Skip to content
Opens in a new window
Listen to this chapter • 6:17

[1] ದಾವೀದನ ದಿವಸಗಳಲ್ಲಿ ವರ್ಷದಿಂದ ವರ್ಷಕ್ಕೆ ಮೂರು ವರ್ಷ ಬರ ಉಂಟಾಗಿತ್ತು. ಆಗ ದಾವೀದನು ಯೆಹೋವ ದೇವರನ್ನು ವಿಚಾರಿಸಿದನು. ಆಗ ಯೆಹೋವ ದೇವರು, “ಸೌಲನು ಗಿಬ್ಯೋನ್ಯರನ್ನು ಕೊಂದುಹಾಕಿದ್ದರಿಂದ ಅವನಿಗೋಸ್ಕರವೂ ರಕ್ತಾಪರಾಧವುಳ್ಳ ಅವನ ಮನೆಗೋಸ್ಕರವೂ ಈ ಬರ ಬಂದಿದೆ,” ಎಂದು ಹೇಳಿದರು.

[2] ಆಗ ಅರಸನಾದ ದಾವೀದನು ಗಿಬ್ಯೋನ್ಯರನ್ನು ಕರೆಕಳುಹಿಸಿದನು. ಗಿಬ್ಯೋನ್ಯರು ಇಸ್ರಾಯೇಲರಿಗೆ ಸೇರಿದವರಲ್ಲ. ಅಮೋರಿಯರಲ್ಲಿ ಉಳಿದ ಜನರಾಗಿದ್ದರು. ಅವರನ್ನು ಕೊಲ್ಲುವುದಿಲ್ಲವೆಂದು ಇಸ್ರಾಯೇಲರು ಆಣೆ ಇಟ್ಟಿದ್ದರು. ಆದರೆ ಸೌಲನು ಇಸ್ರಾಯೇಲರಿಗಾಗಿಯೂ, ಯೆಹೂದದವರಿಗಾಗಿಯೂ ತನಗಿದ್ದ ಆಸಕ್ತಿಯಿಂದ ಅವರನ್ನು ಕೊಂದುಹಾಕಲು ಪ್ರಯತ್ನಮಾಡಿದ್ದನು.

[3] ದಾವೀದನು ಗಿಬ್ಯೋನ್ಯರಿಗೆ, “ನಾನು ನಿಮಗೆ ಮಾಡಬೇಕಾದದ್ದೇನು? ನೀವು ಯೆಹೋವ ದೇವರ ಬಾಧ್ಯತೆಯನ್ನು ಆಶೀರ್ವದಿಸುವ ಹಾಗೆ, ನಾನು ಯಾವುದರಿಂದ ಪ್ರಾಯಶ್ಚಿತ್ತ ಮಾಡಲಿ,” ಎಂದು ಕೇಳಿದನು.

[4] ಆಗ ಗಿಬ್ಯೋನ್ಯರು ಅವನಿಗೆ, “ಸೌಲನ ಕೈಯಿಂದಲಾದರೂ, ಅವನ ಮನೆಯವರ ಕೈಯಿಂದಲಾದರೂ, ನಮಗೆ ಬೆಳ್ಳಿಯಾದರೂ, ಬಂಗಾರವಾದರೂ ಬೇಡ. ನೀನು ಈ ಕಾರ್ಯಕ್ಕೋಸ್ಕರ ಇಸ್ರಾಯೇಲಿನಲ್ಲಿ ಒಬ್ಬನನ್ನಾದರೂ ಕೊಂದುಹಾಕಬೇಕೆಂಬುದು ನಮಗೆ ಅಗತ್ಯವಿಲ್ಲ,” ಎಂದರು. ಆಗ ಅವನು, “ನೀವು ನನಗೆ ಏನು ಹೇಳುತ್ತೀರೋ, ನಾನು ನಿಮಗೆ ಮಾಡುವೆನು,” ಎಂದನು.

[5] ಅವರು ಅರಸನಿಗೆ, “ಯಾವನು ನಮ್ಮನ್ನು ಸಂಹರಿಸಿಬಿಟ್ಟು, ನಾವು ಇಸ್ರಾಯೇಲಿನ ಸಮಸ್ತ ಮೇರೆಗಳೊಳಗೆ ನಿಲ್ಲದೆ ನಾಶವಾಗುವ ಹಾಗೆ ನಮಗೆ ಕೇಡು ಮಾಡಲು ನೆನಸಿದನೋ,

[6] ಅವನ ಪುತ್ರರಲ್ಲಿ ಏಳುಮಂದಿಯನ್ನು ನಮಗೆ ಒಪ್ಪಿಸು. ಆಗ ನಾವು ಯೆಹೋವ ದೇವರು ಆಯ್ದುಕೊಂಡ ಸೌಲನ ಊರಾದ ಗಿಬೆಯದಲ್ಲಿ ಅವರನ್ನು ಯೆಹೋವ ದೇವರಿಗೋಸ್ಕರ ಗಲ್ಲಿಗೆ ಹಾಕುವೆವು,” ಎಂದರು. ಅದಕ್ಕೆ ಅರಸನು, “ನಾನು ಒಪ್ಪಿಸಿಕೊಡುವೆನು,” ಎಂದನು.

[7] ಆದರೆ ತಮಗೂ, ದಾವೀದನಿಗೂ, ಸೌಲನ ಮಗ ಯೋನಾತಾನನಿಗೂ ಯೆಹೋವ ದೇವರನ್ನು ಕುರಿತು ಮಾಡಿದ ಪ್ರಮಾಣಕ್ಕೋಸ್ಕರ ಅರಸನು ಸೌಲನ ಮೊಮ್ಮಗನೂ, ಯೋನಾತಾನನ ಮಗನೂ ಆದ ಮೆಫೀಬೋಶೆತನನ್ನು ಉಳಿಸಿ,

[8] ಅಯ್ಯಾಹನ ಮಗಳಾಗಿರುವ ರಿಚ್ಪಳು ಸೌಲನಿಗೆ ಹೆತ್ತ ಅವಳ ಇಬ್ಬರು ಮಕ್ಕಳಾದ ಅರ್ಮೋನಿಯನ್ನೂ, ಮತ್ತೊಬ್ಬ ಮೆಫೀಬೋಶೆತನನ್ನೂ, ಸೌಲನ ಮಗಳಾಗಿರುವ ಮೇರಬಳು ಮೆಹೋಲದವನಾದ ಬರ್ಜಿಲ್ಲೈಯ ಮಗನಾಗಿರುವ ಅದ್ರಿಯೇಲನಿಗೆ ಸಾಕಿದ ಐದು ಮಂದಿ ಮಕ್ಕಳನ್ನೂ ಹಿಡಿದುಕೊಂಡು,

[9] ಅವರನ್ನು ಗಿಬ್ಯೋನ್ಯರ ಕೈಯಲ್ಲಿ ಒಪ್ಪಿಸಿಕೊಟ್ಟನು. ಅವರು ಇವರನ್ನು ಕೊಂದು, ಯೆಹೋವ ದೇವರ ಮುಂದೆ ಬೆಟ್ಟದ ಮೇಲೆ ನೇತುಹಾಕಿದರು. ಈ ಏಳುಮಂದಿಯೂ ಒಂದೇ ಸಾರಿ ಹತರಾದರು. ಇವರನ್ನು ಕೊಂದಾಗ ಜವೆಗೋಧಿ ಸುಗ್ಗಿಯ ಆರಂಭವಾಗಿತ್ತು.

[10] ಆಗ ಅಯ್ಯಾಹನ ಮಗಳಾದ ರಿಚ್ಪಳು ಗೋಣಿತಟ್ಟನ್ನು ತೆಗೆದುಕೊಂಡುಹೋಗಿ, ಗುಡ್ಡದ ಮೇಲೆ ಅದನ್ನು ತನಗೋಸ್ಕರ ಹಾಸಿ ಅದರ ಮೇಲೆ ಕುಳಿತುಕೊಂಡಳು. ಸುಗ್ಗಿಯ ದಿವಸ ಮೊದಲ್ಗೊಂಡು ಆಕಾಶದಿಂದ ಶವಗಳ ಮೇಲೆ ಮಳೆ ಬೀಳುವ ತನಕ, ಹಗಲಲ್ಲಿ ಆಕಾಶದ ಪಕ್ಷಿಗಳಾದರೂ, ರಾತ್ರಿಯಲ್ಲಿ ಕಾಡುಮೃಗಗಳಾದರೂ ಶವಗಳನ್ನು ತಿನ್ನದಂತೆ ಕಾಯುತ್ತಿದ್ದಳು.

[11] ಅಯ್ಯಾಹನ ಮಗಳಾದ ರಿಚ್ಪಳೆಂಬ ಸೌಲನ ಉಪಪತ್ನಿ ಮಾಡಿದ್ದು ದಾವೀದನಿಗೆ ತಿಳಿಸಲಾಯಿತು.

[12] ಆಗ ದಾವೀದನು ಹೋಗಿ ಸೌಲನ ಮತ್ತು ಅವನ ಮಗನಾದ ಯೋನಾತಾನನ ಎಲುಬುಗಳನ್ನು ತರುವುದಕ್ಕೆ ಯಾಬೇಷ್ ಗಿಲ್ಯಾದಿಗೆ ಹೋದನು. ಫಿಲಿಷ್ಟಿಯರು ಗಿಲ್ಬೋವದಲ್ಲಿ ಸೌಲನನ್ನು ಸೋಲಿಸಿದ ನಂತರ, ಅವನ ಮತ್ತು ಅವನ ಮಗನಾದ ಯೋನಾತಾನನ ಶವಗಳನ್ನು ಬೇತ್ ಷೆಯಾನಿನ ಬೀದಿಗಳಲ್ಲಿ ತೂಗುಹಾಕಿದ್ದರು. ಯಾಬೇಷ್ ಗಿಲ್ಯಾದಿನವರು ಅಲ್ಲಿಂದ ಆ ಶವಗಳನ್ನು ಕದ್ದುಕೊಂಡು ಹೋಗಿದ್ದರು.

[13] ದಾವೀದನು ಸೌಲನ ಎಲುಬುಗಳನ್ನೂ ಅವನ ಮಗನಾದ ಯೋನಾತಾನನ ಎಲುಬುಗಳನ್ನೂ ಗಿಬ್ಯೋನಿನಲ್ಲಿ ಹತರಾದ ಆ ಮನುಷ್ಯರ ಎಲುಬುಗಳನ್ನೂ ಅವರಿಂದ ತೆಗೆದುಕೊಂಡನು.

[14] ಅವುಗಳನ್ನು ಬೆನ್ಯಾಮೀನನ ದೇಶದ ಚೇಲದಲ್ಲಿರುವ ಸೌಲನ ತಂದೆಯಾದ ಕೀಷನ ಸಮಾಧಿಯಲ್ಲಿ ಹೂಳಿಟ್ಟರು. ಅವರು ಅರಸನು ಆಜ್ಞಾಪಿಸಿದ್ದನ್ನೆಲ್ಲಾ ತೀರಿಸಿದ ತರುವಾಯ, ದೇವರು ದೇಶಕ್ಕೋಸ್ಕರ ಮಾಡಿದ ಬಿನ್ನಹವನ್ನು ಕೇಳಿದರು.

[15] ಫಿಲಿಷ್ಟಿಯರು ತಿರುಗಿ ಇಸ್ರಾಯೇಲರ ಮೇಲೆ ಯುದ್ಧಮಾಡಿದರು. ಆಗ ದಾವೀದನು ತನ್ನ ಜನರೊಂದಿಗೆ ಹೋಗಿ, ಫಿಲಿಷ್ಟಿಯರ ಸಂಗಡ ಯುದ್ಧಮಾಡಿದನು. ದಾವೀದನು ದಣಿದು ಹೋದನು.

[16] ಆಗ ಮುನ್ನೂರು ಬೆಳ್ಳಿ ನಾಣ್ಯದ ತೂಕದ ಕಂಚು ಈಟಿಯುಳ್ಳ, ಹೊಸ ಖಡ್ಗವನ್ನು ನಡುವಿನಲ್ಲಿ ಕಟ್ಟಿಕೊಂಡಿರುವ ರೆಫಾಯನ ಮಕ್ಕಳಲ್ಲಿ ಇಷ್ಬೀಬೆನೋಬನು ದಾವೀದನನ್ನು ಕೊಲ್ಲಬೇಕೆಂದಿದ್ದನು.

[17] ಆದರೆ ಚೆರೂಯಳ ಮಗ ಅಬೀಷೈಯನು ಅವನಿಗೆ ಸಹಾಯವಾಗಿ ಬಂದು, ಫಿಲಿಷ್ಟಿಯನನ್ನು ಹೊಡೆದು ಕೊಂದುಹಾಕಿದನು. ಆಗ ದಾವೀದನ ಜನರು ಅವನಿಗೆ, “ಇಸ್ರಾಯೇಲಿನ ಬೆಳಕಾಗಿರುವ ನೀನು ಆರಿಹೋಗದಂತೆ ಇನ್ನು ಮೇಲೆ ನಮ್ಮ ಸಂಗಡ ಯುದ್ಧಕ್ಕೆ ಬರಬೇಡ,” ಎಂದು ಆಣೆ ಇಟ್ಟರು.

[18] ಇದರ ತರುವಾಯ, ಫಿಲಿಷ್ಟಿಯರ ಸಂಗಡ ಗೋಬದಲ್ಲಿ ಮತ್ತೊಂದು ಯುದ್ಧನಡೆಯಿತು. ಆಗ ಹುಷಾ ಊರಿನವನಾದ ಸಿಬ್ಬೆಕೈ ಎಂಬವನು ರೆಫಾಯನಾದ ಸಫ್ ಎಂಬವನನ್ನು ಕೊಂದನು.

[19] ಅನಂತರ ಫಿಲಿಷ್ಟಿಯರ ಸಂಗಡ ಗೋಬದಲ್ಲಿ ಯುದ್ಧ ಉಂಟಾದಾಗ, ಬೇತ್ಲೆಹೇಮಿನವನಾದ ಯಾಯೀರನ ಮಗನಾದ ಎಲ್ಹನಾನನು ಗಿತ್ತೀಯನಾದ ಗೊಲ್ಯಾತನ ಸಹೋದರರನ್ನು ಕೊಂದನು. ಈ ಗೊಲ್ಯಾತನ ಈಟಿಯ ಹಿಡಿಕೆಯು ನೇಯುವವರ ಕುಂಟೆ ಕಟ್ಟಿಗೆಗೆ ಸಮನಾಗಿತ್ತು.

[20] ಇನ್ನೊಂದು ಸಾರಿ ಗತ್ ಊರಿನಲ್ಲಿ ಯುದ್ಧ ಉಂಟಾದಾಗ, ಅಲ್ಲಿ ಎತ್ತರವಾದ ಒಬ್ಬ ಮನುಷ್ಯನಿದ್ದನು. ಅವನ ಕೈಕಾಲುಗಳ ಬೆರಳುಗಳು ಆರಾರರಂತೆ, ಒಟ್ಟಿಗೆ ಇಪ್ಪತ್ತನಾಲ್ಕು ಬೆರಳುಗಳಿದ್ದವು. ಅವನು ಸಹ ರೆಫಾಯನಿಗೆ ಹುಟ್ಟಿದವನಾಗಿದ್ದನು.

[21] ಅವನು ಇಸ್ರಾಯೇಲನ್ನು ನಿಂದಿಸಿದ್ದರಿಂದ ದಾವೀದನ ಸಹೋದರನಾದ ಶಿಮೆಯನ ಮಗನಾದ ಯೋನಾತಾನನು ಅವನನ್ನು ಕೊಂದುಬಿಟ್ಟನು.

[22] ಈ ನಾಲ್ಕು ಮಂದಿಯು ಗತ್ ಊರಿನಲ್ಲಿದ್ದ ರೆಫಾಯರ ವಂಶಜರು. ಇವರು ದಾವೀದನಿಂದಲೂ ಅವನ ಜನರಿಂದಲೂ ಸಂಹಾರವಾಗಿ ಹೋದರು.

2 ಸಮುಯೇಲ — Chapters