Skip to content
Opens in a new window
Listen to this chapter • 4:09

[1] ಇದರ ತರುವಾಯ ದಾವೀದನು ಫಿಲಿಷ್ಟಿಯರ ಮೇಲೆ ದಾಳಿಮಾಡಿ ಅವರನ್ನು ಸೋಲಿಸಿ, ಅವರಿಂದ ಮೇತೆಗ್ ಅಮ್ಮಹವನ್ನು ತೆಗೆದುಕೊಂಡು, ಆಡಳಿತವನ್ನು ತನ್ನ ಸ್ವಾಧೀನದಲ್ಲಿಟ್ಟುಕೊಂಡನು.

[2] ಹಾಗೆಯೇ ದಾವೀದನು ಮೋವಾಬ್ಯರನ್ನು ಸಹ ಸೋಲಿಸಿದನು. ಸೆರೆಯಾಳುಗಳನ್ನು ನೆಲದ ಮೇಲೆ ಹಗ್ಗದಿಂದ ಅಳತೆ ಮಾಡಿಸಿ, ಎರಡು ಪಾಲು ಜನರನ್ನು ಕೊಲ್ಲಿಸಿ, ಒಂದು ಪಾಲನ್ನು ಉಳಿಸಿದನು. ಹೀಗೆ ಮೋವಾಬ್ಯರು ದಾವೀದನಿಗೆ ಅಧೀನರಾಗಿ ಕಪ್ಪಕೊಡುವವರಾದರು.

[3] ಇದಲ್ಲದೆ ದಾವೀದನು ಯೂಫ್ರೇಟೀಸ್ ನದಿಯ ಬಳಿಯಲ್ಲಿ ತನ್ನ ಅಧಿಕಾರವನ್ನು ಸ್ಥಾಪಿಸುವದಕ್ಕೆ ಹೋಗುತ್ತಿರುವಾಗ, ಚೋಬದ ಅರಸನಾದ ರೆಹೋಬನ ಮಗ ಹದದೆಜೆರನನ್ನು ಸೋಲಿಸಿದನು.

[4] ದಾವೀದನು ಅವನಿಂದ ಸಾವಿರ ರಥಗಳನ್ನೂ, ಏಳು ಸಾವಿರ ರಾಹುತರನ್ನೂ, ಇಪ್ಪತ್ತು ಸಾವಿರ ಕಾಲಾಳುಗಳನ್ನೂ ವಶಪಡಿಸಿಕೊಂಡನು. ನೂರು ರಥಗಳಿಗೆ ಕುದುರೆಗಳನ್ನು ಉಳಿಸಿ, ಇತರ ಕುದುರೆಗಳ ಕಾಲಿನ ನರಗಳನ್ನು ಕೊಯ್ಯಿಸಿಬಿಟ್ಟನು.

[5] ದಮಸ್ಕದ ಅರಾಮ್ಯರು ಚೋಬದ ಅರಸ ಹದದೆಜೆರನಿಗೆ ಸಹಾಯಮಾಡಲು ಬಂದಾಗ, ದಾವೀದನು ಅರಾಮ್ಯರಲ್ಲಿ ಇಪ್ಪತ್ತೆರಡು ಸಾವಿರ ಜನರನ್ನು ಸಂಹರಿಸಿಬಿಟ್ಟನು.

[6] ತರುವಾಯ ದಾವೀದನು ದಮಸ್ಕದ ಅರಾಮಿನಲ್ಲಿ ಕಾವಲುದಂಡುಗಳನ್ನು ಇಟ್ಟನು. ಹೀಗೆ ಅರಾಮ್ಯರು ದಾವೀದನಿಗೆ ಅಧೀನರಾಗಿ, ಕಪ್ಪವನ್ನು ಕೊಡುವವರಾದರು. ದಾವೀದನು ಹೋದ ಸ್ಥಳಗಳಲ್ಲೆಲ್ಲಾ ಯೆಹೋವ ದೇವರು ಅವನಿಗೆ ಜಯಕೊಟ್ಟರು.

[7] ದಾವೀದನು ಹದದೆಜೆರನ ಸೇವಕರಿಗಿದ್ದ ಬಂಗಾರದ ಗುರಾಣಿಗಳನ್ನು ತೆಗೆದುಕೊಂಡು, ಅವುಗಳನ್ನು ಯೆರೂಸಲೇಮಿಗೆ ತಂದನು.

[8] ಇದಲ್ಲದೆ ಹದದೆಜೆರನ ಪಟ್ಟಣಗಳಾದ ಬೆಟಹದಿಂದಲೂ, ಬೇರೋತೈಯಿಂದಲೂ ಅರಸನಾದ ದಾವೀದನು ಅತ್ಯಧಿಕವಾಗಿ ಕಂಚನ್ನು ತೆಗೆದುಕೊಂಡು ಬಂದನು.

[9] ದಾವೀದನು ಹದದೆಜೆರನ ಸಮಸ್ತ ಸೈನ್ಯವನ್ನು ಸೋಲಿಸಿದನೆಂಬ ವರ್ತಮಾನವನ್ನು ಹಮಾತಿನ ಅರಸನಾದ ತೋವು ಕೇಳಿದಾಗ,

[10] ಅವನು ಅರಸನಾದ ದಾವೀದನ ಕ್ಷೇಮಸಮಾಚಾರವನ್ನು ವಿಚಾರಿಸಲೂ, ಹದದೆಜೆರನ ವಿರುದ್ಧ ಯುದ್ಧಮಾಡಿ ಅವನನ್ನು ಸೋಲಿಸಿದ್ದಕ್ಕಾಗಿ ಅವನನ್ನು ಅಭಿನಂದಿಸಿ, ಹರಸುವಂತೆ, ತೋವು ತನ್ನ ಪುತ್ರನಾದ ಯೋರಾಮನನ್ನು ಬೆಳ್ಳಿ, ಬಂಗಾರ, ಕಂಚಿನ ಪಾತ್ರೆಗಳ ಸಹಿತವಾಗಿ ದಾವೀದನ ಬಳಿಗೆ ಕಳುಹಿಸಿದನು; ಏಕೆಂದರೆ ಹದದೆಜೆರನಿಗೆ ತೋವಿಯ ಸಂಗಡ ಯುದ್ಧಗಳಿದ್ದವು.

[11] ಅರಸನಾದ ದಾವೀದನು ಚಿನ್ನ, ಬೆಳ್ಳಿ ಮತ್ತು ಕಂಚಿನ ಎಲ್ಲಾ ವಸ್ತುಗಳನ್ನು ಯೆಹೋವ ದೇವರಿಗೆ ಸಮರ್ಪಿಸಿದನು. ಜೊತೆಗೆ ಅವನು ಸೋತ ಎಲ್ಲಾ ದೇಶಗಳಿಂದ ವಶಪಡಿಸಿಕೊಂಡ ವಸ್ತುಗಳನ್ನೂ ಅರ್ಪಿಸಿದನು.

[12] ಅಂದರೆ, ಅರಾಮ್ಯರು, ಮೋವಾಬ್ಯರು, ಅಮ್ಮೋನ್ಯರು, ಫಿಲಿಷ್ಟಿಯರು, ಅಮಾಲೇಕ್ಯರು ಮತ್ತು ಚೋಬದ ಅರಸನಾಗಿರುವ ರೆಹೋಬನ ಮಗನಾದ ಹದದೆಜೆರನ ಬಳಿಯಿಂದ ಪಡೆದ ಕೊಳ್ಳೆಯನ್ನೂ ಯೆಹೋವ ದೇವರಿಗೆ ಪ್ರತಿಷ್ಠೆ ಮಾಡಿದನು.

[13] ದಾವೀದನು ಉಪ್ಪಿನ ತಗ್ಗಿನಲ್ಲಿ ಹದಿನೆಂಟು ಸಾವಿರ ಅರಾಮ್ಯರನ್ನು ಹೊಡೆದು ಹಿಂದಿರುಗಿದಾಗ ಪ್ರಖ್ಯಾತಿ ಹೊಂದಿದನು.

[14] ಸಮಸ್ತ ಎದೋಮಿನಲ್ಲಿ ಕಾವಲುದಂಡುಗಳನ್ನು ಇಟ್ಟನು. ಇದರಿಂದ, ಎದೋಮ್ಯರೆಲ್ಲರು ದಾವೀದನಿಗೆ ಅಧೀನರಾದರು. ದಾವೀದನು ಹೋದಲ್ಲೆಲ್ಲಾ ಯೆಹೋವ ದೇವರು ಅವನಿಗೆ ಜಯಕೊಟ್ಟರು.

[15] ದಾವೀದನು ಸಮಸ್ತ ಇಸ್ರಾಯೇಲಿನ ಮೇಲೆ ಆಳುತ್ತಾ ತನ್ನ ಸಮಸ್ತ ಜನರಿಗೂ ನೀತಿ ನ್ಯಾಯಗಳಿಂದ ನಡೆಸುತ್ತಿದ್ದನು.

[16] ಚೆರೂಯಳ ಮಗ ಯೋವಾಬನು ಸೈನ್ಯದ ಅಧಿಪತಿಯಾಗಿದ್ದನು. ಅಹೀಲೂದನ ಮಗ ಯೆಹೋಷಾಫಾಟನು ಆಸ್ಥಾನದ ಆಗುಹೋಗುಗಳನ್ನು ದಾಖಲಿಸುವವನಾಗಿದ್ದನು.

[17] ಅಹೀಟೂಬನ ಮಗ ಚಾದೋಕನೂ ಅಬಿಯಾತರನ ಮಗ ಅಹೀಮೆಲೆಕನೂ ಯಾಜಕರಾಗಿದ್ದರು. ಸೆರಾಯನು ಕಾರ್ಯದರ್ಶಿಯಾಗಿದ್ದನು.

[18] ಯೆಹೋಯಾದಾವನ ಮಗ ಬೆನಾಯನು ಕೆರೇತ್ಯರ ಮೇಲೆಯೂ ಪೆಲೇತ್ಯರ ಮೇಲೆಯೂ ಮುಖ್ಯಸ್ಥನಾಗಿದ್ದನು. ದಾವೀದನ ಪುತ್ರರು ಸಮಾಲೋಚಕರಾಗಿದ್ದರು.

2 ಸಮುಯೇಲ — Chapters