Skip to content
Opens in a new window
Listen to this chapter • 7:05

[1] ಅಹೀತೋಫೆಲನು ಅಬ್ಷಾಲೋಮನಿಗೆ, “ಅಪ್ಪಣೆಯಾದರೆ ನಾನು ಹನ್ನೆರಡು ಸಾವಿರ ಜನರನ್ನು ಆಯ್ದುಕೊಂಡು ಈ ರಾತ್ರಿಯೇ ದಾವೀದನನ್ನು ಹಿಂದಟ್ಟುವೆನು.

[2] ಅವನು ದಣಿದು ಅವನ ಕೈ ದುರ್ಬಲವಾಗಿರುವಾಗ, ಹೋಗಿ ಅವನ ಮೇಲೆ ಬಿದ್ದು ಅವನನ್ನು ಹೆದರಿಸುವೆನು. ಆಗ ಅವನ ಸಂಗಡ ಇರುವ ಜನರೆಲ್ಲರು ಓಡಿಹೋಗುವರು.

[3] ಆಗ ನಾನು ಅರಸನನ್ನು ಮಾತ್ರ ಹೊಡೆದು, ಜನರೆಲ್ಲರನ್ನು ತಿರುಗಿ ನಿನ್ನ ಬಳಿಗೆ ತೆಗೆದುಕೊಂಡು ಬರುವೆನು. ನೀನು ಹುಡುಕುವವನು ಸಿಕ್ಕಿದರೆ, ಜನರೆಲ್ಲರು ಹಿಂದಿರುಗಿದ ಹಾಗೆ ಆಗುವುದು. ಜನರೆಲ್ಲರು ಸಮಾಧಾನವಾಗಿರುವರು,” ಎಂದನು.

[4] ಈ ಮಾತು ಅಬ್ಷಾಲೋಮನ ದೃಷ್ಟಿಗೂ, ಇಸ್ರಾಯೇಲಿನ ಸಮಸ್ತ ಹಿರಿಯರ ದೃಷ್ಟಿಗೂ ಒಳ್ಳೆಯದಾಗಿ ತೋರಿತು.

[5] ಆದರೆ ಅಬ್ಷಾಲೋಮನು, “ಅರ್ಕಿಯನಾದ ಹೂಷೈಯನ್ನು ನಾವು ಕೇಳುವ ಹಾಗೆ ಅವನನ್ನು ಕರೆಯಿರಿ,” ಎಂದನು.

[6] ಹೂಷೈ ಅಬ್ಷಾಲೋಮನ ಬಳಿಗೆ ಬಂದಾಗ, ಅಬ್ಷಾಲೋಮನು ಅವನಿಗೆ, “ಅಹೀತೋಫೆಲನು ಈ ಪ್ರಕಾರ ಹೇಳಿದ್ದಾನೆ. ಅವನ ಮಾತಿನ ಪ್ರಕಾರ ಮಾಡೋಣವೋ? ಬೇಡವಾದರೆ ನೀನು ಮಾತನಾಡು,” ಎಂದನು.

[7] ಆಗ ಹೂಷೈ ಅಬ್ಷಾಲೋಮನಿಗೆ, “ಅಹೀತೋಫೆಲನು ಹೇಳಿದ ಆಲೋಚನೆಯು ಈ ವೇಳೆಗೆ ಒಳ್ಳೆಯದಲ್ಲ,” ಎಂದನು.

[8] ಹೂಷೈ, “ನಿನ್ನ ತಂದೆಯೂ, ಅವನ ಮನುಷ್ಯರೂ ಪರಾಕ್ರಮಶಾಲಿಗಳು. ಅವರು ಅಡವಿಯಲ್ಲಿ ಮರಿಗಳನ್ನು ಕಳೆದುಕೊಂಡ ಕರಡಿಯ ಹಾಗೆಯೇ ಕೋಪವುಳ್ಳವರಾಗಿದ್ದಾರೆಂದು ನೀನು ಬಲ್ಲೆ. ಇದಲ್ಲದೆ ನಿನ್ನ ತಂದೆಯು ಶೂರನು. ಅವನು ರಾತ್ರಿಯಲ್ಲಿ ಜನರ ಸಂಗಡ ತಂಗುವುದಿಲ್ಲ.

[9] ಅವನು ಈಗ ಒಂದು ಗವಿಯಲ್ಲಾದರೂ, ಒಂದು ಸ್ಥಳದಲ್ಲಾದರೂ ಅಡಗಿಕೊಂಡಿದ್ದಾನೆ. ಮೊದಲೇ ಇವರಲ್ಲಿ ಕೆಲವರು ಸತ್ತರೆ, ಅದನ್ನು ಕೇಳುವವರು ಅಬ್ಷಾಲೋಮನನ್ನು ಹಿಂಬಾಲಿಸುವ ಜನರಲ್ಲಿ ಸಂಹಾರವಾಯಿತೆಂದು ಹೇಳುವರು.

[10] ಆಗ ಸಿಂಹ ಹೃದಯರಾದ ಪರಾಕ್ರಮಶಾಲಿಯ ಹೃದಯವು ಸಹ ಸಂಪೂರ್ಣ ಕರಗುವುದು. ಇದಲ್ಲದೆ ನಿನ್ನ ತಂದೆಯು ಶೂರನೆಂದೂ, ಅವನ ಸಂಗಡ ಇರುವವರು ಪರಾಕ್ರಮಶಾಲಿಗಳೆಂದೂ ಇಸ್ರಾಯೇಲರೆಲ್ಲರು ಬಲ್ಲರು.

[11] “ನಾನು ಹೇಳುವ ಆಲೋಚನೆ ಏನೆಂದರೆ, ದಾನಿನಿಂದ ಬೇರ್ಷೆಬದವರೆಗೂ ವಾಸವಾಗಿರುವ ಇಸ್ರಾಯೇಲರೊಳಗಿಂದ ಸಮುದ್ರದ ಮರಳಿನಷ್ಟು ಅಸಂಖ್ಯವಾದ ಸೈನ್ಯವನ್ನು ನಿನ್ನ ಬಳಿಯಲ್ಲಿ ಕೂಡಿಸಿ, ನೀನೂ ಅವರ ಜೊತೆಯಲ್ಲಿ ಯುದ್ಧಕ್ಕೆ ಹೋಗಬೇಕು.

[12] ಆಗ ನಾವು ಅವನನ್ನು ಕಂಡುಕೊಳ್ಳುವ ಸ್ಥಳದಲ್ಲಿ ಅವನ ಮೇಲೆ ಬಂದು, ಭೂಮಿಯ ಮೇಲೆ ಮಂಜು ಬೀಳುವ ಹಾಗೆ ಅವನ ಮೇಲೆ ಬೀಳುವೆವು. ಅವನೂ, ಅವನ ಸಂಗಡ ಇರುವ ಸಮಸ್ತ ಜನರಲ್ಲಿ ಒಬ್ಬನಾದರೂ ಉಳಿಯುವುದಿಲ್ಲ.

[13] ಅವನು ಒಂದು ಪಟ್ಟಣದಲ್ಲಿ ಹೊಕ್ಕಿರುವುದಾದರೆ, ಇಸ್ರಾಯೇಲರೆಲ್ಲರೂ ಆ ಪಟ್ಟಣಕ್ಕೆ ಹಗ್ಗಗಳನ್ನು ತಂದುಹಾಕಿದ ತರುವಾಯ, ನಾವು ಒಂದು ಹರಳಾದರೂ ಅಲ್ಲಿ ಉಳಿಯದಂತೆ ಆ ಊರನ್ನು ಎಳೆದುಕೊಂಡು ಹೋಗಿ ಹೊಳೆಯಲ್ಲಿ ಹಾಕಿಬಿಡೋಣ,” ಎಂದನು.

[14] ಆಗ ಅಬ್ಷಾಲೋಮನೂ, ಇಸ್ರಾಯೇಲಿನ ಸಮಸ್ತ ಮನುಷ್ಯರೂ, “ಅಹೀತೋಫೆಲನ ಆಲೋಚನೆಗಿಂತ ಅರ್ಕಿಯನಾದ ಹೂಷೈಯ ಆಲೋಚನೆ ಒಳ್ಳೆಯದು,” ಎಂದರು. ಏಕೆಂದರೆ ತಾನು ಅಬ್ಷಾಲೋಮನ ಮೇಲೆ ಕೇಡನ್ನು ಬರಮಾಡುವ ಹಾಗೆ ಅಹೀತೋಫೆಲನ ಒಳ್ಳೆಯ ಆಲೋಚನೆಯನ್ನು ವ್ಯರ್ಥಮಾಡುವುದಕ್ಕೆ ಯೆಹೋವ ದೇವರು ಹಾಗೆ ನೇಮಿಸಿದ್ದರು.

[15] ಹೂಷೈಯು ಯಾಜಕರಾದ ಚಾದೋಕನಿಗೂ, ಅಬಿಯಾತರನಿಗೂ, “ಅಹೀತೋಫೆಲನು ಅಬ್ಷಾಲೋಮನಿಗೂ, ಇಸ್ರಾಯೇಲಿನ ಹಿರಿಯರಿಗೂ ಇಂಥಿಂಥ ಆಲೋಚನೆ ಹೇಳಿದನು.

[16] ಆದ್ದರಿಂದ ನೀವು ಬೇಗನೆ ಅರಸನಾದ ದಾವೀದನಿಗೆ, ‘ನೀವು ಈ ರಾತ್ರಿ ಅಡವಿಯಲ್ಲಿ ನದಿ ದಾಟುವ ಸ್ಥಳದ ಹತ್ತಿರ ಇಳಿದುಕೊಳ್ಳಬೇಡಿ; ಶೀಘ್ರವಾಗಿ ನದಿದಾಟಿ ಮುಂದೆ ಹೋಗಬೇಡಿ; ಇಲ್ಲವಾದರೆ ನೀವೂ, ನಿಮ್ಮ ಜನರೂ ನಾಶವಾಗುವಿರಿ,’ ಎಂದು ಹೇಳಿ ಕಳುಹಿಸಿರಿ,” ಎಂದನು.

[17] ಯೋನಾತಾನನೂ, ಅಹೀಮಾಚನೂ ಏನ್ ರೋಗೆಲ್ ಎಂಬಲ್ಲಿ ಇದ್ದರು. ಒಬ್ಬ ಸೇವಕಿ ಹೋಗಿ ಅವರಿಗೆ ತಿಳಿಸಬೇಕಾಗಿತ್ತು. ಅನಂತರ ಅವರು ಹೋಗಿ ಅರಸನಾದ ದಾವೀದನಿಗೆ ಹೇಳಬೇಕಾಗಿತ್ತು. ಏಕೆಂದರೆ ಪಟ್ಟಣದಲ್ಲಿ ಪ್ರವೇಶಿಸುವುದನ್ನು ಬೇರೆಯವರು ನೋಡುವ ಗಂಡಾಂತರಕ್ಕೆ ಒಳಗಾಗಲು ಅಪೇಕ್ಷಿಸಿರಲಿಲ್ಲ.

[18] ಆದರೆ ಒಬ್ಬ ಹುಡುಗನು ಅವರನ್ನು ಕಂಡು ಅಬ್ಷಾಲೋಮನಿಗೆ ತಿಳಿಸಿದನು. ಆದ್ದರಿಂದ ಅವರಿಬ್ಬರು ಶೀಘ್ರವಾಗಿ ಹೋಗಿ, ಬಹುರೀಮಿನಲ್ಲಿರುವ ಒಬ್ಬ ಮನುಷ್ಯನ ಮನೆಯಲ್ಲಿ ಪ್ರವೇಶಿಸಿ, ಅವನ ಅಂಗಳದಲ್ಲಿರುವ ಬಾವಿಯಲ್ಲಿ ಇಳಿದರು.

[19] ಆಗ ಆ ಮನೆಯವಳು ಬಾವಿಯ ಮೇಲೆ ಒಂದು ವಸ್ತ್ರವನ್ನು ಹಾಸಿ ನುಚ್ಚನ್ನು ಹರವಿದಳು. ಈ ಕಾರ್ಯ ಯಾರಿಗೂ ತಿಳಿಯದೆ ಹೋಯಿತು.

[20] ಅಬ್ಷಾಲೋಮನ ಸೇವಕರು ಮನೆಯೊಳಗೆ ಬಂದು ಆ ಸ್ತ್ರೀಯನ್ನು, “ಅಹೀಮಾಚನೂ, ಯೋನಾತಾನನೂ ಎಲ್ಲಿ,” ಎಂದು ಕೇಳಿದರು. ಅವಳು ಅವರಿಗೆ, “ಹಳ್ಳವನ್ನು ದಾಟಿಹೋದರು,” ಎಂದಳು. ಅವರು ಹುಡುಕಿ ಕಾಣದೆ ಹೋಗಿ ಯೆರೂಸಲೇಮಿಗೆ ಹಿಂದಿರುಗಿದರು.

[21] ಇವರು ಹೋದ ತರುವಾಯ, ಅವರು ಬಾವಿಯೊಳಗಿಂದ ಏರಿಹೋಗಿ, ಅರಸನಾದ ದಾವೀದನಿಗೆ, “ನೀನು ಶೀಘ್ರವಾಗಿ ಎದ್ದು ನದಿಯನ್ನು ದಾಟಿ ಹೋಗು; ಏಕೆಂದರೆ ಈ ಪ್ರಕಾರ ಅಹೀತೋಫೆಲನು ನಿನಗೆ ವಿರೋಧವಾಗಿ ಆಲೋಚನೆ ಹೇಳಿದ್ದಾನೆ,” ಎಂದರು.

[22] ಆಗ ದಾವೀದನೂ, ಅವನ ಸಂಗಡ ಇದ್ದ ಸಮಸ್ತ ಜನರೂ ಎದ್ದು ಯೊರ್ದನನ್ನು ದಾಟಿದರು. ಉದಯವಾದಾಗ ದಾಟಬೇಕಾದವರು ಒಬ್ಬರಾದರೂ ಉಳಿದಿರಲಿಲ್ಲ.

[23] ಆದರೆ ಅಹೀತೋಫೆಲನು ತನ್ನ ಯೋಚನೆಯ ಪ್ರಕಾರ ನಡೆಯಲಿಲ್ಲವೆಂದು ನೋಡಿದಾಗ, ತನ್ನ ಕತ್ತೆಯ ಮೇಲೆ ತಡಿಯನ್ನು ಹಾಕಿ ಏರಿ, ತನ್ನ ಪಟ್ಟಣದಲ್ಲಿರುವ ತನ್ನ ಮನೆಗೆ ಹೋದನು. ಅವನು ಮನೆಯನ್ನು ಕ್ರಮಪಡಿಸಿ, ಉರುಲು ಹಾಕಿಕೊಂಡು ಸತ್ತನು. ಅವನ ಶವವನ್ನು ಅವನ ತಂದೆಯ ಸ್ಮಶಾನಭೂಮಿಯಲ್ಲಿ ಸಮಾಧಿಮಾಡಿದರು.

[24] ದಾವೀದನು ಮಹನಯಿಮಿಗೆ ಬಂದನು. ಇದಲ್ಲದೆ ಅಬ್ಷಾಲೋಮನೂ, ಅವನ ಸಂಗಡ ಇಸ್ರಾಯೇಲ್ ಮನುಷ್ಯರೂ ಯೊರ್ದನನ್ನು ದಾಟಿದರು.

[25] ಅಬ್ಷಾಲೋಮನು ಯೋವಾಬನಿಗೆ ಬದಲಾಗಿ ಅಮಾಸನನ್ನು ಸೈನ್ಯದ ಅಧಿಪತಿಯಾಗಿ ಇಟ್ಟಿದ್ದನು. ಈ ಅಮಾಸನು ಇಸ್ರಾಯೇಲನಾದ ಇತ್ರನ ಮಗನು. ಈ ಇತ್ರನು ನಾಹಾಷನ ಮಗಳೂ, ಯೋವಾಬನ ತಾಯಿಯೂ, ಚೆರೂಯಳ ಸಹೋದರಿಯೂ ಆದ ಅಬೀಗೈಲಳನ್ನು ಮದುವೆಯಾಗಿದ್ದನು.

[26] ಇಸ್ರಾಯೇಲರೂ, ಅಬ್ಷಾಲೋಮನೂ ಗಿಲ್ಯಾದ್ ದೇಶದಲ್ಲಿ ದಂಡಿಳಿದರು.

[27] ದಾವೀದನು ಮಹನಯಿಮಿಗೆ ಬಂದಾಗ, ಅಮ್ಮೋನಿಯರ ರಬ್ಬಾ ಪಟ್ಟಣದ ನಾಹಾಷನ ಮಗ ಶೋಬಿಯೂ, ಲೋದೆಬಾರು ಊರಿನವನಾಗಿರುವ ಅಮ್ಮಿಯೇಲನ ಮಗ ಮಾಕೀರನೂ, ರೋಗೆಲೀಮ್ ಊರಿನ ಗಿಲ್ಯಾದ್ಯನಾದ ಬರ್ಜಿಲ್ಲೈಯೂ

[28] ಹಾಸಿಗೆಗಳನ್ನು, ಬಟ್ಟಲುಗಳನ್ನು, ಮಡಕೆ, ಗೋಧಿ, ಜವೆಗೋಧಿ, ಹಿಟ್ಟು, ಹುರಿದ ಕಾಳು ಅವರೆ, ಅಲಸಂದಿ,

[29] ಹುರಿದ ಕಡಲೆ, ಜೇನುತುಪ್ಪ, ಬೆಣ್ಣೆ, ಕುರಿ, ಹಸುವಿನ ಗಿಣ್ಣು ಇವುಗಳನ್ನು ದಾವೀದನಿಗೂ, ಅವನ ಸಂಗಡ ಇದ್ದ ಜನರಿಗೂ ತಿನ್ನುವುದಕ್ಕೆ ತಂದರು. ಏಕೆಂದರೆ, “ಮರುಭೂಮಿಯಲ್ಲಿ ಜನರು ಹಸಿದು ದಣಿದು ದಾಹಗೊಂಡಿರುವರು,” ಎಂದುಕೊಂಡರು.

2 ಸಮುಯೇಲ — Chapters