Skip to content
Opens in a new window
Listen to this chapter • 5:40

[1] ಸೌಲನ ಮರಣದ ತರುವಾಯ ದಾವೀದನು ಅಮಾಲೇಕ್ಯರನ್ನು ಸಂಹರಿಸಿ, ಚಿಕ್ಲಗಿಗೆ ತಿರುಗಿಬಂದು, ಎರಡು ದಿವಸ ಅಲ್ಲಿ ಇದ್ದ ತರುವಾಯ,

[2] ಮೂರನೆಯ ದಿನದಲ್ಲಿ ಒಬ್ಬನು ತನ್ನ ವಸ್ತ್ರಗಳನ್ನು ಹರಿದುಕೊಂಡು, ತನ್ನ ತಲೆಯ ಮೇಲೆ ಮಣ್ಣು ಹಾಕಿಕೊಂಡು, ಸೌಲನ ಪಾಳೆಯದಿಂದ ಹೊರಟು ದಾವೀದನ ಬಳಿಗೆ ಬಂದು, ನೆಲದ ಮಟ್ಟಿಗೂ ಬಾಗಿ ನಮಸ್ಕರಿಸಿದನು.

[3] ದಾವೀದನು ಅವನಿಗೆ, “ನೀನು ಎಲ್ಲಿಂದ ಬಂದೆ?” ಎಂದನು. ಅದಕ್ಕವನು, “ಇಸ್ರಾಯೇಲಿನ ಪಾಳೆಯದಿಂದ ತಪ್ಪಿಸಿಕೊಂಡು ಬಂದೆನು,” ಎಂದನು.

[4] ದಾವೀದನು ಅವನಿಗೆ, “ನಡೆದ ವರ್ತಮಾನವೇನು? ನೀನು ನನಗೆ ತಿಳಿಸು,” ಎಂದನು. ಅವನು, “ಜನರು ಯುದ್ಧದಿಂದ ಓಡಿಹೋದರು. ಜನರಲ್ಲಿ ಅನೇಕರು ಸತ್ತರು. ಸೌಲನೂ, ಅವನ ಮಗ ಯೋನಾತಾನನೂ ಸತ್ತರು,” ಎಂದನು.

[5] ದಾವೀದನು ತನಗೆ ವರ್ತಮಾನ ಹೇಳಿದ ಯುವಕನಿಗೆ, “ಸೌಲನೂ, ಅವನ ಮಗ ಯೋನಾತಾನನೂ ಸತ್ತರೆಂದು ನಿನಗೆ ಹೇಗೆ ತಿಳಿಯಿತು?” ಎಂದು ಪ್ರಶ್ನಿಸಿದನು.

[6] ಆಗ ಅವನು, “ನಾನು ಅಕಸ್ಮಾತ್ತಾಗಿ ಗಿಲ್ಬೋವ ಬೆಟ್ಟಕ್ಕೆ ಹೋಗಿದ್ದೆನು. ಅಲ್ಲಿ ಸೌಲನು ತನ್ನ ಈಟಿಯನ್ನು ಊರಿಕೊಂಡು ನಿಂತಿದ್ದನು. ಆಗ ರಥಗಳೂ ರಾಹುತರೂ ಅವನನ್ನು ಹಿಂದಟ್ಟಿಕೊಂಡೇ ಇದ್ದರು.

[7] ಅವನು ಹಿಂದಕ್ಕೆ ತಿರುಗಿ ನೋಡಿ, ನನ್ನನ್ನು ಕಂಡು ಕರೆದನು. ಆಗ ನಾನು, ‘ಇದ್ದೇನೆ,’ ಎಂದೆನು.

[8] “ಆಗ ಅವನು, ‘ನೀನ್ಯಾರು?’ ಎಂದು ಕೇಳಿದನು. “ ‘ನಾನು ಒಬ್ಬ ಅಮಾಲೇಕ್ಯನು,’ ಎಂದು ಉತ್ತರಕೊಟ್ಟೆನು.

[9] “ಅವನು ನನಗೆ, ‘ನೀನು ದಯಮಾಡಿ ನನ್ನ ಮೇಲೆ ನಿಂತು ನನ್ನನ್ನು ಕೊಂದುಹಾಕು. ಏಕೆಂದರೆ ನನ್ನ ಪ್ರಾಣವು ಇನ್ನೂ ನನ್ನಲ್ಲಿ ಪೂರ್ಣವಾಗಿರುವುದರಿಂದ ಸಂಕಟವು ನನ್ನನ್ನು ಹಿಡಿದಿದೆ,’ ಎಂದನು.

[10] “ಆದ್ದರಿಂದ ಅವನು ಬಿದ್ದ ತರುವಾಯ ಬದುಕಲಾರನೆಂದು ನಾನು ತಿಳಿದು, ಅವನ ಮೇಲೆ ನಿಂತು ಅವನನ್ನು ಕೊಂದುಹಾಕಿದೆನು. ಅವನ ತಲೆಯ ಮೇಲಿದ್ದ ಕಿರೀಟವನ್ನೂ ಅವನ ತೋಳಿನಲ್ಲಿದ್ದ ಬಳೆಯನ್ನೂ ತೆಗೆದುಕೊಂಡು, ಅವುಗಳನ್ನು ನನ್ನ ಒಡೆಯನಿಗೆ ಇಲ್ಲಿ ತಂದಿದ್ದೇನೆ,” ಎಂದನು.

[11] ಆಗ ದಾವೀದನೂ, ಅವನ ಸಂಗಡ ಇದ್ದ ಸಮಸ್ತ ಜನರೂ ತಮ್ಮ ವಸ್ತ್ರಗಳನ್ನು ಹರಿದುಕೊಂಡು,

[12] ಸೌಲನೂ, ಅವನ ಮಗನಾದ ಯೋನಾತಾನನೂ ಇಸ್ರಾಯೇಲಿನ ಮನೆಯವರೂ ಯೆಹೋವ ದೇವರ ಜನರೂ ಖಡ್ಗದಿಂದ ಬಿದ್ದ ಕಾರಣ, ಅವರಿಗೋಸ್ಕರ ಗೋಳಾಡಿ ಅತ್ತು, ಅಸ್ತಮಾನದವರೆಗೂ ಉಪವಾಸವಾಗಿದ್ದರು.

[13] ದಾವೀದನು ತನಗೆ ವರ್ತಮಾನ ತಿಳಿಸಿದ ಯುವಕನನ್ನು, “ನೀನು ಎಲ್ಲಿಯವನು?” ಎಂದು ಕೇಳಿದನು. ಅವನು, “ನಾನು ವಿದೇಶಿಯ ಮಗನಾದ ಅಮಾಲೇಕ್ಯನು,” ಎಂದನು.

[14] ಆಗ ದಾವೀದನು ಅವನಿಗೆ, “ಯೆಹೋವ ದೇವರ ಅಭಿಷಿಕ್ತನನ್ನು ಸಂಹರಿಸಲು ನಿನ್ನ ಕೈ ಎತ್ತುವುದಕ್ಕೆ ಯಾಕೆ ಭಯಪಡಲಿಲ್ಲ?” ಎಂದು ಕೇಳಿದನು.

[15] ಯುವಕರಲ್ಲಿ ಒಬ್ಬನನ್ನು ಕರೆದು, “ನೀನು ಇವನನ್ನು ಕೊಲ್ಲು,” ಎಂದನು. ಹಾಗೆಯೇ ಅವನು ಅವನನ್ನು ಹೊಡೆದು ಕೊಂದನು.

[16] ದಾವೀದನು ಅವನಿಗೆ, “ಯೆಹೋವ ದೇವರ ಅಭಿಷಿಕ್ತನನ್ನು ಕೊಂದುಹಾಕಿದೆನೆಂದು ನಿನ್ನ ಬಾಯಿ ನಿನಗೆ ವಿರೋಧವಾಗಿ ಸಾಕ್ಷಿ ಹೇಳಿದ್ದರಿಂದ, ನಿನ್ನ ರಕ್ತವು ನಿನ್ನ ತಲೆಯ ಮೇಲೆ ಇರಲಿ,” ಎಂದನು.

[17] ಆಗ ದಾವೀದನು ಸೌಲನ ಮೇಲೆಯೂ, ಅವನ ಮಗ ಯೋನಾತಾನನ ಮೇಲೆಯೂ ಶೋಕದಿಂದ ಈ ಗೀತೆ ಹಾಡಿ ಗೋಳಾಡಿದನು.

[18] ಇದಲ್ಲದೆ ದಾವೀದನು ಬಿಲ್ಲೆ ಎಂಬ ಗೀತೆಯನ್ನು ಯೆಹೂದ್ಯರಿಗೆ ಕಲಿಸಬೇಕೆಂದು ಹೇಳಿದನು. ಇದು ಯಾಷಾರನ ಗ್ರಂಥದಲ್ಲಿ ಬರೆಯಲಾಗಿದೆ:

[19] “ಇಸ್ರಾಯೇಲೇ, ನಿನ್ನ ಮಹಿಮೆಯು ನಿನ್ನ ಬೆಟ್ಟಗಳ ಮೇಲೆ ಕೊಲೆಯಾಗಿ ಬಿದ್ದಿದೆ. ಪರಾಕ್ರಮಶಾಲಿಗಳು ಹೇಗೆ ಬಿದ್ದರು!

[20] “ಗತ್ ಊರಿನಲ್ಲಿ ಇದನ್ನು ತಿಳಿಸಬೇಡಿರಿ. ಅಷ್ಕೆಲೋನಿನ ಬೀದಿಗಳಲ್ಲಿ ಸಾರಬೇಡಿರಿ. ಫಿಲಿಷ್ಟಿಯರ ಪುತ್ರಿಯರು ಸಂತೋಷಪಡಬಾರದು; ಸುನ್ನತಿ ಇಲ್ಲದವರ ಪುತ್ರಿಯರು ಉತ್ಸಾಹಪಡಬಾರದು.

[21] “ಗಿಲ್ಬೋವ ಬೆಟ್ಟಗಳೇ, ನಿಮ್ಮ ಮೇಲೆ ಮಂಜೂ ಮಳೆಯೂ ಬೀಳದೆ ಇರಲಿ, ನೈವೇದ್ಯಕ್ಕಾಗಿ ಫಲಿಸುವ ಹೊಲಗಳೂ ಇಲ್ಲದೆ ಹೋಗಲಿ. ಅಲ್ಲಿ ಪರಾಕ್ರಮಶಾಲಿಗಳ ಗುರಾಣಿಯೂ ಅವಮಾನಗೊಂಡು ಬಿದ್ದವು. ಸೌಲನ ಗುರಾಣಿಯೂ ಎಣ್ಣೆಯಿಂದ ಅಭಿಷಿಕ್ತನಲ್ಲದವನ ಗುರಾಣಿಯಂತೆ ಆಯಿತು.

[22] “ಹತರಾದವರ ರಕ್ತದಿಂದಲೂ, ಯೋನಾತಾನನ ಬಿಲ್ಲು ಹಿಂದಕ್ಕೆ ತಿರುಗಲಿಲ್ಲ. ಸೌಲನ ಖಡ್ಗ ತೃಪ್ತಿಗೊಳ್ಳದೆ ತಿರುಗಿ ಬರಲಿಲ್ಲ.

[23] ಸೌಲನೂ ಯೋನಾತಾನನೂ ಜೀವದಿಂದಿದ್ದಾಗ ಪ್ರಿಯಕರವಾಗಿಯೂ, ಸಂತೋಷಕರವಾಗಿಯೂ ಇದ್ದರು. ತಮ್ಮ ಮರಣದಲ್ಲಿಯೂ ಅಗಲಿ ಹೋಗದೆ ಇದ್ದರು. ಅವರು ಹದ್ದುಗಳಿಗಿಂತ ವೇಗವುಳ್ಳವರೂ, ಸಿಂಹಗಳಿಗಿಂತ ಬಲವುಳ್ಳವರೂ ಆಗಿದ್ದರು.

[24] “ಇಸ್ರಾಯೇಲಿನ ಪುತ್ರಿಯರೇ, ಸೌಲನಿಗೋಸ್ಕರ ಅಳಿರಿ. ನಿಮಗೆ ರಕ್ತಾಂಬರವನ್ನು ಸಂಭ್ರಮವಾಗಿ ತೊಡಿಸಿದನಲ್ಲಾ. ನಿಮ್ಮ ಉಡುಗೆಗಳ ಮೇಲೆ ಚಿನ್ನದ ಆಭರಣಗಳನ್ನು ಧರಿಸುವಂತೆ ಮಾಡಿದನಲ್ಲಾ.

[25] “ಹೇಗೆ ಪರಾಕ್ರಮಶಾಲಿಗಳು ಯುದ್ಧದಲ್ಲಿ ಬಿದ್ದಿದ್ದಾರೆ. ಯೋನಾತಾನನೇ, ನೀನು ಉನ್ನತ ಸ್ಥಳಗಳಲ್ಲಿ ಹತನಾಗಿ ಬಿದ್ದಿರುವಿ.

[26] ನನ್ನ ಸಹೋದರನಾದ ಯೋನಾತಾನನೇ, ನಾನು ನಿನಗೋಸ್ಕರ ಶೋಕಿಸುತ್ತೇನೆ. ನೀನು ನನಗೆ ಬಹಳ ಮನೋಹರನಾಗಿದ್ದಿ. ನಿನ್ನ ಪ್ರೀತಿ ನನ್ನ ಮೇಲೆ ಆಶ್ಚರ್ಯಕರವಾಗಿತ್ತು. ಅದು ಸ್ತ್ರೀಯರ ಪ್ರೀತಿಗಿಂತ ಅಧಿಕವಾದದ್ದು.

[27] “ಹೇಗೆ ಪರಾಕ್ರಮಶಾಲಿಗಳು ಯುದ್ಧದಲ್ಲಿ ಬಿದ್ದಿದ್ದಾರೆ. ಯುದ್ಧದ ಆಯುಧಗಳು ನಾಶವಾಗಿ ಹೋದವಲ್ಲಾ.”

2 ಸಮುಯೇಲ — Chapters