Skip to content
Opens in a new window
Listen to this chapter • 6:30

[1] ಕಾನಾನ್ ದೇಶದ ಸಕಲ ಯುದ್ಧಗಳನ್ನು ಅರಿಯದೆ ಇದ್ದ ಇಸ್ರಾಯೇಲರನ್ನು ಪರೀಕ್ಷಿಸುವುದಕ್ಕೂ,

[2] ಮೊದಲು ಯುದ್ಧವನ್ನು ಅರಿಯದೆ ಇದ್ದ ಇಸ್ರಾಯೇಲಿನ ಸಂತತಿಗಳವರು ಅದನ್ನು ಕೂಡ ಕಲಿತುಕೊಳ್ಳುವುದಕ್ಕೂ ಯೆಹೋವ ದೇವರು ಉಳಿಸಿದ ಜನಾಂಗಗಳು ಯಾವುವೆಂದರೆ:

[3] ಐದು ಮಂದಿ ಫಿಲಿಷ್ಟಿಯರ ಅಧಿಪತಿಗಳೂ ಸಮಸ್ತ ಕಾನಾನ್ಯರೂ ಸೀದೋನ್ಯರೂ ಬಾಳ್ ಹೆರ್ಮೋನ್ ಬೆಟ್ಟದಿಂದ ಪ್ರಾರಂಭಿಸಿ ಹಮಾತಿನ ಪ್ರದೇಶದವರೆಗೂ ಲೆಬನೋನಿನ ಬೆಟ್ಟದಲ್ಲಿ ವಾಸವಾಗಿರುವ ಹಿವ್ವಿಯರು ಇವರೇ.

[4] ತಾವು ಮೋಶೆಯ ಮುಖಾಂತರವಾಗಿ ಇಸ್ರಾಯೇಲರ ಪಿತೃಗಳಿಗೆ ಆಜ್ಞಾಪಿಸಿದ ಆಜ್ಞೆಗಳನ್ನು ಇಸ್ರಾಯೇಲರು ಕೇಳುವರೋ ಇಲ್ಲವೋ ಎಂದು ಪರೀಕ್ಷಿಸುವುದಕ್ಕೆ ಯೆಹೋವ ದೇವರು ಅವರನ್ನು ಉಳಿಸಿಬಿಟ್ಟರು.

[5] ಇಸ್ರಾಯೇಲರು ಕಾನಾನ್ಯರ, ಹಿತ್ತಿಯರ, ಅಮೋರಿಯರ, ಪೆರಿಜೀಯರ, ಹಿವ್ವಿಯರ, ಯೆಬೂಸಿಯರ ಮಧ್ಯದಲ್ಲಿ ವಾಸವಾಗಿದ್ದು,

[6] ಅವರ ಪುತ್ರಿಯರನ್ನು ತಾವು ಹೆಂಡತಿಯರನ್ನಾಗಿ ತೆಗೆದುಕೊಂಡು, ತಮ್ಮ ಪುತ್ರಿಯರನ್ನು ಅವರ ಪುತ್ರರಿಗೆ ಮದುವೆ ಮಾಡಿಕೊಟ್ಟು, ಅವರ ದೇವರುಗಳನ್ನು ಸೇವಿಸಿದರು.

[7] ಇಸ್ರಾಯೇಲರು ಯೆಹೋವ ದೇವರ ಮುಂದೆ ಕೆಟ್ಟದ್ದನ್ನು ಮಾಡಿ, ತಮ್ಮ ದೇವರಾದ ಯೆಹೋವ ದೇವರನ್ನು ಮರೆತು, ಬಾಳನನ್ನೂ ಅಶೇರನನ್ನೂ ಸೇವಿಸಿದರು.

[8] ಆದ್ದರಿಂದ ಯೆಹೋವ ದೇವರು ಇಸ್ರಾಯೇಲಿನ ಮೇಲೆ ಕೋಪಗೊಂಡು, ಅವರನ್ನು ಅರಾಮ್ ನಹರೈಮ್‌ದ ಅರಸನಾದ ಕೂಷನ್ ರಿಷಾತಯಿಮನ ಕೈಗೆ ಮಾರಿಬಿಟ್ಟರು. ಇಸ್ರಾಯೇಲರು ಕೂಷನ್‌ರಿಷಾತಯಿಮ್ ಎಂಬವನಿಗೆ ಎಂಟು ವರ್ಷ ಗುಲಾಮರಾಗಿದ್ದರು.

[9] ತರುವಾಯ ಇಸ್ರಾಯೇಲರು ಯೆಹೋವ ದೇವರನ್ನು ಕೂಗುವಾಗ, ಯೆಹೋವ ದೇವರು ಇಸ್ರಾಯೇಲರಿಗೆ ಅವರನ್ನು ರಕ್ಷಿಸುವ ರಕ್ಷಕನನ್ನು ಅಂದರೆ, ಕಾಲೇಬನ ತಮ್ಮನಾದ ಕೆನಾಜನ ಮಗ ಒತ್ನಿಯೇಲನನ್ನು ಎಬ್ಬಿಸಿದರು.

[10] ಅವನ ಮೇಲೆ ಯೆಹೋವ ದೇವರ ಆತ್ಮವು ಬಂದದ್ದರಿಂದ, ಅವನು ಇಸ್ರಾಯೇಲರಿಗೆ ನ್ಯಾಯತೀರಿಸಿದನು. ಯುದ್ಧಮಾಡುವುದಕ್ಕೆ ಹೊರಟಾಗ, ಯೆಹೋವ ದೇವರು ಅವನ ಕೈಗೆ ಎರಡು ನದಿಗಳ ಮಧ್ಯದಲ್ಲಿರುವ ಅರಾಮ್ ರಾಜ್ಯದ ಅರಸನಾದ ಕೂಷನ್ ರಿಷಾತಯಿಮನನ್ನು ಒಪ್ಪಿಸಿಕೊಟ್ಟರು. ಅವನು ಕೂಷನ್ ರಿಷಾತಯಿಮನ ಮೇಲೆ ಜಯಹೊಂದಿದನು.

[11] ದೇಶವು ನಾಲ್ವತ್ತು ವರ್ಷದವರೆಗೆ ವಿಶ್ರಾಂತಿಯಿಂದಿತ್ತು. ತರುವಾಯ ಕೆನಾಜನ ಮಗ ಒತ್ನಿಯೇಲನು ಮರಣಹೊಂದಿದನು.

[12] ಇಸ್ರಾಯೇಲರು ಯೆಹೋವ ದೇವರ ಮುಂದೆ ತಿರುಗಿ ಕೆಟ್ಟದ್ದನ್ನೇ ಮಾಡಿದರು. ಅವರು ಯೆಹೋವ ದೇವರ ಮುಂದೆ ಕೆಟ್ಟದ್ದನ್ನೇ ಮಾಡಿದ್ದರಿಂದ, ಯೆಹೋವ ದೇವರು ಮೋವಾಬ್ಯರ ಅರಸನಾದ ಎಗ್ಲೋನನನ್ನು ಇಸ್ರಾಯೇಲಿಗೆ ವಿರೋಧವಾಗಿ ಬಲಪಡಿಸಿದರು.

[13] ಅವನು ಅಮ್ಮೋನನ ಮತ್ತು ಅಮಾಲೇಕ್ಯರನ್ನು ಕೂಡಿಸಿಕೊಂಡು ಬಂದು, ಇಸ್ರಾಯೇಲರನ್ನು ಹೊಡೆದು, ಖರ್ಜೂರ ಗಿಡಗಳಿರುವ ಪಟ್ಟಣವನ್ನು ಸ್ವಾಧೀನಮಾಡಿಕೊಂಡನು.

[14] ಇಸ್ರಾಯೇಲರು ಮೋವಾಬ್ಯರ ಅರಸನಾದ ಎಗ್ಲೋನನನ್ನು ಹದಿನೆಂಟು ವರ್ಷ ಸೇವಿಸಿದರು.

[15] ಆದರೆ ಇಸ್ರಾಯೇಲರು ಯೆಹೋವ ದೇವರನ್ನು ಕೂಗಿದಾಗ, ಯೆಹೋವ ದೇವರು ಅವರಿಗೆ ಬೆನ್ಯಾಮೀನನಾದ ಗೇರನ ಮಗ ಏಹೂದನನ್ನು ರಕ್ಷಿಸುವುದಕ್ಕೆ ಎಬ್ಬಿಸಿದರು. ಅವನು ಎಡಗೈಯವನಾಗಿದ್ದನು. ಅವನ ಕೈಯಿಂದ ಇಸ್ರಾಯೇಲರು ಮೋವಾಬಿನ ಅರಸನಾದ ಎಗ್ಲೋನನಿಗೆ ಕಪ್ಪವನ್ನು ಕಳುಹಿಸಿದರು.

[16] ಏಹೂದನು ಇಬ್ಬಾಯಿಯುಳ್ಳ ಒಂದು ಮೊಳ ಉದ್ದವಾದ ಒಂದು ಕಠಾರಿಯನ್ನು ತನಗೆ ಮಾಡಿಕೊಂಡು, ಅದನ್ನು ತನ್ನ ವಸ್ತ್ರದ ಕೆಳಗೆ ತನ್ನ ಬಲಗಡೆ ತೊಡೆಯಲ್ಲಿ ಕಟ್ಟಿಕೊಂಡು,

[17] ಕಾಣಿಕೆಯನ್ನು ಮೋವಾಬಿನ ಅರಸನಾದ ಎಗ್ಲೋನನ ಬಳಿಗೆ ತಂದನು. ಎಗ್ಲೋನನು ಬಹು ದಪ್ಪ ಮನುಷ್ಯನಾಗಿದ್ದನು.

[18] ಏಹೂದನು ಕಾಣಿಕೆಯನ್ನು ಕೊಟ್ಟು ತೀರಿಸಿದಾಗ, ಕಾಣಿಕೆಯನ್ನು ಹೊತ್ತುಕೊಂಡು ಬಂದ ಜನರನ್ನು ಕಳುಹಿಸಿಬಿಟ್ಟು,

[19] ತಾನು ಗಿಲ್ಗಾಲಿನಲ್ಲಿರುವ ವಿಗ್ರಹಸ್ಥಳದಿಂದ ಹಿಂದಕ್ಕೆ ತಿರುಗಿ, ಅವನ ಬಳಿಗೆ ಬಂದು, “ಅರಸನೇ, ನಿನ್ನ ಸಂಗಡ ಹೇಳಬೇಕಾದ ರಹಸ್ಯವಾದ ಒಂದು ಮಾತು ಇದೆ,” ಎಂದನು. ಅವನು, “ನಿಶ್ಶಬ್ದ,” ಎಂದು ಹೇಳಿದಾಗ, ಅವನ ಬಳಿಯಲ್ಲಿ ನಿಂತಿದ್ದವರೆಲ್ಲರು ಅವನನ್ನು ಬಿಟ್ಟು ಹೊರಗೆ ಹೋದರು.

[20] ಅವನು ತನಗೋಸ್ಕರ ಮಾತ್ರ ಇದ್ದ ಬೇಸಿಗೆಯ ಕೊಠಡಿಯಲ್ಲಿ ಕುಳಿತಾಗ, ಏಹೂದನು ಅವನ ಬಳಿಗೆ ಪ್ರವೇಶಿಸಿ, “ನಿನ್ನ ಸಂಗಡ ಹೇಳಬೇಕಾದ ದೇವರ ಸಂದೇಶ ನನಗಿದೆ,” ಎಂದನು. ಅವನು ತನ್ನ ಸಿಂಹಾಸನದಿಂದ ಎದ್ದನು.

[21] ಏಹೂದನು ತನ್ನ ಎಡಗೈಯನ್ನು ಚಾಚಿ, ತನ್ನ ಬಲಗಡೆ ತೊಡೆಯಲ್ಲಿದ್ದ ಕಠಾರಿಯನ್ನು ತೆಗೆದುಕೊಂಡು, ಅವನ ಹೊಟ್ಟೆಯಲ್ಲಿ ತಿವಿದನು.

[22] ಅದು ಅಲಗಿನ ಸಂಗಡ ಹಿಡಿ ಸಮೇತ ಅವನ ಹೊಟ್ಟೆಯಲ್ಲಿ ಹೊಕ್ಕು, ಕಿತ್ತು ತೆಗೆಯಕೂಡದ ಹಾಗೆ ಕೊಬ್ಬು ಅಲಗನ್ನು ಸುತ್ತಿಕೊಂಡಿತು. ಅದರಿಂದ ಮಲವು ಹೊರಟಿತು.

[23] ಆಗ ಏಹೂದನು ಕೊಠಡಿಯ ಬಾಗಿಲನ್ನು ತನ್ನ ಹಿಂಭಾಗದಲ್ಲಿ ಮುಚ್ಚಿ, ಬೀಗವನ್ನು ಹಾಕಿ, ದ್ವಾರಾಂಗಳದಿಂದ ಹೊರಟುಹೋದನು.

[24] ಅವನು ಹೋದ ತರುವಾಯ, ಕೊಠಡಿಯ ಸೇವಕರು ಬಾಗಿಲು ಮುಚ್ಚಿರುವುದನ್ನು ಕಂಡು, “ಅರಸನು ನಿಶ್ಚಯವಾಗಿ ತನ್ನ ತಂಪಾದ ಕೋಣೆಯಲ್ಲಿ ವಿಸರ್ಜನೆಗಾಗಿ ಹೋಗಿರಬೇಕು,” ಎಂದುಕೊಂಡರು.

[25] ಅವರು ತಮಗೆ ಬೇಸರವಾಗುವ ಮಟ್ಟಿಗೂ ಕಾದಿದ್ದರು. ಆದರೆ, ಅವನು ಕೊಠಡಿ ಬಾಗಿಲನ್ನು ತೆರೆಯದೆ ಇದ್ದುದರಿಂದ, ಅವರು ಬೀಗದ ಕೈಯನ್ನು ತೆಗೆದುಕೊಂಡು ಬಾಗಿಲನ್ನು ತೆರೆದರು. ಅವರ ಪ್ರಭುವು ನೆಲದ ಮೇಲೆ ಮರಣಹೊಂದಿದ್ದನು.

[26] ಅವರು ಆಲಸ್ಯ ಮಾಡುತ್ತಿರುವಾಗ, ಏಹೂದನು ತಪ್ಪಿಸಿಕೊಂಡು ವಿಗ್ರಹಗಳನ್ನು ದಾಟಿ, ಸೇಯೀರಾತನ್ನು ಸೇರಿ ತಪ್ಪಿಸಿಕೊಂಡನು.

[27] ಅವನು ಅಲ್ಲಿ ಬಂದಾಗ, ಎಫ್ರಾಯೀಮನ ಬೆಟ್ಟದಲ್ಲಿ ತುತೂರಿಯನ್ನು ಊದಿದನು. ಆಗ ಇಸ್ರಾಯೇಲರು ಅವನ ಸಂಗಡ ಬೆಟ್ಟದಿಂದ ಇಳಿದರು. ಅವನು ಇವರ ಮುಂದೆ ನಡೆದರು.

[28] ಅವರಿಗೆ, “ನೀವು ನನ್ನ ಹಿಂದೆ ಬನ್ನಿರಿ. ಏಕೆಂದರೆ ಯೆಹೋವ ದೇವರು ನಿಮ್ಮ ಶತ್ರುಗಳಾದ ಮೋವಾಬ್ಯರನ್ನು ನಿಮ್ಮ ಕೈಯಲ್ಲಿ ಒಪ್ಪಿಸಿಕೊಟ್ಟರು,” ಎಂದನು. ಅವರು ಅವನ ಹಿಂದೆ ಬಂದು, ಮೋವಾಬ್ಯರಿಗೆ ಎದುರಾದ ಯೊರ್ದನ್ ನದಿ ರೇವುಗಳನ್ನು ಹಿಡಿದು, ಒಬ್ಬರನ್ನಾದರೂ ದಾಟಗೊಡದೆ,

[29] ಮೋವಾಬ್ಯರಲ್ಲಿ ಹೆಚ್ಚು ಕಡಿಮೆ ಹತ್ತು ಸಾವಿರ ಜನರನ್ನು ಹತಮಾಡಿದರು. ಅವರೆಲ್ಲರು ಪುಷ್ಟರೂ, ಪರಾಕ್ರಮಿಗಳೂ ಆಗಿದ್ದರು. ಅವರಲ್ಲಿ ಒಬ್ಬನಾದರೂ ತಪ್ಪಿಸಿಕೊಳ್ಳಲಾಗಲಿಲ್ಲ.

[30] ಹೀಗೆ ಆ ದಿವಸದಲ್ಲಿ ಮೋವಾಬ್ ಇಸ್ರಾಯೇಲರ ಆಳಿಕೆಗೆ ಅಧೀನವಾಗಿತ್ತು. ದೇಶವು ಎಂಬತ್ತು ವರ್ಷ ವಿಶ್ರಾಂತಿಗೊಂಡಿತು.

[31] ಏಹೂದನ ತರುವಾಯ ಅನಾತನ ಮಗ ಶಮ್ಗರನು ಎದ್ದನು. ಅವನು ಫಿಲಿಷ್ಟಿಯರಲ್ಲಿ ಆರುನೂರು ಜನರನ್ನು ಎತ್ತಿನ ಮುಳ್ಳುಗೋಲಿನಿಂದ ಹತಮಾಡಿದನು. ಅವನು ಸಹ ಇಸ್ರಾಯೇಲರನ್ನು ರಕ್ಷಿಸಿದನು.

ನ್ಯಾಯಸ್ಥಾಪಕರು — Chapters