Skip to content
Opens in a new window
Listen to this chapter • 9:10

[1] ಗಿಲ್ಯಾದ್ಯನಾದ ಯೆಫ್ತಾಹನು ಬಲಿಷ್ಠನಾದ ಪರಾಕ್ರಮಶಾಲಿಯಾಗಿದ್ದನು. ಅವನು ಒಬ್ಬ ವೇಶ್ಯೆಯಲ್ಲಿ ಹುಟ್ಟಿದ ಗಿಲ್ಯಾದನ ಮಗನು.

[2] ಇದಲ್ಲದೆ ಗಿಲ್ಯಾದನ ಹೆಂಡತಿ ಅವನಿಗೆ ಪುತ್ರರನ್ನು ಪಡೆದಳು. ಅವನ ಹೆಂಡತಿಯ ಮಕ್ಕಳು ದೊಡ್ಡವರಾದಾಗ ಅವರು ಯೆಫ್ತಾಹನಿಗೆ, “ನೀನು ನಮ್ಮ ತಂದೆಯ ಮನೆಯ ಬಾಧ್ಯಸ್ಥನಲ್ಲ. ಏಕೆಂದರೆ ನೀನು ಪರಸ್ತ್ರೀಯ ಮಗನು,” ಎಂದು ಹೇಳಿ ಅವನನ್ನು ಹೊರಗೆ ಹಾಕಿದರು.

[3] ಆಗ ಯೆಫ್ತಾಹನು ತನ್ನ ಸಹೋದರರ ಬಳಿಯಿಂದ ಓಡಿಹೋಗಿ, ಟೋಬ್ ದೇಶದಲ್ಲಿ ವಾಸವಾಗಿದ್ದನು. ಆ ಸ್ಥಳದ ಪುಂಡಪೋಕರಿಗಳು ಯೆಫ್ತಾಹನ ಬಳಿಗೆ ಕೂಡಿಕೊಂಡು ಅವನನ್ನು ಹಿಂಬಾಲಿಸುತ್ತಿದ್ದರು.

[4] ಕೆಲವು ದಿವಸಗಳಾದ ಮೇಲೆ ಅಮ್ಮೋನಿಯರು ಇಸ್ರಾಯೇಲಿನ ಮೇಲೆ ಯುದ್ಧಮಾಡಿದರು.

[5] ಆದರೆ ಅಮ್ಮೋನಿಯರು ಇಸ್ರಾಯೇಲಿನ ಮೇಲೆ ಯುದ್ಧಮಾಡುವಾಗ, ಗಿಲ್ಯಾದಿನ ಹಿರಿಯರು ಯೆಫ್ತಾಹನನ್ನು ಟೋಬ್ ದೇಶದಿಂದ ಕರೆದುಕೊಂಡು ಬರಲು ಹೋಗಿ,

[6] ಯೆಫ್ತಾಹನಿಗೆ, “ನಾವು ಅಮ್ಮೋನಿಯರ ಸಂಗಡ ಯುದ್ಧಮಾಡುವಂತೆ, ನೀನು ಬಂದು ನಮ್ಮ ಸೈನ್ಯಾಧಿಪತಿಯಾಗಿರು,” ಎಂದರು.

[7] ಆಗ ಯೆಫ್ತಾಹನು ಗಿಲ್ಯಾದಿನ ಹಿರಿಯರಿಗೆ, “ನೀವಲ್ಲವೇ ನನ್ನನ್ನು ಹಗೆಮಾಡಿ, ನನ್ನ ತಂದೆಯ ಮನೆಯಿಂದ ಹೊರಡಿಸಿದವರು? ಈಗ ನಿಮಗೆ ಇಕ್ಕಟ್ಟು ಬಂದಿರುವಾಗ ನನ್ನ ಬಳಿಗೆ ಏಕೆ ಬಂದಿರಿ?” ಎಂದನು.

[8] ಗಿಲ್ಯಾದಿನ ಹಿರಿಯರು ಯೆಫ್ತಾಹನಿಗೆ, “ನೀನು ನಮ್ಮೊಂದಿಗೆ ಬಂದು ಅಮ್ಮೋನ್ಯರಿಗೆ ವಿರೋಧವಾಗಿ ಯುದ್ಧಮಾಡಿ, ಗಿಲ್ಯಾದಿನ ನಿವಾಸಿಗಳಾದ ನಮ್ಮೆಲ್ಲರಿಗೆ ನೀನು ತಲೆಯಾಗಿರುವ ಹಾಗೆ, ಈಗ ನಿನ್ನ ಬಳಿಗೆ ತಿರುಗಿ ಬಂದೆವು,” ಎಂದರು.

[9] ಆಗ ಯೆಫ್ತಾಹನು ಗಿಲ್ಯಾದಿನ ಹಿರಿಯರಿಗೆ, “ಅಮ್ಮೋನಿಯರಿಗೆ ವಿರೋಧವಾಗಿ ಯುದ್ಧಮಾಡುವುದಕ್ಕೆ ನೀವು ತಿರುಗಿ ನನ್ನನ್ನು ಮನೆಗೆ ಕರೆತಂದರೆ ಮತ್ತು ಯೆಹೋವ ದೇವರು ಅವರನ್ನು ನನ್ನ ಮುಂದೆ ಒಪ್ಪಿಸಿಕೊಟ್ಟರೆ, ನಾನು ನಿಮಗೆ ತಲೆಯಾಗಿರುವೆನೋ?” ಎಂದನು.

[10] ಗಿಲ್ಯಾದಿನ ಹಿರಿಯರು ಯೆಫ್ತಾಹನಿಗೆ, “ನಾವು ಈ ನಿನ್ನ ಮಾತಿನ ಹಾಗೆ ಮಾಡದೆ ಹೋದರೆ, ಯೆಹೋವ ದೇವರು ನಮ್ಮ ಮತ್ತು ನಿನ್ನ ಮಧ್ಯದಲ್ಲಿ ಸಾಕ್ಷಿಯಾಗಿರಲಿ,” ಎಂದರು.

[11] ಹಾಗೆಯೇ ಯೆಫ್ತಾಹನು ಗಿಲ್ಯಾದಿನ ಹಿರಿಯರ ಸಂಗಡ ಹೋದನು. ಆಗ ಜನರು ಅವನನ್ನು ತಮ್ಮ ಮೇಲೆ ನಾಯಕನನ್ನಾಗಿಯೂ, ಸೈನ್ಯಾಧಿಪತಿಯಾಗಿಯೂ ಇಟ್ಟುಕೊಂಡರು. ಯೆಫ್ತಾಹನು ತನ್ನ ಮಾತುಗಳನ್ನೆಲ್ಲಾ ಮಿಚ್ಪೆಯಲ್ಲಿ ಯೆಹೋವ ದೇವರ ಮುಂದೆ ಹೇಳಿದನು.

[12] ಯೆಫ್ತಾಹನು ಅಮ್ಮೋನಿಯರ ಅರಸನ ಬಳಿಗೆ ದೂತರನ್ನು ಕಳುಹಿಸಿ, “ನೀನು ನನಗೆ ವಿರೋಧವಾಗಿ ನನ್ನ ಸಂಗಡ ಯುದ್ಧಮಾಡುವುದಕ್ಕೆ ನನ್ನ ದೇಶದಲ್ಲಿ ಬರುವ ಕಾರಣವೇನು?” ಎಂದು ಹೇಳಿ ಕಳುಹಿಸಿದನು.

[13] ಅಮ್ಮೋನಿಯ ಅರಸನು ಯೆಫ್ತಾಹನ ದೂತರಿಗೆ, “ಇಸ್ರಾಯೇಲರು ಈಜಿಪ್ಟಿನಿಂದ ಬರುವಾಗ, ಅರ್ನೋನಿನಿಂದ ಯಬ್ಬೋಕಿನವರೆಗೂ ಮತ್ತು ಯೊರ್ದನಿನವರೆಗೂ ಇರುವ ನನ್ನ ದೇಶವನ್ನು ತೆಗೆದುಕೊಂಡರು. ಆದ್ದರಿಂದ ಈಗ ಅದನ್ನು ನನಗೆ ಸಮಾಧಾನವಾಗಿ ತಿರುಗಿಕೊಡು,” ಎಂದನು.

[14] ಆದರೆ ಯೆಫ್ತಾಹನು ತಿರುಗಿ ಅಮ್ಮೋನಿಯರ ಅರಸನ ಬಳಿಗೆ ದೂತರನ್ನು ಕಳುಹಿಸಿ,

[15] ಅವರಿಗೆ ಯೆಫ್ತಾಹನು ಹೇಳುವ ಮಾತೇನೆಂದರೆ: “ಇದೇ ಇಸ್ರಾಯೇಲರು ಮೋವಾಬಿನ ದೇಶವನ್ನಾದರೂ, ಅಮ್ಮೋನಿಯರ ದೇಶವನ್ನಾದರೂ ತೆಗೆದುಕೊಂಡಿಲ್ಲ.

[16] ಆದರೆ ಇಸ್ರಾಯೇಲು ಈಜಿಪ್ಟಿನಿಂದ ಬರುವಾಗ, ಮರುಭೂಮಿಯಲ್ಲಿ ಕೆಂಪು ಸಮುದ್ರದವರೆಗೆ ನಡೆದು ಕಾದೇಶಿಗೆ ಬಂದು,

[17] ಎದೋಮಿನ ಅರಸನ ಬಳಿಗೆ ದೂತರನ್ನು ಕಳುಹಿಸಿ, ‘ನಾನು ನಿನ್ನ ದೇಶವನ್ನು ಹಾದು ಹೋಗಲು ಅಪ್ಪಣೆ ಆಗಬೇಕು,’ ಎಂದು ಹೇಳಿದರು. ಆದರೆ ಎದೋಮಿನ ಅರಸನು ಕೇಳದೆ ಹೋದನು. ಅವರು ಮೋವಾಬಿನ ಅರಸನ ಬಳಿಗೂ ಹಾಗೆಯೇ ಕಳುಹಿಸಿದರು; ಅವನೂ ಒಪ್ಪದೆ ಹೋದನು. ಆದ್ದರಿಂದ ಇಸ್ರಾಯೇಲರು ಕಾದೇಶಿನಲ್ಲಿ ವಾಸಮಾಡಿದರು.

[18] “ಮರುಭೂಮಿಯಲ್ಲಿ ನಡೆದು, ಎದೋಮ್ ದೇಶವನ್ನೂ, ಮೋವಾಬ್ ದೇಶವನ್ನೂ ಸುತ್ತಿಕೊಂಡು ಹೋಗಿ, ಮೋವಾಬ್ ದೇಶದ ಪೂರ್ವದಿಕ್ಕಿಗೆ ಬಂದು, ಮೋವಾಬಿನ ಮೇರೆಯೊಳಗೆ ಪ್ರವೇಶಿಸದೆ, ಮೋವಾಬಿನ ಮೇರೆಯಾದ ಅರ್ನೋನಿನ ಆಚೆಯಲ್ಲಿ ಇಳಿದುಕೊಂಡರು.

[19] “ಇಸ್ರಾಯೇಲರು ಹೆಷ್ಬೋನನ್ನು ಆಳಿದ ಅಮೋರಿಯರ ಅರಸನಾದಂಥ ಸೀಹೋನನ ಬಳಿಗೆ ದೂತರನ್ನು ಕಳುಹಿಸಿ, ‘ನಮ್ಮ ಸ್ಥಳಕ್ಕೆ ನಿನ್ನ ದೇಶವನ್ನು ನಾವು ದಾಟಿಹೋಗುವುದಕ್ಕೆ ಅಪ್ಪಣೆ ಆಗಬೇಕು,’ ಎಂದರು.

[20] ಆದರೆ ಸೀಹೋನನು ತನ್ನ ಮೇರೆಯನ್ನು ದಾಟುವುದಕ್ಕೆ ಇಸ್ರಾಯೇಲರನ್ನು ನಂಬದೆ, ತನ್ನ ಜನರನ್ನೆಲ್ಲಾ ಕೂಡಿಸಿ, ಯಹಚಿನಲ್ಲಿ ದಂಡಿಳಿದು, ಇಸ್ರಾಯೇಲರಿಗೆ ವಿರೋಧವಾಗಿ ಯುದ್ಧಮಾಡಿದನು.

[21] “ಆಗ ಇಸ್ರಾಯೇಲಿನ ದೇವರಾದ ಯೆಹೋವ ದೇವರು ಸೀಹೋನನನ್ನೂ, ಅವನ ಸಕಲ ಜನರನ್ನೂ ಇಸ್ರಾಯೇಲರ ಕೈಗೆ ಒಪ್ಪಿಸಿಕೊಟ್ಟರು. ಇಸ್ರಾಯೇಲರು ಸೀಹೋನನನ್ನೂ, ಅವನ ಸಕಲ ಜನರನ್ನೂ ಹೊಡೆದುಬಿಟ್ಟರು. ಹಾಗೆಯೇ ಇಸ್ರಾಯೇಲರು ಆ ದೇಶದಲ್ಲಿ ವಾಸಿಸಿದ್ದ ಅಮೋರಿಯರ ದೇಶವನ್ನೆಲ್ಲಾ ಸ್ವಾಧೀನಮಾಡಿಕೊಂಡರು.

[22] ಅರ್ನೋನಿನಿಂದ ಯಬ್ಬೋಕಿನವರೆಗೂ, ಮರುಭೂಮಿಯಿಂದ ಯೊರ್ದನಿನವರೆಗೂ ಇರುವ ಅಮೋರಿಯರ ಮೇರೆಯಾದ ದೇಶವನ್ನೆಲ್ಲಾ ಸ್ವಾಧೀನಮಾಡಿಕೊಂಡರು.

[23] “ಈಗ ಇಸ್ರಾಯೇಲಿನ ದೇವರಾದ ಯೆಹೋವ ದೇವರು ಅಮೋರಿಯರನ್ನು ತಮ್ಮ ಜನರಾದ ಇಸ್ರಾಯೇಲಿನ ಮುಂದೆ ಹೊರಡಿಸಿರುವಾಗ, ನೀನು ಆ ದೇಶವನ್ನು ಸ್ವಾಧೀನ ಮಾಡಿಕೊಳ್ಳುವಿಯೋ?

[24] ಆದರೆ ನಿನ್ನ ದೇವರಾದ ಕೆಮೋಷನು ನಿನ್ನ ಮುಂದೆ ಹೊರಡಿಸುವವರ ದೇಶವನ್ನು ನೀನು ಸ್ವಾಧೀನ ಮಾಡಿಕೊಳ್ಳುವುದಿಲ್ಲವೋ? ಹಾಗೆಯೇ ನಮ್ಮ ದೇವರಾದ ಯೆಹೋವ ದೇವರು ನಮ್ಮ ಮುಂದೆ ಹೊರಡಿಸುವವರ ದೇಶವನ್ನೆಲ್ಲಾ ನಾವು ಸ್ವಾಧೀನ ಮಾಡಿಕೊಳ್ಳುವೆವು.

[25] ಈಗ ಚಿಪ್ಪೋರನ ಮಗ ಮೋವಾಬಿನ ಅರಸ ಬಾಲಾಕನಿಗಿಂತ ಯಾವುದರಲ್ಲಾದರೂ ನೀನು ಉತ್ತಮನೋ? ಅವನು ಇಸ್ರಾಯೇಲಿಗೆ ವಿರೋಧವಾಗಿ ಎಂದಾದರೂ ವಿವಾದ ಮಾಡಿದನೋ ಅಥವಾ ಅವರಿಗೆ ವಿರೋಧವಾಗಿ ಯುದ್ಧ ಮಾಡಿದನೋ?

[26] ಇಸ್ರಾಯೇಲು ಹೆಷ್ಬೋನಿನಲ್ಲಿಯೂ, ಅದರ ಗ್ರಾಮಗಳಲ್ಲಿಯೂ; ಅರೋಯೇರಿನಲ್ಲಿಯೂ, ಅದರ ಗ್ರಾಮಗಳಲ್ಲಿಯೂ; ಅರ್ನೋನಿನ ತೀರವಾದ ಎಲ್ಲಾ ಪಟ್ಟಣಗಳಲ್ಲಿಯೂ, ಮುನ್ನೂರು ವರ್ಷಗಳಿಂದ ವಾಸಿಸಿರುವಾಗ, ಇಷ್ಟರವರೆಗೆ ನೀವು ಅದನ್ನು ಬಿಡಿಸದೆ ಹೋದದ್ದೇನು?

[27] ಆದ್ದರಿಂದ ನಾನು ನಿನಗೆ ವಿರೋಧವಾಗಿ ಪಾಪಮಾಡಲಿಲ್ಲ. ನೀನೇ ನನ್ನ ಮೇಲೆ ಯುದ್ಧ ಮಾಡುವುದರಿಂದ ನನಗೆ ಕೆಟ್ಟದ್ದನ್ನು ಮಾಡುತ್ತೀಯೆ. ನ್ಯಾಯಾಧಿಪತಿಯಾದ ಯೆಹೋವ ದೇವರು ಈ ಹೊತ್ತು ಇಸ್ರಾಯೇಲರಿಗೂ, ಅಮ್ಮೋನಿಯರಿಗೂ ಮಧ್ಯದಲ್ಲಿ ನ್ಯಾಯತೀರಿಸಲಿ,” ಎಂದನು.

[28] ಹೇಗಿದ್ದರೂ ಅಮ್ಮೋನಿಯರ ಅರಸನು ಯೆಫ್ತಾಹನು ತನಗೆ ಹೇಳಿ ಕಳುಹಿಸಿದ ಮಾತನ್ನು ಕೇಳದೆ ಹೋದನು.

[29] ಆಗ ಯೆಹೋವ ದೇವರ ಆತ್ಮ ಯೆಫ್ತಾಹನ ಮೇಲೆ ಬಂತು. ಅವನು ಗಿಲ್ಯಾದ್, ಮನಸ್ಸೆಯ ಸೀಮೆಗಳನ್ನು ದಾಟಿ ಹೋಗಿ, ಗಿಲ್ಯಾದಿನಲ್ಲಿರುವ ಮಿಚ್ಪೆಗೆ ಬಂದು, ಅಲ್ಲಿಂದ ಅಮ್ಮೋನಿಯರೆದುರಿಗೆ ಹಾದುಹೋದನು.

[30] ಯೆಫ್ತಾಹನು ಯೆಹೋವ ದೇವರಿಗೆ ಒಂದು ಪ್ರಮಾಣವನ್ನು ಮಾಡಿ, “ನೀನು ಅಮ್ಮೋನಿಯರನ್ನು ನನ್ನ ಕೈಯಲ್ಲಿ ತಪ್ಪದೆ ಒಪ್ಪಿಸಿಕೊಟ್ಟರೆ,

[31] ನಾನು ಅಮ್ಮೋನಿಯರನ್ನು ಜಯಿಸಿ ಹಿಂತಿರುಗಿ ಬರುವಾಗ, ನನ್ನ ಮನೆಯ ಬಾಗಿಲಿನಿಂದ ನನ್ನನ್ನು ಎದುರುಗೊಳ್ಳಲು ಮೊದಲು ಬರುವಂಥದ್ದು ಯೆಹೋವ ದೇವರದಾಗಿರುವುದು. ಅದನ್ನು ದಹನಬಲಿಯಾಗಿ ಅರ್ಪಿಸುವೆನು,” ಎಂದನು.

[32] ಹೀಗೆ ಯೆಫ್ತಾಹನು ಅಮ್ಮೋನಿಯರ ಮೇಲೆ ಯುದ್ಧಮಾಡುವುದಕ್ಕೆ ಅವರೆದುರಿಗೆ ಹೊರಟುಹೋದನು. ಯೆಹೋವ ದೇವರು ಅವರನ್ನು ಅವನ ಕೈಯಲ್ಲಿ ಒಪ್ಪಿಸಿಕೊಟ್ಟರು.

[33] ಯೆಫ್ತಾಹನು ಅವರನ್ನು ಅರೋಯೇರಿನಿಂದ ಮಿನ್ನೀಥಿನ ದಾರಿಯವರೆಗೆ ಮತ್ತು ಆಬೇಲ್ ಕೆರಾಮೀಮಗೆ ಹೋಗುವವರೆಗೆ ಇರುವ ಇಪ್ಪತ್ತು ಪಟ್ಟಣಗಳನ್ನು ಹಾಳುಮಾಡಿದನು. ಹೀಗೆ ದೊಡ್ಡ ಜಯಹೊಂದಿ, ಅಮ್ಮೋನಿಯರು ಇಸ್ರಾಯೇಲರಿಗೆ ಶರಣಾದರು.

[34] ಯೆಫ್ತಾಹನು ಮಿಚ್ಪೆಯಲ್ಲಿರುವ ತನ್ನ ಮನೆಗೆ ಹಿಂದಿರುಗಿ ಬರುವಾಗ, ಅವನ ಮಗಳು ದಮ್ಮಡಿಗಳಿಂದಲೂ, ನಾಟ್ಯದಿಂದಲೂ ಅವನನ್ನು ಎದುರುಗೊಳ್ಳಲು ಹೊರಟಳು. ಅವನಿಗೆ ಅವಳು ಒಬ್ಬಳೇ ಮಗಳು. ಅವಳ ಹೊರತಾಗಿ ಅವನಿಗೆ ಮಗನಾಗಲಿ, ಮಗಳಾಗಲಿ ಇರಲಿಲ್ಲ.

[35] ಅವನು ಅವಳನ್ನು ನೋಡಿದಾಗ, ತನ್ನ ವಸ್ತ್ರಗಳನ್ನು ಹರಿದುಕೊಂಡು, “ಅಯ್ಯೋ, ನನ್ನ ಮಗಳೇ, ನೀನು ನನ್ನನ್ನು ಬಹಳವಾಗಿ ಕುಂದಿಸಿದೆ. ನನ್ನನ್ನು ತೊಂದರೆ ಪಡಿಸುವವರಲ್ಲಿ ನೀನೂ ಒಬ್ಬಳಾದೆ. ಏಕೆಂದರೆ ನಾನು ಯೆಹೋವ ದೇವರಿಗೆ ನನ್ನ ಬಾಯಿತೆರೆದು, ಪ್ರಮಾಣಮಾಡಿದೆನು, ಹಿಂದೆಗೆಯಲಾರೆನು,” ಎಂದನು.

[36] ಅವಳು ಅವನಿಗೆ, “ಅಪ್ಪಾ, ನೀನು ಯೆಹೋವ ದೇವರಿಗೆ ನಿನ್ನ ಬಾಯಿ ತೆರೆದೆಯಲ್ಲ. ಯೆಹೋವ ದೇವರು ಅಮ್ಮೋನಿಯರಾದ ನಿನ್ನ ಶತ್ರುಗಳಿಗೆ ನಿನ್ನಿಂದ ಮುಯ್ಯಿ ತೀರಿಸಿದ್ದರಿಂದ, ಅವರಿಗೆ ನಿನ್ನ ಬಾಯಿಂದ ಹೊರಟ ಮಾತಿನ ಪ್ರಕಾರವೇ ನನಗೆ ಮಾಡು,” ಎಂದಳು.

[37] ಇದಲ್ಲದೆ ಅವಳು ತನ್ನ ತಂದೆಗೆ, “ಈ ಕಾರ್ಯವು ನನಗೆ ಆಗಲಿ. ಆದರೆ ನಾನೂ, ನನ್ನ ಗೆಳತಿಯರೂ ಕೂಡ ನನ್ನ ಕನ್ಯಾವಸ್ಥೆಗಾಗಿ ಬೆಟ್ಟಗಳ ಮೇಲೆ ಹೋಗಿ, ನನ್ನ ಗೆಳತಿಯರ ಸಂಗಡ ಅಳುವುದಕ್ಕೆ ನನಗೆ ಎರಡು ತಿಂಗಳು ಸಮಯವನ್ನು ಕೊಡು,” ಎಂದಳು.

[38] ಆಗ ಅವನು, “ಎರಡು ತಿಂಗಳು ಹೋಗಿ ಬಾ,” ಎಂದು ಹೇಳಿ ಮಗಳನ್ನು ಕಳುಹಿಸಿಬಿಟ್ಟನು. ಅವಳು ತನ್ನ ಗೆಳತಿಯರ ಸಂಗಡ ಹೋಗಿ, ತನ್ನ ಕನ್ಯಾವಸ್ಥೆಗಾಗಿ ಬೆಟ್ಟದಲ್ಲಿ ಅತ್ತು,

[39] ಎರಡು ತಿಂಗಳು ತೀರಿದಾಗ ತನ್ನ ತಂದೆಯ ಬಳಿಗೆ ಬಂದಳು. ಆಗ ಅವನು ಮಾಡಿದ್ದ ತನ್ನ ಪ್ರಮಾಣದ ಪ್ರಕಾರ ಅವಳಿಗೆ ತೀರ್ಪನ್ನು ಈಡೇರಿಸಿದನು. ಅವಳು ಕನ್ಯೆಯಾಗಿಯೇ ಮರಣಹೊಂದಿದಳು.

[40] ಹೀಗೆ ವರ್ಷಕ್ಕೆ ನಾಲ್ಕು ದಿವಸ ಇಸ್ರಾಯೇಲಿನ ಪುತ್ರಿಯರು ಹೋಗಿ, ಗಿಲ್ಯಾದ್ಯನಾದ ಯೆಫ್ತಾಹನ ಮಗಳಿಗಾಗಿ ಗೋಳಾಡುವುದು ಇಸ್ರಾಯೇಲಿನಲ್ಲಿ ಪದ್ಧತಿ ಆಯಿತು.

ನ್ಯಾಯಸ್ಥಾಪಕರು — Chapters