Skip to content
Opens in a new window
Listen to this chapter • 3:12

[1] ಎಫ್ರಾಯೀಮ್ ಬೆಟ್ಟದ ಪ್ರಾಂತದಲ್ಲಿ ಮೀಕ ಎಂಬ ಹೆಸರುಳ್ಳ ಒಬ್ಬ ಮನುಷ್ಯನು ಇದ್ದನು.

[2] ಅವನು ತನ್ನ ತಾಯಿಗೆ, “ನಿನ್ನ ಬಳಿಯಿಂದ ಸಾವಿರದ ನೂರು ಬೆಳ್ಳಿ ನಾಣ್ಯಗಳು ಕಳುವಾದಾಗ, ನೀನು ಆ ಹಣವನ್ನು ಕುರಿತು ಶಪಿಸಿದೆಯಲ್ಲಾ? ಇಗೋ, ಆ ನಾಣ್ಯಗಳು ನನ್ನ ಬಳಿಯಲ್ಲಿ ಇವೆ. ನಾನೇ ಅದನ್ನು ತೆಗೆದುಕೊಂಡೆನು,” ಎಂದನು. ಅದಕ್ಕೆ ಅವನ ತಾಯಿ, “ನನ್ನ ಮಗನೇ, ಯೆಹೋವ ದೇವರು ನಿನ್ನನ್ನು ಆಶೀರ್ವದಿಸಲಿ,” ಎಂದಳು.

[3] ಅವನು ಆ ಸಾವಿರದ ನೂರು ಬೆಳ್ಳಿಯ ನಾಣ್ಯಗಳನ್ನು ತನ್ನ ತಾಯಿಗೆ ತಿರುಗಿ ಕೊಟ್ಟಾಗ, ಅವನ ತಾಯಿ, “ನನ್ನ ಮಗನ ನಿಮಿತ್ತ ಕೆತ್ತಿದ ವಿಗ್ರಹವನ್ನೂ, ಎರಕದ ವಿಗ್ರಹವನ್ನೂ ಮಾಡುವುದಕ್ಕೆ ನಾನು ನನ್ನ ಕೈಯಲ್ಲಿದ್ದ ಈ ಬೆಳ್ಳಿಯನ್ನು ಯೆಹೋವ ದೇವರಿಗೆ ಸಂಪೂರ್ಣವಾಗಿ ಪ್ರತಿಷ್ಠಿಸಿದ್ದೆನು; ಆದ್ದರಿಂದ ನಾನು ಅದನ್ನು ನಿನಗೆ ತಿರುಗಿ ಕೊಡುವೆನು,” ಎಂದಳು.

[4] ಆದರೆ ಅವನು ಆ ಹಣವನ್ನು ತನ್ನ ತಾಯಿಗೆ ತಿರುಗಿ ಕೊಟ್ಟನು. ಆಗ ಅವನ ತಾಯಿ ಇನ್ನೂರು ಬೆಳ್ಳಿಯ ನಾಣ್ಯಗಳನ್ನು ತೆಗೆದುಕೊಂಡು ಅಕ್ಕಸಾಲಿಗನ ಕೈಯಲ್ಲಿ ಕೊಟ್ಟಳು. ಅವನು ಅವುಗಳಿಂದ ಕೆತ್ತಿದ ವಿಗ್ರಹವನ್ನೂ, ಎರಕದ ವಿಗ್ರಹವನ್ನೂ ಮಾಡಿದನು. ಅವು ಮೀಕನ ಮನೆಯಲ್ಲಿದ್ದವು.

[5] ಈ ಮೀಕ ಎಂಬವನಿಗೆ ದೇವರ ಮನೆ ಇದ್ದುದರಿಂದ ಅವನು ಒಂದು ಏಫೋದನ್ನೂ, ಪ್ರತಿಮೆಗಳನ್ನೂ ಮಾಡಿ, ತನ್ನ ಪುತ್ರರಲ್ಲಿ ಒಬ್ಬನನ್ನು ಯಾಜಕ ಸೇವೆಗೆ ಪ್ರತಿಷ್ಠೆ ಮಾಡಿದನು.

[6] ಆ ದಿವಸಗಳಲ್ಲಿ ಇಸ್ರಾಯೇಲಿನಲ್ಲಿ ಅರಸನು ಇರಲಿಲ್ಲ. ಒಬ್ಬೊಬ್ಬನು ತನ್ನ ದೃಷ್ಟಿಗೆ ಸರಿಯಾಗಿ ತೋಚಿದ್ದನ್ನು ಮಾಡುತ್ತಿದ್ದನು.

[7] ಯೆಹೂದದ ಬೇತ್ಲೆಹೇಮಿನವನಾದ ಯೆಹೂದದ ಗೋತ್ರದ ಲೇವಿಯನಾದಂಥ ಒಬ್ಬ ಪ್ರಾಯದವನಿದ್ದನು. ಅವನು ಅಲ್ಲಿ ಪ್ರವಾಸಿಯಾಗಿದ್ದನು.

[8] ಆ ಮನುಷ್ಯನು ಸಿಕ್ಕುವ ಸ್ಥಳದಲ್ಲಿ ಪ್ರವಾಸಿಯಾಗುವುದಕ್ಕೆ ಯೆಹೂದದ ಬೇತ್ಲೆಹೇಮ್ ಪಟ್ಟಣವನ್ನು ಬಿಟ್ಟುಹೋದನು. ಪ್ರಯಾಣ ಮಾಡುವಾಗ ಎಫ್ರಾಯೀಮ್ ಬೆಟ್ಟದಲ್ಲಿರುವ ಮೀಕನ ಮನೆಯ ಬಳಿಗೆ ಬಂದನು.

[9] ಆಗ ಮೀಕನು ಅವನಿಗೆ, “ನೀನು ಎಲ್ಲಿಂದ ಬಂದೆ?” ಎಂದನು. ಅವನು ಮೀಕನಿಗೆ, “ನಾನು ಯೆಹೂದದ ಬೇತ್ಲೆಹೇಮಿನವನಾದ ಲೇವಿಯನು. ನನಗೆ ಸ್ಥಳ ಸಿಕ್ಕಲ್ಲಿ ಪ್ರವಾಸಿಯಾಗಬೇಕೆಂದು ಹೊರಟಿದ್ದೇನೆ,” ಎಂದನು.

[10] ಮೀಕನು ಅವನಿಗೆ, “ನೀನು ನನ್ನ ಬಳಿಯಲ್ಲಿ ವಾಸಮಾಡಿ ನನಗೆ ತಂದೆಯಾಗಿಯೂ, ಯಾಜಕನಾಗಿಯೂ ಇರು. ನಾನು ನಿನಗೆ ವರುಷಕ್ಕೆ ಹತ್ತು ಬೆಳ್ಳಿಯ ನಾಣ್ಯಗಳನ್ನೂ, ಒಂದು ದುಸ್ತು ವಸ್ತ್ರಗಳನ್ನೂ, ಆಹಾರವನ್ನೂ ಕೊಡುವೆನು,” ಎಂದನು. ಹಾಗೆಯೇ ಲೇವಿಯನು ಹೋದನು.

[11] ಲೇವಿಯು ಆ ಮನುಷ್ಯನ ಬಳಿಯಲ್ಲಿ ವಾಸವಾಗಿರುವುದಕ್ಕೆ ಸಮ್ಮತಿಸಿದನು. ಆ ಯೌವನಸ್ಥನು ಅವನಿಗೆ ಅವನ ಪುತ್ರರಲ್ಲಿ ಒಬ್ಬನ ಹಾಗೆ ಇದ್ದನು.

[12] ಮೀಕನು ಲೇವಿಯನನ್ನು ಪ್ರತಿಷ್ಠೆ ಮಾಡಿದನು. ಆ ಯೌವನಸ್ಥನು ಅವನಿಗೆ ಯಾಜಕನಾದನು. ಅವನು ಮೀಕನ ಮನೆಯಲ್ಲಿ ಇದ್ದನು.

[13] ಆಗ ಮೀಕನು, “ನನಗೆ ಒಬ್ಬ ಲೇವಿಯನು ಯಾಜಕನಾಗಿರುವುದರಿಂದ, ಯೆಹೋವ ದೇವರು ನನಗೆ ಒಳ್ಳೆಯದನ್ನು ಮಾಡುವರೆಂದು ಈಗ ತಿಳಿಯುತ್ತೇನೆ,” ಎಂದುಕೊಂಡನು.

ನ್ಯಾಯಸ್ಥಾಪಕರು — Chapters