Skip to content
Opens in a new window
Listen to this chapter • 6:20

[1] ಮನಸ್ಸೆಯು ಅರಸನಾದಾಗ ಹನ್ನೆರಡು ವರ್ಷದವನಾಗಿದ್ದನು. ಅವನು ಐವತ್ತೈದು ವರ್ಷ ಯೆರೂಸಲೇಮಿನಲ್ಲಿ ಆಳಿದನು.

[2] ಆದರೆ ಯೆಹೋವ ದೇವರು ಇಸ್ರಾಯೇಲರ ಮುಂದೆ ಹೊರಡಿಸಿಬಿಟ್ಟ ಜನಾಂಗಗಳ ಅಸಹ್ಯವಾದವುಗಳನ್ನು ಅವನು ಅನುಸರಿಸಿ ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದನು.

[3] ಅವನು ತನ್ನ ತಂದೆಯಾದ ಹಿಜ್ಕೀಯನು ನಾಶಮಾಡಿದ ಉನ್ನತ ಪೂಜಾಸ್ಥಳಗಳನ್ನು ಮತ್ತೆ ಸ್ಥಾಪಿಸಿ, ಬಾಳನಿಗೆ ಬಲಿಪೀಠಗಳನ್ನು ಕಟ್ಟಿಸಿ, ಅಶೇರ ವಿಗ್ರಹಸ್ತಂಭಗಳನ್ನು ನಿಲ್ಲಿಸಿ, ಸಮಸ್ತ ನಕ್ಷತ್ರಮಂಡಲಕ್ಕೆ ಅಡ್ಡಬಿದ್ದು ಅವುಗಳನ್ನು ಪೂಜಿಸಿದನು.

[4] ಇದಲ್ಲದೆ ಯೆರೂಸಲೇಮಿನಲ್ಲಿ, “ನನ್ನ ಹೆಸರು ಯುಗಯುಗಕ್ಕೂ ಇರುವುದು,” ಎಂದು ಯೆಹೋವ ದೇವರು ಯಾವುದನ್ನು ಕುರಿತು ಹೇಳಿದ್ದರೋ, ಆ ಆಲಯದಲ್ಲಿ ಅವನು ಬಹಳ ಬಲಿಪೀಠಗಳನ್ನು ಕಟ್ಟಿಸಿದನು.

[5] ಯೆಹೋವ ದೇವರ ಆಲಯದ ಎರಡು ಅಂಗಳಗಳಲ್ಲಿ ಆಕಾಶದ ಸಮಸ್ತ ನಕ್ಷತ್ರಮಂಡಲಕ್ಕಾಗಿ ಬಲಿಪೀಠಗಳನ್ನು ಕಟ್ಟಿಸಿದನು.

[6] ಇದಲ್ಲದೆ ಮನಸ್ಸೆಯು ಬೆನ್ ಹಿನ್ನೋಮ್ ತಗ್ಗಿನಲ್ಲಿ ತನ್ನ ಮಕ್ಕಳನ್ನು ಬಲಿಯಾಗಿ ಅರ್ಪಿಸಿದನು. ಮೇಘ ಮಂತ್ರಗಳನ್ನೂ, ಸರ್ಪಮಂತ್ರಗಳನ್ನೂ ಮಾಟವನ್ನೂ ಮಾಡಿದನು. ಕಣಿಹೇಳುವವರನ್ನೂ, ಮಾಂತ್ರಿಕರನ್ನೂ ವಿಚಾರಿಸಿದನು. ಯೆಹೋವ ದೇವರ ದೃಷ್ಟಿಯಲ್ಲಿ ಅತ್ಯಂತ ಕೆಟ್ಟತನವನ್ನು ಮಾಡಿ ಅವರಿಗೆ ಕೋಪವನ್ನು ಎಬ್ಬಿಸಿದನು.

[7] ಮನಸ್ಸೆಯು ತಾನು ಮಾಡಿದ ವಿಗ್ರಹವನ್ನು ದೇವರ ಆಲಯದಲ್ಲಿ ಇಟ್ಟನು. ಆ ಆಲಯದ ಬಗ್ಗೆ ದೇವರು ದಾವೀದನಿಗೂ ಅವನ ಮಗನಾದ ಸೊಲೊಮೋನನಿಗೂ ಹೇಳಿದ್ದೇನೆಂದರೆ, “ನಾನು ಈ ಆಲಯದಲ್ಲಿ ಮತ್ತು ಇಸ್ರಾಯೇಲಿನ ಸಕಲ ಗೋತ್ರಗಳಲ್ಲಿ ನಾನು ಆಯ್ದುಕೊಂಡ ಯೆರೂಸಲೇಮಿನಲ್ಲಿ ನನ್ನ ನಾಮವನ್ನು ಶಾಶ್ವತವಾಗಿ ಸ್ಥಾಪಿಸುತ್ತೇನೆ.

[8] ನಾನು ಮೋಶೆಯ ಮುಖಾಂತರ ಆಜ್ಞಾಪಿಸಿದ ಎಲ್ಲಾ ಅಪ್ಪಣೆಗಳನ್ನೂ, ಕಾನೂನುಗಳನ್ನೂ, ವಿಧಿಗಳನ್ನೂ ಕೈಗೊಂಡು ನಡೆಯುವುದರಲ್ಲಿ ಅವರು ಜಾಗರೂಕರಾಗಿದ್ದರೆ, ನಾನು ಅವರ ಪಿತೃಗಳಿಗೆ ನೇಮಕ ಮಾಡಿದ ದೇಶವನ್ನು ಪುನಃ ಇಸ್ರಾಯೇಲರು ಬಿಟ್ಟುಹೋಗುವಂತೆ ಮಾಡುವುದಿಲ್ಲ,” ಎಂದು ಹೇಳಿದ್ದರು.

[9] ಆದರೆ ಯೆಹೂದದವರೂ ಯೆರೂಸಲೇಮಿನ ನಿವಾಸಿಗಳೂ ಇಸ್ರಾಯೇಲರ ಮುಂದೆಯೇ ಯೆಹೋವ ದೇವರಿಂದ ನಾಶಹೊಂದಿದ ಇತರ ಜನಾಂಗಗಳಿಗಿಂತ ಅಧಿಕವಾಗಿ ಕೆಟ್ಟದ್ದನ್ನು ಮಾಡಲು ಮನಸ್ಸೆಯು ಅವರನ್ನು ಪ್ರೇರೇಪಿಸಿದನು.

[10] ಯೆಹೋವ ದೇವರು ಮನಸ್ಸೆಯೊಂದಿಗೂ, ಅವನ ಜನರೊಂದಿಗೂ ಮಾತನಾಡಿದರು. ಆದರೆ ಅವರು ಲಕ್ಷಿಸಲಿಲ್ಲ.

[11] ಆದಕಾರಣ ಯೆಹೋವ ದೇವರು ಅಸ್ಸೀರಿಯದ ಅರಸನ ಸೈನ್ಯದ ಅಧಿಪತಿಗಳನ್ನೂ ಅವನ ಮೇಲೆ ಬರಮಾಡಿದರು. ಆ ಅಧಿಪತಿಗಳು ಮನಸ್ಸೆಯ ಮೂಗಿಗೆ ಕೊಂಡಿಗಳನ್ನು ಹಾಕಿ, ಅವನಿಗೆ ಕಂಚಿನ ಸಂಕೋಲೆಗಳಿಂದ ಬಂಧಿಸಿ, ಅವನನ್ನು ಬಾಬಿಲೋನಿಗೆ ಒಯ್ದರು.

[12] ಮನಸ್ಸೆಯು ಬಾಧೆಯಲ್ಲಿರುವಾಗ ತನ್ನ ದೇವರಾದ ಯೆಹೋವ ದೇವರನ್ನು ಬೇಡಿಕೊಂಡನು ಮತ್ತು ತನ್ನ ಪಿತೃಗಳ ದೇವರ ಮುಂದೆ ತನ್ನನ್ನು ಬಹಳವಾಗಿ ತಗ್ಗಿಸಿಕೊಂಡು ಪ್ರಾರ್ಥನೆಮಾಡಿದನು.

[13] ಆಗ ಯೆಹೋವ ದೇವರು ಕನಿಕರಪಟ್ಟು, ಅವನ ಬಿನ್ನಹವನ್ನು ಕೇಳಿ, ಯೆರೂಸಲೇಮಿಗೆ ತನ್ನ ರಾಜ್ಯಕ್ಕೆ ಅವನನ್ನು ತಿರುಗಿ ಬರಮಾಡಿದರು. ಆಗ ಯೆಹೋವ ದೇವರೇ ದೇವರೆಂದು ಮನಸ್ಸೆಯು ತಿಳಿದುಕೊಂಡನು.

[14] ಇದಾದ ತರುವಾಯ ಮನಸ್ಸೆಯು ದಾವೀದನ ಪಟ್ಟಣದ ಹೊರಭಾಗದಲ್ಲಿ ಗೀಹೋನಿನ ಪಶ್ಚಿಮ ಕಡೆಯ ತಗ್ಗಿನಲ್ಲಿ ಮೀನು ಬಾಗಿಲ ದ್ವಾರದವರೆಗಿರುವ ತಗ್ಗಿನಲ್ಲಿ ಓಫೇಲ್ ಗುಡ್ಡದ ಸುತ್ತಲೂ ಗೋಡೆಯನ್ನು ಕಟ್ಟಿಸಿ, ಅದನ್ನು ಬಹಳ ಎತ್ತರಮಾಡಿ, ಯೆಹೂದದ ಸಮಸ್ತ ಕೋಟೆಯುಳ್ಳ ಪಟ್ಟಣಗಳಲ್ಲಿ ಸೈನ್ಯದ ಅಧಿಪತಿಗಳನ್ನು ಇಟ್ಟನು.

[15] ಅವನು ಅನ್ಯದೇವರುಗಳನ್ನೂ, ಯೆಹೋವ ದೇವರ ಆಲಯದಲ್ಲಿರುವ ವಿಗ್ರಹವನ್ನೂ ಯೆಹೋವ ದೇವರ ಆಲಯದ ಪರ್ವತದಲ್ಲಿಯೂ, ಯೆರೂಸಲೇಮಿನಲ್ಲಿಯೂ ತಾನು ಕಟ್ಟಿಸಿದ ಸಮಸ್ತ ಬಲಿಪೀಠಗಳನ್ನೂ ತೆಗೆದುಹಾಕಿ, ಅವುಗಳನ್ನು ಪಟ್ಟಣದ ಹೊರಗೆ ಬಿಸಾಡಿ ಬಿಟ್ಟನು.

[16] ಅವನು ಯೆಹೋವ ದೇವರ ಬಲಿಪೀಠವನ್ನು ಕಟ್ಟಿಸಿ, ಅದರ ಮೇಲೆ ಸಮಾಧಾನದ ಬಲಿಗಳನ್ನೂ, ಸ್ತೋತ್ರದ ಬಲಿಗಳನ್ನೂ ಅರ್ಪಿಸಿ, ಇಸ್ರಾಯೇಲಿನ ದೇವರಾದ ಯೆಹೋವ ದೇವರನ್ನು ಸೇವಿಸಲು ಯೆಹೂದದವರಿಗೆ ಆಜ್ಞಾಪಿಸಿದನು.

[17] ಜನರು ತಮ್ಮ ದೇವರಾದ ಯೆಹೋವ ದೇವರಿಗೆ ಮಾತ್ರ ಬಲಿಯನ್ನರ್ಪಿಸುವಾಗ, ಇನ್ನೂ ಉನ್ನತ ಸ್ಥಳಗಳಲ್ಲಿಯೇ ಬಲಿಯನ್ನು ಅರ್ಪಿಸುತ್ತಾ ಇದ್ದರು.

[18] ಮನಸ್ಸೆಯ ಇತರ ಕ್ರಿಯೆಗಳೂ, ಅವನು ತನ್ನ ದೇವರಿಗೆ ಮಾಡಿದ ಪ್ರಾರ್ಥನೆಯೂ, ಇಸ್ರಾಯೇಲಿನ ದೇವರಾದ ಯೆಹೋವ ದೇವರ ನಾಮದಲ್ಲಿ ಅವನ ಸಂಗಡ ಮಾತನಾಡಿದ ಪ್ರವಾದಿಗಳ ಮಾತುಗಳೂ, ಇಸ್ರಾಯೇಲಿನ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ.

[19] ಇದಲ್ಲದೆ ಅವನ ಪ್ರಾರ್ಥನೆಯೂ, ಅವನು ದೇವರಿಗೆ ಭಿನ್ನವಿಸಿದ್ದೂ, ಅವನ ಸಮಸ್ತ ಪಾಪವೂ, ಅವನ ಅಪನಂಬಿಕೆಯೂ, ಅವನು ತಗ್ಗಿಸಿಕೊಳ್ಳುವುದಕ್ಕಿಂತ ಮುಂಚೆ ಕಟ್ಟಿಸಿದ ಉನ್ನತ ಸ್ಥಳಗಳನ್ನೂ, ನಿಲ್ಲಿಸಿದ ಅಶೇರ ಸ್ತಂಭಗಳೂ, ಕೆತ್ತಿಸಿದ ವಿಗ್ರಹಗಳೂ, ಸ್ಥಾಪಿಸಿದ ಸ್ಥಳಗಳೂ ಪ್ರವಾದಿಗಳ ದಾಖಲೆಗಳಲ್ಲಿ ಬರೆದಿರುತ್ತವೆ.

[20] ಮನಸ್ಸೆಯು ಮೃತನಾಗಿ ತನ್ನ ಪಿತೃಗಳ ಬಳಿಗೆ ಸೇರಿದನು. ಅವನನ್ನು ಅವನ ಅರಮನೆಯಲ್ಲಿ ಹೂಳಿಟ್ಟರು. ಅವನ ಮಗ ಆಮೋನನು ಅವನಿಗೆ ಬದಲಾಗಿ ಅರಸನಾದನು.

[21] ಆಮೋನನು ಅರಸನಾದಾಗ ಇಪ್ಪತ್ತೆರಡು ವರ್ಷದವನಾಗಿದ್ದನು, ಅವನು ಯೆರೂಸಲೇಮಿನಲ್ಲಿ ಎರಡು ವರ್ಷ ಆಳಿದನು.

[22] ಆದರೆ ಅವನು ತನ್ನ ತಂದೆ ಮನಸ್ಸೆಯು ಮಾಡಿದ ಹಾಗೆ ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನೇ ಮಾಡಿದನು. ಆಮೋನನು ತನ್ನ ತಂದೆ ಮನಸ್ಸೆಯು ಮಾಡಿದ ಕೆತ್ತಿದ ವಿಗ್ರಹಗಳಿಗೆ ಬಲಿಗಳನ್ನು ಅರ್ಪಿಸಿ ಅವುಗಳನ್ನು ಪೂಜಿಸಿದನು.

[23] ಆಮೋನನು ತನ್ನ ತಂದೆ ಮನಸ್ಸೆಯು ತನ್ನನ್ನು ತಗ್ಗಿಸಿಕೊಂಡ ಹಾಗೆ, ಯೆಹೋವ ದೇವರ ಮುಂದೆ ತನ್ನನ್ನು ತಗ್ಗಿಸಿಕೊಳ್ಳಲಿಲ್ಲ. ಆದರೆ ಆಮೋನನು ಅಧಿಕವಾಗಿ ಅಪರಾಧ ಮಾಡಿದನು.

[24] ಆದ್ದರಿಂದ ಆಮೋನನ ಸೇವಕರು ಅವನ ವಿರುದ್ಧ ಒಳಸಂಚುಮಾಡಿ, ಅವನ ಅರಮನೆಯಲ್ಲಿಯೇ ಅವನನ್ನು ಕೊಂದುಹಾಕಿದರು.

[25] ಆದರೆ ದೇಶದ ಜನರು ಅರಸನಾದ ಆಮೋನನ ವಿರುದ್ಧ ಒಳಸಂಚು ಮಾಡಿದವರನ್ನೆಲ್ಲಾ ಕೊಂದುಹಾಕಿ, ದೇಶದ ಜನರು ಅವನ ಮಗ ಯೋಷೀಯನನ್ನು ಅವನಿಗೆ ಬದಲಾಗಿ ಅರಸನನ್ನಾಗಿ ಮಾಡಿದರು.

2 ಪೂರ್ವಕಾಲ ವೃತ್ತಾಂತ — Chapters