[1] ಸೊಲೊಮೋನನು ಯೆರೂಸಲೇಮಿನಲ್ಲಿ ತನ್ನ ತಂದೆ ದಾವೀದನಿಗೆ ಯೆಹೋವ ದೇವರು ಕಾಣಿಸಿಕೊಂಡ ಸ್ಥಳವಾದ ಮೊರೀಯಾ ಬೆಟ್ಟದ ಮೇಲೆ, ದಾವೀದನು ಸಿದ್ಧಮಾಡಿದ ಸ್ಥಳವಾದ ಯೆಬೂಸಿಯನಾದ ಒರ್ನಾನನ ಕಣದಲ್ಲಿ ಯೆಹೋವ ದೇವರ ಆಲಯವನ್ನು ಕಟ್ಟಿಸಲು ಪ್ರಾರಂಭಿಸಿದನು.
[2] ತನ್ನ ಆಳಿಕೆಯ ನಾಲ್ಕನೆಯ ವರ್ಷದ ಎರಡನೆಯ ತಿಂಗಳಿನ ಎರಡನೆಯ ದಿವಸದಲ್ಲಿ ಕಟ್ಟುವುದಕ್ಕೆ ಆರಂಭಿಸಿದನು.
[3] ದೇವರ ಆಲಯವನ್ನು ಕಟ್ಟುವುದಕ್ಕೆ ಸೊಲೊಮೋನನು ಹಾಕಿಸಿದ ಅಸ್ತಿವಾರಗಳು ಏನೆಂದರೆ ಮೊದಲಿನ ಅಳತೆಯ ಪ್ರಕಾರವಾಗಿ ಅದರ ಉದ್ದ ಸುಮಾರು 27 ಮೀಟರ್ ಮತ್ತು ಅದರ ಅಗಲ 9 ಮೀಟರ್;
[4] ಮುಂದೆ ಇರುವ ದ್ವಾರಾಂಗಳ ಆಲಯದ ಅಗಲದ ಪ್ರಕಾರ ಸುಮಾರು 9 ಮೀಟರ್ ಉದ್ದವಾಗಿತ್ತು; 54 ಮೀಟರ್ ಎತ್ತರವಾಗಿತ್ತು. ಅವನು ಅದನ್ನು ಒಳಗಡೆ ಶುದ್ಧ ಬಂಗಾರದಿಂದ ಹೊದಿಸಿದನು.
[5] ಅವನು ದೊಡ್ಡ ತುರಾಯಿ ಮರಗಳಿಂದ ಮುಚ್ಚಿದ ಕೋಣೆಯನ್ನು ಶುದ್ಧ ಬಂಗಾರದಿಂದ ಹೊದಿಸಿ, ಅದರ ಮೇಲೆ ಖರ್ಜೂರದ ಗಿಡಗಳನ್ನೂ, ಸರಪಣಿಗಳನ್ನೂ ಕೆತ್ತಿಸಿದನು.
[6] ಇದಲ್ಲದೆ ಸೌಂದರ್ಯದ ನಿಮಿತ್ತವಾಗಿ ಅಮೂಲ್ಯವಾದ ರತ್ನಗಳಿಂದ ಆ ಆಲಯವನ್ನು ಮುಚ್ಚಿದನು. ಅದರ ಬಂಗಾರವು ಪರ್ವಯಿಮ್ ದೇಶದ್ದು.
[7] ಆಲಯದ ತೊಲೆಗಳನ್ನೂ, ಸ್ತಂಭಗಳನ್ನೂ, ಗೋಡೆಗಳನ್ನೂ, ಬಾಗಿಲುಗಳನ್ನೂ, ಅವನು ಬಂಗಾರದಿಂದ ಹೊದಿಸಿ, ಗೋಡೆಗಳ ಮೇಲೆ ಕೆರೂಬಿಗಳನ್ನೂ ಕೆತ್ತಿಸಿದನು.
[8] ಅವನು ಮಹಾಪರಿಶುದ್ಧವಾದ ಸ್ಥಳವನ್ನು ಕಟ್ಟಿದನು. ಅದರ ಉದ್ದವು ಆಲಯದ ಅಗಲದ ಪ್ರಕಾರ 9 ಮೀಟರ್; ಅದರ ಅಗಲ 9 ಮೀಟರ್. ಅವನು ಅದನ್ನು 20,000 ಕಿಲೋಗ್ರಾಂ ಶುದ್ಧ ಬಂಗಾರದಿಂದ ಹೊದಿಸಿದನು.
[9] ಅದರ ಮೊಳೆಗಳು ಐನೂರ ಎಪ್ಪತ್ತು ಕಿಲೋಗ್ರಾಂಗಳ ತೂಕ ಬಂಗಾರದ್ದಾಗಿತ್ತು. ಹಾಗೆಯೇ ಮೇಲಿನ ಕೊಠಡಿಗಳನ್ನು ಬಂಗಾರದಿಂದ ಹೊದಿಸಿದನು.
[10] ಮಹಾಪರಿಶುದ್ಧವಾದ ಸ್ಥಳದಲ್ಲಿ ಎರಡು ಕೆರೂಬಿಗಳನ್ನು ಮಾಡಿಸಿ, ಬಂಗಾರದಿಂದ ಅವುಗಳನ್ನು ಹೊದಿಸಿದನು.
[11] ಕೆರೂಬಿಗಳ ರೆಕ್ಕೆಗಳು 9 ಮೀಟರ್ ಉದ್ದವಾಗಿದ್ದವು. ಒಂದು ರೆಕ್ಕೆಯು ಎರಡೂವರೆ ಮೀಟರ್ ಉದ್ದವಾಗಿದ್ದು, ಆಲಯದ ಗೋಡೆಯವರೆಗೆ ಮುಟ್ಟಿತ್ತು; ಮತ್ತೊಂದು ರೆಕ್ಕೆ ಎರಡೂವರೆ ಮೀಟರ್ ಉದ್ದವಾಗಿದ್ದು, ಇನ್ನೊಂದು ಕೆರೂಬಿಯ ರೆಕ್ಕೆಯವರೆಗೂ ಮುಟ್ಟಿತ್ತು.
[12] ಹಾಗೆಯೇ ಮತ್ತೊಂದು ಕೆರೂಬಿಯ ರೆಕ್ಕೆಯು ಎರಡೂವರೆ ಮೀಟರ್ ಉದ್ದವಾಗಿದ್ದು, ಆಲಯದ ಗೋಡೆಯವರೆಗೆ ಮುಟ್ಟಿತ್ತು; ಇನ್ನೊಂದು ರೆಕ್ಕೆಯು ಎರಡೂವರೆ ಮೀಟರ್ ಉದ್ದವಾಗಿದ್ದು, ಬೇರೆ ಇರುವ ಕೆರೂಬಿಯ ರೆಕ್ಕೆಗೆ ಕೂಡಿಕೊಂಡಿತ್ತು.
[13] ಈ ಕೆರೂಬಿಗಳ ರೆಕ್ಕೆಗಳು 9 ಮೀಟರ್ ಉದ್ದಕ್ಕೆ ಚಾಚಿಕೊಂಡವು. ಅವು ತಮ್ಮ ಕಾಲುಗಳ ಮೇಲೆ ನಿಂತವು. ಅವುಗಳ ಮುಖಗಳು ಒಳಗಡೆಯಾಗಿದ್ದವು.
[14] ಪರದೆಯನ್ನು ನೀಲಿ, ಧೂಮ್ರ, ರಕ್ತವರ್ಣದ ದಾರದಿಂದ ಮತ್ತು ನಯವಾದ ಹೊಸೆದ ನಾರಿನಿಂದ ಮಾಡಿಸಿ, ಅದರಲ್ಲಿ ಕೆರೂಬಿಗಳುಳ್ಳದ್ದನ್ನಾಗಿ ಮಾಡಿಸಿದನು.
[15] ಇದಲ್ಲದೆ ಅವನು ಕಟ್ಟಡದ ಪ್ರವೇಶದ್ವಾರದಲ್ಲಿ ಎರಡು ಸ್ತಂಭಗಳನ್ನು ನಿರ್ಮಿಸಿದನು, ಪ್ರತಿಯೊಂದೂ ಹದಿನೈದು ಮೀಟರ್ ಎಪ್ಪತ್ತೈದು ಸೆಂಟಿಮೀಟರ್ ಎತ್ತರ, ಪ್ರತಿಯೊಂದರ ಮೇಲೆಯೂ ನಿರ್ಮಿಸಲಾದ ಪ್ರತಿಯೊಂದು ತಲೆಗಳು ಎರಡೂವರೆ ಮೀಟರ್ ಉದ್ದವಿತ್ತು.
[16] ಗರ್ಭಗುಡಿಯಲ್ಲಿ ಸರಪಣಿಗಳಂತೆ ಮಾಡಿ, ಸ್ತಂಭಗಳ ತುದಿಗಳ ಮೇಲೆ ಇಟ್ಟು, ನೂರು ದಾಳಿಂಬೆ ಹಣ್ಣುಗಳನ್ನು ಮಾಡಿ, ಸರಪಣಿಗಳ ಮೇಲೆ ಇರಿಸಿದನು.
[17] ಆ ಸ್ತಂಭಗಳನ್ನು ಮಂದಿರದ ಮುಂಭಾಗದಲ್ಲಿ ಒಂದನ್ನು ಬಲಗಡೆಯಲ್ಲಿಯೂ, ಇನ್ನೊಂದನ್ನು ಎಡಗಡೆಯಲ್ಲಿಯೂ ನಿಲ್ಲಿಸಿದನು. ಬಲಗಡೆಯಲ್ಲಿ ನಿಲ್ಲಿಸಿದ ಸ್ತಂಭಕ್ಕೆ ಯಾಕೀನ್ ಎಂದೂ, ಎಡಗಡೆಯ ಸ್ತಂಭಕ್ಕೆ ಬೋವಾಜ್ ಎಂದೂ ಹೆಸರಿಟ್ಟನು.