Skip to content
Opens in a new window
Listen to this chapter • 4:42

[1] ಇವುಗಳಲ್ಲದೆ, ಸೊಲೊಮೋನನು ಕಂಚಿನ ಬಲಿಪೀಠವನ್ನು ಮಾಡಿಸಿದನು; ಅದರ ಉದ್ದ ಒಂಬತ್ತು ಮೀಟರ್, ಅಗಲ ಒಂಬತ್ತು ಮೀಟರ್, ಎತ್ತರ ಸುಮಾರು ಐದು ಮೀಟರ್.

[2] ಅನಂತರ ಅವನು ಸಮುದ್ರಪಾತ್ರೆ ಎಂದು ಕರೆಯಲಾಗುವ ಎರಕದ ದೊಡ್ಡ ಪಾತ್ರೆಯನ್ನು ಮಾಡಿಸಿದನು; ಅದು ಚಕ್ರಾಕಾರವಾಗಿ ಅಂಚಿನಿಂದ ಅಂಚಿಗೆ ಸುಮಾರು ನಾಲ್ಕು ಮೀಟರ್; ಅದರ ಎತ್ತರ ಸುಮಾರು ಎರಡು ಮೀಟರ್; ಸುತ್ತಳತೆ ಸುಮಾರು ಹದಿನಾಲ್ಕು ಮೀಟರಾಗಿತ್ತು;

[3] ಅದರ ಅಂಚಿನ ಕೆಳಭಾಗದಲ್ಲಿ ಅದರ ಸುತ್ತಲೂ ಎತ್ತುಗಳ ರೂಪಗಳಿದ್ದವು; ಅವು ಒಂದೊಂದು ಮೀಟರಿಗೆ ಹತ್ತರಂತೆ, ಆ ಕೊಳದ ಪಾತ್ರೆಯ ಸುತ್ತಲೂ ಇದ್ದವು; ಇದು ಎರಕ ಹೊಯ್ಯುವಾಗ, ಎತ್ತುಗಳ ರೂಪಗಳು ಎರಡು ಸಾಲಾಗಿ ಎರಕ ಹೊಯ್ಸಿದನು.

[4] ಅದು ಹನ್ನೆರಡು ಎತ್ತುಗಳ ಮೇಲೆ ನಿಂತಿತ್ತು. ಮೂರು ಉತ್ತರಕ್ಕೂ, ಮೂರು ಪಶ್ಚಿಮಕ್ಕೂ, ಮೂರು ದಕ್ಷಿಣಕ್ಕೂ, ಮೂರು ಪೂರ್ವಕ್ಕೂ ಮುಖಮಾಡಿಕೊಂಡಿದ್ದವು. ಆ ಕೊಳವು ಅವುಗಳ ಮೇಲೆ ಇತ್ತು. ಅವುಗಳ ಹಿಂಭಾಗಗಳೆಲ್ಲಾ ಒಳಮುಖವಾಗಿದ್ದವು.

[5] ಅದರ ದಪ್ಪವು ಅಂಗೈ ಅಗಲದಷ್ಟಾಗಿಯೂ, ಅದರ ಅಂಚು ಪಾತ್ರೆಯ ಅಂಚಿನ ಹಾಗೆಯೂ, ತಾವರೆ ಪುಷ್ಪದ ಹಾಗೆಯೂ ಇತ್ತು. ಅದು ಅರವತ್ತಾರು ಸಾವಿರ ಲೀಟರ್ ನೀರನ್ನು ಹಿಡಿಯುತ್ತಿತ್ತು.

[6] ಇದಲ್ಲದೆ ಹತ್ತು ತೊಟ್ಟಿಗಳನ್ನು ಮಾಡಿಸಿ, ಅವುಗಳಲ್ಲಿ ತೊಳೆಯುವ ನಿಮಿತ್ತವಾಗಿ ಬಲಗಡೆಯಲ್ಲಿ ಐದನ್ನೂ, ಎಡಗಡೆಯಲ್ಲಿ ಐದನ್ನೂ ಇರಿಸಿದನು. ದಹನಬಲಿಗೋಸ್ಕರ ಅರ್ಪಿಸುವವುಗಳನ್ನು ಅವುಗಳಲ್ಲಿ ತೊಳೆಯುತ್ತಿದ್ದರು. ಆದರೆ ಆ ಕೊಳವು ಯಾಜಕರು ತೊಳೆದುಕೊಳ್ಳುವುದಕ್ಕೆ ಇತ್ತು.

[7] ಅವುಗಳ ಮಾದರಿಯ ಪ್ರಕಾರವಾಗಿ ಹತ್ತು ಬಂಗಾರದ ದೀಪಸ್ತಂಭಗಳನ್ನು ಮಾಡಿಸಿ, ಮಂದಿರದಲ್ಲಿ ಬಲಗಡೆ ಐದನ್ನೂ, ಎಡಗಡೆ ಐದನ್ನೂ ಇರಿಸಿದನು.

[8] ಹಾಗೆಯೇ ಅವನು ಹತ್ತು ಮೇಜುಗಳನ್ನು ಮಾಡಿಸಿ, ಮಂದಿರದಲ್ಲಿ ಬಲಗಡೆ ಐದನ್ನೂ, ಎಡಗಡೆ ಐದನ್ನೂ ಇರಿಸಿದನು. ನೂರು ಬಂಗಾರದ ಬಟ್ಟಲುಗಳನ್ನು ಮಾಡಿಸಿದನು.

[9] ಯಾಜಕರ ಅಂಗಳವನ್ನೂ, ದೊಡ್ಡ ಅಂಗಳವನ್ನೂ, ಅಂಗಳಗಳಿಗೋಸ್ಕರ ಬಾಗಿಲುಗಳನ್ನೂ ಮಾಡಿಸಿ, ಆ ಬಾಗಿಲುಗಳನ್ನು ಕಂಚಿನಿಂದ ಹೊದಿಸಿದನು.

[10] ಸಮುದ್ರ ಎಂದು ಕರೆಯಲಾದ ದೊಡ್ಡ ಪಾತ್ರೆಯನ್ನು ಬಲಗಡೆಯಲ್ಲಿ ಅಂದರೆ ಆಗ್ನೇಯ ದಿಕ್ಕಿನಲ್ಲಿ ಇರಿಸಿದನು.

[11] ಇದಲ್ಲದೆ ಹೂರಾಮನು ಪಾತ್ರೆಗಳನ್ನೂ, ಸಲಿಕೆಗಳನ್ನೂ, ಬಟ್ಟಲುಗಳನ್ನೂ ಮಾಡಿದನು. ಯೆಹೋವ ದೇವರ ಆಲಯಕ್ಕೋಸ್ಕರ ಅರಸನಾದ ಸೊಲೊಮೋನನು ಒಪ್ಪಿಸಿದ ಎಲ್ಲಾ ಕೆಲಸಗಳನ್ನು ಹೂರಾಮನು ಮಾಡಿ ತೀರಿಸಿದನು:

[12] ಅವು ಯಾವುವೆಂದರೆ, ಎರಡು ಸ್ತಂಭಗಳು, ಆ ಸ್ತಂಭಗಳ ಮೇಲಿನ ಎರಡು ಕುಂಭಗಳು, ಆ ಎರಡು ಕುಂಭಗಳನ್ನು ಮುಚ್ಚುವ ಎರಡು ಜಾಲರಿಗಳು.

[13] ಎರಡು ಜಾಲರಿ ಸಾಮಾನುಗಳಿಗೆ ನಾನೂರು ದಾಳಿಂಬೆ ಹಣ್ಣುಗಳು, ಸ್ತಂಭಗಳ ಮೇಲೆ ಇರುವ ಎರಡು ಕುಂಭಗಳನ್ನು ಮುಚ್ಚುವಂತೆ ಒಂದು ಜಾಲರಿ ಸಲಕರಣೆಗಳಿಗೆ ಎರಡು ಸಾಲಿನ ದಾಳಿಂಬೆ ಹಣ್ಣುಗಳನ್ನು ಮಾಡಿದನು.

[14] ಇದಲ್ಲದೆ ಅವನು ಪೀಠಗಳನ್ನು ಅವುಗಳ ಮೇಲಿರುವ ತೊಟ್ಟಿಗಳನ್ನು ಮಾಡಿದನು.

[15] ಸಮುದ್ರಪಾತ್ರೆಯು ಅದರ ಕೆಳಗಿರುವ ಹನ್ನೆರಡು ಎತ್ತುಗಳು,

[16] ಪಾತ್ರೆಗಳು, ಸಲಿಕೆಗಳು, ಮುಳ್ಳುಗಳು. ಅವುಗಳ ಎಲ್ಲಾ ವಸ್ತುಗಳನ್ನೂ ಅರಸನಾದ ಸೊಲೊಮೋನನಿಗೆ ಅವನ ತಂದೆಯು ಹೇಳಿದಂತೆ ಹೂರಾಮ ಅಬೀ ಹೊಳೆಯುವ ಕಂಚಿನಿಂದ ಯೆಹೋವ ದೇವರ ಆಲಯಕ್ಕೋಸ್ಕರ ಮಾಡಿದನು.

[17] ಯೊರ್ದನಿಗೆ ಸೇರಿದ ಬಯಲಾದ ಸುಕ್ಕೋತಿಗೂ ಚರೇದನಿಗೂ ನಡುವೆ ಇರುವ ಜೇಡಿಮಣ್ಣಿನ ಅಚ್ಚುಗಳಲ್ಲಿ ಅರಸನು ಅವುಗಳನ್ನು ಎರಕ ಹೊಯ್ಯಿಸಿದನು.

[18] ಸೊಲೊಮೋನನು ಮಾಡಿಸಿದ ಈ ಸಲಕರಣೆಗಳೆಲ್ಲಾ ಬಹು ಹೆಚ್ಚಾಗಿದ್ದರಿಂದ ಆ ಕಂಚಿನ ತೂಕವು ಎಷ್ಟೆಂದು ನಿರ್ಧರಿಸಲಾಗಲಿಲ್ಲ.

[19] ಸೊಲೊಮೋನನು ದೇವರ ಆಲಯದ ಎಲ್ಲಾ ಸಲಕರಣೆಗಳನ್ನು ಮಾಡಿಸಿದನು. ಅವು ಯಾವುವೆಂದರೆ: ಬಂಗಾರದ ಧೂಪವೇದಿಯನ್ನು, ಸಮ್ಮುಖದ ರೊಟ್ಟಿಗಳನ್ನು ಇಡುವುದಕ್ಕೆ ಮೇಜುಗಳನ್ನು,

[20] ನಿಯಮದ ಪ್ರಕಾರ ಮಹಾಪರಿಶುದ್ಧ ಸ್ಥಳದ ಮುಂಭಾಗದಲ್ಲಿ ಶುದ್ಧ ಬಂಗಾರದ ದೀಪಸ್ತಂಭಗಳನ್ನೂ ಅವುಗಳ ದೀಪಗಳನ್ನೂ,

[21] ಹೂವುಗಳನ್ನೂ, ದೀಪಗಳ ಚಿಮಟಿಗಳನ್ನೂ ಶುದ್ಧ ಬಂಗಾರದಿಂದ ಮಾಡಿಸಿದನು.

[22] ಶುದ್ಧ ಬಂಗಾರದಿಂದ ಕತ್ತರಿಗಳು, ಬೋಗುಣಿಗಳು, ಅಗ್ನಿಪಾತ್ರೆಗಳು, ಅಗ್ಗಿಷ್ಟಿಗೆ ಇವುಗಳನ್ನು ಮಾಡಿಸಿದನು. ಇದಲ್ಲದೆ ಆಲಯದ ಪ್ರವೇಶ ದ್ವಾರವೂ, ಮಹಾಪರಿಶುದ್ಧ ಸ್ಥಳವಾದ ಗರ್ಭಗುಡಿಯ ಬಾಗಿಲುಗಳೂ, ಮಂದಿರದ ಮನೆ ಬಾಗಿಲುಗಳೂ ಬಂಗಾರದವುಗಳಾಗಿದ್ದವು.

2 ಪೂರ್ವಕಾಲ ವೃತ್ತಾಂತ — Chapters