[1] ಇಸ್ರಾಯೇಲರು ತಮ್ಮಲ್ಲಿ, “ಯಾವನೂ ತನ್ನ ಮಗಳನ್ನು ಬೆನ್ಯಾಮೀನ್ಯರಿಗೆ ಮದುವೆಮಾಡಿ ಕೊಡುವುದಿಲ್ಲ,” ಎಂದು ಮಿಚ್ಪೆಯಲ್ಲಿ ಆಣೆಯಿಟ್ಟಿದ್ದರು.
[2] ಆದ್ದರಿಂದ ಜನರು ಬೇತೇಲಿಗೆ ಬಂದು, ಅಲ್ಲಿ ದೇವರ ಮುಂದೆ ಸಾಯಂಕಾಲದವರೆಗೆ ಇದ್ದು, ತಮ್ಮ ಧ್ವನಿ ಎತ್ತಿ ಬಹಳವಾಗಿ ಅತ್ತು,
[3] “ಇಸ್ರಾಯೇಲಿನ ದೇವರಾದ ಯೆಹೋವ ದೇವರೇ, ಈ ಹೊತ್ತು ಇಸ್ರಾಯೇಲಿನಲ್ಲಿ ಒಂದು ಗೋತ್ರ ಕೊರತೆಯಾದದ್ದೇನು?” ಎಂದರು.
[4] ಜನರು ಮಾರನೆಯ ದಿವಸ ಉದಯದಲ್ಲಿ ಎದ್ದು, ಅಲ್ಲಿ ಬಲಿಪೀಠವನ್ನು ಕಟ್ಟಿ, ದಹನಬಲಿಗಳನ್ನೂ ಸಮಾಧಾನದ ಸಮರ್ಪಣೆಗಳನ್ನೂ ಅರ್ಪಿಸಿದರು.
[5] ಅನಂತರ ಅವರು, “ಇಸ್ರಾಯೇಲಿನ ಸಮಸ್ತ ಗೋತ್ರಗಳಲ್ಲಿ ಬಾರದವರು ಯಾರು?” ಎಂದರು. ಏಕೆಂದರೆ ಯೆಹೋವ ದೇವರ ಬಳಿಗೆ ಮಿಚ್ಪೆಗೆ ಬಾರದವನು ಖಂಡಿತವಾಗಿ ಸಾಯಬೇಕೆಂದು ದೊಡ್ಡ ಆಣೆ ಇಟ್ಟುಕೊಂಡಿದ್ದರು.
[6] ಆಗ ಇಸ್ರಾಯೇಲರು ತಮ್ಮ ಸಹೋದರರಾದ ಬೆನ್ಯಾಮೀನನ ವಿಷಯವಾಗಿ ಪಶ್ಚಾತ್ತಾಪಪಟ್ಟು, “ಈ ಹೊತ್ತು ಇಸ್ರಾಯೇಲಿನಲ್ಲಿ ಒಂದು ಗೋತ್ರವು ಕಡಿದು ಹೋಯಿತು.
[7] ನಾವು ನಮ್ಮ ಪುತ್ರಿಯರಲ್ಲಿ ಒಬ್ಬಳನ್ನಾದರೂ ಅವರಿಗೆ ಕೊಡುವುದಿಲ್ಲ, ಎಂದು ನಾವು ಯೆಹೋವ ದೇವರ ಮೇಲೆ ಆಣೆ ಇಟ್ಟುಕೊಂಡದ್ದರಿಂದ ಉಳಿದವರಿಗೆ ಹೆಂಡರು ದೊರಕುವಂತೆ ನಾವು ಅವರಿಗೋಸ್ಕರ ಏನು ಮಾಡೋಣ?
[8] ಇಸ್ರಾಯೇಲಿನ ಗೋತ್ರಗಳಲ್ಲಿ ಮಿಚ್ಪೆಗೆ ಯೆಹೋವ ದೇವರ ಬಳಿಗೆ ಬಾರದವರು ಯಾರಾದರೂ ಒಬ್ಬರಿದ್ದಾರೋ?” ಎಂದರು. ಆಗ, ಯಾಬೇಷ್ ಗಿಲ್ಯಾದಿನವರಲ್ಲಿ ಒಬ್ಬನಾದರೂ ಸಭೆಯ ಬಳಿಗೆ ಪಾಳೆಯಕ್ಕೆ ಬಂದಿರಲಿಲ್ಲ.
[9] ಜನರು ಲೆಕ್ಕಿಸಿದಾಗ, ಯಾಬೇಷ್ ಗಿಲ್ಯಾದಿನವರಲ್ಲಿ ಒಬ್ಬನಾದರೂ ಇರಲಿಲ್ಲ.
[10] ಆಗ ಸಭೆಯು ಪರಾಕ್ರಮಶಾಲಿಗಳಲ್ಲಿ ಹನ್ನೆರಡು ಸಾವಿರ ಮನುಷ್ಯರನ್ನು ಅಲ್ಲಿಗೆ ಕಳುಹಿಸುವಾಗ, ಅವರಿಗೆ, “ನೀವು ಹೋಗಿ, ಯಾಬೇಷ್ ಗಿಲ್ಯಾದಿನ ನಿವಾಸಿಗಳನ್ನೂ ಸ್ತ್ರೀಯರನ್ನೂ ಚಿಕ್ಕವರನ್ನೂ ಕೂಡ, ಖಡ್ಗದಿಂದ ಸಂಹರಿಸಿಬಿಡಿರಿ.
[11] ಎಲ್ಲಾ ಗಂಡಸರನ್ನೂ ಮದುವೆಯಾದ ಸ್ತ್ರೀಯರನ್ನೂ ನಿರ್ಮೂಲ ಮಾಡಿರಿ,” ಎಂದು ಆಜ್ಞಾಪಿಸಿದರು.
[12] ಹಾಗೆಯೇ ಯಾಬೇಷ್ ಗಿಲ್ಯಾದಿನ ನಿವಾಸಿಗಳಲ್ಲಿ ನಾನೂರು ಮಂದಿ ಪ್ರಾಯದ ಕನ್ನಿಕೆಯರನ್ನು ಕಂಡರು. ಅವರು ಯಾವುದೇ ಪುರುಷರೊಂದಿಗೆ ಸಂಬಂಧ ಹೊಂದಿರಲಿಲ್ಲ. ಅವರನ್ನು ಕಾನಾನ್ ದೇಶದಲ್ಲಿರುವ ಶೀಲೋವಿನಲ್ಲಿದ್ದ ಪಾಳೆಯಕ್ಕೆ ತಂದರು.
[13] ಆಗ ಸಭೆಯವರೆಲ್ಲರೂ ರಿಮ್ಮೋನ್ ಗುಡ್ಡದಲ್ಲಿರುವ ಬೆನ್ಯಾಮೀನ್ಯರ ಸಂಗಡ ಮಾತನಾಡಿ, ಅವರಿಗೆ ಸಮಾಧಾನವನ್ನು ಸಾರಲು ಕೆಲವರನ್ನು ಕಳುಹಿಸಿದರು.
[14] ಆ ಕಾಲದಲ್ಲಿ ಬೆನ್ಯಾಮೀನ್ಯರು ತಿರುಗಿ ಅವರ ಬಳಿಗೆ ಬಂದರು. ಅವರು ಯಾಬೇಷ್ ಗಿಲ್ಯಾದಿನ ಸ್ತ್ರೀಯರಲ್ಲಿ ಜೀವದಿಂದ ಉಳಿಸಿದ ಕನ್ನಿಕೆಯರನ್ನು ಅವರಿಗೆ ಹೆಂಡತಿಯರಾಗಿ ಕೊಟ್ಟರು. ಆದರೂ ಅವರಿಗೆ ತಕ್ಕಷ್ಟು ಹೆಂಡತಿಯರು ಸಿಕ್ಕಲಿಲ್ಲ.
[15] ಯೆಹೋವ ದೇವರು ಇಸ್ರಾಯೇಲ್ ಗೋತ್ರಗಳಲ್ಲಿ ಬೆನ್ಯಾಮೀನರನ್ನು ಬೇರ್ಪಡಿಸಿದ್ದರಿಂದ ಜನರು ಬೆನ್ಯಾಮೀನರಿಗಾಗಿ ಪಶ್ಚಾತ್ತಾಪ ಪಟ್ಟರು.
[16] ಸಮೂಹದ ಹಿರಿಯರು, “ಬೆನ್ಯಾಮೀನನ ಗೋತ್ರದ ಸ್ತ್ರೀಯರು ನಾಶವಾದದ್ದರಿಂದ ಉಳಿದ ಜನರಿಗೆ ಹೆಂಡತಿಯರು ದೊರಕುವುದಕ್ಕಾಗಿ ಏನು ಮಾಡೋಣ?
[17] ಇಸ್ರಾಯೇಲಿನಲ್ಲಿ ಒಂದು ಗೋತ್ರವು ಅಳಿದು ಹೋಗದ ಹಾಗೆ ತಪ್ಪಿಸಿಕೊಂಡ ಬೆನ್ಯಾಮೀನ್ಯರಿಗೆ ಬಾಧ್ಯತೆ ಇರಬೇಕು.
[18] ‘ಬೆನ್ಯಾಮೀನ್ಯರಿಗೆ ತಮ್ಮ ಹೆಣ್ಣು ಕೊಡುವ ಇಸ್ರಾಯೇಲ್ಯರು ಶಾಪಗ್ರಸ್ತರಾಗಲಿ,’ ಎಂದು ಆಣೆ ಇಟ್ಟುಕೊಂಡಿದ್ದರಿಂದ, ನಾವಾದರೋ ನಮ್ಮ ಪುತ್ರಿಯರಲ್ಲಿ ಅವರಿಗೆ ಹೆಣ್ಣು ಕೊಡಕೂಡದು,” ಎಂದರು.
[19] ಅವರು ಬೇತೇಲಿಗೆ ಉತ್ತರದಲ್ಲಿಯೂ, ಬೇತೇಲಿನಿಂದ ಶೆಕೆಮಿಗೆ ಹೋಗುವ ಹೆದ್ದಾರಿಯ ಮೂಡಲಲ್ಲಿಯೂ ಲೆಬೋನಕ್ಕೆ ದಕ್ಷಿಣದಲ್ಲಿರುವ ಶೀಲೋವಿನಲ್ಲಿ ಪ್ರತಿವರ್ಷ ಯೆಹೋವ ದೇವರ ಹಬ್ಬವುಂಟೆಂದು ಹೇಳಿದರು.
[20] ಅವರು ಬೆನ್ಯಾಮೀನ್ಯರಿಗೆ, “ನೀವು ಹೋಗಿ ದ್ರಾಕ್ಷಿತೋಟಗಳಲ್ಲಿ ಅಡಗಿಕೊಳ್ಳಿರಿ.
[21] ಶೀಲೋವಿನ ಪುತ್ರಿಯರು ನಾಟ್ಯವಾಡುತ್ತಾ ಹೊರಟು ಬರುವರು. ನೀವು ಅವರನ್ನು ಕಂಡಾಗ, ದ್ರಾಕ್ಷಿ ತೋಟಗಳಿಂದ ಹೊರಟು, ಶೀಲೋವಿನ ಪುತ್ರಿಯರಲ್ಲಿ ನಿಮ್ಮಲ್ಲಿ ಅವನವನು ತನಗೆ ಹೆಂಡತಿಯಾಗಿ ಒಬ್ಬೊಬ್ಬಳನ್ನು ಹಿಡಿದುಕೊಂಡು, ಬೆನ್ಯಾಮೀನನ ದೇಶಕ್ಕೆ ಹೋಗಿರಿ,” ಎಂದು ಆಜ್ಞಾಪಿಸಿದರು.
[22] ಅವರ ತಂದೆಗಳಾದರೂ, ಅವರ ಸಹೋದರರಾದರೂ ನಮ್ಮ ಸಂಗಡ ವ್ಯಾಜ್ಯವಾಡುವುದಕ್ಕೆ ಬಂದರೆ, ನಾವು ಅವರಿಗೆ, “ಯುದ್ಧದಲ್ಲಿ ನಾವು ಅವನವನಿಗೆ ಹೆಂಡತಿಯನ್ನು ದೊರಕಿಸಿದ ಕಾರಣ, ನಮಗೋಸ್ಕರ ಅವರ ಮೇಲೆ ದಯೆ ತೋರಿಸಿರಿ. ಏಕೆಂದರೆ ನೀವು ಈ ಸಮಯದಲ್ಲಿ ಅವರಿಗೆ ಕೊಟ್ಟು ಅಪರಾಧಸ್ಥರಾಗಲಿಲ್ಲ ಎಂಬದಾಗಿ ಹೇಳುತ್ತೇವೆ,” ಎಂದರು.
[23] ಆಗ ಬೆನ್ಯಾಮೀನ್ಯರು ಅದೇ ಪ್ರಕಾರಮಾಡಿ, ನಾಟ್ಯವಾಡುವ ಹೆಣ್ಣುಗಳಲ್ಲಿ ತಮ್ಮ ಲೆಕ್ಕಕ್ಕೆ ಸರಿಯಾಗಿ ಹಿಡಿದುಕೊಂಡವರನ್ನು ಅವನವನು ತನಗೆ ಹೆಂಡತಿಯಾಗಿ ತೆಗೆದುಕೊಂಡು, ತಮ್ಮ ಬಾಧ್ಯತೆಗೆ ತಿರುಗಿಕೊಂಡು ಹೋಗಿ, ಪಟ್ಟಣಗಳನ್ನು ಕಟ್ಟಿ, ಅವುಗಳಲ್ಲಿ ವಾಸಿಸಿದರು.
[24] ಇಸ್ರಾಯೇಲರು ಆ ಕಾಲದಲ್ಲಿ ಆ ಸ್ಥಳವನ್ನು ಬಿಟ್ಟು, ತಮ್ಮ ತಮ್ಮ ಗೋತ್ರಕ್ಕೂ, ತಮ್ಮ ತಮ್ಮ ಕುಟುಂಬಕ್ಕೂ ಹೋದರು. ಅಲ್ಲಿಂದ ಒಬ್ಬೊಬ್ಬನು ತನ್ನ ಬಾಧ್ಯತೆಗೆ ಹೊರಟುಹೋದನು.
[25] ಆ ದಿವಸಗಳಲ್ಲಿ ಇಸ್ರಾಯೇಲಿನಲ್ಲಿ ಅರಸನು ಇರಲಿಲ್ಲ. ಒಬ್ಬೊಬ್ಬನು ತನ್ನ ದೃಷ್ಟಿಗೆ ಸರಿಯಾಗಿ ತೋಚಿದ್ದನ್ನು ಮಾಡುತ್ತಿದ್ದನು.