[1] ದಾವೀದನು ಇಸ್ರಾಯೇಲಿನಲ್ಲಿ ಆರಿಸಿದ ಮೂವತ್ತು ಸಾವಿರ ಸೈನಿಕರನ್ನು ಕೂಡಿಸಿಕೊಂಡು,
[2] ಆ ಕೆರೂಬಿಗಳ ನಡುವೆ ವಾಸವಾಗಿರುವ ಸೇನಾಧೀಶ್ವರ ಯೆಹೋವ ದೇವರ ಹೆಸರಿನಿಂದ ಕರೆಯಲಾದ ದೇವರ ಮಂಜೂಷವನ್ನು ತೆಗೆದುಕೊಂಡು ಬರಲು ತನ್ನ ಸಂಗಡ ಇದ್ದ ಸಮಸ್ತ ಜನರನ್ನು ಕರೆದುಕೊಂಡು, ಯೆಹೂದದ ಬಾಲಾ ಎಂಬಲ್ಲಿಗೆ ಹೊರಟನು.
[3] ಆಗ ಅವರು ಗುಡ್ಡದ ಮೇಲಿರುವ ಅಬೀನಾದಾಬನ ಮನೆಯೊಳಗಿಂದ ದೇವರ ಮಂಜೂಷವನ್ನು ತೆಗೆದುಕೊಂಡು, ಅದನ್ನು ಹೊಸ ಬಂಡಿಯ ಮೇಲೆ ಏರಿಸಿದರು. ಗುಡ್ಡದ ಮೇಲೆ ವಾಸವಾಗಿದ್ದ ಅಬೀನಾದಾಬನ ಮಕ್ಕಳಾದ ಉಜ್ಜನು ಹಾಗೂ ಅಹಿಯೋವನು ಆ ಹೊಸ ಬಂಡಿಯನ್ನು ನಡೆಸಿದರು.
[4] ಅಬೀನಾದಾಬನ ಮನೆಯೊಳಗಿಂದ ಅದನ್ನು ಹೊರಗೆ ತಂದಾಗ ಅಹಿಯೋವನು ದೇವರ ಮಂಜೂಷದ ಮುಂದೆ ನಡೆದನು.
[5] ದಾವೀದನೂ, ಸಮಸ್ತ ಇಸ್ರಾಯೇಲರೂ ಸಕಲ ವಾದ್ಯಗಳಾದ ಕಿನ್ನರಿ, ವೀಣೆ, ದಮ್ಮಡಿ, ಸ್ವರಮಂಡಲ, ತಾಳ, ತುತೂರಿ ಇವುಗಳನ್ನು ತಮ್ಮ ಸಮಸ್ತ ಬಲದಿಂದ ಬಾರಿಸುತ್ತಾ, ಹಾಡುತ್ತಾ ಯೆಹೋವ ದೇವರ ಮುಂದೆ ಹೋದರು.
[6] ಅವರು ನಾಕೋನನ ಕಣದ ಬಳಿಗೆ ಬಂದಾಗ, ಎತ್ತುಗಳು ಎಡವಿದ್ದರಿಂದ ಉಜ್ಜನು ತನ್ನ ಕೈಚಾಚಿ ದೇವರ ಮಂಜೂಷವನ್ನು ಹಿಡಿದನು.
[7] ಆಗ ಯೆಹೋವ ದೇವರು ಉಜ್ಜನ ಮೇಲೆ ಕೋಪಗೊಂಡು, ಅಂಥ ಅಗೌರವಕ್ಕಾಗಿ ದೇವರು ಅವನನ್ನು ಶಿಕ್ಷಿಸಿದರು; ಅವನು ಅಲ್ಲಿಯೇ ದೇವರ ಮಂಜೂಷದ ಬಳಿಯಲ್ಲಿ ಸತ್ತನು.
[8] ಯೆಹೋವ ದೇವರು ಉಜ್ಜನನ್ನು ಶಿಕ್ಷಿಸಿದ್ದರಿಂದ, ದಾವೀದನು ಕೋಪಗೊಂಡು ಆ ಸ್ಥಳಕ್ಕೆ ಪೆರೆಚ್ ಉಜ್ಜ ಎಂದು ಹೆಸರಿಟ್ಟನು, ಇಂದಿನವರೆಗೂ ಆ ಸ್ಥಳಕ್ಕೆ ಪೆರೆಚ್ ಉಜ್ಜ ಎಂದು ಕರೆಯಲಾಗುತ್ತದೆ.
[9] ದಾವೀದನು ಆ ದಿನ ಯೆಹೋವ ದೇವರಿಗೆ ಭಯಪಟ್ಟು, “ಯೆಹೋವ ದೇವರ ಮಂಜೂಷವನ್ನು ನಾನಿರುವಲ್ಲಿಗೆ ಹೇಗೆ ತೆಗೆದುಕೊಂಡು ಹೋಗುವದು?” ಎಂದನು.
[10] ದಾವೀದನು ಯೆಹೋವ ದೇವರ ಮಂಜೂಷವನ್ನು ದಾವೀದನ ಪಟ್ಟಣಕ್ಕೆ ತರಲು ಮನಸ್ಸಿಲ್ಲದೆ, ಗಿತ್ತೀಯನಾದ ಓಬೇದ್ ಏದೋಮನ ಮನೆಗೆ ತೆಗೆದುಕೊಂಡು ಹೋದನು.
[11] ಯೆಹೋವ ದೇವರ ಮಂಜೂಷವು ಗಿತ್ತೀಯನಾದ ಓಬೇದ್ ಏದೋಮನ ಮನೆಯಲ್ಲಿ ಮೂರು ತಿಂಗಳು ಇದ್ದುದರಿಂದ, ಯೆಹೋವ ದೇವರು ಓಬೇದ್ ಎದೋಮನನ್ನೂ, ಅವನ ಮನೆಯವರೆಲ್ಲರನ್ನೂ ಆಶೀರ್ವದಿಸಿದರು.
[12] “ದೇವರ ಮಂಜೂಷದ ನಿಮಿತ್ತ ಯೆಹೋವ ದೇವರು ಓಬೇದ್ ಏದೋಮನ ಮನೆಯನ್ನೂ, ಅವನಿಗೆ ಉಂಟಾದದ್ದೆಲ್ಲವನ್ನೂ ಆಶೀರ್ವದಿಸಿದ್ದಾರೆ,” ಎಂದು ಅರಸನಾದ ದಾವೀದನಿಗೆ ತಿಳಿಸಲಾಯಿತು. ಆಗ ದಾವೀದನು ಹೋಗಿ, ಓಬೇದ್ ಏದೋಮನ ಮನೆಯೊಳಗಿಂದ ದೇವರ ಮಂಜೂಷವನ್ನು ದಾವೀದನ ಪಟ್ಟಣಕ್ಕೆ ಸಂತೋಷವಾಗಿ ತಂದನು.
[13] ಯೆಹೋವ ದೇವರ ಮಂಜೂಷವನ್ನು ಹೊತ್ತುಕೊಂಡು ಹೋಗುವವರು ಆರು ಹೆಜ್ಜೆ ನಡೆದಾಗ, ಅವನು ಎತ್ತುಗಳನ್ನೂ, ಕೊಬ್ಬಿದ ಪಶುಗಳನ್ನೂ ಬಲಿಯಾಗಿ ಅರ್ಪಿಸಿದರು.
[14] ಇದಲ್ಲದೆ ದಾವೀದನು ನಾರಿನ ಏಫೋದನ್ನು ಧರಿಸಿಕೊಂಡು, ತನ್ನ ಪೂರ್ಣಬಲದಿಂದ ಯೆಹೋವ ದೇವರ ಮುಂದೆ ಕುಣಿದಾಡಿದನು.
[15] ಈ ಪ್ರಕಾರ ದಾವೀದನೂ, ಇಸ್ರಾಯೇಲರೆಲ್ಲರೂ ಯೆಹೋವ ದೇವರ ಮಂಜೂಷವನ್ನು ಆರ್ಭಟದಿಂದಲೂ, ತುತೂರಿಯ ಶಬ್ದದಿಂದಲೂ ಬರಮಾಡಿದರು.
[16] ಯೆಹೋವ ದೇವರ ಮಂಜೂಷವು ದಾವೀದನ ಪಟ್ಟಣದಲ್ಲಿ ಪ್ರವೇಶಿಸುವಾಗ, ಸೌಲನ ಮಗಳಾದ ಮೀಕಲಳು ಕಿಟಕಿಯಿಂದ ನೋಡಿ, ಅರಸನಾದ ದಾವೀದನು ಯೆಹೋವ ದೇವರ ಮುಂದೆ ಕುಣಿದಾಡುವುದನ್ನು ಕಂಡು, ತನ್ನ ಹೃದಯದಲ್ಲಿ ಅವನನ್ನು ತಿರಸ್ಕರಿಸಿದಳು.
[17] ಅವರು ಯೆಹೋವ ದೇವರ ಮಂಜೂಷವನ್ನು ಒಳಗೆ ತಂದು, ದಾವೀದನು ಅದಕ್ಕೋಸ್ಕರ ಹಾಕಿದ ಗುಡಾರದೊಳಗೆ ಅದರ ನಿಯಮಿತ ಸ್ಥಳದಲ್ಲಿ ಅದನ್ನು ಇಟ್ಟ ತರುವಾಯ, ದಾವೀದನು ಯೆಹೋವ ದೇವರ ಸನ್ನಿಧಿಯಲ್ಲಿ ದಹನಬಲಿಗಳನ್ನೂ, ಸಮಾಧಾನದ ಬಲಿಗಳನ್ನೂ ಅರ್ಪಿಸಿದನು.
[18] ದಾವೀದನು ದಹನಬಲಿಗಳನ್ನೂ, ಸಮಾಧಾನದ ಬಲಿಗಳನ್ನೂ ಅರ್ಪಿಸಿದ ತರುವಾಯ, ಸೇನಾಧೀಶ್ವರ ಯೆಹೋವ ದೇವರ ಹೆಸರಿನಲ್ಲಿ ಜನರನ್ನು ಆಶೀರ್ವದಿಸಿ,
[19] ನೆರೆದುಬಂದ ಇಸ್ರಾಯೇಲಿನ ಪ್ರತಿಯೊಬ್ಬ ಪುರುಷನಿಗೂ ಸ್ತ್ರೀಗೂ, ಒಂದು ರೊಟ್ಟಿಯನ್ನೂ, ಖರ್ಜೂರದ ಉಂಡೆಯನ್ನೂ, ದ್ರಾಕ್ಷಿ ಹಣ್ಣಿನ ಉಂಡೆಯನ್ನೂ ಹಂಚಿದನು. ತರುವಾಯ ಜನರೆಲ್ಲರೂ ತಮ್ಮ ತಮ್ಮ ಮನೆಗಳಿಗೆ ಹೋದರು.
[20] ಆಗ ದಾವೀದನು ತನ್ನ ಮನೆಯವರನ್ನು ಆಶೀರ್ವದಿಸುವುದಕ್ಕೆ ತಿರುಗಿದಾಗ, ಸೌಲನ ಮಗಳಾದ ಮೀಕಲಳು ದಾವೀದನಿಗೆ ಎದುರಾಗಿ ಬಂದು, “ನಿಷ್ಪ್ರಯೋಜಕ ಮನುಷ್ಯರಲ್ಲಿ ಒಬ್ಬನು ನಾಚಿಕೆ ಇಲ್ಲದೆ ತನ್ನ ವಸ್ತ್ರಗಳನ್ನು ಬಿಚ್ಚಿ ಹಾಕಿದ ಹಾಗೆಯೇ, ಈ ಹೊತ್ತು ತನ್ನ ಸೇವಕರ ದಾಸಿಯರ ಕಣ್ಣು ಮುಂದೆ ತನ್ನ ವಸ್ತ್ರಗಳನ್ನು ಬಿಚ್ಚಿಹಾಕಿದ್ದ ಇಸ್ರಾಯೇಲಿನ ಅರಸನು ಈ ಹೊತ್ತು ಎಷ್ಟು ಘನಹೊಂದಿದನು?” ಎಂದಳು.
[21] ಆದರೆ ದಾವೀದನು ಮೀಕಲಳಿಗೆ, “ನಾನು ಕುಣಿದದ್ದು ಯೆಹೋವ ದೇವರ ಸನ್ನಿಧಿಯಲ್ಲಿ ಮಾತ್ರ; ನಿನ್ನ ತಂದೆಯನ್ನೂ ಅವನ ಮನೆಯವರೆಲ್ಲರನ್ನೂ ಬಿಟ್ಟುಬಿಟ್ಟು, ನನ್ನನ್ನೇ ಆರಿಸಿಕೊಂಡು, ತಮ್ಮ ಪ್ರಜೆಗಳಾದ ಇಸ್ರಾಯೇಲರ ಅರಸನನ್ನಾಗಿ ಮಾಡಿದ ಆ ಯೆಹೋವ ದೇವರ ಮುಂದೆ ಇನ್ನೂ ಹೆಚ್ಚಾಗಿ ಕುಣಿದಾಡುವೆನು.
[22] ನಾನು ಇನ್ನೂ ಇದಕ್ಕಿಂತ ಅಲ್ಪನಾಗಿರುವುದಕ್ಕೂ, ಹೀನೈಸಿಕೊಳ್ಳುವುದಕ್ಕೂ, ಸಿದ್ಧನಾಗಿದ್ದೇನೆ. ಆದರೆ ನೀನು ಹೇಳಿದ ದಾಸಿಯರಿಂದ ನಿಶ್ಚಯವಾಗಿ ಘನತೆಯನ್ನು ಹೊಂದುವೆನು,” ಎಂದನು.
[23] ಆದ್ದರಿಂದ ಸೌಲನ ಮಗಳಾದ ಮೀಕಲಳು ತನ್ನ ಮರಣದ ದಿವಸದ ಮಟ್ಟಿಗೂ ಮಕ್ಕಳು ಆಗಲಿಲ್ಲ.