Skip to content
Opens in a new window
Listen to this chapter • 4:10

[1] ಆಸನ ಮಗ ಯೆಹೋಷಾಫಾಟನು ಅವನಿಗೆ ಬದಲಾಗಿ ಆಳಿದನು. ಅವನು ಇಸ್ರಾಯೇಲಿಗೆ ವಿರೋಧವಾಗಿ ತನ್ನನ್ನು ಬಲಪಡಿಸಿಕೊಂಡನು.

[2] ಇದಲ್ಲದೆ ಅವನು ಯೆಹೂದದಲ್ಲಿ ಸಮಸ್ತ ಕೋಟೆಯುಳ್ಳ ಪಟ್ಟಣಗಳಲ್ಲಿ ಸೈನ್ಯವನ್ನು ಇಟ್ಟು, ಯೆಹೂದದಲ್ಲಿಟ್ಟ ಹಾಗೆ ತನ್ನ ತಂದೆಯಾದ ಆಸನು ತೆಗೆದುಕೊಂಡ ಎಫ್ರಾಯೀಮನ ಪಟ್ಟಣಗಳಲ್ಲಿ ಸೈನ್ಯಗಳನ್ನು ಇಟ್ಟನು.

[3] ಯೆಹೋಷಾಫಾಟನು ಬಾಳ್ ದೇವರುಗಳನ್ನು ಅನುಸರಿಸದೆ, ತನ್ನ ತಂದೆ ದಾವೀದನ ಮೊದಲಿನ ಮಾರ್ಗದಲ್ಲಿ ನಡೆದದ್ದರಿಂದ, ಯೆಹೋವ ದೇವರು ಅವನ ಸಂಗಡ ಇದ್ದರು.

[4] ತನ್ನ ತಂದೆಯ ದೇವರನ್ನು ಹುಡುಕಿ, ಇಸ್ರಾಯೇಲಿನ ಕ್ರಿಯೆಗಳ ಪ್ರಕಾರ ನಡೆಯದೆ, ದೇವರ ಆಜ್ಞೆಗಳಲ್ಲಿ ನಡೆದನು.

[5] ಆದ್ದರಿಂದ ಯೆಹೋವ ದೇವರು ರಾಜ್ಯವನ್ನು ಅವನ ಕೈಯಲ್ಲಿ ಸ್ಥಿರಪಡಿಸಿದರು. ಯೆಹೂದವೆಲ್ಲವೂ ಯೆಹೋಷಾಫಾಟನಿಗೆ ಕಾಣಿಕೆಯನ್ನು ಕೊಟ್ಟದ್ದರಿಂದ, ಅವನಿಗೆ ಐಶ್ವರ್ಯವೂ, ಘನತೆಯೂ ಅಧಿಕವಾಯಿತು.

[6] ಅವನ ಹೃದಯವು ಯೆಹೋವ ದೇವರ ಮಾರ್ಗಗಳಲ್ಲಿ ಸಮರ್ಪಿತವಾಗಿತ್ತು. ಇದಲ್ಲದೆ ಅವನು ಯೆಹೂದದಲ್ಲಿದ್ದ ಉನ್ನತ ಪೂಜಾಸ್ಥಳಗಳನ್ನೂ, ಅಶೇರ ವಿಗ್ರಹ ಸ್ತಂಭಗಳನ್ನೂ ತೆಗೆದುಹಾಕಿದನು.

[7] ಅವನ ಆಳಿಕೆಯ ಮೂರನೆಯ ವರ್ಷದಲ್ಲಿ ಅವನು ತನ್ನ ಪ್ರಧಾನರಾದ ಬೆನ್ಹೈಲನನ್ನೂ, ಓಬದ್ಯನನ್ನೂ, ಜೆಕರ್ಯನನ್ನೂ, ನೆತನೆಯೇಲನನ್ನೂ, ಮೀಕಾಯನನ್ನೂ ಯೆಹೂದದ ಪಟ್ಟಣಗಳಲ್ಲಿ ಬೋಧಿಸಲು ಕರೆಕಳುಹಿಸಿದನು.

[8] ಅವರ ಸಂಗಡ ಲೇವಿಯರಾದ ಶೆಮಾಯನನ್ನೂ, ನೆತನ್ಯನನ್ನೂ, ಜೆಬದ್ಯನನ್ನೂ, ಅಸಾಯೇಲನನ್ನೂ, ಶೆಮೀರಾಮೋತನನ್ನೂ, ಯೆಹೋನಾತಾನನನ್ನೂ, ಅದೋನೀಯನನ್ನೂ, ಟೋಬೀಯನನ್ನೂ, ಟೋಬದೋನಿಯನನ್ನೂ, ಇವರ ಸಂಗಡ ಯಾಜಕರಾದ ಎಲೀಷಾಮನನ್ನೂ, ಯೆಹೋರಾಮನನ್ನೂ ಕಳುಹಿಸಿದನು.

[9] ಇವರು ಯೆಹೂದದಲ್ಲಿ ಬೋಧಿಸಿದರು. ಅವರ ಬಳಿಯಲ್ಲಿ ಯೆಹೋವ ದೇವರ ನಿಯಮದ ಗ್ರಂಥ ಇತ್ತು. ಯೆಹೂದದ ಸಮಸ್ತ ಪಟ್ಟಣಗಳನ್ನು ಸಂಚರಿಸಿ, ಜನರಿಗೆ ಬೋಧಿಸಿದರು.

[10] ಯೆಹೋವ ದೇವರ ಭಯವು ಯೆಹೂದದ ಸುತ್ತಲಿರುವ ದೇಶಗಳ ಸಮಸ್ತ ರಾಜ್ಯಗಳ ಮೇಲೆ ಇದ್ದುದರಿಂದ, ಅವರು ಯೆಹೋಷಾಫಾಟನ ಮೇಲೆ ಯುದ್ಧಮಾಡಲಿಲ್ಲ.

[11] ಇದಲ್ಲದೆ ಫಿಲಿಷ್ಟಿಯರಲ್ಲಿ ಕೆಲವರು ಯೆಹೋಷಾಫಾಟನಿಗೆ ಕಾಣಿಕೆಗಳನ್ನೂ, ಕಪ್ಪದ ಹಣವನ್ನು ತಂದರು. ಅರಬಿಯ ದೇಶದವರು ತಮ್ಮ ಮಂದೆಗಳಿಂದ ಏಳು ಸಾವಿರದ ಏಳು ನೂರು ಟಗರುಗಳನ್ನೂ, ಏಳು ಸಾವಿರದ ಏಳು ನೂರು ಹೋತಗಳನ್ನೂ ತಂದರು.

[12] ಯೆಹೋಷಾಫಾಟನು ಬರಬರುತ್ತಾ ಬಹಳ ಅಭಿವೃದ್ಧಿಯಾಗಿ ಯೆಹೂದದಲ್ಲಿ ಅರಮನೆಗಳನ್ನೂ, ಉಗ್ರಾಣದ ಪಟ್ಟಣಗಳನ್ನೂ ಕಟ್ಟಿಸಿದನು.

[13] ಇದಲ್ಲದೆ ಯೆಹೂದದ ಪಟ್ಟಣಗಳಲ್ಲಿ ದವಸ ಧಾನ್ಯಗಳ ದೊಡ್ಡ ಮಳಿಗೆಯನ್ನು ಕಟ್ಟಿದನು. ಪರಾಕ್ರಮಶಾಲಿಗಳಾದ ಯುದ್ಧವೀರರು ಯೆರೂಸಲೇಮಿನಲ್ಲಿದ್ದರು.

[14] ತಮ್ಮ ಪಿತೃಗಳ ಮನೆಯ ಪ್ರಕಾರವಾಗಿರುವ ಅವರ ಲೆಕ್ಕವೇನೆಂದರೆ: ಯೆಹೂದದ 1,000 ಅಧಿಪತಿಗಳಲ್ಲಿ ಅದ್ನಾನು ಮುಖ್ಯಸ್ಥನಾಗಿದ್ದನು. ಅವನ ಸಂಗಡ ಪರಾಕ್ರಮಶಾಲಿಗಳು 3,00,000 ಮಂದಿ ಇದ್ದರು.

[15] ಅವನ ತರುವಾಯ ಅಧಿಪತಿಯಾದ ಯೆಹೋಹಾನಾನನು; ಅವನ ಸಂಗಡ 2,80,000 ಮಂದಿಯು.

[16] ಇವನ ತರುವಾಯ ಯೆಹೋವ ದೇವರಿಗೆ ತನ್ನನ್ನು ಮನಃಪೂರ್ವಕವಾಗಿ ಒಪ್ಪಿಸಿದ ಜಿಕ್ರಿಯ ಮಗನಾದ ಅಮಸ್ಯನು; ಅವನ ಸಂಗಡ 2,00,000 ಮಂದಿ ಪರಾಕ್ರಮಶಾಲಿಗಳು.

[17] ಬೆನ್ಯಾಮೀನ್ಯರಲ್ಲಿ ಪರಾಕ್ರಮಶಾಲಿಯಾದ ಎಲ್ಯಾದ; ಇವನ ಸಂಗಡ ಬಿಲ್ಲನ್ನೂ, ಗುರಾಣಿಯನ್ನೂ ಧರಿಸಿಕೊಂಡಿರುವ 2,00,000 ಮಂದಿಯು.

[18] ಇವನ ತರುವಾಯ ಯೆಹೋಜಾಬಾದನು; ಅವನ ಸಂಗಡ ಯುದ್ಧಕ್ಕೆ ಸಿದ್ಧವಾಗಿರುವ 1,80,000 ಮಂದಿಯು.

[19] ಅರಸನಿಂದ ಸಮಸ್ತ ಯೆಹೂದದಲ್ಲಿರುವ ಕೋಟೆಯುಳ್ಳ ಪಟ್ಟಣಗಳಲ್ಲಿ ಇದ್ದವರ ಹೊರತಾಗಿ, ಇವರು ಅರಸನ ಬಳಿಯಲ್ಲಿ ಸೇವೆಮಾಡುತ್ತಿದ್ದರು.

2 ಪೂರ್ವಕಾಲ ವೃತ್ತಾಂತ — Chapters