ್ತಿ ಇಲ್ಲ. ನಾವು ಏನು ಮಾಡಬೇಕೋ ತಿಳಿಯದು. ಆದರೆ ನಮ್ಮ ಕಣ್ಣುಗಳು ನಿಮ್ಮ ಮೇಲೆ ಇವೆ,” ಎಂದನು.
[13] ಹೀಗೆ ಯೆಹೂದದವರೆಲ್ಲರು ತಮ್ಮ ಹೆಂಡತಿಯರು, ಮಕ್ಕಳು, ಚಿಕ್ಕವರು ಸಹಿತವಾಗಿ ಯೆಹೋವ ದೇವರ ಮುಂದೆ ನಿಂತರು.
[14] ಆಗ ಜನಸಮೂಹದ ಮಧ್ಯದಲ್ಲಿ ಆಸಾಫನ ವಂಶದಲ್ಲಿ ಒಬ್ಬನಾದಂಥ ಲೇವಿಯನಾದ ಯಹಜಿಯೇಲನ ಮೇಲೆ ಯೆಹೋವ ದೇವರ ಆತ್ಮ ಬರಲು, ಇವನು ಮತ್ತನ್ಯನಿಗೆ ಹುಟ್ಟಿದ ಯೆಹೀಯೇಲನ ಮರಿಮಗ, ಬೆನಾಯನ ಮೊಮ್ಮಗ, ಹಾಗೂ ಜೆಕರ್ಯನ ಮಗ.
[15] ಆಗ ಯಹಜೀಯೇಲನು, “ಯೆಹೂದದ ಸಮಸ್ತರೇ, ಯೆರೂಸಲೇಮಿನ ನಿವಾಸಿಗಳೇ, ಅರಸನಾದ ಯೆಹೋಷಾಫಾಟನೇ, ಕೇಳಿರಿ. ಯೆಹೋವ ದೇವರು ನಿಮಗೆ ಹೀಗೆ ಹೇಳುತ್ತಾರೆ: ಈ ಮಹಾ ಗುಂಪಿನ ನಿಮಿತ್ತ ನೀವು ಭಯಪಡಬೇಡಿರಿ, ಹೆದರಬೇಡಿರಿ. ಏಕೆಂದರೆ ಯುದ್ಧವು ನಿಮ್ಮದಲ್ಲ, ದೇವರದೇ.
[16] ನಾಳೆ ಬೆಳಿಗ್ಗೆ ನೀವು ಅವರ ವಿರೋಧವಾಗಿ ಹೋಗಿರಿ. ಅವರು ಚೀಚ್ ಎಂಬ ಕಣಿವೆಯಿಂದ ಬರುತ್ತಾರೆ. ಯೆರೂಯೇಲ್ ಮರುಭೂಮಿಯ ಮುಂಭಾಗದಲ್ಲಿರುವ ಹಳ್ಳದ ಅಂತ್ಯದಲ್ಲಿ ಅವರನ್ನು ಕಂಡುಕೊಳ್ಳುವಿರಿ.
[17] ಇದರಲ್ಲಿ ನೀವು ಯುದ್ಧಮಾಡಲು ಅವಶ್ಯವಲ್ಲ. ನೀವು ನೆಲೆಯಾಗಿ ನಿಂತುಕೊಂಡು, ಯೆಹೋವ ದೇವರು ನಿಮಗೆ ಕೊಡುವ ಬಿಡುಗಡೆಯನ್ನು ನೋಡಿರಿ. ಯೆಹೂದದವರೇ, ಯೆರೂಸಲೇಮಿನವರೇ, ಭಯಪಡಬೇಡಿರಿ, ಹೆದರಬೇಡಿರಿ. ಮೂರನೇ ದಿವಸ ಅವರೆದುರಿಗೆ ಹೊರಟು ಹೋಗಿರಿ. ಯೆಹೋವ ದೇವರು ನಿಮ್ಮ ಸಂಗಡ ಇದ್ದಾರೆ,” ಎಂದನು.
[18] ಆಗ ಯೆಹೋಷಾಫಾಟನು ತನ್ನ ಮುಖವನ್ನು ನೆಲಕ್ಕೆ ಬಾಗಿಸಿದನು. ಯೆಹೂದದವರೆಲ್ಲರೂ, ಯೆರೂಸಲೇಮಿನ ನಿವಾಸಿಗಳೆಲ್ಲರೂ ಯೆಹೋವ ದೇವರ ಮುಂದೆ ಅಡ್ಡಬಿದ್ದು ಯೆಹೋವ ದೇವರನ್ನು ಆರಾಧಿಸಿದರು.
[19] ಇದಲ್ಲದೆ ಕೊಹಾತ್ಯರ ಮಕ್ಕಳಲ್ಲಿಯೂ, ಕೋರಹೀಯರ ಮಕ್ಕಳಲ್ಲಿರುವ ಲೇವಿಯರು ಗಟ್ಟಿಯಾಗಿ ದೊಡ್ಡ ಶಬ್ದದಿಂದ ಇಸ್ರಾಯೇಲಿನ ದೇವರಾದ ಯೆಹೋವ ದೇವರನ್ನು ಸ್ತುತಿಸಲು ಎದ್ದು ನಿಂತರು.
[20] ಅವರು ಉದಯದಲ್ಲಿ ಎದ್ದು ತೆಕೋವದ ಮರುಭೂಮಿಗೆ ಹೊರಟರು. ಅವರು ಹೊರಟು ಹೋಗುತ್ತಿರುವಾಗ ಯೆಹೋಷಾಫಾಟನು ನಿಂತುಕೊಂಡು, “ಯೆಹೂದದವರೇ, ಯೆರೂಸಲೇಮಿನ ನಿವಾಸಿಗಳೇ, ನನ್ನ ಮಾತನ್ನು ಕೇಳಿರಿ. ನಿಮ್ಮ ದೇವರಾದ ಯೆಹೋವ ದೇವರನ್ನು ನಂಬಿ ಸ್ಥಿರವಾಗಿರಿ. ದೇವರ ಪ್ರವಾದಿಗಳನ್ನು ನಂಬಿರಿ, ಆಗ ಜಯ ಹೊಂದುವಿರಿ,” ಎಂದನು.
[21] ಜನರ ಸಂಗಡ ಆಲೋಚನೆ ಮಾಡಿದ ತರುವಾಯ ಯೆಹೋಷಾಫಾಟನು, ಪರಿಶುದ್ಧತ್ವದ ವೈಭವದಿಂದ ಯೆಹೋವ ದೇವರಿಗೆ ಹಾಡುವಂತೆ ಸಂಗೀತಗಾರರನ್ನು ನೇಮಿಸಿದನು. ಅವರು ಸೈನ್ಯದ ಮುಂದೆ ಹೋಗುತ್ತಾ, “ಯೆಹೋವ ದೇವರಿಗೆ ಕೃತಜ್ಞತಾ ಸ್ತುತಿಮಾಡಿರಿ. ಅವರ ಪ್ರೀತಿಯು ಯುಗಯುಗಕ್ಕೂ ಇರುವುದು,” ಎಂದು ಹಾಡುವಂತೆ ನೇಮಿಸಿದನು.
[22] ಅವರು ಹಾಡುವುದಕ್ಕೂ, ಸ್ತುತಿಸುವುದಕ್ಕೂ ಆರಂಭಿಸಿದಾಗಲೇ ಯೆಹೋವ ದೇವರು ಯೆಹೂದದ ಮೇಲೆ ಬಂದ ಅಮ್ಮೋನ್, ಮೋವಾಬ್, ಸೇಯೀರ್ ಪರ್ವತಗಳ ಜನರನ್ನು ಸೋಲಿಸುವುದಕ್ಕೆ ಅವರಲ್ಲಿಯೇ ಹೊಂಚಿಕೊಳ್ಳುವವರನ್ನು ಇರಿಸಿದ್ದರು.
[23] ಅಮ್ಮೋನಿಯರು, ಮೋವಾಬ್ಯರು ಸೇಯೀರ್ ಪರ್ವತದ ನಿವಾಸಿಗಳನ್ನು ಸಂಪೂರ್ಣವಾಗಿ ನಾಶಮಾಡಲು ನಿಂತರು. ಅವರು ಸೇಯೀರನ ನಿವಾಸಿಗಳನ್ನು ಪೂರ್ಣವಾಗಿ ವಧಿಸಿದ ತರುವಾಯ, ತಾವೇ ಒಬ್ಬರನ್ನೊಬ್ಬರು ಕೊಲ್ಲುವುದಕ್ಕೆ ಪ್ರಾರಂಭಿಸಿದರು.
[24] ಯೆಹೂದದವರು ಮರುಭೂಮಿಯಲ್ಲಿರುವ ಎತ್ತರದ ಸ್ಥಳಕ್ಕೆ ಬಂದು, ಅಲ್ಲಿನ ಗುಂಪನ್ನು ನೋಡಿದಾಗ, ಅವರಲ್ಲಿ ಒಬ್ಬನೂ ಉಳಿಯದ ಹಾಗೆ ಎಲ್ಲರೂ ನೆಲಕ್ಕೆ ಬಿದ್ದು ಹೆಣಗಳಾಗಿದ್ದರು.
[25] ಯೆಹೋಷಾಫಾಟನೂ, ಅವನ ಜನರೂ ಅವರ ವಸ್ತ್ರಗಳನ್ನೂ, ವಸ್ತುಗಳನ್ನೂ ಕೊಳ್ಳೆಮಾಡಲು ಬಂದಾಗ, ಅವರು ಹೆಣಗಳ ಬಳಿಯಲ್ಲಿ ದ್ರವ್ಯವನ್ನೂ, ಆಭರಣಗಳನ್ನೂ ಬಹಳವಾಗಿ ಕಂಡುಕೊಂಡು, ತಾವು ಒಯ್ಯಲಿಕ್ಕಾಗದಷ್ಟು ಹೆಚ್ಚಾಗಿ ಸುಲಿದುಕೊಂಡರು. ಕೊಳ್ಳೆಯು ಅಷ್ಟು ಅಧಿಕವಾದುದರಿಂದ ಅದನ್ನು ಮೂರು ದಿವಸಗಳವರೆಗೂ ಸುಲಿದುಕೊಳ್ಳುತ್ತಾ ಇದ್ದರು.
[26] ನಾಲ್ಕನೆಯ ದಿವಸದಲ್ಲಿ ಅವರು ಬೆರಾಕವೆಂಬ ತಗ್ಗಿನಲ್ಲಿ ಕೂಡಿಕೊಂಡರು. ಅಲ್ಲಿ ಯೆಹೋವ ದೇವರನ್ನು ಸ್ತುತಿಸಿದರು. ಆದಕಾರಣ ಇಂದಿನವರೆಗೂ ಆ ಸ್ಥಳಕ್ಕೆ ಬೆರಾಕ ತಗ್ಗು ಎಂದು ಕರೆಯುತ್ತಾರೆ.
[27] ಯೆಹೋವ ದೇವರು ಅವರ ಶತ್ರುಗಳ ಮೇಲೆ ಅವರು ಸಂತೋಷಪಡುವಂತೆ ಮಾಡಿದ್ದರಿಂದ, ಅವರು ಹರ್ಷಗೊಂಡು ಯೆರೂಸಲೇಮಿಗೆ ತಿರುಗಿ ಹೋಗುವುದಕ್ಕೆ ಯೆಹೂದ ಮತ್ತು ಯೆರೂಸಲೇಮಿನವರ ಮುಂಭಾಗದಲ್ಲಿ ಯೆಹೋಷಾಫಾಟನೂ ಹೊರಟು,
[28] ಸ್ವರಮಂಡಲ, ಕಿನ್ನರಿ, ತುತೂರಿ ಇವುಗಳೊಡನೆ ಯೆರೂಸಲೇಮಿನಲ್ಲಿರುವ ಯೆಹೋವ ದೇವರ ಆಲಯಕ್ಕೆ ಬಂದರು.
[29] ಯೆಹೋವ ದೇವರು ಇಸ್ರಾಯೇಲರ ಶತ್ರುಗಳ ಮೇಲೆ ಯುದ್ಧ ಮಾಡಿದರೆಂದು ಜನರು ಕೇಳಿದಾಗ, ದೇವರ ಭಯವು ಆ ದೇಶದಲ್ಲಿ ಸಕಲ ರಾಜ್ಯಗಳ ಮೇಲೆ ಇತ್ತು.
[30] ಹೀಗೆ ಯೆಹೋಷಾಫಾಟನ ರಾಜ್ಯವು ಶಾಂತವಾಗಿತ್ತು. ಅವನ ದೇವರು ಸುತ್ತಲೂ ಅವನಿಗೆ ವಿಶ್ರಾಂತಿಕೊಟ್ಟರು.
[31] ಯೆಹೋಷಾಫಾಟನು ಯೆಹೂದ್ಯರ ಮೇಲೆ ಆಳಿದನು. ಅವನು ಅರಸನಾದಾಗ ಮೂವತ್ತೈದು ವರ್ಷದವನಾಗಿದ್ದನು. ಯೆರೂಸಲೇಮಿನಲ್ಲಿ ಇಪ್ಪತ್ತೈದು ವರ್ಷ ಆಳಿದನು. ಶಿಲ್ಹಿಯ ಮಗಳಾದ ಅಜೂಬಳೆಂಬಾಕೆಯು ಅವನ ತಾಯಿ.
[32] ಅವನು ತನ್ನ ತಂದೆ ಆಸನ ಮಾರ್ಗಗಳಲ್ಲಿ ನಡೆದು, ಅದನ್ನು ಬಿಟ್ಟು ತೊಲಗದೇ, ಯೆಹೋವ ದೇವರ ದೃಷ್ಟಿಯಲ್ಲಿ ಸರಿಯಾದದ್ದನ್ನು ಮಾಡಿದನು.
[33] ಆದರೂ ಪೂಜಾಸ್ಥಳಗಳನ್ನು ತೆಗೆದುಹಾಕಲಿಲ್ಲ. ಜನರು ಅವರ ಹೃದಯಗಳನ್ನು ತಮ್ಮ ಪಿತೃಗಳ ದೇವರ ಕಡೆಗೆ ಇನ್ನೂ ಸ್ಥಿರ ಮಾಡಿಕೊಂಡಿರಲಿಲ್ಲ.
[34] ಯೆಹೋಷಾಫಾಟನ ಇತರ ಕ್ರಿಯೆಗಳು, ಆರಂಭದಿಂದ ಅಂತ್ಯದವರೆಗೆ, ಇಸ್ರಾಯೇಲರ ಅರಸುಗಳ ಗ್ರಂಥದಲ್ಲಿ, ಅಂದರೆ, ಹನಾನೀಯ ಮಗನಾದ ಯೇಹುವಿನ ಗ್ರಂಥದಲ್ಲಿ ಬರೆದಿರುತ್ತವೆ.
[35] ಇದರ ತರುವಾಯ ಯೆಹೂದದ ಅರಸನಾದ ಯೆಹೋಷಾಫಾಟನು, ಬಹು ದುಷ್ಟನಾಗಿ ನಡೆದ ಇಸ್ರಾಯೇಲಿನ ಅರಸನಾದ ಅಹಜ್ಯನ ಸಂಗಡ ಒಪ್ಪಂದ ಮಾಡಿಕೊಂಡನು.
[36] ಇದಲ್ಲದೆ ತಾರ್ಷೀಷಿಗೆ ಹೋಗುವುದಕ್ಕಾಗಿ ಹಡಗುಗಳನ್ನು ಮಾಡಿಸಲು, ಅವನ ಸಂಗಡ ಒಪ್ಪಂದ ಮಾಡಿಕೊಂಡು ಎಚ್ಯೋನ್ ಗೆಬೆರಿನಲ್ಲಿ ಹಡಗುಗಳನ್ನು ಮಾಡಿಸಿದರು.
[37] ಆಗ ಮಾರೇಷಾ ಊರಿನ ದೋದವಾಹುವಿನ ಮಗನಾದ ಎಲೀಯೆಜೆರನು ಯೆಹೋಷಾಫಾಟನಿಗೆ ವಿರೋಧವಾಗಿ ಪ್ರವಾದಿಸಿ, “ನೀನು ಅಹಜ್ಯನ ಸಂಗಡ ಒಪ್ಪಂದ ಮಾಡಿಕೊಂಡಿದ್ದರಿಂದ, ಯೆಹೋವ ದೇವರು ನೀನು ಮಾಡಿದವುಗಳನ್ನು ನಾಶಮಾಡುವರು,” ಎಂದು ಹೇಳಿದನು. ಅದರಂತೆಯೇ, ಆ ಹಡಗುಗಳು ತಾರ್ಷೀಷಿಗೆ ಹೋಗದೆ ಒಡೆದುಹೋದವು.