Skip to content
Opens in a new window
Listen to this chapter • 9:24

[1] ಕಾಲಾಂತರದಲ್ಲಿ ದಾವೀದನ ಮಗ ಅಬ್ಷಾಲೋಮನಿಗೆ ತಾಮಾರಳೆಂಬ ಹೆಸರುಳ್ಳ ಸುಂದರಿಯಾದ ಒಬ್ಬ ಸಹೋದರಿ ಇದ್ದಳು. ಅವಳನ್ನು ದಾವೀದನ ಮಗ ಅಮ್ನೋನನು ಪ್ರೀತಿಮಾಡಿದನು.

[2] ತನ್ನ ಸಹೋದರಿಯಾದ ತಾಮಾರಳ ನಿಮಿತ್ತ ಬಹು ಸಂಕಟಪಟ್ಟು ಅಸ್ವಸ್ಥನಾದನು. ಅವಳು ಕನ್ಯೆಯಾಗಿದ್ದಳು. ಆದ್ದರಿಂದ ಅವಳನ್ನು ಏನಾದರೂ ಮಾಡುವುದಕ್ಕೆ ಅಮ್ನೋನನಿಗೆ ಕಷ್ಟವಾಗಿತ್ತು.

[3] ಆದರೆ ಅಮ್ನೋನನಿಗೆ ದಾವೀದನ ಸಹೋದರನಾಗಿರುವ ಶಿಮೆಯನ ಮಗ ಯೊನಾದಾಬನೆಂಬ ಹೆಸರುಳ್ಳ ಒಬ್ಬ ಸ್ನೇಹಿತನಿದ್ದನು. ಈ ಯೋನಾದಾಬನು ಬಹು ಕುಯುಕ್ತಿಯುಳ್ಳವನಾಗಿದ್ದನು.

[4] ಯೋನಾದಾಬನು ಅಮ್ನೋನನಿಗೆ, “ಅರಸನ ಮಗನಾದ ನೀನು ದಿನದಿನಕ್ಕೆ ಏಕೆ ಕ್ಷೀಣವಾಗಿ ಹೋಗುತ್ತೀ? ನನಗೆ ತಿಳಿಸುವುದಿಲ್ಲವೋ?” ಎಂದನು. ಅದಕ್ಕೆ ಅಮ್ನೋನನು ಅವನಿಗೆ, “ನಾನು ನನ್ನ ಸಹೋದರನಾಗಿರುವ ಅಬ್ಷಾಲೋಮನ ಸಹೋದರಿ ತಾಮಾರಳನ್ನು ಪ್ರೀತಿಮಾಡುತ್ತಿದ್ದೇನೆ,” ಎಂದನು.

[5] ಆಗ ಯೋನಾದಾಬನು ಅವನಿಗೆ, “ನೀನು ರೋಗಿಷ್ಟನ ಹಾಗೆ ಮಂಚದ ಮೇಲೆ ಮಲಗು; ನಿನ್ನನ್ನು ನೋಡುವುದಕ್ಕೆ ನಿನ್ನ ತಂದೆ ಬರುವಾಗ ನೀನು ಅವನಿಗೆ, ‘ನನ್ನ ಸಹೋದರಿ ತಾಮಾರಳು ಬರುವ ಹಾಗೆ ದಯಮಾಡಬೇಕು. ನಾನು ಅವಳ ಕೈಯಿಂದ ಉಣ್ಣುವ ಹಾಗೆ, ಅವಳು ನನ್ನ ಕಣ್ಣೆದುರಿನಲ್ಲಿ ಅಡಿಗೆಯನ್ನು ಮಾಡಿ, ನನಗೆ ಆಹಾರ ಕೊಡಲಿ,’ ಎಂದು ಹೇಳು,” ಎಂದನು.

[6] ಅಮ್ನೋನನು ಅದೇ ಪ್ರಕಾರ ರೋಗಿಷ್ಟನ ಹಾಗೆ ಮಲಗಿಕೊಂಡನು. ಅರಸನು ತನ್ನನ್ನು ನೋಡುವುದಕ್ಕೆ ಬಂದಾಗ ಅಮ್ನೋನನು ಅರಸನಿಗೆ, “ನೀವು ನನ್ನ ಸಹೋದರಿ ತಾಮಾರಳು ಬರುವ ಹಾಗೆ ದಯಮಾಡಬೇಕು; ನಾನು ಅವಳ ಕೈಯಿಂದ ಉಣ್ಣುವ ಹಾಗೆ ಅವಳು ನನ್ನ ಕಣ್ಣು ಮುಂದೆ ಎರಡು ಭಕ್ಷ್ಯಗಳನ್ನು ಮಾಡುವುದಕ್ಕೆ ಬರಲಿ,” ಎಂದನು.

[7] ಆಗ ದಾವೀದನು ತನ್ನ ಮನೆಯಲ್ಲಿರುವ ತಾಮಾರಳ ಬಳಿಗೆ ಮನುಷ್ಯನನ್ನು ಕಳುಹಿಸಿ, “ನೀನು ನಿನ್ನ ಸಹೋದರ ಅಮ್ನೋನನ ಮನೆಗೆ ಹೋಗಿ, ಅವನಿಗೆ ಅಡಿಗೆಯನ್ನು ಮಾಡಿ ಇಡು,” ಎಂದನು.

[8] ಹಾಗೆಯೇ ತಾಮಾರಳು ತನ್ನ ಸಹೋದರ ಅಮ್ನೋನನ ಮನೆಗೆ ಹೋದಳು. ಆಗ ಅವನು ಮಲಗಿದ್ದನು. ಅವಳು ಹಿಟ್ಟನ್ನು ತೆಗೆದು ಕಲಸಿ, ಅವನ ಕಣ್ಣು ಮುಂದೆ ನಾದಿ, ಭಕ್ಷ್ಯಗಳನ್ನು ಮಾಡಿ,

[9] ಪಾತ್ರೆ ತೆಗೆದುಕೊಂಡು ಅವನ ಮುಂದೆ ಇಟ್ಟಳು. ಆದರೆ ಅಮ್ನೋನನು, “ನಾನು ಉಣ್ಣುವುದಿಲ್ಲ,” ಎಂದು ಹೇಳಿ, “ನನ್ನ ಬಳಿಯಿಂದ ಎಲ್ಲಾ ಮನುಷ್ಯರನ್ನು ಕಳುಹಿಸಿಬಿಡಿರಿ,” ಎಂದನು. ಹಾಗೆಯೇ ಎಲ್ಲರು ಅವನನ್ನು ಬಿಟ್ಟುಹೋದರು.

[10] ಆಗ ಅಮ್ನೋನನು, “ನಾನು ನಿನ್ನ ಕೈಯಿಂದ ತಿನ್ನುವಂತೆ ಆ ಭಕ್ಷ್ಯಗಳನ್ನು ಕೊಠಡಿಯೊಳಗೆ ತೆಗೆದುಕೊಂಡು ಬಾ,” ಎಂದನು. ಹಾಗೆಯೇ ತಾಮಾರಳು ತಾನು ಮಾಡಿದ ಭಕ್ಷ್ಯಗಳನ್ನು ಕೊಠಡಿಯೊಳಗೆ ತನ್ನ ಸಹೋದರನಾದ ಅಮ್ಮೋನನ ಬಳಿಗೆ ತೆಗೆದುಕೊಂಡು ಬಂದಳು.

[11] ಅವನು ಅವುಗಳನ್ನು ಉಣ್ಣುವ ಹಾಗೆ ಅವಳು ಅವನ ಬಳಿಗೆ ತಂದಾಗ, ಅವನು ಅವಳನ್ನು ಹಿಡಿದು ಅವಳಿಗೆ, “ನನ್ನ ಸಹೋದರಿಯೇ, ನನ್ನ ಸಂಗಡ ಮಲಗು ಬಾ,” ಎಂದನು.

[12] ಅದಕ್ಕವಳು, “ನನ್ನ ಸಹೋದರನೇ, ಬೇಡ. ನನ್ನನ್ನು ಒತ್ತಾಯ ಮಾಡಬೇಡ. ಏಕೆಂದರೆ ಇಸ್ರಾಯೇಲಿನಲ್ಲಿ ಇಂಥ ಕಾರ್ಯ ಮಾಡಕೂಡದು. ಇಂಥ ದುಷ್ಟತನದ ಕೆಲಸ ಮಾಡಬೇಡ.

[13] ಈ ಅವಮಾನವನ್ನು ಮರೆಮಾಡುವುದು ಹೇಗೆ? ನೀನು ಇಸ್ರಾಯೇಲಿನಲ್ಲಿ ದುಷ್ಟ ಮೂರ್ಖರೊಳಗೆ ಒಬ್ಬನಾಗಿ ಇರುವೆ. ಹಾಗಾದರೆ ಈಗ ದಯಮಾಡಿ ಅರಸನ ಸಂಗಡ ಮಾತನಾಡು. ಏಕೆಂದರೆ ಅವನು ನಿನ್ನ ಬಳಿಯಿಂದ ನನ್ನನ್ನು ಹೇಗಾದರೂ ಹಿಂತೆಗೆಯುವುದಿಲ್ಲ,” ಎಂದಳು.

[14] ಆದರೆ ಅವನು ಅವಳ ಮಾತನ್ನು ಕೇಳಲಿಲ್ಲ. ಅಮ್ನೋನನು ಆಕೆಗಿಂತಲೂ ಬಲಶಾಲಿಯಾಗಿದ್ದರಿಂದ ಅವನು ಬಲಾತ್ಕಾರದಿಂದ ಅವಳ ಮೇಲೆ ಅತ್ಯಾಚಾರಮಾಡಿದನು.

[15] ಅನಂತರ ಅಮ್ನೋನನು ಅವಳನ್ನು ಅತ್ಯಂತ ಹಗೆ ಮಾಡಿದನು. ಅವಳನ್ನು ಹಗೆ ಮಾಡುವ ಮೊದಲು ಮಾಡಿದ ಪ್ರೀತಿಗಿಂತ ಅದು ಅಧಿಕವಾಗಿತ್ತು. ಆದ್ದರಿಂದ, ಅಮ್ನೋನನು ಅವಳಿಗೆ, “ಎದ್ದು ಹೋಗು,” ಎಂದನು.

[16] ಆಗ ಅವಳು ಅವನಿಗೆ, “ಬೇಡ! ನನಗೆ ಮಾಡಿದ ಆ ಕೆಟ್ಟತನಕ್ಕಿಂತ, ನೀನು ನನ್ನನ್ನು ಕಳುಹಿಸಿಬಿಡುವ ಈ ಕೆಟ್ಟತನವು ಅಧಿಕ ಅನ್ಯಾಯವಾಗಿದೆ,” ಎಂದಳು. ಆದರೆ ಅವನು ಅವಳ ಮಾತನ್ನು ಕೇಳಲೊಲ್ಲದೆ

[17] ಯಾವಾಗಲೂ ತನ್ನೊಂದಿಗೆ ಇರುತ್ತಿದ್ದ ಸೇವಕನನ್ನು ಕರೆದು, “ಇವಳನ್ನು ನನ್ನ ಬಳಿಯಿಂದ ಹೊರಗೆ ತಳ್ಳಿ, ಅವಳ ಹಿಂದೆ ಬಾಗಿಲು ಮುಚ್ಚಿ ಭದ್ರಪಡಿಸು,” ಎಂದನು.

[18] ಅವಳು ವಿವಿಧ ಬಣ್ಣದ ವಸ್ತ್ರಗಳನ್ನು ಧರಿಸಿದ್ದಳು. ಏಕೆಂದರೆ ಅರಸನ ಪುತ್ರಿಯರಾದ ಕನ್ಯೆಯರು ಇಂಥಾ ನಿಲುವಂಗಿಗಳನ್ನು ಧರಿಸಿಕೊಳ್ಳುತ್ತಿದ್ದರು. ಅವನ ಸೇವಕನು ಅವಳನ್ನು ಹೊರಗೆ ತಂದು, ಅವಳ ಹಿಂದೆ ಬಾಗಿಲು ಮುಚ್ಚಿ ಬೀಗ ಹಾಕಿದನು.

[19] ಆಗ ತಾಮಾರಳು ತನ್ನ ತಲೆಯ ಮೇಲೆ ಬೂದಿಯನ್ನು ಹಾಕಿಕೊಂಡು, ತಾನು ಧರಿಸಿಕೊಂಡಿದ್ದ ವಿವಿಧ ಬಣ್ಣದ ವಸ್ತ್ರವನ್ನು ಹರಿದು, ತನ್ನ ಕೈಗಳನ್ನು ತಲೆಯ ಮೇಲೆ ಇಟ್ಟುಕೊಂಡು ಗಟ್ಟಿಯಾಗಿ ಅಳುತ್ತಾ ಹೋದಳು.

[20] ಆಗ ಅವಳ ಸಹೋದರ ಅಬ್ಷಾಲೋಮನು ಅವಳಿಗೆ, “ನಿನ್ನ ಸಹೋದರ ಅಮ್ನೋನನು ನಿನ್ನ ಮಾನಭಂಗ ಮಾಡಿದನೋ? ನನ್ನ ಸಹೋದರಿ, ಈಗ ಸುಮ್ಮನಿರು. ಅವನು ನಿನ್ನ ಸಹೋದರನು. ಈ ಕಾರ್ಯವನ್ನು ನಿನ್ನ ಮನಸ್ಸಿಗೆ ತೆಗೆದುಕೊಳ್ಳಬೇಡ,” ಎಂದನು. ಹಾಗೆಯೇ ತಾಮಾರಳು ತನ್ನ ಸಹೋದರ ಅಬ್ಷಾಲೋಮನ ಮನೆಯಲ್ಲಿ ಒಂಟಿಗಳಾಗಿ ವಾಸಿಸಿದಳು.

[21] ಅರಸನಾದ ದಾವೀದನು ಇವುಗಳನ್ನೆಲ್ಲಾ ಕೇಳಿದಾಗ ಬಹು ಕೋಪಗೊಂಡನು.

[22] ಆದರೆ ಅಬ್ಷಾಲೋಮನು ತನ್ನ ಸಹೋದರನಾದ ಅಮ್ನೋನನ ಸಂಗಡ ಒಳ್ಳೆಯದಾದರೂ, ಕೆಟ್ಟದ್ದಾದರೂ ಮಾತನಾಡದೆ ಇದ್ದನು. ಏಕೆಂದರೆ ಅವನು ತನ್ನ ಸಹೋದರಿಯಾದ ತಾಮಾರಳನ್ನು ಅವಮಾನ ಮಾಡಿದ್ದರಿಂದ, ಅಬ್ಷಾಲೋಮನು ಅವನನ್ನು ಹಗೆ ಮಾಡಿದನು.

[23] ಎರಡು ವರ್ಷ ಪೂರ್ಣ ಮುಗಿದ ತರುವಾಯ, ಅಬ್ಷಾಲೋಮನಿಗೆ ಎಫ್ರಾಯೀಮಿನ ಬಳಿಯಲ್ಲಿರುವ ಬಾಳ್ ಹಾಚೋರಿನಲ್ಲಿ ಕುರಿಗಳ ಉಣ್ಣೆ ಕತ್ತರಿಸುವಾಗ, ಅಬ್ಷಾಲೋಮನು ಅರಸನ ಮಕ್ಕಳನ್ನೆಲ್ಲಾ ಔತಣಕ್ಕೆ ಕರೆದನು.

[24] ಇದಲ್ಲದೆ ಅಬ್ಷಾಲೋಮನು ಅರಸನ ಬಳಿಗೆ ಹೋಗಿ, “ಇಗೋ, ಈಗ ನಿನ್ನ ಸೇವಕನ ಬಳಿಗೆ ಉಣ್ಣೆ ಕತ್ತರಿಸುವವರು ಇದ್ದಾರೆ; ಅರಸನೂ, ತನ್ನ ಸೇವಕರೂ ನಿನ್ನ ಸೇವಕನ ಬಳಿಗೆ ಬರಬಹುದೋ?” ಎಂದನು.

[25] ಅದಕ್ಕೆ ಅರಸನು ಅಬ್ಷಾಲೋಮನಿಗೆ, “ನನ್ನ ಮಗನೇ, ನಾವು ನಿನಗೆ ಭಾರವಾಗಿರದ ಹಾಗೆ ನಾವೆಲ್ಲರು ಈಗ ಬರುವುದಿಲ್ಲ,” ಎಂದನು. ಅವನು ರಾಜನನ್ನು ಬಲವಂತ ಮಾಡಿದನು. ಆದರೆ ಅರಸನು ಹೋಗಲು ಒಪ್ಪದೆ, ಅಬ್ಷಾಲೋಮನನ್ನು ಆಶೀರ್ವದಿಸಿ ಕಳುಹಿಸಿದನು.

[26] ಆಗ ಅಬ್ಷಾಲೋಮನು, “ಹಾಗಾದರೆ ನನ್ನ ಸಹೋದರನಾದ ಅಮ್ನೋನನು ನಮ್ಮ ಸಂಗಡ ಬರಲಿ,” ಎಂದನು. ಅರಸನು ಅವನಿಗೆ, “ಏಕೆ ಅವನು ನಿಮ್ಮ ಸಂಗಡ ಬರಬೇಕು?” ಎಂದನು.

[27] ಆದರೆ ಅಬ್ಷಾಲೋಮನು ಅವನನ್ನು ಬಲವಂತ ಮಾಡಿದ್ದರಿಂದ, ಅವನು ಅಮ್ನೋನನನ್ನೂ, ಅರಸನ ಸಮಸ್ತ ಮಕ್ಕಳನ್ನೂ ಅವನ ಸಂಗಡ ಕಳುಹಿಸಿದನು.

[28] ಅಬ್ಷಾಲೋಮನು ತನ್ನ ಸೇವಕರಿಗೆ, “ನೀವು ನೋಡಿಕೊಳ್ಳಿರಿ. ಅಮ್ನೋನನ ಮನಸ್ಸು ದ್ರಾಕ್ಷಾರಸದಿಂದ ಅಮಲೇರಿದಾಗ ನಾನು ನಿಮಗೆ ಅವನನ್ನು ಹೊಡೆಯಿರಿ ಎಂದು ಹೇಳಿದಕೂಡಲೆ, ಅವನನ್ನು ಕೊಂದುಹಾಕಿರಿ, ಭಯಪಡಬೇಡಿರಿ. ನಾನು ನಿಮಗೆ ಆಜ್ಞಾಪಿಸಿದ್ದೇನಲ್ಲಾ, ಧೈರ್ಯವಾಗಿರಿ, ಶೂರರಾಗಿರಿ,” ಎಂದು ಹೇಳಿದನು.

[29] ಅಬ್ಷಾಲೋಮನು ಆಜ್ಞಾಪಿಸಿದ ಹಾಗೆಯೇ ಅವನ ಸೇವಕರು ಅಮ್ನೋನನಿಗೆ ಮಾಡಿದರು. ಆಗ ಅರಸನ ಮಕ್ಕಳೆಲ್ಲರೂ ಎದ್ದು, ತಮ್ಮ ತಮ್ಮ ಹೇಸರಗತ್ತೆಗಳನ್ನು ಹತ್ತಿ ಓಡಿಹೋದರು.

[30] ಅವರು ದಾರಿಯಲ್ಲಿರುವಾಗಲೇ ದಾವೀದನಿಗೆ, “ಅಬ್ಷಾಲೋಮನು ಅರಸನ ಮಕ್ಕಳನ್ನೆಲ್ಲಾ ಕೊಂದುಹಾಕಿದ್ದಾನೆ, ಒಬ್ಬನಾದರೂ ಉಳಿಯಲಿಲ್ಲ,” ಎಂಬ ವರ್ತಮಾನ ಬಂತು.

[31] ಆಗ ಅರಸನು ಎದ್ದು, ತನ್ನ ವಸ್ತ್ರಗಳನ್ನು ಹರಿದುಕೊಂಡು ನೆಲದ ಮೇಲೆ ಬಿದ್ದನು. ಅವನ ಸೇವಕರೆಲ್ಲರೂ ತಮ್ಮ ವಸ್ತ್ರಗಳನ್ನು ಹರಿದುಕೊಂಡು ಅವನ ಸುತ್ತಲು ನಿಂತರು.

[32] ಆದರೆ ದಾವೀದನ ಸಹೋದರನಾದ ಶಿಮೆಯನ ಮಗನಾಗಿರುವ ಯೋನಾದಾಬನು ದಾವೀದನಿಗೆ, “ಒಡೆಯನೇ, ನನ್ನ ಅರಸನ ಪುತ್ರರೆಲ್ಲರನ್ನು ಕೊಂದು ಹಾಕಿದ್ದಾರೆಂದು ನೆನಸಬೇಡ. ಅಮ್ನೋನನು ಮಾತ್ರವೇ ಸತ್ತನು. ಏಕೆಂದರೆ ಅಬ್ಷಾಲೋಮನು ತನ್ನ ಸಹೋದರಿಯಾದ ತಾಮಾರಳನ್ನು ಅಮ್ಮೋನನು ಬಲಾತ್ಕಾರ ಮಾಡಿದ ದಿನ ಮೊದಲುಗೊಂಡು ಈ ಕಾರ್ಯವನ್ನು ಮಾಡುವುದಕ್ಕೆ ತನ್ನ ಮನಸ್ಸಿನಲ್ಲಿ ನಿಶ್ಚಯಮಾಡಿಕೊಂಡಿದ್ದನು.

[33] ಆದ್ದರಿಂದ ಅರಸನಾದ ನನ್ನ ಒಡೆಯನೇ, ಅರಸನ ಮಕ್ಕಳೆಲ್ಲರು ಸತ್ತರೆಂಬುವ ಮಾತನ್ನು ನಿನ್ನ ಮನಸ್ಸಿನಲ್ಲಿಡಬೇಡ. ಏಕೆಂದರೆ ಅಮ್ನೋನನು ಒಬ್ಬನೇ ಸತ್ತನು,” ಎಂದನು.

[34] ಅಬ್ಷಾಲೋಮನು ಓಡಿಹೋದನು. ಆಗ ಕಾವಲುಗಾರನು ಕಣ್ಣೆತ್ತಿ ನೋಡುವಾಗ, ಅವನ ಹಿಂಭಾಗದಲ್ಲಿ ಬೆಟ್ಟದ ಮಾರ್ಗವಾಗಿ ಅನೇಕ ಜನರು ಬರುತ್ತಿದ್ದರು. ಕಾವಲುಗಾರನು ಹೋಗಿ ಅರಸನಿಗೆ, “ನಾನು ಬೆಟ್ಟದ ಬದಿಯಲ್ಲಿರುವ ಹೋರೋನೈಮ್ ದಿಕ್ಕಿನಲ್ಲಿ ಮನುಷ್ಯರನ್ನು ಕಂಡೆನು,” ಎಂದು ಹೇಳಿದನು.

[35] ಆಗ ಯೋನಾದಾಬನು ಅರಸನಿಗೆ, “ಅರಸನ ಪುತ್ರರು ಬರುತ್ತಿದ್ದಾರೆ. ನಿಮ್ಮ ಸೇವಕನು ಹೇಳಿದ ಹಾಗೆಯೇ ಆಯಿತು,” ಎಂದನು.

[36] ಅವನು ಮಾತನಾಡಿ ತೀರಿಸಿದಾಗ, ಅರಸನ ಪುತ್ರರು ಬಂದು ಸ್ವರವೆತ್ತಿ ಅತ್ತರು. ಅರಸನೂ, ಅವನ ಸಮಸ್ತ ಸೇವಕರೂ ಮಹಾಧ್ವನಿಯಿಂದ ಅತ್ತರು.

[37] ಆದರೆ ಅಬ್ಷಾಲೋಮನು ಓಡಿಹೋಗಿ ಗೆಷೂರಿನ ಅರಸನಾಗಿರುವ ಅಮ್ಮೀಹೂದನ ಮಗ ತಲ್ಮಾಯನ ಬಳಿಗೆ ಹೋದನು. ದಾವೀದನು ಬಹಳ ದಿನಗಳವರೆಗೆ ತನ್ನ ಮಗನಿಗಾಗಿ ದುಃಖಪಡುತ್ತಿದ್ದನು.

[38] ಹೀಗೆಯೇ ಅಬ್ಷಾಲೋಮನು ಗೆಷೂರಿಗೆ ಓಡಿಹೋಗಿ ಅಲ್ಲಿ ಮೂರು ವರ್ಷ ಇದ್ದನು.

[39] ಆದರೆ ಅರಸನಾದ ದಾವೀದನು ಅಮ್ನೋನನ ಸಾವಿನ ದುಃಖ ಶಮನವಾದ ಮೇಲೆ ಅಬ್ಷಾಲೋಮನ ಬಳಿಗೆ ಹೋಗಲು ಬಯಸಿದನು.

2 ಸಮುಯೇಲ — Chapters