Skip to content
Opens in a new window
Listen to this chapter • 5:41

[1] ಇಸ್ರಾಯೇಲರು ತಿರುಗಿ ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದ್ದರಿಂದ, ಯೆಹೋವ ದೇವರು ಅವರನ್ನು ನಾಲ್ವತ್ತು ವರ್ಷದವರೆಗೆ ಫಿಲಿಷ್ಟಿಯರ ಕೈಯಲ್ಲಿ ಒಪ್ಪಿಸಿಕೊಟ್ಟರು.

[2] ಆದರೆ ಚೊರ್ಗದವನಾದ ದಾನನ ಗೋತ್ರದ ಮಾನೋಹ ಎಂಬ ಒಬ್ಬ ಮನುಷ್ಯನಿದ್ದನು. ಅವನ ಹೆಂಡತಿಯು ಮಕ್ಕಳನ್ನು ಹೆರದೆ, ಬಂಜೆಯಾಗಿದ್ದಳು.

[3] ಯೆಹೋವ ದೇವರ ದೂತನು ಆ ಸ್ತ್ರೀಗೆ ಪ್ರತ್ಯಕ್ಷವಾಗಿ ಅವಳಿಗೆ, “ಇಗೋ, ನೀನು ಮಕ್ಕಳನ್ನು ಹೆರದೆ ಬಂಜೆಯಾಗಿದ್ದೀಯೆ. ಆದರೆ ನೀನು ಗರ್ಭಧರಿಸಿ ಒಬ್ಬ ಮಗನನ್ನು ಹೆರುವೆ.

[4] ಆದ್ದರಿಂದ ನೀನು ದ್ರಾಕ್ಷಾರಸವನ್ನೂ ಮದ್ಯಪಾನವನ್ನೂ ಕುಡಿಯದೆ, ಅಶುಚಿಯಾದ ಒಂದನ್ನಾದರೂ ತಿನ್ನದೆ, ಎಚ್ಚರಿಕೆಯಾಗಿರಬೇಕು.

[5] ನೀನು ಗರ್ಭವನ್ನು ಧರಿಸಿ, ಒಬ್ಬ ಮಗನನ್ನು ಹೆರುವೆ; ಅವನ ತಲೆಯ ಮೇಲೆ ಕ್ಷೌರದ ಕತ್ತಿ ಬರಬಾರದು. ಏಕೆಂದರೆ ಗರ್ಭದಿಂದಲೇ ಆ ಹುಡುಗನು ದೇವರಿಗೆ ಪ್ರತಿಷ್ಠಿತನಾದ ನಾಜೀರನಾಗಿರುವನು. ಅವನು ಇಸ್ರಾಯೇಲರನ್ನು ಫಿಲಿಷ್ಟಿಯರ ಕೈಯಿಂದ ಬಿಡಿಸಿ, ರಕ್ಷಿಸಲು ಪ್ರಾರಂಭಿಸುವನು,” ಎಂದನು.

[6] ಆಗ ಆ ಸ್ತ್ರೀಯು ಬಂದು ತನ್ನ ಗಂಡನಿಗೆ, “ಒಬ್ಬ ದೇವರ ಮನುಷ್ಯ ನನ್ನ ಹತ್ತಿರ ಬಂದಿದ್ದನು. ಅವನ ರೂಪವು ದೇವದೂತನ ರೂಪದ ಹಾಗೆ ಮಹಾ ಭಯಂಕರವಾಗಿತ್ತು. ನಾನು ಅವನನ್ನು ಎಲ್ಲಿಂದ ಬಂದೆ ಎಂದು ಕೇಳಲಿಲ್ಲ; ಅವನು ತನ್ನ ಹೆಸರನ್ನು ನನಗೆ ತಿಳಿಸಲಿಲ್ಲ.

[7] ಅವನು ನನಗೆ, ‘ನೀನು ಗರ್ಭವತಿಯಾಗಿ ಒಬ್ಬ ಮಗನನ್ನು ಹೆರುವೆ; ಈಗ ನೀನು ದ್ರಾಕ್ಷಾರಸವನ್ನೂ, ಮದ್ಯವನ್ನೂ ಕುಡಿಯದೆ, ಅಶುದ್ಧವಾದ ಒಂದನ್ನಾದರೂ ತಿನ್ನದೆ ಇರು. ಏಕೆಂದರೆ ಆ ಹುಡುಗನು ಹುಟ್ಟಿದಂದಿನಿಂದ ಮರಣಹೊಂದುವವರೆಗೆ ದೇವರಿಗೆ ಪ್ರತಿಷ್ಠಿತನಾಗಿರುವನು ಎಂದು ಹೇಳಿದನು,’ ಎಂದಳು.”

[8] ಆಗ ಮಾನೋಹನು ಯೆಹೋವ ದೇವರಿಗೆ ಬೇಡಿಕೊಂಡು, “ನನ್ನ ಕರ್ತದೇವರೇ, ನೀವು ಕಳುಹಿಸಿದ ದೇವರ ಮನುಷ್ಯನು ಇನ್ನೊಂದು ಸಾರಿ ನಮ್ಮ ಬಳಿಗೆ ಬಂದು, ಹುಟ್ಟುವ ಕೂಸಿಗೋಸ್ಕರ ನಾವು ಮಾಡಬೇಕಾದದ್ದನ್ನು ನಮಗೆ ಕಲಿಸಲಿ,” ಎಂದು ಪ್ರಾರ್ಥಿಸಿದನು.

[9] ದೇವರು ಮಾನೋಹನ ಬೇಡಿಕೆಯನ್ನು ಕೇಳಿದರು. ಆ ಸ್ತ್ರೀಯು ಹೊಲದಲ್ಲಿ ಕುಳಿತಿರುವಾಗ, ದೇವದೂತನು ತಿರುಗಿ ಅವಳ ಬಳಿಗೆ ಬಂದನು. ಆಗ ಅವಳ ಗಂಡನಾದ ಮಾನೋಹನು ಅವಳ ಸಂಗಡ ಇರಲಿಲ್ಲ.

[10] ಆದ್ದರಿಂದ ಅವಳು ಬೇಗ ಓಡಿಹೋಗಿ, ತನ್ನ ಗಂಡನಿಗೆ, “ಇಗೋ, ಆ ದಿನ ನನಗೆ ಪ್ರತ್ಯಕ್ಷನಾದ ಮನುಷ್ಯನು ತಿರುಗಿ ನನಗೆ ಪ್ರತ್ಯಕ್ಷನಾಗಿದ್ದಾನೆ,” ಎಂದು ತಿಳಿಸಿದಳು.

[11] ಆಗ ಮಾನೋಹನು ಎದ್ದು ತನ್ನ ಹೆಂಡತಿಯೊಡನೆ ಹೋಗಿ, ಅವನ ಬಳಿಗೆ ಬಂದು, ಅವನಿಗೆ, “ಈ ಸ್ತ್ರೀಯ ಸಂಗಡ ಮಾತನಾಡಿದವನು ನೀನೋ?” ಎಂದನು. ಅವನು, “ನಾನೇ,” ಎಂದನು.

[12] ಮಾನೋಹನು, “ನೀನು ಹೇಳಿದ ಮಾತುಗಳು ನೆರವೇರುವಾಗ, ನಾವು ಆ ಕೂಸಿಗೋಸ್ಕರ ಮಾಡತಕ್ಕದ್ದೇನು? ಅವನನ್ನು ಹೇಗೆ ನಡಿಸತಕ್ಕದ್ದು?” ಎಂದನು.

[13] ಯೆಹೋವ ದೇವರ ದೂತನು ಮಾನೋಹನಿಗೆ, “ನಾನು ಈ ಸ್ತ್ರೀಗೆ ಹೇಳಿದ್ದೆಲ್ಲದರಲ್ಲಿ ಅವಳು ಎಚ್ಚರಿಕೆಯಾಗಿದ್ದು,

[14] ದ್ರಾಕ್ಷಿ ಗಿಡದಲ್ಲಿ ಹುಟ್ಟುವ ಒಂದನ್ನೂ ತಿನ್ನದೆ, ದ್ರಾಕ್ಷಾರಸವನ್ನೂ, ಮದ್ಯವನ್ನೂ ಕುಡಿಯದೆ, ಅಶುಚಿಯಾದ ಒಂದನ್ನೂ ತಿನ್ನದೆ ಇದ್ದು, ನಾನು ಅವಳಿಗೆ ಆಜ್ಞಾಪಿಸಿದ್ದೆಲ್ಲಾ ಕೈಗೊಳ್ಳಲಿ,” ಎಂದನು.

[15] ಮಾನೋಹನು ಯೆಹೋವ ದೇವರ ದೂತನಿಗೆ, “ನಾವು ನಿನಗೋಸ್ಕರ ಮೇಕೆಯ ಮರಿಯನ್ನು ಸಿದ್ಧಮಾಡುವವರೆಗೆ ನಿಲ್ಲಿಸಿಕೊಳ್ಳುತ್ತೇವೆ ಎಂದು ಬೇಡುತ್ತೇನೆ,” ಎಂದನು.

[16] ಯೆಹೋವ ದೇವರ ದೂತನು ಮಾನೋಹನಿಗೆ, “ನೀನು ನನ್ನನ್ನು ನಿಲ್ಲಿಸಿಕೊಂಡರೂ, ನಾನು ನಿನ್ನ ರೊಟ್ಟಿಯನ್ನು ತಿನ್ನುವುದಿಲ್ಲ; ನೀನು ದಹನಬಲಿಯನ್ನು ಅರ್ಪಿಸಿದರೆ, ಅದನ್ನು ಯೆಹೋವ ದೇವರಿಗೆ ಅರ್ಪಿಸಬೇಕು,” ಎಂದನು.

[17] ಏಕೆಂದರೆ ಅವನು ಯೆಹೋವ ದೇವರ ದೂತನೆಂದು ಮಾನೋಹನು ಅರಿಯದೆ ಇದ್ದನು. ಮಾನೋಹನು ಯೆಹೋವ ದೇವರ ದೂತನಿಗೆ, “ನೀನು ಹೇಳಿದ ಮಾತುಗಳು ನೆರವೇರುವಾಗ, ನಾವು ನಿನ್ನನ್ನು ಘನಪಡಿಸುವ ಹಾಗೆ ನಿನ್ನ ಹೆಸರೇನು?” ಎಂದನು.

[18] ಆದರೆ ಯೆಹೋವ ದೇವರ ದೂತನು ಅವನಿಗೆ, “ನನ್ನ ಹೆಸರು ಏನೆಂದು ನೀನು ಕೇಳುವುದೇನು? ಆ ಹೆಸರು ಆಶ್ಚರ್ಯಕರವಾದದ್ದು,” ಎಂದನು.

[19] ಹೀಗೆ ಮಾನೋಹನು ಮೇಕೆಯ ಮರಿಯನ್ನೂ, ಧಾನ್ಯ ಸಮರ್ಪಣೆಯನ್ನೂ ತಂದು, ಅವುಗಳನ್ನು ಬಂಡೆಯ ಮೇಲೆ ಯೆಹೋವ ದೇವರಿಗೆ ಅರ್ಪಿಸಿದನು. ಮಾನೋಹನೂ, ಅವನ ಹೆಂಡತಿಯೂ ನೋಡುವಾಗ, ಯೆಹೋವ ದೇವರ ದೂತನು ಆಶ್ಚರ್ಯಕರವಾದ ಸಂಗತಿಯನ್ನು ಮಾಡಿದನು.

[20] ಅಗ್ನಿ ಜ್ವಾಲೆಯು ಬಲಿಪೀಠದಿಂದ ಆಕಾಶಕ್ಕೆ ಸರಿಯಾಗಿ ಏಳುವಾಗ, ಯೆಹೋವ ದೇವರ ದೂತನು ಬಲಿಪೀಠದ ಜ್ವಾಲೆಯಲ್ಲಿ ಮೇಲಕ್ಕೆ ಹೋದನು. ಅದನ್ನು ಮಾನೋಹನೂ, ಅವನ ಹೆಂಡತಿಯೂ ಕಂಡು, ನೆಲದ ಮೇಲೆ ಬೋರಲು ಬಿದ್ದರು.

[21] ಯೆಹೋವ ದೇವರ ದೂತನು ಮಾನೋಹನಿಗೂ, ಅವನ ಹೆಂಡತಿಗೂ ತಿರುಗಿ ಕಾಣಿಸಲಿಲ್ಲ. ಆಗ ಮಾನೋಹನು, ಅವನು ದೇವರ ದೂತನು ಎಂದು ತಿಳಿದುಕೊಂಡನು.

[22] ಮಾನೋಹನು ತನ್ನ ಹೆಂಡತಿಗೆ, “ನಾವು ದೇವರನ್ನು ಕಂಡದ್ದರಿಂದ ನಿಶ್ಚಯವಾಗಿ ಸಾಯುವೆವು,” ಎಂದನು.

[23] ಅವನ ಹೆಂಡತಿ ಅವನಿಗೆ, “ಯೆಹೋವ ದೇವರು ನಮ್ಮನ್ನು ಕೊಲ್ಲಬೇಕೆಂದಿದ್ದರೆ, ಅವರು ನಮ್ಮ ಕೈಯಿಂದ ದಹನಬಲಿಯನ್ನೂ, ಅರ್ಪಣೆಯನ್ನೂ ಸ್ವೀಕರಿಸುತ್ತಿರಲಿಲ್ಲ; ಇವುಗಳನ್ನೆಲ್ಲಾ ನಮಗೆ ತೋರಿಸುತ್ತಿರಲಿಲ್ಲ. ಈಗ ಹೇಳಿದವುಗಳನ್ನು ನಮಗೆ ತಿಳಿಯಮಾಡುತ್ತಿರಲಿಲ್ಲ,” ಎಂದಳು.

[24] ಆ ಸ್ತ್ರೀಯು ಮಗನನ್ನು ಹೆತ್ತು, ಅವನಿಗೆ ಸಂಸೋನ ಎಂದು ಹೆಸರಿಟ್ಟಳು. ಆ ಹುಡುಗನು ಬೆಳೆದನು. ಯೆಹೋವ ದೇವರು ಅವನನ್ನು ಆಶೀರ್ವದಿಸಿದರು.

[25] ಇದಲ್ಲದೆ ಚೊರ್ಗಕ್ಕೂ ಎಷ್ಟಾವೋಲಿಗೂ ಮಧ್ಯದಲ್ಲಿ ದಾನನ ದಂಡಿನಲ್ಲಿ ಅವನನ್ನು ಯೆಹೋವ ದೇವರ ಆತ್ಮರು ಆಗಾಗ್ಗೆ ಪ್ರೇರೇಪಿಸುವುದಕ್ಕೆ ಪ್ರಾರಂಭಿಸಿದರು.

ನ್ಯಾಯಸ್ಥಾಪಕರು — Chapters