Skip to content
Opens in a new window
Listen to this chapter • 4:54

[1] ಯೆಹೋವ ದೇವರ ದೂತನು ಗಿಲ್ಗಾಲಿನಿಂದ ಬೋಕೀಮಿಗೆ ಬಂದು, “ನಾನು ನಿಮ್ಮನ್ನು ಈಜಿಪ್ಟಿನಿಂದ ಬರಮಾಡಿ, ನಿಮ್ಮ ತಂದೆಗಳಿಗೆ ಆಣೆ ಇಟ್ಟ ದೇಶದಲ್ಲಿ ನಿಮ್ಮನ್ನು ಸೇರಿಸಿದೆನು. ನಾನು ನಿಮ್ಮ ಸಂಗಡ ಮಾಡಿದ ನನ್ನ ಒಡಂಬಡಿಕೆಯನ್ನು ಎಂದಿಗೂ ನಿರರ್ಥಕ ಮಾಡೆನು.

[2] ‘ನೀವು ಈ ದೇಶದ ನಿವಾಸಿಗಳ ಸಂಗಡ ಒಡಂಬಡಿಕೆ ಮಾಡದೆ, ಅವರ ಬಲಿಪೀಠಗಳನ್ನು ಕೆಡಿವಿಬಿಡಿರಿ,’ ಎಂದು ಹೇಳಿದೆನು. ಆದರೆ ನೀವು ನನ್ನ ಮಾತನ್ನು ಕೇಳಲಿಲ್ಲ. ಹೀಗೆ ಏಕೆ ಮಾಡಿದಿರಿ?

[3] ಆದ್ದರಿಂದ, ‘ನಾನು ಸಹ ಅವರನ್ನು ನಿಮ್ಮ ಎದುರಿನಿಂದ ಓಡಿಸಿಬಿಡುವುದಿಲ್ಲ. ಅವರು ನಿಮ್ಮ ಪಕ್ಕದಲ್ಲಿ ಮುಳ್ಳುಗಳಂತಿರುವರು. ಅವರ ದೇವರುಗಳು ನಿಮಗೆ ಉರುಲಾಗುವುವು,’ ಎಂದು ನಾನು ಹೇಳಿದ್ದೆನು.”

[4] ಯೆಹೋವ ದೇವರ ದೂತನು ಈ ಮಾತುಗಳನ್ನು ಇಸ್ರಾಯೇಲರೆಲ್ಲರಿಗೆ ಹೇಳುವಾಗ, ಜನರು ಗಟ್ಟಿಯಾಗಿ ಅತ್ತರು.

[5] ಆ ಸ್ಥಳಕ್ಕೆ ಬೋಕೀಮ್ ಎಂಬ ಹೆಸರಿಟ್ಟು, ಅಲ್ಲಿ ಯೆಹೋವ ದೇವರಿಗೆ ಬಲಿಯನ್ನು ಅರ್ಪಿಸಿದರು.

[6] ಯೆಹೋಶುವನು ಜನರನ್ನು ಕಳುಹಿಸಿಬಿಟ್ಟಾಗ, ಇಸ್ರಾಯೇಲರು ದೇಶವನ್ನು ಸ್ವಾಧೀನಮಾಡಿಕೊಳ್ಳುವುದಕ್ಕೆ ತಮ್ಮ ತಮ್ಮ ಬಾಧ್ಯತೆಗಳಿಗೆ ಹೋದರು.

[7] ಆದರೆ ಯೆಹೋಶುವನ ಎಲ್ಲಾ ದಿನಗಳಲ್ಲಿಯೂ ಅವನ ಕಾಲದಿಂದ ಇನ್ನೂ ಜೀವಿಸುತ್ತಾ ಯೆಹೋವ ದೇವರು ಇಸ್ರಾಯೇಲರಿಗೋಸ್ಕರ ಮಾಡಿದ ಎಲ್ಲ ಮಹತ್ಕಾರ್ಯಗಳನ್ನು ಅರಿತಿದ್ದ ಹಿರಿಯರ ದಿನಗಳಲ್ಲಿಯೂ ಇಸ್ರಾಯೇಲರು ಯೆಹೋವ ದೇವರನ್ನು ಸೇವಿಸಿದರು.

[8] ಆದರೆ ನೂನನ ಮಗನೆಂಬ ಯೆಹೋವ ದೇವರ ಸೇವಕನಾದ ಯೆಹೋಶುವನು ನೂರಹತ್ತು ವರ್ಷ ಪ್ರಾಯದವನಾಗಿ ಮರಣಹೊಂದಿದನು.

[9] ಅವನನ್ನು ಎಫ್ರಾಯೀಮನ ಬೆಟ್ಟದಲ್ಲಿ ಗಾಷ್ ಪರ್ವತದ ಉತ್ತರ ದಿಕ್ಕಿನಲ್ಲಿರುವ ಅವನ ಬಾಧ್ಯತೆಯ ಮೇರೆಯಾದ ತಿಮ್ನತ್ ಹೆರೆಸ್‌ನಲ್ಲಿ ಹೂಳಿಟ್ಟರು.

[10] ಅವನ ಕಾಲದವರೆಲ್ಲರೂ ಪಿತೃಗಳ ಬಳಿಗೆ ಸೇರಿದ ಮೇಲೆ, ಯೆಹೋವ ದೇವರನ್ನೂ ಅವರು ಇಸ್ರಾಯೇಲರಿಗೋಸ್ಕರ ಮಾಡಿದ ಮಹತ್ಕಾರ್ಯಗಳನ್ನೂ ಅರಿಯದಿದ್ದ ಬೇರೊಂದು ಸಂತಾನವು ಹುಟ್ಟಿತು.

[11] ಇಸ್ರಾಯೇಲರು ಯೆಹೋವ ದೇವರ ಮುಂದೆ ಕೆಟ್ಟತನ ಮಾಡಿ, ಬಾಳನನ್ನು ಸೇವಿಸಿ,

[12] ತಮ್ಮ ತಂದೆಗಳನ್ನು ಈಜಿಪ್ಟಿನಿಂದ ಹೊರಡಿಸಿದ ತಮ್ಮ ದೇವರಾದ ಯೆಹೋವ ದೇವರನ್ನು ಬಿಟ್ಟು, ತಮ್ಮ ಸುತ್ತಲಿರುವ ಜನಾಂಗಗಳ ದೇವರುಗಳ ಹಿಂದೆ ಹೋಗಿ, ಅವುಗಳಿಗೆ ಅಡ್ಡಬಿದ್ದು, ಯೆಹೋವ ದೇವರಿಗೆ ಕೋಪವನ್ನೆಬ್ಬಿಸಿದರು.

[13] ಅವರು ಯೆಹೋವ ದೇವರನ್ನು ಬಿಟ್ಟು, ಬಾಳನನ್ನೂ ಅಷ್ಟೋರೆತನ್ನೂ ಸೇವಿಸಿದರು.

[14] ಆದ್ದರಿಂದ ಯೆಹೋವ ದೇವರು ಇಸ್ರಾಯೇಲಿಗೆ ವಿರೋಧವಾಗಿ ಉರಿಗೊಂಡು, ಅವರನ್ನು ಕೊಳ್ಳೆಗಾರರ ಕೈಯಲ್ಲಿ ಒಪ್ಪಿಸಿಕೊಟ್ಟರು. ಅವರು ಇನ್ನು ಮೇಲೆ ತಮ್ಮ ಶತ್ರುಗಳಿಗೆ ಎದುರಾಗಿ ನಿಲ್ಲದ ಹಾಗೆ, ಅವರ ಸುತ್ತಲಿರುವ ಅವರ ಶತ್ರುಗಳ ಕೈಗೆ ಅವರನ್ನು ಮಾರಿಬಿಟ್ಟರು.

[15] ಯೆಹೋವ ದೇವರು ಹೇಳಿದ ಹಾಗೆಯೂ ಕರ್ತನು ಅವರಿಗೆ ಆಣೆಯಿಟ್ಟ ಹಾಗೆಯೂ ಅವರು ಎಲ್ಲಿ ಹೋದರೂ ಅಲ್ಲಿ ಕೇಡು ಆಗುವುದಕ್ಕೆ ಯೆಹೋವ ದೇವರ ಕೈ ಅವರಿಗೆ ವಿರೋಧವಾಗಿತ್ತು.

[16] ಆದರೂ ಯೆಹೋವ ದೇವರು ಅವರನ್ನು ಕೊಳ್ಳೆಹೊಡೆಯುವವರ ಕೈಯಿಂದ ಬಿಡಿಸುವದಕ್ಕೋಸ್ಕರ ನ್ಯಾಯಾಧಿಪತಿಗಳನ್ನು ಎಬ್ಬಿಸಿದರು.

[17] ಅವರು ತಮ್ಮ ನ್ಯಾಯಾಧಿಪತಿಗಳ ಮಾತನ್ನು ಕೇಳದೆ, ಅನ್ಯದೇವರುಗಳ ಹಿಂದೆ ಹೋಗಿ, ಅವುಗಳಿಗೆ ಅಡ್ಡಬಿದ್ದು, ತಮ್ಮ ಪಿತೃಗಳು ಯೆಹೋವ ದೇವರ ಆಜ್ಞೆಗಳನ್ನು ಕೇಳಿ ನಡೆದ ಮಾರ್ಗವನ್ನು ಶೀಘ್ರವಾಗಿ ತೊರೆದುಬಿಟ್ಟರು. ಅವರು ಮಾಡಿದ ಪ್ರಕಾರ ಮಾಡಲಿಲ್ಲ.

[18] ಯೆಹೋವ ದೇವರು ಅವರಿಗೆ ನ್ಯಾಯಾಧಿಪತಿಗಳನ್ನು ಎಬ್ಬಿಸಿದಾಗ, ಯೆಹೋವ ದೇವರು ನ್ಯಾಯಾಧಿಪತಿಯ ಸಂಗಡ ಇದ್ದು, ಆ ನ್ಯಾಯಾಧಿಪತಿಯ ದಿವಸಗಳಲ್ಲೆಲ್ಲಾ ಅವರನ್ನು ಅವರ ಶತ್ರುಗಳ ಕೈಯಿಂದ ತಪ್ಪಿಸಿ ರಕ್ಷಿಸುತ್ತಿದ್ದರು. ಏಕೆಂದರೆ ಅವರು ತಮ್ಮನ್ನು ಬಾಧಿಸಿ, ಶ್ರಮೆಪಡಿಸುವವರ ನಿಮಿತ್ತ ಗೋಳಾಡಿದ್ದರಿಂದ ಯೆಹೋವ ದೇವರು ಕನಿಕರಪಟ್ಟರು.

[19] ಆ ನ್ಯಾಯಾಧಿಪತಿಯ ಮರಣದ ನಂತರ, ಅವರು ತಿರುಗಿ ಮಾರ್ಗತಪ್ಪಿ, ಅನ್ಯದೇವರುಗಳನ್ನು ಹಿಂಬಾಲಿಸಿ ಹೋಗಿ, ಅವುಗಳನ್ನು ಸೇವಿಸಿ, ಅವುಗಳಿಗೆ ಅಡ್ಡಬಿದ್ದು, ತಮ್ಮ ಹಿರಿಯರಿಗಿಂತ ಅಧಿಕ ಭ್ರಷ್ಟರಾದರು. ಅವರು ತಮ್ಮ ದುರ್ಮಾರ್ಗಗಳನ್ನೂ ಹಟಮಾರಿತನವನ್ನೂ ಬಿಡಲೇ ಇಲ್ಲ.

[20] ಆದ್ದರಿಂದ ಯೆಹೋವ ದೇವರು ಇಸ್ರಾಯೇಲರ ಮೇಲೆ ಕೋಪದಿಂದ ಉರಿಗೊಂಡು, “ಈ ಜನಾಂಗವು ನಾನು ಅವರ ಪಿತೃಗಳಿಗೆ ಆಜ್ಞಾಪಿಸಿದ ನನ್ನ ಒಡಂಬಡಿಕೆಯನ್ನು ಮೀರಿ, ನನ್ನ ಮಾತನ್ನು ಕೇಳದೆ ಹೋದದ್ದರಿಂದ,

[21] ನಾನು ಸಹ ಇನ್ನು ಮೇಲೆ ಯೆಹೋಶುವನು ಮರಣಹೊಂದುವಾಗ ಉಳಿಸಿದ ಜನಾಂಗಗಳಲ್ಲಿ ಒಬ್ಬರನ್ನಾದರೂ ಇವರ ಮುಂದೆ ಹೊರಡಿಸಿಬಿಡುವುದಿಲ್ಲ,” ಎಂದರು.

[22] ಇಸ್ರಾಯೇಲರು ತಮ್ಮ ತಂದೆಗಳು ಕೈಗೊಂಡು ನಡೆದ ಯೆಹೋವ ದೇವರ ಮಾರ್ಗದಲ್ಲಿ ತಾವು ಕೈಗೊಂಡು ನಡೆಯುವರೋ ಇಲ್ಲವೋ ಎಂದು ಪರೀಕ್ಷಿಸುವ ಹಾಗೆ,

[23] ಯೆಹೋವ ದೇವರು ಆ ಜನಾಂಗಗಳನ್ನು ಯೆಹೋಶುವನ ಕೈಯಲ್ಲಿ ಒಪ್ಪಿಸಿಕೊಡದೆ, ಅವುಗಳನ್ನು ಶೀಘ್ರವಾಗಿ ಓಡಿಸಿಬಿಡದೆ ಉಳಿಸಿದರು.

ನ್ಯಾಯಸ್ಥಾಪಕರು — Chapters