Skip to content
Opens in a new window
Listen to this chapter • 4:52

[1] ಇದರ ತರುವಾಯ, ಅಮ್ಮೋನಿಯರ ಅರಸನು ಮರಣಹೊಂದಿದನು. ಅವನಿಗೆ ಬದಲಾಗಿ ಅವನ ಮಗ ಹಾನೂನನು ಅರಸನಾದನು.

[2] ಆಗ ದಾವೀದನು, “ಹಾನೂನನ ತಂದೆಯಾದ ನಾಹಾಷನು ನನಗೆ ದಯೆ ತೋರಿಸಿದ್ದರಿಂದ, ನಾನೂ ಅವನ ಮಗ ಹಾನೂನನಿಗೆ ದಯೆ ತೋರಿಸುವೆನು,” ಎಂದನು. ದಾವೀದನು ಅವನ ತಂದೆಯನ್ನು ಕುರಿತು ಹಾನೂನನಿಗೆ ಸಂತಾಪ ಸೂಚಿಸಲು ತನ್ನ ಸೇವಕರನ್ನು ಕಳುಹಿಸಿದನು. ಹೀಗೆಯೇ ದಾವೀದನ ಸೇವಕರು ಅಮ್ಮೋನಿಯರ ದೇಶಕ್ಕೆ ಬಂದರು.

[3] ಆಗ ಅಮ್ಮೋನಿಯರ ಪ್ರಧಾನರು ತಮ್ಮ ಯಜಮಾನನಾದ ಹಾನೂನನಿಗೆ, “ದಾವೀದನು ನಿನ್ನ ಬಳಿಗೆ ಸಂತಾಪ ಸೂಚಿಸುವವರನ್ನು ಕಳುಹಿಸಿದ್ದರಿಂದ, ನಿನ್ನ ತಂದೆಯನ್ನು ಘನಪಡಿಸುತ್ತಾನೆಂದು ಯೋಚಿಸುತ್ತೀಯೋ? ದಾವೀದನು ತನ್ನ ಸೇವಕರನ್ನು ಈ ಪಟ್ಟಣವನ್ನು ಸಂಚರಿಸಿ ನೋಡುವುದಕ್ಕೂ ಶೋಧಿಸುವುದಕ್ಕೂ ಅದನ್ನು ಕೆಡವಿ ಹಾಕುವುದಕ್ಕೂ ನಿನ್ನ ಬಳಿಗೆ ಕಳುಹಿಸಿದ್ದಾನಲ್ಲವೇ,” ಎಂದರು.

[4] ಆದ್ದರಿಂದ ಹಾನೂನನು ದಾವೀದನ ಸೇವಕರನ್ನು ಹಿಡಿದು, ಅವರ ಅರ್ಧ ಗಡ್ಡವನ್ನು ಬೋಳಿಸಿ, ಅವರ ವಸ್ತ್ರಗಳನ್ನು ಬೆನ್ನ ಹಿಂದೆ ಮಧ್ಯದಿಂದ ಸೊಂಟದ ಕೆಳಗಿನವರೆಗೂ ಕತ್ತರಿಸಿ, ಅವರನ್ನು ಕಳುಹಿಸಿಬಿಟ್ಟನು.

[5] ಅವರು ಈ ವಿಷಯದ ಕುರಿತು ದಾವೀದನಿಗೆ ಹೇಳಿ ಕಳುಹಿಸಿದಾಗ, ಬಹಳ ಅಪಮಾನ ಹೊಂದಿದ ಅವರಿಗೆ ದಾವೀದನು ತನ್ನ ಆಳುಗಳನ್ನು ಅವರಿಗೆದುರಾಗಿ ಕಳುಹಿಸಿ, “ನಿಮ್ಮ ಗಡ್ಡಗಳು ಬೆಳೆಯುವವರೆಗೂ ಯೆರಿಕೋವಿನಲ್ಲಿ ಇರಿ. ಆಮೇಲೆ ತಿರುಗಿ ಬನ್ನಿರಿ” ಎಂದು ಹೇಳಿಸಿದನು.

[6] ತಾವು ದಾವೀದನಿಗೆ ಅಸಹ್ಯರಾದೆವೆಂದು ಅಮ್ಮೋನಿಯರಿಗೆ ತಿಳಿಯಿತು. ಆದ್ದರಿಂದ ಅವರು ದೂತರನ್ನು ಕಳುಹಿಸಿ ಬೇತ್‌ರೆಹೋಬ್, ಚೋಬಾ ಎಂಬ ಪಟ್ಟಣಗಳಿಂದ ಇರುವ ಇಪ್ಪತ್ತು ಸಾವಿರ ಕಾಲಾಳುಗಳಾದ ಅರಾಮ್ಯರನ್ನೂ, ಟೋಬ್ ದೇಶದಿಂದ ಹನ್ನೆರಡು ಸಾವಿರ ಜನರನ್ನೂ, ಮಾಕದ ಅರಸನನ್ನೂ ಅವನ ಸಾವಿರ ಜನರನ್ನೂ ಕೂಲಿಗೆ ತೆಗೆದುಕೊಂಡರು.

[7] ದಾವೀದನು ಇದನ್ನು ಕೇಳಿದಾಗ, ಅವನು ಯೋವಾಬನನ್ನೂ, ಪರಾಕ್ರಮಶಾಲಿಗಳಾದ ಸಮಸ್ತ ಸೈನಿಕರನ್ನೂ ಕಳುಹಿಸಿದನು.

[8] ಆಗ ಅಮ್ಮೋನಿಯರು ಹೊರಟು ಪಟ್ಟಣದ ದ್ವಾರದ ಹತ್ತಿರ ವ್ಯೂಹ ಕಟ್ಟಿದರು. ಆದರೆ ಚೋಬಾದಿಂದಲೂ ರೆಹೋಬಿನಿಂದಲೂ ಟೋಬಿನಿಂದಲೂ ಮಾಕಾನಿಂದಲೂ ಬಂದ ಅರಾಮ್ಯರು ಪ್ರತ್ಯೇಕವಾಗಿ ಬೈಲಿನಲ್ಲಿ ಇಳಿದುಕೊಂಡಿದ್ದರು.

[9] ಯೋವಾಬನು, ಯುದ್ಧವು ತನ್ನ ವಿರೋಧವಾಗಿ ಹಿಂದೆಯೂ, ಮುಂದೆಯೂ ಇರುವುದನ್ನು ಕಂಡಾಗ, ಅವನು ಇಸ್ರಾಯೇಲಿನ ಎಲ್ಲಾ ಶ್ರೇಷ್ಠ ಸೈನಿಕರನ್ನು ಆಯ್ದುಕೊಂಡು, ಅರಾಮ್ಯರಿಗೆ ಎದುರಾಗಿ ನಿಲ್ಲಿಸಿದನು.

[10] ಉಳಿದ ಜನರನ್ನು ಅಮ್ಮೋನಿಯರಿಗೆದುರಾಗಿ ವ್ಯೂಹ ಕಟ್ಟುವ ಹಾಗೆ, ಅವರನ್ನು ತನ್ನ ತಮ್ಮನಾದ ಅಬೀಷೈಯನ ಕೈಯಲ್ಲಿ ಒಪ್ಪಿಸಿಕೊಟ್ಟು,

[11] ಅವನಿಗೆ ಯೋವಾಬನು, “ಅರಾಮ್ಯರು ನನಗಿಂತ ಬಲವುಳ್ಳವರಾದರೆ, ನೀನು ನನಗೆ ಸಹಾಯಮಾಡಬೇಕು; ಅಮ್ಮೋನಿಯರು ನಿನಗಿಂತ ಬಲವುಳ್ಳವರಾದರೆ, ನಾನು ಬಂದು ನಿನಗೆ ಸಹಾಯ ಮಾಡುವೆನು.

[12] ದೃಢವಾಗಿರು; ನಾವು ನಮ್ಮ ಜನರಿಗೋಸ್ಕರವೂ ನಮ್ಮ ದೇವರ ಪಟ್ಟಣಗಳಿಗೋಸ್ಕರವೂ ಧೈರ್ಯವಾಗಿ ಹೋರಾಡೋಣ, ಯೆಹೋವ ದೇವರು ತಮ್ಮ ದೃಷ್ಟಿಗೆ ಉತ್ತಮವಾದದ್ದನ್ನು ಮಾಡಲಿ,” ಎಂದನು.

[13] ಆಗ ಯೋವಾಬನೂ, ಅವನ ಸಂಗಡ ಇದ್ದ ಜನರೂ ಅರಾಮ್ಯರ ಮೇಲೆ ದಾಳಿಮಾಡಲು ಹತ್ತಿರವಾದಾಗ, ಅರಾಮ್ಯರು ಓಡಿಹೋದರು.

[14] ಅರಾಮ್ಯರು ಓಡಿ ಹೋದದ್ದನ್ನು ಅಮ್ಮೋನಿಯರು ಕಂಡಾಗ, ಅವರು ಅಬೀಷೈಯನ ಎದುರಿನಿಂದ ಓಡಿಹೋಗಿ ಪಟ್ಟಣದೊಳಗೆ ಅಡಗಿಕೊಂಡರು. ಆಗ ಯೋವಾಬನು ಅಮ್ಮೋನಿಯರೊಡನೆ ಯುದ್ಧಮಾಡುವುದನ್ನು ಬಿಟ್ಟು, ಯೆರೂಸಲೇಮಿಗೆ ತಿರುಗಿಹೋದನು.

[15] ಅರಾಮ್ಯರಿಗೆ ತಾವು ಇಸ್ರಾಯೇಲರಿಂದ ಸೋತುಹೋದೆವೆಂದು ತಿಳಿದಾಗ, ಅವರೆಲ್ಲರು ಒಟ್ಟಾಗಿ ಕೂಡಿಬಂದರು.

[16] ಹದದೆಜೆರನು ನದಿಯ ಆಚೆಯಲ್ಲಿರುವ ಇತರ ಅರಾಮ್ಯರನ್ನು ಕರೆಯಿಸಿಕೊಂಡದ್ದರಿಂದ ಅವರು ಹೆಲಾಮಿಗೆ ಬಂದರು. ಹದದೆಜೆರನ ಸೇನಾಧಿಪತಿಯಾದ ಶೋಬಕನು ಅವರ ನಾಯಕನಾದನು.

[17] ಅದನ್ನು ದಾವೀದನಿಗೆ ತಿಳಿಸಿದಾಗ, ಅವನು ಸಮಸ್ತ ಇಸ್ರಾಯೇಲರನ್ನು ಕೂಡಿಸಿಕೊಂಡು, ಯೊರ್ದನನ್ನು ದಾಟಿ ಹೆಲಾಮಿಗೆ ಬಂದನು. ಅರಾಮ್ಯರು ದಾವೀದನಿಗೆದುರಾಗಿ ವ್ಯೂಹ ಕಟ್ಟಿ ಯುದ್ಧಮಾಡಿದರು.

[18] ಆಗ ಅರಾಮ್ಯರು ಇಸ್ರಾಯೇಲರ ಎದುರಿನಿಂದ ಓಡಿದರು. ದಾವೀದನು ಅರಾಮ್ಯರಲ್ಲಿ ಏಳು ನೂರು ರಥಗಳನ್ನೂ ಹಾಳು ಮಾಡಿ, ನಲವತ್ತು ಸಾವಿರ ಕಾಲಾಳುಗಳನ್ನೂ ಕೊಂದು, ಅವರ ಸೇನಾಧಿಪತಿಯಾದ ಶೋಬಕನನ್ನು ಹೊಡೆದನು; ಅವನು ಅಲ್ಲಿಯೇ ಮರಣಹೊಂದಿದನು.

[19] ಹದದೆಜೆರನ ಸೇವಕರಾದ ಸಮಸ್ತ ಅರಸರು ತಾವು ಇಸ್ರಾಯೇಲರ ಮುಂದೆ ಸೋತುಹೋದದ್ದನ್ನು ಕಂಡಾಗ, ಅವರು ಇಸ್ರಾಯೇಲರ ಸಂಗಡ ಸಂಧಾನ ಮಾಡಿಕೊಂಡು ಅವರಿಗೆ ಅಧೀನರಾದರು. ತರುವಾಯ ಅರಾಮ್ಯರು ಅಮ್ಮೋನಿಯರಿಗೆ ಮತ್ತೆ ಸಹಾಯ ಮಾಡುವುದಕ್ಕೆ ಭಯಪಟ್ಟರು.

2 ಸಮುಯೇಲ — Chapters