Skip to content
Opens in a new window
Listen to this chapter • 7:52

[1] ಯೆಹೋಶುವನು ಮರಣ ಹೊಂದಿದ ಬಳಿಕ ಇಸ್ರಾಯೇಲರು, “ಕಾನಾನ್ಯರೊಡನೆ ಯುದ್ಧಕ್ಕೆ ನಮ್ಮಲ್ಲಿ ಮೊದಲು ಯಾರು ಹೋಗಬೇಕು?” ಎಂದು ಯೆಹೋವ ದೇವರನ್ನು ಕೇಳಿದರು.

[2] ಅದಕ್ಕೆ ಯೆಹೋವ ದೇವರು, “ಯೆಹೂದ ಗೋತ್ರದವರು ಹೋಗಲಿ; ನಾನು ಆ ದೇಶವನ್ನು ಇವರ ಕೈಯಲ್ಲಿ ಒಪ್ಪಿಸಿಕೊಟ್ಟಿದ್ದೇನೆ,” ಎಂದರು.

[3] ಯೆಹೂದ ಗೋತ್ರದವರು ತಮ್ಮ ಸಹೋದರರಾದ ಸಿಮೆಯೋನ್ಯರಿಗೆ, “ನೀವು ನಮ್ಮ ಸಂಗಡ ನಮ್ಮ ಪ್ರಾಂತಕ್ಕೆ ಬನ್ನಿರಿ, ಕಾನಾನ್ಯರ ಮೇಲೆ ಯುದ್ಧ ಮಾಡೋಣ. ಹಾಗೆಯೇ ನಾವು ನಿಮ್ಮ ಸಂಗಡ ನಿಮ್ಮ ಪ್ರಾಂತಕ್ಕೆ ಬರುತ್ತೇವೆ,” ಎಂದರು. ಹೀಗೆ ಸಿಮೆಯೋನ್ಯರು ಅವರ ಸಂಗಡ ಹೋದರು.

[4] ಯೆಹೂದ ಗೋತ್ರದವರು ಹೋದಾಗ, ಯೆಹೋವ ದೇವರು ಕಾನಾನ್ಯರನ್ನೂ ಪೆರಿಜೀಯರನ್ನೂ ಅವರ ಕೈಯಲ್ಲಿ ಒಪ್ಪಿಸಿಕೊಟ್ಟರು. ಅವರು ಬೆಜೆಕಿನಲ್ಲಿ ಹತ್ತು ಸಾವಿರ ಜನರನ್ನು ಕೊಂದರು.

[5] ಅವರು ಬೆಜೆಕಿನಲ್ಲಿ ಅರಸನಾದ ಅದೋನೀಬೆಜೆಕನನ್ನು ಸಂಧಿಸಿ, ಅವನ ವಿರೋಧವಾಗಿ ಯುದ್ಧಮಾಡಿ, ಕಾನಾನ್ಯರನ್ನೂ ಪೆರಿಜೀಯರನ್ನೂ ಕೊಂದುಹಾಕಿದರು.

[6] ಆದರೆ ಅದೋನೀಬೆಜೆಕನು ಓಡಿ ಹೋದದ್ದರಿಂದ, ಅವನನ್ನು ಹಿಂದಟ್ಟಿ ಹಿಡಿದು, ಅವನ ಕೈಕಾಲುಗಳ ಹೆಬ್ಬೆರಳುಗಳನ್ನು ಕತ್ತರಿಸಿಬಿಟ್ಟರು.

[7] ಆಗ ಅದೋನೀಬೆಜೆಕನು, “ನಾನು ಕೈಕಾಲುಗಳ ಹೆಬ್ಬೆರಳುಗಳನ್ನು ಕತ್ತರಿಸಿಬಿಟ್ಟ ಎಪ್ಪತ್ತು ಮಂದಿ ಅರಸರು, ನನ್ನ ಮೇಜಿನ ಕೆಳಗೆ ಬೀಳುವ ಚೂರುಗಳನ್ನು ಕೂಡಿಸಿಕೊಂಡು ತಿನ್ನುತ್ತಿದ್ದರು. ನಾನು ಅವರಿಗೆ ಮಾಡಿದಂತೆಯೇ, ದೇವರು ನನಗೆ ಮಾಡಿದ್ದಾರೆ,” ಎಂದನು. ಅವರು ಅವನನ್ನು ಯೆರೂಸಲೇಮಿಗೆ ತೆಗೆದುಕೊಂಡು ಬಂದರು. ಅಲ್ಲಿ ಅವನು ಮರಣಹೊಂದಿದನು.

[8] ಯೆಹೂದ ಗೋತ್ರದವರು ಯೆರೂಸಲೇಮಿನವರ ಮೇಲೆ ಯುದ್ಧಮಾಡಿ, ಅಲ್ಲಿದ್ದವರನ್ನು ಖಡ್ಗದಿಂದ ಸಂಹರಿಸಿ, ಪಟ್ಟಣವನ್ನು ಬೆಂಕಿಯಿಂದ ಸುಟ್ಟುಬಿಟ್ಟರು.

[9] ತರುವಾಯ ಯೆಹೂದ ಗೋತ್ರದವರು ಬೆಟ್ಟದಲ್ಲಿಯೂ ದಕ್ಷಿಣದಲ್ಲಿಯೂ ತಗ್ಗಿನಲ್ಲಿಯೂ ವಾಸಿಸಿದ ಕಾನಾನ್ಯರಿಗೆ ವಿರೋಧವಾಗಿ ಯುದ್ಧಮಾಡುವುದಕ್ಕೆ ಹೋದರು.

[10] ಯೆಹೂದ ಗೋತ್ರದವರು ಪೂರ್ವದಲ್ಲಿ ಕಿರ್ಯತ್ ಅರ್ಬ ಎಂಬ ಹೆಸರಿದ್ದ ಹೆಬ್ರೋನಿನಲ್ಲಿ ವಾಸವಾಗಿದ್ದ ಕಾನಾನ್ಯರ ಮೇಲೆ ಹೋಗಿ ಶೇಷೈ, ಅಹೀಮನ್, ತಲ್ಮೈರನ್ನು ಸೋಲಿಸಿದರು.

[11] ಅಲ್ಲಿಂದ ದೆಬೀರಿನ ನಿವಾಸಿಗಳ ವಿರೋಧವಾಗಿ ಹೋದರು. ದೆಬೀರಿಗೆ ಮೊದಲು ಕಿರ್ಯತ್ ಸೇಫೆರ್ ಎಂಬ ಹೆಸರಿತ್ತು.

[12] ಕಾಲೇಬನು, “ಕಿರ್ಯತ್ ಸೇಫೆರ ಮೇಲೆ ದಾಳಿಮಾಡಿ ತೆಗೆದುಕೊಳ್ಳುವವನಿಗೆ ನನ್ನ ಮಗಳಾದ ಅಕ್ಸಾ ಎಂಬಾಕೆಯನ್ನು ಮದುವೆ ಮಾಡಿಕೊಡುತ್ತೇನೆ,” ಎಂದು ಹೇಳಿದ್ದನು.

[13] ಆಗ ಕಾಲೇಬನ ತಮ್ಮನಾದ ಕೆನಾಜನ ಮಗನಾದ ಒತ್ನಿಯೇಲನು ಅದನ್ನು ಹಿಡಿದನು. ಅನಂತರ ಕಾಲೇಬನು ತನ್ನ ಮಗಳಾದ ಅಕ್ಸಾ ಎಂಬಾಕೆಯನ್ನು ಅವನಿಗೆ ಮದುವೆ ಮಾಡಿಕೊಟ್ಟನು.

[14] ಒಂದು ದಿನ ಅಕ್ಷಾ ಒತ್ನಿಯೇಲನೊಂದಿಗೆ ಬರುತ್ತಿರುವಾಗ ತನ್ನ ತಂದೆಯ ಹತ್ತಿರ ಇನ್ನೂ ಒಂದು ಹೊಲವನ್ನು ಕೇಳುವುದಕ್ಕೆ ಅವನನ್ನು ಪ್ರೇರೇಪಿಸಿ, ಕತ್ತೆಯ ಮೇಲಿನಿಂದ ಇಳಿದಳು. ಆಗ ಕಾಲೇಬನು ಅವಳಿಗೆ, “ನಿನಗೆ ಏನು ಬೇಕು?” ಎಂದನು.

[15] ಅದಕ್ಕೆ ಅವಳು ಅವನಿಗೆ, “ನನಗೆ ಒಂದು ಸಹಾಯಮಾಡಬೇಕು. ಮೊದಲು ದಕ್ಷಿಣ ಹೊಲವನ್ನು ನೀನು ನನಗೆ ಕೊಟ್ಟೆ; ನೀರಿನ ಬುಗ್ಗೆಗಳನ್ನು ಸಹ ನನಗೆ ಕೊಡು,” ಎಂದಳು. ಆಗ ಕಾಲೇಬನು ಅವಳಿಗೆ ಮೇಲಿನ ಹಾಗೂ ಕೆಳಗಿನ ನೀರಿನ ಬುಗ್ಗೆಗಳನ್ನು ಕೊಟ್ಟನು.

[16] ಮೋಶೆಯ ಮಾವನಾದ ಕೇನ್ಯನ ಮಕ್ಕಳು ಖರ್ಜೂರ ಗಿಡಗಳ ಪಟ್ಟಣದಿಂದ ಹೊರಟು, ಯೆಹೂದ ಗೋತ್ರದವರ ಸಂಗಡ ಅರಾದಿಗೆ ದಕ್ಷಿಣಕ್ಕಿರುವ ಯೆಹೂದದ ಗೋತ್ರದವರ ಮರುಭೂಮಿಗೆ ಬಂದು, ಅಲ್ಲಿನ ಜನರ ಸಂಗಡ ವಾಸವಾಗಿದ್ದರು.

[17] ಯೆಹೂದ ಗೋತ್ರದವರು ತನ್ನ ಸಹೋದರರಾದ ಸಿಮೆಯೋನ್ಯರ ಸಂಗಡ ಹೊರಟು, ಚೆಫೆತ್‌ನಲ್ಲಿ ವಾಸವಾಗಿರುವ ಕಾನಾನ್ಯರ ಮೇಲೆ ದಾಳಿಮಾಡಿ, ಆ ಪಟ್ಟಣವನ್ನು ನಿರ್ಮೂಲ ಮಾಡಿದರು. ಆ ಪಟ್ಟಣವು ಹೊರ್ಮಾ ಎಂದು ಕರೆಯಲಾಗಿತ್ತು.

[18] ಇದಲ್ಲದೆ ಯೆಹೂದ ಗೋತ್ರದವರು ಗಾಜಾವನ್ನೂ ಅದರ ಮೇರೆಯನ್ನೂ; ಅಷ್ಕೆಲೋನನ್ನೂ, ಅದರ ಮೇರೆಯನ್ನೂ; ಎಕ್ರೋನನ್ನೂ, ಅದರ ಮೇರೆಯನ್ನೂ ತೆಗೆದುಕೊಂಡರು.

[19] ಯೆಹೋವ ದೇವರು ಯೆಹೂದ ಗೋತ್ರದವರ ಸಂಗಡ ಇದ್ದುದರಿಂದ, ಅವರು ಬೆಟ್ಟದ ಪ್ರದೇಶಗಳನ್ನೆಲ್ಲಾ ಸ್ವಾಧೀನಪಡಿಸಿಕೊಂಡರು. ಆದರೆ ತಗ್ಗಿನ ನಿವಾಸಿಗಳಿಗೆ ಕಬ್ಬಿಣದ ರಥಗಳಿದ್ದುದರಿಂದ, ಅವರು ಅವರನ್ನು ಹೊರಡಿಸಲಾರದೆ ಹೋದರು.

[20] ಮೋಶೆಯು ಹೇಳಿದ ಪ್ರಕಾರ, ಅವರು ಹೆಬ್ರೋನನ್ನು ಕಾಲೇಬನಿಗೆ ಕೊಟ್ಟರು. ಅವರು ಅನಾಕನ ಮೂವರು ಮಕ್ಕಳನ್ನು ಅಲ್ಲಿಂದ ಹೊರಡಿಸಿಬಿಟ್ಟರು.

[21] ಬೆನ್ಯಾಮೀನ್ಯರಿಗೆ ಯೆರೂಸಲೇಮಿನಲ್ಲಿ ವಾಸವಾಗಿದ್ದ ಯೆಬೂಸಿಯರನ್ನು ಹೊರಡಿಸಲು ಸಾಧ್ಯವಾಗಲಿಲ್ಲ. ಆದುದರಿಂದ ಯೆಬೂಸಿಯರು ಈ ದಿನದವರೆಗೂ ಬೆನ್ಯಾಮೀನರ ಸಂಗಡ ವಾಸವಾಗಿದ್ದಾರೆ.

[22] ಇದಲ್ಲದೆ ಯೋಸೇಫನ ಮನೆಯವರು ಬೇತೇಲಿಗೆ ಏರಿಹೋದರು. ಯೆಹೋವ ದೇವರು ಅವರ ಸಂಗಡ ಇದ್ದರು.

[23] ಆದರೆ ಮೊದಲು ಲೂಜ್ ಎಂದು ಹೆಸರಿದ್ದ ಬೇತೇಲೆಂಬ ಪಟ್ಟಣವನ್ನು ಸಂಚರಿಸಿ ನೋಡಲು, ಯೋಸೇಫನ ಮನೆಯವರನ್ನು ಕಳುಹಿಸಲಾಯಿತು.

[24] ಗೂಢಚಾರರು ಪಟ್ಟಣದೊಳಗಿಂದ ಬರುವ ಒಬ್ಬ ಮನುಷ್ಯನನ್ನು ಕಂಡು ಅವನಿಗೆ, “ದಯಮಾಡಿ ಪಟ್ಟಣದಲ್ಲಿ ಪ್ರವೇಶಿಸುವ ಮಾರ್ಗವನ್ನು ನಮಗೆ ತೋರಿಸು. ನಾವು ನಿನಗೆ ಕರುಣೆ ತೋರಿಸುವೆವು,” ಎಂದರು.

[25] ಅವನು ಪಟ್ಟಣದಲ್ಲಿ ಪ್ರವೇಶಿಸುವ ಮಾರ್ಗವನ್ನು ಅವರಿಗೆ ತೋರಿಸಿದಾಗ, ಅವರು ಬಂದು ಪಟ್ಟಣವನ್ನು ಖಡ್ಗದಿಂದ ಹೊಡೆದು, ಆ ಮನುಷ್ಯನನ್ನೂ ಅವನ ಸಮಸ್ತ ಕುಟುಂಬವನ್ನೂ ಕಳುಹಿಸಿಬಿಟ್ಟರು.

[26] ಆ ಮನುಷ್ಯನು ಹಿತ್ತಿಯರ ದೇಶಕ್ಕೆ ಹೋಗಿ, ಅಲ್ಲಿ ಒಂದು ಪಟ್ಟಣವನ್ನು ಕಟ್ಟಿ, ಅದಕ್ಕೆ ಲೂಜ್ ಎಂದು ಹೆಸರಿಟ್ಟನು. ಈವರೆಗೂ ಅದಕ್ಕೆ ಅದೇ ಹೆಸರಿದೆ.

[27] ಮನಸ್ಸೆಯ ಗೋತ್ರದವರು ಬೇತ್ ಷೆಯಾನರನ್ನೂ, ಅವರ ಊರುಗಳವರನ್ನೂ; ತಾನಕದವರನ್ನೂ, ಅವರ ಊರುಗಳವರನ್ನೂ; ದೋರಿನವರನ್ನೂ, ಅವರ ಊರುಗಳವರನ್ನೂ; ಇಬ್ಲೆಯಾಮಿನವರನ್ನೂ, ಅವರ ಊರುಗಳವರನ್ನೂ, ಮೆಗಿದ್ದೋನಿನವರನ್ನೂ, ಅವರ ಊರುಗಳವರನ್ನೂ ಹೊರಡಿಸಿಬಿಡಲಿಲ್ಲ. ಕಾನಾನ್ಯರಾದ ಇವರು ಆ ದೇಶದಲ್ಲಿ ವಾಸಿಸಬೇಕೆಂದಿದ್ದರು.

[28] ಇಸ್ರಾಯೇಲರು ಬಲಗೊಂಡಾಗ, ಅವರನ್ನು ಪೂರ್ಣವಾಗಿ ಹೊರಡಿಸಿಬಿಡದೆ, ಅವರನ್ನು ದಾಸತ್ವಕ್ಕೆ ಕಾನಾನ್ಯರಿಗೆ ನೇಮಕ ಮಾಡಿದರು.

[29] ಇದಲ್ಲದೆ ಎಫ್ರಾಯೀಮ್ಯರು ಗೆಜೆರಿನಲ್ಲಿ ವಾಸವಾಗಿದ್ದ ಕಾನಾನ್ಯರನ್ನು ಹೊರಡಿಸಿಬಿಡಲಿಲ್ಲ. ಕಾನಾನ್ಯರು ಗೆಜೆರಿನಲ್ಲಿ ಅವರ ಸಂಗಡ ವಾಸಿಸಿದ್ದರು.

[30] ಜೆಬುಲೂನ್ಯರು ಕಿಟ್ರೋನಿನ ವಾಸಿಗಳನ್ನೂ ನಹಲೋಲಿನ ವಾಸಿಗಳನ್ನೂ ಹೊರಡಿಸಿಬಿಡಲಿಲ್ಲ. ಕಾನಾನ್ಯರಾದ ಇವರು ಅವರಲ್ಲಿ ದಾಸರಾಗಿ ವಾಸಮಾಡುವವರಾದರು.

[31] ಆಶೇರ್ಯರು ಅಕ್ಕೋವಿನ ವಾಸಿಗಳನ್ನೂ; ಸೀದೋನಿನ ವಾಸಿಗಳನ್ನೂ; ಅಹ್ಲಾಬ್, ಅಕ್ಜೀಬ್, ಹೆಲ್ಬಾ, ಅಫೀಕ್, ರೆಹೋಬ್ ಪಟ್ಟಣಗಳ ವಾಸಿಗಳನ್ನೂ ಹೊರಡಿಸಿಬಿಡಲಿಲ್ಲ.

[32] ಆದರೆ ಆಶೇರ್ಯರು ಅವರನ್ನು ಹೊರಡಿಸಿಬಿಡದೆ, ಆ ದೇಶದ ವಾಸಿಗಳಾದ ಕಾನಾನ್ಯರ ಮಧ್ಯದಲ್ಲಿ ವಾಸವಾಗಿದ್ದರು.

[33] ನಫ್ತಾಲಿ ಗೋತ್ರದವರು ಬೇತ್ ಷೆಮೆಷ್ ವಾಸಿಗಳನ್ನೂ ಹೊರಡಿಸಿಬಿಡದೆ, ಆ ದೇಶವಾಸಿಗಳಾದ ಕಾನಾನ್ಯರ ಮಧ್ಯದಲ್ಲಿ ವಾಸಿಸಿದ್ದರು. ಆದರೆ ಬೇತ್ ಷೆಮೆಷ್, ಬೇತ್ ಅನಾತ್ ಪಟ್ಟಣ ವಾಸಿಗಳು ಅವರಿಗೆ ದಾಸರಾದರು.

[34] ಅಮೋರಿಯರು ದಾನ್ಯರನ್ನು ತಗ್ಗಿನಲ್ಲಿ ಇಳಿಯಗೊಡದೆ, ಬೆಟ್ಟಗಳಿಗೆ ಓಡಿಸಿಬಿಟ್ಟರು

[35] ಹೀಗೆ ಅಮೋರಿಯರು ಹರ್‌ಹೆರೆಸ್ ಬೆಟ್ಟದಲ್ಲಿಯೂ ಅಯ್ಯಾಲೋನಿನಲ್ಲಿಯೂ ಶಾಲ್ಬೀಮಿನಲ್ಲಿಯೂ ವಾಸಿಸಬೇಕೆಂದಿದ್ದರು. ಆದರೆ ಯೋಸೇಫನ ಗೋತ್ರದವರ ಕೈ ಬಲ ಹೆಚ್ಚಾದದ್ದರಿಂದ ಅವರಿಗೆ ದಾಸರಾದರು.

[36] ಹೀಗೆ ಅಮೋರಿಯರ ಮೇರೆಯು ಅಕ್ರಬ್ಬೀಮನ್ನು ಹಿಡಿದು ಸೆಲ ಬಂಡೆಯಿಂದ ಮೇಲಕ್ಕೆ ವಿಸ್ತರಿಸಿಕೊಂಡಿದೆ.

ನ್ಯಾಯಸ್ಥಾಪಕರು — Chapters