[1] ಆಗ ಎಫ್ರಾಯೀಮ್ಯರು, “ನೀನು ಮಿದ್ಯಾನ್ಯರ ಮೇಲೆ ಯುದ್ಧಮಾಡುವುದಕ್ಕೆ ಹೋಗುವಾಗ, ನಮ್ಮನ್ನು ಕರೆಯದೆ ಹೋದದ್ದೇನು?” ಎಂದು ಹೇಳಿ ಅವನ ಸಂಗಡ ತೀಕ್ಷ್ಣವಾಗಿ ವಿವಾದ ಮಾಡಿದರು.
[2] ಅವನು ಅವರಿಗೆ, “ನೀವು ಮಾಡಿದ್ದಕ್ಕೆ ಸಮಾನವಾಗಿ ನಾನೇನು ಮಾಡಿದೆನು? ಅಬೀಯೆಜೆರನ ದ್ರಾಕ್ಷಿ ಫಲ ಕೂಡಿಸುವುದಕ್ಕಿಂತ ಎಫ್ರಾಯೀಮನ ಉಳಿದ ದ್ರಾಕ್ಷಿಗಳನ್ನು ಸಂಗ್ರಹಿಸುವುದು ಉತ್ತಮವಲ್ಲವೇ?
[3] ದೇವರು ನಿಮ್ಮ ಕೈಯಲ್ಲಿ ಮಿದ್ಯಾನ್ಯರ ಪ್ರಧಾನರಾದ ಓರೇಬನನ್ನೂ, ಜೇಬನನ್ನೂ ಒಪ್ಪಿಸಿಕೊಡಲಿಲ್ಲವೇ? ನೀವು ಮಾಡಿದ್ದಕ್ಕೆ ನಾನು ಮಾಡಿದ್ದು ಎಷ್ಟು?” ಎಂದನು. ಅವನು ಈ ಮಾತು ಹೇಳಿದಾಗ, ಅವನ ವಿಷಯವಾಗಿ ಅವರ ಕೋಪವು ಶಾಂತವಾಯಿತು.
[4] ಗಿದ್ಯೋನನು ಯೊರ್ದನಿಗೆ ಬಂದು ಅದನ್ನು ದಾಟಿ; ಅವನೂ, ಅವನ ಸಂಗಡ ಇದ್ದ ಮುನ್ನೂರು ಜನರೂ ದಣಿದವರಾಗಿಯೂ, ಹಿಂದಟ್ಟುವವರಾಗಿಯೂ ಇದ್ದರು.
[5] ಅವನು ಸುಕ್ಕೋತನವರಿಗೆ, “ದಯಮಾಡಿ ನನ್ನ ಕೂಡ ಇರುವ ಜನರಿಗೆ ಕೆಲವು ರೊಟ್ಟಿಗಳನ್ನು ಕೊಡಿರಿ. ಏಕೆಂದರೆ ಅವರು ದಣಿದಿದ್ದಾರೆ. ನಾನು ಮಿದ್ಯಾನ್ಯರ ಅರಸುಗಳಾದ ಜೆಬಹನನ್ನೂ, ಚಲ್ಮುನ್ನನನ್ನೂ ಹಿಂದಟ್ಟುತ್ತೇನೆ,” ಎಂದನು.
[6] ಆದರೆ ಸುಕ್ಕೋತಿನ ಪ್ರಧಾನರು ಅವನಿಗೆ, “ನಿನ್ನ ಸೈನ್ಯಕ್ಕೆ ನಾವು ರೊಟ್ಟಿ ಕೊಡುವಂತೆ ಜೆಬಹ ಚಲ್ಮುನ್ನರ ಕೈ ನಿನ್ನ ಕೈವಶವಾಗಿದೆಯೋ?” ಎಂದರು.
[7] ಆಗ ಗಿದ್ಯೋನನು, “ಆಗ ಯೆಹೋವ ದೇವರು ಜೆಬಹನನ್ನೂ, ಚಲ್ಮುನ್ನನನ್ನೂ ನನ್ನ ಕೈಯಲ್ಲಿ ಒಪ್ಪಿಸಿಕೊಟ್ಟ ತರುವಾಯ, ನಿಮ್ಮ ಮಾಂಸವನ್ನು ಮರುಭೂಮಿಯ ಮುಳ್ಳುಗಳಿಂದಲೂ, ಕಾರೆಗಿಡದ ಮುಳ್ಳುಗಳಿಂದಲೂ ಹೊಡಿಸುವೆನು,” ಎಂದನು.
[8] ಅಲ್ಲಿಂದ ಪೆನೀಯೇಲಿಗೆ ಹೋಗಿ, ಆ ಊರಿನವರ ಸಂಗಡ ಆ ಪ್ರಕಾರವೇ ಮಾತನಾಡಿದನು. ಅವರು ಸುಕ್ಕೋತಿನ ಮನುಷ್ಯರು ಉತ್ತರ ಕೊಟ್ಟ ಹಾಗೆಯೇ ಉತ್ತರಕೊಟ್ಟರು.
[9] ಆಗ ಅವನು ಪೆನೀಯೇಲಿನ ಮನುಷ್ಯರಿಗೆ ಸಹ, “ನಾನು ಸಮಾಧಾನವಾಗಿ ತಿರುಗಿ ಬರುವಾಗ, ಈ ಗೋಪುರವನ್ನು ಕೆಡವಿಬಿಡುವೆನು,” ಎಂದನು.
[10] ಜೆಬಹನೂ, ಚಲ್ಮುನ್ನನೂ ತಮ್ಮ ಸೈನ್ಯದ ಹೆಚ್ಚು ಕಡಿಮೆ ಹದಿನೈದು ಸಾವಿರ ಜನರ ಸಂಗಡ ಕರ್ಕೋರಿನಲ್ಲಿ ಇದ್ದರು. ಇವರಷ್ಟೂ, ಖಡ್ಗ ಹಿಡಿಯತಕ್ಕ ಒಂದು ಲಕ್ಷದ ಇಪ್ಪತ್ತು ಸಾವಿರ ಜನ ಬಿದ್ದುಹೋದಾಗ, ಪೂರ್ವದೇಶದ ಸಮಸ್ತ ಜನರು ಅಲ್ಲಿ ಉಳಿದರು.
[11] ಗಿದ್ಯೋನನು ನೋಬಹ, ಯೊಗ್ಬೆಹಾ ಇವುಗಳ ಪೂರ್ವದಲ್ಲಿದ್ದ ಡೇರೆಗಳಲ್ಲಿ ಸುರಕ್ಷಿತವಾಗಿ ವಾಸಿಸಿರುವವರ ಮಾರ್ಗವಾಗಿ ಹೋಗಿ ಅವರು ನಿರೀಕ್ಷಿಸದ ಸಮಯದಲ್ಲಿ ಅವರ ಮೇಲೆ ದಾಳಿಮಾಡಿದರು.
[12] ಜೆಬಹನೂ, ಚಲ್ಮುನ್ನನೂ ಓಡಿ ಹೋದದ್ದರಿಂದ, ಅವನು ಮಿದ್ಯಾನ್ಯರ ಇಬ್ಬರು ಅರಸುಗಳಾದ ಜೆಬಹನನ್ನೂ, ಚೆಲ್ಮುನ್ನನನ್ನೂ ಹಿಂದಟ್ಟಿ ಹಿಡಿದು ಪಾಳೆಯನ್ನೆಲ್ಲಾ ಚದರಿಸಿಬಿಟ್ಟರು.
[13] ಯೋವಾಷನ ಮಗನಾದ ಗಿದ್ಯೋನನು ಯುದ್ಧ ತೀರಿಸಿಕೊಂಡು ಹೆರೆಸ್ ಎಂಬ ಬೆಟ್ಟದ ಮಾರ್ಗವಾಗಿ ತಿರುಗಿಬಂದು,
[14] ಸುಕ್ಕೋತಿನ ಮನುಷ್ಯರಲ್ಲಿ ಒಬ್ಬ ಯೌವನಸ್ಥನನ್ನು ಹಿಡಿದು ಅವನನ್ನು ಕೇಳಿದಾಗ ಅವನು, ಸುಕ್ಕೋತಿನ ಪ್ರಧಾನರೂ, ಹಿರಿಯರೂ ಆದ ಎಪ್ಪತ್ತೇಳು ಜನರ ಹೆಸರನ್ನು ಅವನು ಬರೆದನು.
[15] ಗಿದ್ಯೋನನು ಸುಕ್ಕೋತಿನ ಮನುಷ್ಯರ ಬಳಿಗೆ ಬಂದು, “ಇಗೋ, ದಣಿದಿರುವ ನಿನ್ನ ಮನುಷ್ಯರಿಗೆ ನಾವು ರೊಟ್ಟಿಯನ್ನು ಕೊಡುವ ಹಾಗೆ, ಜೆಬಹ, ಚೆಲ್ಮುನ್ನರ ಕೈ ಈಗಲೇ ನಿನ್ನ ಕೈವಶವಾಗಿದೆಯೋ ಎಂದು ನೀವು ನನ್ನನ್ನು ನಿಂದಿಸಿದ ಜೆಬಹನನ್ನೂ, ಚಲ್ಮುನ್ನನನ್ನೂ ನೋಡಿರಿ,” ಎಂದು ಹೇಳಿ
[16] ಪಟ್ಟಣದ ಹಿರಿಯರನ್ನು ಮತ್ತು ಸುಕ್ಕೋತಿನವರನ್ನು ಹಿಡಿದು, ಮರುಭೂಮಿಯ ಮುಳ್ಳು ಹಾಗು ಕಾರೆಗಿಡದ ಮುಳ್ಳುಗಳಿಂದ ದಂಡಿಸಿ ಅವರಿಗೆ ಪಾಠ ಕಲಿಸಿದನು.
[17] ಪೆನೀಯೇಲಿನ ಗೋಪುರವನ್ನು ಕೆಡವಿ, ಆ ಪಟ್ಟಣದ ಮನುಷ್ಯರನ್ನು ಕೊಂದುಹಾಕಿದನು.
[18] ಅವನು ಜೆಬಹನಿಗೂ, ಚಲ್ಮುನ್ನನಿಗೂ, “ನೀವು ತಾಬೋರಿನಲ್ಲಿ ಕೊಂದುಹಾಕಿದ ಆ ಮನುಷ್ಯರು ಯಾವ ತರಹದವರಾಗಿದ್ದರು?” ಎಂದನು. ಅದಕ್ಕವರು, “ನಿನ್ನ ಹಾಗೆಯೇ ಅವರು ಒಬ್ಬೊಬ್ಬರು ರೂಪದಲ್ಲಿ ಅರಸನ ಮಕ್ಕಳಂತಿದ್ದರು,” ಎಂದರು.
[19] ಅದಕ್ಕವನು, “ಅವರು ನನ್ನ ತಾಯಿಯ ಮಕ್ಕಳು, ನನ್ನ ಸಹೋದರರು. ಯೆಹೋವ ದೇವರ ಜೀವದ ಆಣೆ ನೀವು ಅವರನ್ನು ಬದುಕಿಸಿದ್ದರೆ ನಿಮ್ಮನ್ನು ಕೊಲ್ಲುತ್ತಿರಲಿಲ್ಲ,” ಎಂದನು.
[20] ತನ್ನ ಚೊಚ್ಚಲಮಗನಾದ ಎತೆರನಿಗೆ, “ನೀನೆದ್ದು ಅವರನ್ನು ಕೊಂದುಹಾಕು,” ಎಂದನು. ಆದರೆ ಆ ಯುವಕನು ತನ್ನ ಖಡ್ಗವನ್ನು ಬಿಚ್ಚದೆ ಹೋದನು. ಏಕೆಂದರೆ ಅವನು ಇನ್ನೂ ಹುಡುಗನಾದ್ದರಿಂದ ಭಯಪಟ್ಟನು.
[21] ಆಗ ಜೆಬಹನೂ, ಚಲ್ಮುನ್ನನೂ, “ನೀನು ಎದ್ದು ನಮ್ಮ ಮೇಲೆ ಬೀಳು. ಏಕೆಂದರೆ ಮನುಷ್ಯನು ಹೇಗೋ ಹಾಗೆಯೇ ಅವನ ಬಲವು ಇರುವುದು,” ಎಂದರು. ಗಿದ್ಯೋನನು ಎದ್ದು ಜೆಬಹನನ್ನೂ, ಚೆಲ್ಮುನ್ನನನ್ನೂ ಕೊಂದುಹಾಕಿ, ಅವರ ಒಂಟೆಗಳ ಕುತ್ತಿಗೆಗಳಲ್ಲಿ ಇದ್ದ ಆಭರಣಗಳನ್ನು ತೆಗೆದುಕೊಂಡನು.
[22] ಆಗ ಇಸ್ರಾಯೇಲ್ ಜನರು ಗಿದ್ಯೋನನಿಗೆ, “ನೀನು ನಮ್ಮನ್ನು ಮಿದ್ಯಾನರ ಕೈಯಿಂದ ತಪ್ಪಿಸಿ ರಕ್ಷಿಸಿದ್ದರಿಂದ, ನೀನೂ, ನಿನ್ನ ಪುತ್ರನೂ, ನಿನ್ನ ಪುತ್ರನ ಪುತ್ರನೂ ನಮ್ಮನ್ನು ಆಳಬೇಕು,” ಎಂದರು.
[23] ಗಿದ್ಯೋನನು ಅವರಿಗೆ, “ನಾನು ನಿಮ್ಮನ್ನು ಆಳುವುದಿಲ್ಲ. ನನ್ನ ಮಗನೂ ನಿಮ್ಮನ್ನು ಆಳುವುದಿಲ್ಲ. ಯೆಹೋವ ದೇವರೇ ನಿಮ್ಮನ್ನು ಆಳುವರು.”
[24] ಮತ್ತು ಗಿದ್ಯೋನನು ಅವರಿಗೆ, “ಒಂದು ಬಿನ್ನಹವನ್ನು ನಾನು ನಿಮಗೆ ಮಾಡುತ್ತೇನೆ. ಪ್ರತಿಯೊಬ್ಬನು ಕೊಳ್ಳೆಹೊಡೆದ ಬಂಗಾರದ ಓಲೆಗಳನ್ನು ನನಗೆ ಕೊಡಿರಿ,” ಎಂದನು. ಏಕೆಂದರೆ ಮಿದ್ಯಾನರು ಇಷ್ಮಾಯೇಲರಾಗಿದ್ದದರಿಂದ ಅವರು ಬಂಗಾರದ ಮುರುವುಗಳನ್ನು ಹಾಕಿಕೊಳ್ಳುತ್ತಿದ್ದರು.
[25] ಅವರು, “ನಾವು ಇಷ್ಟಪೂರ್ವಕವಾಗಿ ಕೊಡುತ್ತೇವೆ,” ಎಂದು ಹೇಳಿ, ಒಂದು ವಸ್ತ್ರವನ್ನು ಹಾಸಿ, ಅಲ್ಲಿ ಅವರವರು ಕೊಳ್ಳೆಹೊಡೆದ ಬಂಗಾರದ ಓಲೆಗಳನ್ನು ಹಾಕಿದರು.
[26] ಆಭರಣಗಳೂ, ಕಂಠಮಾಲೆಗಳೂ, ಮಿದ್ಯಾನರ ಅರಸರು ಹೊದ್ದುಕೊಂಡಿದ್ದ ರಕ್ತಾಂಬರ ವಸ್ತ್ರಗಳೂ, ಅವರ ಒಂಟೆಗಳ ಕೊರಳೊಳಗೆ ಇದ್ದ ಸರಪಣಿಗಳೂ ಹೊರತು ಅವನು ಕೇಳಿ ತೆಗೆದುಕೊಂಡ ಬಂಗಾರದ ಓಲೆಗಳ ತೂಕವು ಇಪ್ಪತ್ತು ಕಿಲೋಗ್ರಾಂ ತೂಕವಾಗಿತ್ತು.
[27] ಆ ಬಂಗಾರದಿಂದ ಗಿದ್ಯೋನನು ಏಫೋದನ್ನು ಮಾಡಿಸಿ, ಅದನ್ನು ತನ್ನ ಊರಾದ ಒಫ್ರದಲ್ಲಿ ಇಟ್ಟನು. ಆದರೆ ಇಸ್ರಾಯೇಲರೆಲ್ಲರೂ ಅದರ ಹಿಂದೆ ಹೋಗಿ ಪೂಜಿಸಿ ದೇವದ್ರೋಹಿಗಳಾದರು, ಅದು ಗಿದ್ಯೋನನಿಗೂ ಅವನ ಮನೆಗೂ ಉರುಲಾಯಿತು.
[28] ಮಿದ್ಯಾನ್ಯರು ತಮ್ಮ ತಲೆಯನ್ನು ತಿರುಗಿ ಎತ್ತಕೂಡದ ಹಾಗೆ ಇಸ್ರಾಯೇಲರ ಮುಂದೆ ತಗ್ಗಿಹೋದರು. ದೇಶವು ಗಿದ್ಯೋನನ ದಿವಸಗಳಲ್ಲಿ ನಲವತ್ತು ವರುಷ ವಿಶ್ರಾಂತಿಯಲ್ಲಿತ್ತು.
[29] ಯೋವಾಷನ ಮಗ ಯೆರುಬ್ಬಾಳನು ಹೋಗಿ ತನ್ನ ಸ್ವಂತ ಮನೆಯಲ್ಲಿ ವಾಸವಾಗಿದ್ದನು.
[30] ಗಿದ್ಯೋನನಿಗೆ ಅನೇಕ ಮಂದಿ ಹೆಂಡತಿಯರಿದ್ದುದರಿಂದ ಅವನಿಂದ ಜನಿಸಿದ ಎಪ್ಪತ್ತು ಮಂದಿ ಮಕ್ಕಳು ಇದ್ದರು.
[31] ಶೆಖೆಮಿನಲ್ಲಿದ್ದ ಅವನ ಉಪಪತ್ನಿಯು ಅವನಿಗೆ ಒಬ್ಬ ಮಗನನ್ನು ಹೆತ್ತಳು. ಅವನು ಆ ಮಗನಿಗೆ ಅಬೀಮೆಲೆಕನೆಂದು ಹೆಸರಿಟ್ಟನು.
[32] ಯೋವಾಷನ ಮಗನಾದ ಗಿದ್ಯೋನನು ಒಳ್ಳೆಯ ವೃದ್ಧಾಪ್ಯದಲ್ಲಿ ಮರಣಹೊಂದಿದಾಗ, ಅವನನ್ನು ಅಬೀಯೆಜೆರೀಯರಿಗೆ ಸೇರಿದ ಒಫ್ರದಲ್ಲಿ ತನ್ನ ತಂದೆಯಾದ ಯೋವಾಷನ ಸಮಾಧಿಯಲ್ಲಿ ಹೂಳಿಡಲಾಯಿತು.
[33] ಗಿದ್ಯೋನನ ಮರಣದ ತರುವಾಯ, ಇಸ್ರಾಯೇಲರು ದೇವದ್ರೋಹಿಗಳಾಗಿ ಬಾಳನ ಪ್ರತಿಮೆಗಳನ್ನು ಪೂಜೆ ಮಾಡುತ್ತಾ ಬಾಳ್ ಬೆರೀತನ್ನು ತಮಗೆ ದೇವರಾಗಿ ಮಾಡಿಕೊಂಡರು.
[34] ಸುತ್ತಲೂ ಇದ್ದ ತಮ್ಮ ಎಲ್ಲಾ ಶತ್ರುಗಳ ಕೈಯಿಂದ ತಮ್ಮನ್ನು ತಪ್ಪಿಸಿಬಿಟ್ಟ ತಮ್ಮ ದೇವರಾದ ಯೆಹೋವ ದೇವರನ್ನು ಮರೆತುಬಿಟ್ಟರು.
[35] ಗಿದ್ಯೋನನೆಂಬ ಯೆರುಬ್ಬಾಳನು ಇಸ್ರಾಯೇಲಿಗೆ ಮಾಡಿದ ಸಕಲ ಉಪಕಾರಗಳಿಗೆ ತಕ್ಕ ಹಾಗೆ ದಯೆಯನ್ನು ಅವನ ಮನೆಗೆ ಮಾಡದೆ ಹೋದರು.