[1] ಆ ದಿವಸದಲ್ಲಿ ದೆಬೋರಳೂ, ಅಬೀನೋವಮನ ಮಗ ಬಾರಾಕನೂ ಹಾಡಿದ್ದೇನೆಂದರೆ:
[2] “ಇಸ್ರಾಯೇಲಿನ ನಾಯಕರು ಮುನ್ನಡೆದಾಗ, ಜನರು ಸ್ವಇಚ್ಛೆಯಿಂದ ಅವರನ್ನು ಹಿಂಬಾಲಿಸಿದಾಗ ಯೆಹೋವ ದೇವರನ್ನು ಸ್ತುತಿಸಿರಿ!
[3] “ಅರಸರೇ ಕೇಳಿರಿ, ಪ್ರಭುಗಳೇ ಕೇಳಿರಿ, ಕಿವಿಗೊಡಿರಿ; ನಾನು, ನಾನೇ ಯೆಹೋವ ದೇವರಿಗೆ ಹಾಡುವೆನು. ಇಸ್ರಾಯೇಲಿನ ದೇವರಾದ ಯೆಹೋವ ದೇವರಿಗೆ ಸ್ತುತಿಗೀತೆ ಹಾಡುವೆನು.
[4] “ಯೆಹೋವ ದೇವರೇ, ನೀವು ಸೇಯೀರಿನಿಂದ ಹೊರಟು, ಎದೋಮಿನ ಹೊಲದಿಂದ ಮುನ್ನಡೆಯುವಾಗ, ಭೂಮಿ ನಡುಗಿತು. ಆಕಾಶವು ಸಹ ಸುರಿಸಿತು. ಮೇಘಗಳು ಸಹ ನೀರು ಸುರಿಸಿದವು.
[5] ಯೆಹೋವ ದೇವರ ಮುಂದೆ ಬೆಟ್ಟಗಳು ಕಂಪಿಸಿದವು. ಇಸ್ರಾಯೇಲಿನ ದೇವರಾದ ಯೆಹೋವ ದೇವರ ಮುಂದೆ ಸೀನಾಯಿ ಪರ್ವತವು ಸಹ ಕಂಪಿಸಿತು.
[6] “ಅನಾತನ ಮಗ ಶಮ್ಗರನ ಕಾಲದಲ್ಲಿಯೂ, ಯಾಯೇಲಳ ದಿವಸಗಳಲ್ಲಿಯೂ ಹೆದ್ದಾರಿಯ ಸಂಚಾರ ನಿಂತುಹೋಯಿತು. ಪ್ರಯಾಣಿಕರು ಡೊಂಕು ದಾರಿಗಳಲ್ಲಿ ನಡೆಯುತ್ತಿದ್ದರು.
[7] ದೆಬೋರಳಾದ ನಾನು ಏಳುವವರೆಗೂ, ಇಸ್ರಾಯೇಲಿನಲ್ಲಿ ತಾಯಿಯಾಗಿ ನಾನು ಏಳುವವರೆಗೂ ಇಸ್ರಾಯೇಲಿನ ಹಳ್ಳಿಗಳ ನಿವಾಸಿಗಳು ಯುದ್ಧಮಾಡಲಿಲ್ಲ.
[8] ಅವರು ಹೊಸ ದೇವರುಗಳನ್ನು ಆಯ್ದುಕೊಂಡರು. ಆಗ ಯುದ್ಧವು ಬಾಗಿಲುಗಳಲ್ಲಿ ಆಯಿತು. ಇಸ್ರಾಯೇಲಿನಲ್ಲಿ ನಲವತ್ತು ಸಾವಿರ ಸೈನಿಕರಲ್ಲಿ ಗುರಾಣಿಯೂ, ಕಠಾರಿಯೂ ಇರಲಿಲ್ಲ.
[9] ನಾನು ಇಸ್ರಾಯೇಲ್ ನಾಯಕರೊಂದಿಗೂ ಸ್ವೇಚ್ಛೆಯಿಂದ ಬಂದ ಜನರೊಂದಿಗೆ ನನ್ನ ಹೃದಯವಿದೆ. ಯೆಹೋವ ದೇವರನ್ನು ಸ್ತುತಿಸಿರಿ.
[10] “ಬಿಳಿ ಕತ್ತೆಗಳ ಮೇಲೆ ಸವಾರಿ ಮಾಡುವವರೇ, ರತ್ನಗಂಬಳಿಗಳ ಮೇಲೆ ಕುಳಿತಿರುವವರೇ, ಮಾರ್ಗದಲ್ಲಿ ನಡೆಯುವವರೇ, ಗಾನಮಾಡಿರಿ.
[11] ನೀರು ಸೇದುವ ಸ್ಥಳಗಳ ಹತ್ತಿರ ಗಾಯಕರ ಶಬ್ದದಿಂದ ಯೆಹೋವ ದೇವರ ನೀತಿಸಾಧನೆಗಳನ್ನು ವರ್ಣಿಸುತ್ತಾರೆ. ಇಸ್ರಾಯೇಲಿನಲ್ಲಿ ಅವರ ಹಳ್ಳಿಗಳ ನಿವಾಸಿಗಳಿಗೆ ಮಾಡಿದ ಮಹತ್ಕಾರ್ಯಗಳನ್ನು ತಿರುಗಿ ಪ್ರಕಟಿಸುವರು. “ಆಗ ಯೆಹೋವ ದೇವರ ಜನರು ಪಟ್ಟಣದ ಬಾಗಿಲುಗಳಿಗೆ ಇಳಿದು ಬರುವರು.
[12] ‘ಎಚ್ಚರವಾಗು, ಎಚ್ಚರವಾಗು, ದೆಬೋರಳೇ, ಎಚ್ಚರವಾಗು, ಎಚ್ಚರವಾಗಿ ಹಾಡನ್ನು ಹಾಡು; ಬಾರಾಕನೇ, ಏಳು; ಅಬೀನೋವಮನ ಮಗನೇ, ನಿನ್ನನ್ನು ಸೆರೆಹಿಡಿದವರನ್ನು ಸೆರೆಯಾಗಿ ನಡೆಸು.’
[13] “ಆಗ ಉಳಿದವನನ್ನು ಅವರು ಜನರಲ್ಲಿ ಶ್ರೇಷ್ಠರಾದವರ ಮೇಲೆ ಆಳುವಂತೆ ಮಾಡಿದರು. ಯೆಹೋವ ದೇವರ ಜನರು ನನ್ನ ಸಹಾಯಕ್ಕಾಗಿ ಬಂದು, ಪರಾಕ್ರಮಶಾಲಿಗಳ ವಿರುದ್ಧ ಯುದ್ಧಮಾಡಿದರು.
[14] ಅಮಾಲೇಕ್ಯರಿಗೆ ವಿರೋಧ ಮಾಡಿದವರ ಬೇರು ಎಫ್ರಾಯೀಮಿನಿಂದ ಉಂಟಾಯಿತು. ನಿನ್ನ ಹಿಂದೆ ನಿನ್ನ ಜನರಲ್ಲಿ ಬೆನ್ಯಾಮೀನನು ಮಾಕೀರನಲ್ಲಿಂದ ಅಧಿಪತಿಗಳೂ, ಜೆಬುಲೂನನಲ್ಲಿಂದ ಬರಹಗಾರನ ಲೇಖನಿಯನ್ನು ಉಪಯೋಗಿಸುವವರೂ ಬಂದರು.
[15] ಇಸ್ಸಾಕಾರನ ಪ್ರಧಾನರು ದೆಬೋರಳ ಸಂಗಡ ಇದ್ದರು. ಹೌದು, ಇಸ್ಸಾಕಾರನ ಗೋತ್ರದವರು ಬಾರಾಕನ ಹಿಂದೆ ಅವನ ಕಟ್ಟಳೆಯ ಪ್ರಕಾರ, ಕಾಲುನಡಿಗೆಯಾಗಿ ಕಣಿವೆಯಲ್ಲಿ ನಡೆದರು. ರೂಬೇನನ ಕಡೆಯವರು ತಮ್ಮ ಹೃದಯಗಳನ್ನು ಮಹಾ ಪರಿಶೋಧನೆ ಮಾಡಿಕೊಂಡರು.
[16] ಮಂದೆಗಳ ಕೂಗನ್ನು ಕೇಳಿ, ನೀನು ಕುರಿ ಹಟ್ಟಿಗಳ ಬಳಿಯಲ್ಲಿ ಇದ್ದದ್ದೇನು? ರೂಬೇನ್ಯರ ನಡುವೆ ಹೃದಯದ ಮಹಾ ಪರಿಶೋಧನೆಗಳು ಇದ್ದವು.
[17] ಗಿಲ್ಯಾದನು ಯೊರ್ದನ್ ನದಿಯ ಆಚೆ ವಾಸಿಸಿದನು. ದಾನನು ಹಡಗುಗಳಲ್ಲಿ ನಿಂತದ್ದೇನು? ಆಶೇರನು ಸಮುದ್ರದ ದಡದಲ್ಲಿದ್ದು, ತನ್ನ ರೇವುಗಳ ಬಳಿಯಲ್ಲಿ ವಾಸಿಸಿದನು.
[18] ಜೆಬುಲೂನ್ಯರು ತಮ್ಮ ಪ್ರಾಣಗಳನ್ನು ಧೈರ್ಯವಾಗಿ ಕೊಡುವ ಜನರಾಗಿದ್ದರು. ನಫ್ತಾಲಿಯೂ ಸಹ ಹೊಲದ ಎತ್ತರವಾದ ಸ್ಥಳಗಳಲ್ಲಿ ತಮ್ಮ ಪ್ರಾಣಗಳನ್ನು ಧೈರ್ಯವಾಗಿ ಕೊಡುವ ಜನರಾಗಿದ್ದರು.
[19] “ಅರಸರು ಬಂದು ಯುದ್ಧಮಾಡಿದರು; ಆಗ ಕಾನಾನ್ಯರ ಅರಸರು ಮೆಗಿದ್ದೋನಿನ ಜಲ ಸಮೀಪವಾದ ತಾನಕದಲ್ಲಿ ಯುದ್ಧಮಾಡಿದರು. ಅವರು ಬೆಳ್ಳಿ ದ್ರವ್ಯಗಳನ್ನು ತೆಗೆದುಕೊಳ್ಳಲಿಲ್ಲ.
[20] ಆಕಾಶದಲ್ಲಿ ಇರುವವುಗಳು ಯುದ್ಧ ಮಾಡಿದವು. ನಕ್ಷತ್ರಗಳು ತಮ್ಮ ಓಟಗಳಲ್ಲಿ ಸೀಸೆರನಿಗೆ ವಿರೋಧವಾಗಿ ಯುದ್ಧ ಮಾಡಿದವು.
[21] ಕೀಷೋನ್ ನದಿಯು, ಆ ಹಳೆಯದಾದ ಕೀಷೋನ್ ನದಿಯು ಅವರನ್ನು ಬಡಿದುಕೊಂಡು ಹೋಯಿತು. ನನ್ನ ಪ್ರಾಣವೇ, ನೀನು ಬಲವನ್ನು ತುಳಿದು ಹಾಕಿದೆ.
[22] ಆಗ ನೆಲವನ್ನು ಘಟ್ಟಿಸಿ ಓಡುವ ಅವನ ಬಲವಾದ ಕುದುರೆಗಳ ಮೆಟ್ಟಿನಿಂದ ಗೊರಸುಗಳು ಸೀಳಿಹೋದವು.
[23] ಯೆಹೋವ ದೇವರ ದೂತನು ಹೀಗೆ ಹೇಳುತ್ತಾನೆ, ‘ನೀವು ಮೆರೋಜನ್ನು ಶಪಿಸಿರಿ. ಅದರ ನಿವಾಸಿಗಳನ್ನು ಕಠಿಣವಾಗಿ ಶಪಿಸಿರಿ, ಏಕೆಂದರೆ ಅವರು ಯೆಹೋವ ದೇವರ ಸಹಾಯಕ್ಕೂ, ಪರಾಕ್ರಮಶಾಲಿಗಳಿಗೆ ವಿರೋಧವಾಗಿ ಯೆಹೋವ ದೇವರ ಸಹಾಯಕ್ಕೂ ಬಾರದೆ ಹೋದರು.’
[24] “ಕೇನ್ಯನಾದ ಹೆಬೆರನ ಹೆಂಡತಿಯಾದ ಯಾಯೇಲಳು ಆಶೀರ್ವಾದ ಹೊಂದಿದವಳು. ಗುಡಾರದಲ್ಲಿ ವಾಸಿಸುವ ಹೌದು, ಅವಳೇ ಸ್ತ್ರೀಯರೊಳಗೆ ಅಧಿಕ ಆಶೀರ್ವಾದ ಹೊಂದಿದವಳು.
[25] ಅವನು ನೀರನ್ನು ಕೇಳಿದನು. ಅವಳು ಹಾಲು ಕೊಟ್ಟಳು; ಅಮೂಲ್ಯವಾದ ಬಟ್ಟಲಿನಲ್ಲಿ ಬೆಣ್ಣೆಯನ್ನು ತಂದಿಟ್ಟಳು.
[26] ತನ್ನ ಕೈಯಲ್ಲಿ ಮೊಳೆಯನ್ನೂ, ತನ್ನ ಬಲಗೈಯಲ್ಲಿ ಕೆಲಸಗಾರನ ಸುತ್ತಿಗೆಯನ್ನೂ ತೆಗೆದುಕೊಂಡಳು. ಸುತ್ತಿಗೆಯಿಂದ ಸೀಸೆರನನ್ನು ಅವಳು ಹೊಡೆದಳು. ಅವಳು ಅವನ ತಲೆಯನ್ನು ತಿವಿದು ಹೊಡೆದಳು. ಅವನ ತಲೆಯನ್ನು ಹೊಡೆದು ಬಿಟ್ಟಳು.
[27] ಅವಳ ಕಾಲುಗಳ ಹತ್ತಿರ ಮುದುರಿ ಬಿದ್ದು ಮಲಗಿದನು. ಅವಳ ಕಾಲುಗಳ ಹತ್ತಿರ ಬಾಗಿ ಬಿದ್ದನು. ಎಲ್ಲಿ ಬಾಗಿ ಬಿದ್ದನೋ, ಅಲ್ಲಿಯೇ ಬಿದ್ದು ಮರಣಹೊಂದಿದನು.
[28] “ಸೀಸೆರನ ತಾಯಿ ಕಿಟಿಕಿಯಿಂದ ನೋಡಿದಳು, ಕಿಂಡಿಯಿಂದ ಕೂಗಿದಳು, ‘ಅವನ ರಥವು ಬರುವುದಕ್ಕೆ ಇಷ್ಟು ತಡವಾದದ್ದೇನು? ಅವನ ರಥಗಳ ಗಾಲಿಗಳು ಹಿಂದುಳಿದಿರುವುದೇನು?’
[29] ಅದಕ್ಕೆ ಅವಳ ಜ್ಞಾನವುಳ್ಳ ಪ್ರಧಾನ ಸ್ತ್ರೀಯರು ಉತ್ತರಕೊಟ್ಟರು. ಅವಳೇ ತನಗೆ ಬದಲು ಮಾತು ಕೇಳಿಕೊಂಡಳು:
[30] ‘ಅವರು ಓಡಲಿಲ್ಲವೋ? ಕೊಳ್ಳೆ ಹಂಚಿಕೊಳ್ಳಲಿಲ್ಲವೋ? ಒಬ್ಬೊಬ್ಬ ಸೈನಿಕನಿಗೆ ಒಂದೆರಡು ದಾಸಿಯರು ಸೀಸೆರನಿಗಾದರೋ ನಾನಾ ವರ್ಣವುಳ್ಳ ಬಟ್ಟೆಗಳು. ನಾನಾ ವರ್ಣವುಳ್ಳ ವಿಚಿತ್ರವಾಗಿ ಕಸೂತಿಹಾಕಿದ ಬಟ್ಟೆಗಳು, ವಿಚಿತ್ರವಾಗಿ ಕಸೂತಿಹಾಕಿದ ಒಂದೆರಡು ಬಟ್ಟೆಗಳೂ ಕೊಳ್ಳೆ ಹಿಡಿಯುವವರಿಗೆ ತಕ್ಕಂಥ ಕಂಠಮಾಲೆಗಳೂ ಸಿಕ್ಕಲಿಲ್ಲವೋ?’
[31] “ಯೆಹೋವ ದೇವರೇ, ಹೀಗೆಯೇ ನಿಮ್ಮ ಶತ್ರುಗಳೆಲ್ಲರೂ ನಾಶವಾಗಲಿ. ಆದರೆ ಅವರನ್ನು ಪ್ರೀತಿ ಮಾಡುವವರು ಪರಾಕ್ರಮದಿಂದ ಹೊರಡುವ ಸೂರ್ಯನ ಹಾಗೆಯೇ ಇರಲಿ.” ಅನಂತರ ದೇಶವು ನಲವತ್ತು ವರ್ಷ ವಿಶ್ರಾಂತಿಯಲ್ಲಿತ್ತು.