Skip to content
Opens in a new window
Listen to this chapter • 7:23

[1] ಯೆಹೋವ ದೇವರು ದಾವೀದನನ್ನು ಅವನ ಎಲ್ಲಾ ಶತ್ರುಗಳಿಂದಲೂ, ಸೌಲನ ಕೈಯಿಂದಲೂ ತಪ್ಪಿಸಿಕೊಂಡಾಗ ಯೆಹೋವ ದೇವರಿಗೆ ಈ ಪದ್ಯವನ್ನು ಹಾಡಿದ್ದು.

[2] ಅವನು ಹೇಳಿದನು: “ಯೆಹೋವ ದೇವರು ನನ್ನ ಬಂಡೆಯೂ ನನ್ನ ಕೋಟೆಯೂ ನನ್ನ ವಿಮೋಚಕರೂ ಆಗಿದ್ದಾರೆ,

[3] ನನ್ನ ಬಂಡೆಯಾದ ದೇವರಲ್ಲಿ, ನಾನು ಭರವಸವಿಡುವೆನು; ಅವರು ನನ್ನ ಗುರಾಣಿ ಮತ್ತು ನನ್ನ ರಕ್ಷಣೆಯ ಕೊಂಬು, ಅವರು ನನ್ನ ಉನ್ನತವಾದ ದುರ್ಗವೂ, ನನ್ನ ಆಶ್ರಯವೂ, ಬಲಾತ್ಕಾರಿಯಿಂದ ನನ್ನನ್ನು ರಕ್ಷಿಸುವವರೂ ಅವರೇ ಆಗಿದ್ದಾರೆ.

[4] “ಸ್ತುತಿ ಪಾತ್ರರಾಗಿರುವ ಯೆಹೋವ ದೇವರನ್ನು ನಾನು ಮೊರೆಯಿಟ್ಟದ್ದರಿಂದ, ಅವರು ನನ್ನ ಶತ್ರುಗಳಿಂದ ನನ್ನನ್ನು ಕಾಪಾಡಿದ್ದಾರೆ.

[5] ಮರಣದಲೆಗಳು ನನ್ನನ್ನು ಆವರಿಸಿಕೊಂಡವು. ವಿನಾಶಪ್ರವಾಹಗಳು ನನ್ನ ಮೇಲೆ ಹರಿದವು;

[6] ಪಾತಾಳದ ಪಾಶಗಳು ನನ್ನನ್ನು ಸುತ್ತಿಕೊಂಡವು; ಮರಣದ ಬಲೆಗಳು ನನ್ನನ್ನು ಎದುರಿಸಿದವು.

[7] “ನನ್ನ ಇಕ್ಕಟ್ಟಿನಲ್ಲಿ ಯೆಹೋವ ದೇವರನ್ನು ಕರೆದೆನು; ನನ್ನ ದೇವರಿಗೆ ಮೊರೆಯಿಟ್ಟೆನು. ಅವರು ತಮ್ಮ ಮಂದಿರದೊಳಗಿಂದ ನನ್ನ ಧ್ವನಿಯನ್ನು ಕೇಳಿದರು; ನನ್ನ ಮೊರೆಯು ಅವರ ಕಿವಿಗೆ ಮುಟ್ಟಿತು.

[8] ಆಗ ದೇವರು ಬೇಸರಗೊಂಡಿದ್ದರಿಂದ ಭೂಮಿಯು ನಡುಗಿ ಕದಲಿದವು, ಆಕಾಶಗಳ ಅಸ್ತಿವಾರಗಳು ಸಹ ಕದಲಿದವು.

[9] ಮೂಗಿನಿಂದ ಹೊಗೆ ಬಂದಂತೆಯೂ, ಬಾಯಿಯೊಳಗಿಂದ ದಹಿಸುವ ಅಗ್ನಿ ಹೊರಟಂತೆಯೂ; ಕೆಂಡಗಳು ಅದರಿಂದ ಜ್ವಾಲಿಸಿದಂತೆಯೂ ಇತ್ತು.

[10] ದೇವರು ಆಕಾಶಗಳನ್ನು ಬಾಗಿಸಿ ಕೆಳಗಿಳಿದು ಬಂದರು; ಅವರ ಪಾದಗಳ ಕೆಳಗೆ ಕಾರ್ಮೋಡಗಳಿದ್ದವು;

[11] ಅವರು ಕೆರೂಬಿಯ ಮೇಲೆ ಕೂತು ಹಾರಿದರು, ಗಾಳಿಯ ರೆಕ್ಕೆಗಳ ಮೇಲೆ ಕಾಣಿಸಿಕೊಂಡರು.

[12] ಕತ್ತಲನ್ನೂ, ಮಳೆ ತರುವ ಆಕಾಶದ ಕಾರ್ಮೋಡಗಳನ್ನೂ ತಮ್ಮ ಸುತ್ತಲೂ ಹೊದಿಕೆಯನ್ನಾಗಿ ಮಾಡಿಕೊಂಡರು.

[13] ಅವರ ಸನ್ನಿಧಿಯ ಪ್ರಕಾಶದಿಂದ ಮಿಂಚಿನ ಜ್ವಾಲೆಗಳು ಹೊರಹೊಮ್ಮಿದವು.

[14] ಯೆಹೋವ ದೇವರು ಆಕಾಶಗಳಲ್ಲಿ ಗುಡುಗಿದರು. ಮಹೋನ್ನತ ದೇವರ ಧ್ವನಿಯು ಕಲ್ಮಳೆ ಹಾಗೂ ಮಿಂಚುಗಳಿಂದ ಪ್ರತಿಧ್ವನಿಸಿತು.

[15] ಅವರು ತಮ್ಮ ಬಾಣಗಳನ್ನು ಎಸೆದು ವೈರಿಗಳನ್ನು ಚದರಿಸಿದರು, ಸಿಡಿಲಿನಿಂದ ವೈರಿಗಳನ್ನೆಲ್ಲ ಅಟ್ಟಿಸಿಬಿಟ್ಟರು.

[16] ಆಗ ಯೆಹೋವ ದೇವರ ಗದರಿಕೆಯಿಂದಲೂ, ಅವರ ಮೂಗಿನ ಶ್ವಾಸದ ಗಾಳಿಯಿಂದಲೂ ಸಮುದ್ರದ ತಳವು ಕಾಣಿಸಿತು. ಭೂಲೋಕದ ಅಸ್ತಿವಾರಗಳು ಬಯಲಾದವು.

[17] “ಅವರು ಮೇಲಿನಿಂದ ಕೈಚಾಚಿ ನನ್ನನ್ನು ಹಿಡಿದು, ಅಗಾಧವಾದ ಜಲರಾಶಿಗಳಿಂದ ಹೊರಗೆಳೆದರು.

[18] ಅವರು ನನಗಿಂತ ಶಕ್ತಿಶಾಲಿಯಾದ ಶತ್ರುಗಳಿಂದ, ದ್ವೇಷಿಸುತ್ತಿದ್ದ ವೈರಿಗಳಿಂದ ನನ್ನನ್ನು ಬಿಡಿಸಿ ರಕ್ಷಿಸಿದರು.

[19] ನನ್ನ ಆಪತ್ತಿನ ದಿನದಲ್ಲಿ ನನ್ನನ್ನು ಆ ಶತ್ರುಗಳು ದಾಳಿಮಾಡಿದರು; ಆದರೆ ಯೆಹೋವ ದೇವರು ನನಗೆ ಆಧಾರವಾಗಿದ್ದರು.

[20] ಅವರು ನನ್ನನ್ನು ಹೊರಗೆ ವಿಶಾಲ ಸ್ಥಳಕ್ಕೆ ತಂದರು; ನನ್ನಲ್ಲಿ ಸಂತೋಷಪಟ್ಟದ್ದರಿಂದ ನನ್ನನ್ನು ಕಾಪಾಡಿದರು.

[21] “ಯೆಹೋವ ದೇವರು ನನ್ನ ನೀತಿಯ ಪ್ರಕಾರ ನನ್ನೊಂದಿಗೆ ವ್ಯವಹರಿಸಿದರು; ನನ್ನ ಕೈಗಳ ಶುದ್ಧತ್ವದ ಪ್ರಕಾರ ನನಗೆ ಪ್ರತಿಫಲಕೊಟ್ಟರು.

[22] ಏಕೆಂದರೆ ನಾನು ಯೆಹೋವ ದೇವರ ಮಾರ್ಗಗಳನ್ನು ಅನುಸರಿಸಿದ್ದೇನೆ, ನನ್ನ ದೇವರನ್ನು ಬಿಟ್ಟುಹೋಗುವ ದುಷ್ಟತ್ವವನ್ನು ನಾನು ಮಾಡಲಿಲ್ಲ.

[23] ಅವರ ಆಜ್ಞೆಗಳೆಲ್ಲಾ ನನ್ನ ಮುಂದೆ ಇಟ್ಟುಕೊಂಡೆನು; ದೇವರ ತೀರ್ಪುಗಳಿಂದ ನಾನು ತೊಲಗಿಹೋಗಲಿಲ್ಲ.

[24] ನಾನು ಅವರ ದೃಷ್ಟಿಯಲ್ಲಿ ನಿರ್ದೋಷಿಯು, ನಾನು ಪಾಪದಿಂದ ನನ್ನನ್ನು ಕಾಪಾಡಿಕೊಂಡೆನು.

[25] ಆದ್ದರಿಂದ ಯೆಹೋವ ದೇವರು ನನ್ನ ನೀತಿಯ ಪ್ರಕಾರವೂ, ಅವರ ದೃಷ್ಟಿಯಲ್ಲಿ ನನ್ನ ಶುದ್ಧತ್ವದ ಪ್ರಕಾರವೂ ನನಗೆ ಪ್ರತಿಫಲಕೊಟ್ಟರು.

[26] “ದಯವಂತರಿಗೆ ನೀವು ನಿಮ್ಮನ್ನು ದಯವಂತರಾಗಿ ತೋರಿಸುತ್ತೀರಿ; ನಿರ್ದೋಷಿಗೆ ನೀವು ನಿರ್ದೋಷಿಯಾಗಿ ತೋರಿಸುತ್ತೀರಿ.

[27] ಶುದ್ಧರಿಗೆ ನೀವು ಶುದ್ಧರಾಗಿ ತೋರಿಸುತ್ತೀರಿ, ವಕ್ರ ವ್ಯಕ್ತಿಗೆ ನಿಮ್ಮ ಬುದ್ಧಿವಂತಿಕೆಯನ್ನು ತೋರಿಸುತ್ತೀರಿ.

[28] ದೀನರನ್ನು ರಕ್ಷಿಸುತ್ತೀರಿ; ಆದರೆ ನೀವು ಗರ್ವಿಷ್ಠರನ್ನು ತಗ್ಗಿಸಲು ನಿಮ್ಮ ಕಣ್ಣುಗಳು ಅವರ ಮೇಲೆ ಇರುತ್ತವೆ.

[29] ಯೆಹೋವ ದೇವರೇ, ನನ್ನ ದೀಪವು ನೀವೇ; ಯೆಹೋವ ದೇವರು ನನ್ನ ಕತ್ತಲೆಯನ್ನು ಬೆಳಕನ್ನಾಗಿ ಮಾರ್ಪಡಿಸುವರು.

[30] ನಿಮ್ಮ ಸಹಾಯದಿಂದ ವೈರಿಸೇನೆಯ ವಿರುದ್ಧ ಹೋಗುವೆನು. ನನ್ನ ದೇವರೊಂದಿಗೆ ಕೋಟೆಗೋಡೆಯನ್ನೂ ಹಾರುವೆನು.

[31] “ದೇವರ ಮಾರ್ಗವು ಪರಿಪೂರ್ಣವಾದದ್ದು; ಯೆಹೋವ ದೇವರ ವಾಕ್ಯವು ದೋಷವಿಲ್ಲದ್ದು; ತಮ್ಮಲ್ಲಿ ಆಶ್ರಯ ಹೊಂದಿದ ಎಲ್ಲರಿಗೂ ಅವರು ಗುರಾಣಿಯಾಗಿದ್ದಾರೆ.

[32] ಏಕೆಂದರೆ ಯೆಹೋವ ದೇವರಲ್ಲದೆ ಬೇರೆ ದೇವರು ಯಾರು? ಮತ್ತು ನಮ್ಮ ದೇವರನ್ನು ಹೊರತುಪಡಿಸಿ ಬಂಡೆ ಯಾರು?

[33] ಬಲದಿಂದ ನನಗೆ ಆಯುಧವನ್ನು ಧರಿಸುವಂತೆ ಮಾಡಿ; ನನ್ನ ಮಾರ್ಗವನ್ನು ಸುರಕ್ಷಿತಗೊಳಿಸುವ ದೇವರು ಅವರೇ.

[34] ನನ್ನ ಕಾಲುಗಳನ್ನು ಜಿಂಕೆಗಳ ಕಾಲುಗಳಂತೆ ಚುರುಕು ಮಾಡಿ, ಅವರು ನನ್ನನ್ನು ಉನ್ನತ ಸ್ಥಳಗಳ ಮೇಲೆ ನಿಲ್ಲಿಸುತ್ತಾರೆ.

[35] ಅವರು ಯುದ್ಧಕ್ಕಾಗಿ ನನ್ನ ಕೈಗಳಿಗೆ ತರಬೇತುಕೊಟ್ಟು. ನನ್ನ ಭುಜದಿಂದ ಕಂಚಿನ ಬಿಲ್ಲನ್ನು ಬಗ್ಗಿಸುವಂತೆ ಮಾಡುತ್ತಾರೆ.

[36] ನಿಮ್ಮ ರಕ್ಷಣೆಯ ಸಹಾಯವನ್ನು ನನಗೆ ಗುರಾಣಿಯನ್ನಾಗಿ ಮಾಡಿದ್ದೀರಿ, ನಿಮ್ಮ ಸಹಾಯವು ನನ್ನನ್ನು ಘನವಂತನನ್ನಾಗಿ ಮಾಡಿದೆ.

[37] ನೀವು ನನ್ನ ಕಾಲಡಿಗಳಿಗೆ ವಿಶಾಲಸ್ಥಳ ಒದಗಿಸಿದ್ದೀರಿ, ಆದುದರಿಂದ ನನ್ನ ಹಿಮ್ಮಡಿಗಳು ಜಾರುವುದಿಲ್ಲ.

[38] “ನನ್ನ ಶತ್ರುಗಳನ್ನು ಹಿಂದಟ್ಟಿ ಅವರನ್ನು ನಾಶಮಾಡಿದೆನು. ಅವರನ್ನು ಸಂಹರಿಸಿಬಿಡುವವರೆಗೂ ನಾನು ಹಿಂದಿರುಗಲಿಲ್ಲ.

[39] ಏಳಲಾರದಂತೆ ಅವರನ್ನು ಸಂಪೂರ್ಣವಾಗಿ ತುಳಿದುಬಿಟ್ಟೆನು; ಅವರು ನನ್ನ ಪಾದಗಳ ಕೆಳಗೆ ಬಿದ್ದರು.

[40] ನೀವು ಯುದ್ಧಕ್ಕಾಗಿ ನನಗೆ ಬಲವನ್ನು ಆಯುಧವನ್ನಾಗಿ ನೀಡಿ; ನನ್ನ ಎದುರಾಳಿಗಳನ್ನು ನನಗೆ ಅಧೀನ ಮಾಡಿದ್ದೀರಿ.

[41] ನನ್ನ ಶತ್ರುಗಳು ನನಗೆ ಬೆನ್ನುಮಾಡಿ ಓಡಿಹೋಗುವಂತೆ ಮಾಡಿದಿರಿ; ನಾನು ನನ್ನ ವೈರಿಗಳನ್ನು ಸಂಹರಿಸಿದೆನು.

[42] ಅವರು ಸಹಾಯಕ್ಕಾಗಿ ಮೊರೆಯಿಟ್ಟರು, ಆದರೆ ರಕ್ಷಿಸುವವರು ಯಾರೂ ಇರಲಿಲ್ಲ; ಯೆಹೋವ ದೇವರಿಗೂ ಮೊರೆಯಿಟ್ಟರು, ಆದರೆ ಅವರೂ ಉತ್ತರ ಕೊಡಲಿಲ್ಲ.

[43] ನಾನು ಅವರನ್ನು ನೆಲದ ಧೂಳಿನಂತೆ ಪುಡಿಪುಡಿ ಮಾಡಿದೆನು; ಬೀದಿಯಲ್ಲಿನ ಕೆಸರು ಎಂಬಂತೆ ತುಳಿದು ಎಸೆದುಬಿಟ್ಟೆನು.

[44] “ನೀವು ನನ್ನ ಜನರ ಒಳಕಲಹದಿಂದ ನನ್ನನ್ನು ತಪ್ಪಿಸಿದ್ದೀರಿ, ನನ್ನನ್ನು ಜನಾಂಗಗಳಿಗೆ ನಾಯಕನನ್ನಾಗಿ ಉಳಿಸಿದ್ದೀ; ನಾನು ಅರಿಯದ ಜನರು ನನಗೆ ವಿಧೇಯರಾಗುವರು.

[45] ವಿದೇಶಿಯರು ನನಗೆ ಅಧೀನರಾದರು; ನನ್ನ ಸುದ್ದಿ ಕೇಳಿದ ಕೂಡಲೇ ನನಗೆ ವಿಧೇಯರಾಗುವರು.

[46] ಅವರು ಭಯಗೊಳ್ಳುವರು; ನಡುಗುತ್ತಾ ತಮ್ಮ ಕೋಟೆಗಳಿಂದ ಹೊರಬರುವರು.

[47] “ಯೆಹೋವ ದೇವರು ಜೀವಿಸುವ ದೇವರು! ನನ್ನ ಆಶ್ರಯವಾಗಿರುವ ದೇವರಿಗೆ ಸ್ತೋತ್ರ. ನನ್ನ ಬಂಡೆಯು, ನನ್ನ ರಕ್ಷಕರಾದ ದೇವರು ಮಹಿಮೆ ಹೊಂದಲಿ.

[48] ದೇವರೇ ನನಗೋಸ್ಕರ ಮುಯ್ಯಿಗೆ ಮುಯ್ಯಿ ತೀರಿಸುವವರೂ ಜನರನ್ನು ನನಗೆ ಅಧೀನಪಡಿಸುವವರೂ ಆಗಿದ್ದಾರೆ.

[49] ಅವರು ನನ್ನ ಶತ್ರುಗಳಿಂದ ನನ್ನನ್ನು ಬಿಡಿಸುತ್ತಾರೆ. ನೀವು ನನ್ನ ಎದುರಾಳಿಗಳಿಂದ ನನ್ನನ್ನು ತಪ್ಪಿಸಿ ಗೌರವಿಸುತ್ತೀರಿ. ಬಲಾತ್ಕಾರ ಮಾಡುವವನಿಂದ ನನ್ನನ್ನು ರಕ್ಷಿಸುತ್ತೀರಿ.

[50] ಆದ್ದರಿಂದ ಯೆಹೋವ ದೇವರೇ, ನಾನು ಜನಾಂಗಗಳಲ್ಲಿ ನಿಮ್ಮನ್ನು ಕೊಂಡಾಡುವೆನು. ನಿಮ್ಮನ್ನು ಕೊಂಡಾಡಿ ನಿಮ್ಮ ಹೆಸರನ್ನು ಕೀರ್ತಿಸುವೆನು.

[51] “ಅವರು ತಮ್ಮ ಅರಸನಿಗೆ ವಿಶೇಷ ರಕ್ಷಣೆಯನ್ನು ಕೊಡುವರು; ತಮ್ಮ ಅಭಿಷಿಕ್ತನಿಗೂ, ದಾವೀದನಿಗೂ, ಅವನ ಸಂತತಿಯವರಿಗೂ ದಯೆಯನ್ನು ಯುಗಯುಗಕ್ಕೂ ಅನುಗ್ರಹಿಸುವರು.”

2 ಸಮುಯೇಲ — Chapters