[1] ದಾವೀದನ ಕಡೆಯ ಮಾತುಗಳು: “ಇಷಯನ ಮಗ ದಾವೀದನ ನುಡಿಗಳಿವು: ಉನ್ನತವಾಗಿ ಸಾಗಿದ ಪುರುಷನು ಯಾಕೋಬನ ದೇವರಿಂದ ಅಭಿಷಿಕ್ತನಾದವನು, ಇಸ್ರಾಯೇಲಿನ ರಮ್ಯವಾದ ಕೀರ್ತನೆಗಾರನು ನುಡಿದದ್ದೇನೆಂದರೆ:
[2] “ಯೆಹೋವ ದೇವರ ಆತ್ಮರು ನನ್ನ ಮೂಲಕ ಮಾತನಾಡಿದರು; ಅವರ ನುಡಿ ನನ್ನ ಬಾಯಲ್ಲಿ ಇತ್ತು.
[3] ಇಸ್ರಾಯೇಲಿನ ದೇವರೂ, ಇಸ್ರಾಯೇಲಿನ ಬಂಡೆಯಾದವರೂ ನನಗೆ ಮಾತನಾಡಿದ್ದು: ‘ಮನುಷ್ಯರ ಮೇಲೆ ನೀತಿಯಿಂದ ಆಳುವವನು, ದೇವರ ಭಯದಿಂದ ಆಳುವವನು.
[4] ಮೋಡವಿಲ್ಲದ ಮುಂಜಾನೆ ಸೂರ್ಯೋದಯದ ಸಮಯದಲ್ಲಿಯ ಉದಯದ ಬೆಳಕಿನಂತಿರುವನು. ಭೂಮಿಯಿಂದ ಹುಲ್ಲು ಮೊಳೆಯಿಸುವ ಮಳೆಯ ನಂತರದ ಪ್ರಕಾಶದಂತಿರುವನು.’
[5] “ನನ್ನ ಮನೆ ದೇವರೊಂದಿಗೆ ಸರಿಯಾಗಿರದಿದ್ದರೆ, ನಿಶ್ಚಯವಾಗಿಯೂ ಅವರು ನನ್ನೊಂದಿಗೆ ಶಾಶ್ವತವಾದ ಒಡಂಬಡಿಕೆಯನ್ನು ಮಾಡಿಕೊಳ್ಳುತ್ತಿರಲಿಲ್ಲ, ಪ್ರತಿಯೊಂದು ವಿಭಾಗದಲ್ಲಿಯೂ ವ್ಯವಸ್ಥೆಗೊಳಿಸಲಾಗಿದೆ ಮತ್ತು ಭದ್ರಪಡಿಸಲಾಗಿದೆ. ದೇವರು ನಿಶ್ಚಯವಾಗಿಯೂ ನನ್ನ ರಕ್ಷಣೆಯನ್ನು ಪೂರ್ತಿಗೊಳಿಸುವುದಿಲ್ಲ. ದೇವರು ನನ್ನ ಎಲ್ಲಾ ಅಪೇಕ್ಷೆಗಳನ್ನು ಪೂರೈಸುವುದಿಲ್ಲ.
[6] ಆದರೆ ದುಷ್ಟಜನರೆಲ್ಲರು ಕೈಗಳಿಂದ ಕೂಡಿಸದೆ, ಎಸೆದುಬಿಡುವ ಮುಳ್ಳಿನಂತೆ ಇದ್ದಾರೆ.
[7] ಮುಳ್ಳುಗಳನ್ನು ಮುಟ್ಟುವವರು ಕಬ್ಬಿಣದ ಆಯುಧ ಉಪಯೋಗಿಸುವರು, ಇಲ್ಲವೆ ಈಟಿಯ ಮೊನೆಯನ್ನು ಉಪಯೋಗಿಸುವರು. ಅವು ಬೀಳುವ ಸ್ಥಳದಲ್ಲಿ ಸುಟ್ಟುಹೋಗುವುವು.”
[8] ದಾವೀದನ ಪರಾಕ್ರಮಶಾಲಿಗಳ ಹೆಸರುಗಳು ಇವೇ: ಮೂರು ಜನ ಮುಖ್ಯಸ್ಥರಲ್ಲಿ ಒಬ್ಬನು ತಹ್ಕೆಮೋನ್ಯನಾದ ಯೋಷೆಬ್ ಬಷ್ಷೆಬೆತ ಎಂಬವನು; ಇವನು ತನ್ನ ಈಟಿಯಿಂದ ಎಂಟುನೂರು ಮಂದಿಗೆ ವಿರೋಧವಾಗಿ ಹೋರಾಡಿ ಅವರನ್ನು ಒಂದೇ ಕಾಳಗದಲ್ಲಿ ಕೊಂದುಹಾಕಿದನು.
[9] ಇವನ ತರುವಾಯ ಅಹೋಹ್ಯನಾಗಿರುವ ದೋದೋ ಎಂಬವನ ಮಗನಾಗಿರುವ ಎಲಿಯಾಜರನು; ಇವನು ಇಸ್ರಾಯೇಲ್ ಜನರು ಓಡಿ ಹೋದ ತರುವಾಯ ಯುದ್ಧಕ್ಕೆ ಕೂಡಿಬಂದ ಫಿಲಿಷ್ಟಿಯರನ್ನು ನಿಂದಿಸಿದ ದಾವೀದನ ಸಂಗಡ ಇದ್ದ ಮೂವರು ಪರಾಕ್ರಮಶಾಲಿಗಳಲ್ಲಿ ಒಬ್ಬನಾಗಿದ್ದನು.
[10] ಎಲಿಯಾಜರನು ಎದ್ದು ಖಡ್ಗ ಹಿಡಿದ ತನ್ನ ಕೈ ದಣಿದು ಮರಗಟ್ಟಿ ಹೋಗುವವರೆಗೂ ಫಿಲಿಷ್ಟಿಯರನ್ನು ಸಂಹರಿಸುತ್ತಿದ್ದನು. ಆ ದಿನ ಯೆಹೋವ ದೇವರು ದೊಡ್ಡ ರಕ್ಷಣೆಯನ್ನು ಉಂಟುಮಾಡಿದರು. ಸೈನಿಕರು ಸುಲಿದುಕೊಳ್ಳುವುದಕ್ಕೆ ಮಾತ್ರ ಅವನ ಹಿಂದೆ ಹಿಂದಿರುಗಿದರು.
[11] ಇವನ ತರುವಾಯ ಹರಾರ್ಯನಾದ ಆಗೇಯನ ಮಗನಾದ ಶಮ್ಮನು; ಅಲಸಂದಿಯಿಂದ ತುಂಬಿರುವ ಹೊಲದಲ್ಲಿ ಫಿಲಿಷ್ಟಿಯರು ದಂಡಾಗಿ ಕೂಡಿಬಂದಾಗ, ಇಸ್ರಾಯೇಲ್ ಸೈನ್ಯದವರು ಫಿಲಿಷ್ಟಿಯರ ಎದುರಿನಿಂದ ಓಡಿಹೋದರು.
[12] ಆದರೆ ಅವನು ಆ ಹೊಲದ ಮಧ್ಯದಲ್ಲಿ ನಿಂತುಕೊಂಡು, ಫಿಲಿಷ್ಟಿಯರನ್ನು ಕೊಂದುಹಾಕಿ ಹೊಲವನ್ನು ಕಾಪಾಡಿದನು, ಹೀಗೆ ಯೆಹೋವ ದೇವರು ಮಹಾಜಯವನ್ನು ಉಂಟುಮಾಡಿದರು.
[13] ಮೂವತ್ತು ಮಂದಿ ಪರಾಕ್ರಮಶಾಲಿಗಳ ಮುಖ್ಯಸ್ಥರಲ್ಲಿ ಮೂರು ಮಂದಿ ಹೊರಟು ಸುಗ್ಗಿಯ ಕಾಲದಲ್ಲಿ ಅದುಲ್ಲಾಮ್ ಗವಿಯಲ್ಲಿರುವ ದಾವೀದನ ಬಳಿಗೆ ಬಂದರು. ಅದೇ ವೇಳೆಯಲ್ಲಿ ಫಿಲಿಷ್ಟಿಯರ ಸೈನ್ಯವು ರೆಫಾಯಿಮ್ ತಗ್ಗಿನಲ್ಲಿ ಪಾಳೆಯ ಮಾಡಿಕೊಂಡಿತ್ತು.
[14] ದಾವೀದನು ಕೋಟೆ ಸ್ಥಳದಲ್ಲಿ ಇದ್ದನು, ಫಿಲಿಷ್ಟಿಯರ ದಂಡು ಬೇತ್ಲೆಹೇಮಿನಲ್ಲಿತ್ತು.
[15] ಆಗ ದಾವೀದನು, “ಬೇತ್ಲೆಹೇಮಿನ ಬಾಗಿಲ ಬಳಿಯಲ್ಲಿರುವ ಬಾವಿಯ ನೀರನ್ನು ನನಗೆ ಕುಡಿಯಲು ಕೊಡುವವನ್ಯಾರು,” ಎಂದು ಬಹು ಆಶೆಯಿಂದ ಹೇಳಿದನು.
[16] ಆಗ ಆ ಮೂರು ಮಂದಿ ಪರಾಕ್ರಮಶಾಲಿಗಳು ಫಿಲಿಷ್ಟಿಯರ ದಂಡಿನಲ್ಲಿ ನುಗ್ಗಿಹೋಗಿ ಬೇತ್ಲೆಹೇಮಿನ ಬಾಗಿಲ ಬಳಿಯಲ್ಲಿರುವ ಬಾವಿಯ ನೀರನ್ನು ಸೇದಿ, ದಾವೀದನಿಗೆ ತೆಗೆದುಕೊಂಡು ಬಂದರು. ಆದರೆ ಅದನ್ನು ಅವನು ಕುಡಿಯದೇ ಯೆಹೋವ ದೇವರಿಗೆ ಸಮರ್ಪಿಸುವಂತೆ ನೆಲದ ಮೇಲೆ ಸುರಿದನು.
[17] ಅವನು, “ಯೆಹೋವ ದೇವರೇ, ನಾನು ಇಂಥಾ ಕಾರ್ಯವನ್ನು ಎಂದಿಗೂ ಮಾಡಲು ಸಾಧ್ಯವಿಲ್ಲ. ಇದು ತಮ್ಮ ಪ್ರಾಣದಾಶೆ ತೊರೆದ ಮನುಷ್ಯರ ರಕ್ತವಲ್ಲವೇ?” ಎಂದು ಹೇಳಿ ಕುಡಿಯಲೊಲ್ಲದೆ ಇದ್ದನು. ಇಂಥಾ ಮಹಾಕಾರ್ಯಗಳನ್ನು ಈ ಮೂರು ಮಂದಿ ಪರಾಕ್ರಮಶಾಲಿಗಳು ಮಾಡಿದರು.
[18] ಯೋವಾಬನ ಸಹೋದರ ಚೆರೂಯಳ ಮಗ ಅಬೀಷೈಯನು ಮೂರು ಮಂದಿಯಲ್ಲಿ ಮುಖ್ಯಸ್ಥನು. ಅವನು ಮುನ್ನೂರು ಮಂದಿಗೆ ವಿರೋಧವಾಗಿ ತನ್ನ ಈಟಿಯನ್ನು ಎತ್ತಿ ಅವರನ್ನು ಕೊಂದುಹಾಕಿದ್ದರಿಂದ, ಮೂವರಂತೆ ಹೆಸರುಗೊಂಡನು.
[19] ಈ ಮೂವರಲ್ಲಿ ಅವನು ಇಬ್ಬರಿಗಿಂತ ಹೆಚ್ಚು ಘನವುಳ್ಳವನಾಗಿದ್ದನು, ಆದ್ದರಿಂದ ಅವನು ಅವರಲ್ಲಿ ಪ್ರಧಾನನಾದನು. ಆದರೂ ಆ ಮೊದಲಿನ ಮೂರು ಜನರಿಗೆ ಅವನು ಸಮಾನನಾಗಿರಲಿಲ್ಲ.
[20] ಕಬ್ಜಯೇಲನ ಪರಾಕ್ರಮಶಾಲಿಯ ಮೊಮ್ಮಗನೂ ಯೆಹೋಯಾದಾವನ ಮಗನೂ ಆದ ಬೆನಾಯನು ಅನೇಕ ಶೂರ ಕೃತ್ಯಗಳನ್ನು ಮಾಡಿದನು. ಅವನು ಬಲಶಾಲಿಯಾದ ಮೋವಾಬಿನ ಇಬ್ಬರು ಮನುಷ್ಯರನ್ನು ಕೊಂದನು. ಇದಲ್ಲದೆ ಹಿಮಕಾಲದಲ್ಲಿ ಕುಣಿಯೊಳಗೆ ಇಳಿದು ಒಂದು ಸಿಂಹವನ್ನು ಕೊಂದುಬಿಟ್ಟನು.
[21] ಅವನು ಬಲಿಷ್ಠನಾದ ಒಬ್ಬ ಈಜಿಪ್ಟಿನವನನ್ನು ಹೊಡೆದುಬಿಟ್ಟನು. ಆ ಈಜಿಪ್ಟಿನವನ ಕೈಯಲ್ಲಿ ದಪ್ಪವಾದ ಒಂದು ಈಟಿ ಇದ್ದರೂ, ತಾನು ಒಂದು ಕೋಲು ಹಿಡಿದುಕೊಂಡು ಅವನ ಬಳಿಗೆ ಹೋಗಿ ಈಜಿಪ್ಟಿನವನ ಕೈಯಲ್ಲಿದ್ದ ಈಟಿಯನ್ನು ಕಿತ್ತುಕೊಂಡು, ಅವನ ಈಟಿಯಿಂದಲೇ ಅವನನ್ನು ಕೊಂದುಹಾಕಿದನು.
[22] ಇವುಗಳನ್ನು ಯೆಹೋಯಾದಾವನ ಮಗ ಬೆನಾಯನು ಮಾಡಿದ್ದರಿಂದ, ಮೂರು ಮಂದಿ ಪರಾಕ್ರಮಶಾಲಿಗಳಂತೆಯೇ ಹೆಸರುಗೊಂಡನು.
[23] ಇವನು ಮೂವತ್ತು ಜನರಿಗಿಂತ ಹೆಚ್ಚು ಘನವುಳ್ಳವನಾಗಿದ್ದನು. ಆದರೆ ಆ ಮೊದಲಿನ ಮೂರು ಮಂದಿಯಲ್ಲಿ ಅವನನ್ನು ಸೇರಿಸಲಾಗಲಿಲ್ಲ. ದಾವೀದನು ಅವನನ್ನು ತನ್ನ ಮೈಗಾವಲಿನವರ ಮೇಲೆ ಯಜಮಾನನನ್ನಾಗಿ ಇಟ್ಟನು.
[24] ಈ ಮೂವತ್ತು ಮಂದಿ ಯಾರೆಂದರೆ: ಯೋವಾಬನ ಸಹೋದರನಾದ ಅಸಾಯೇಲನು, ಬೇತ್ಲೆಹೇಮ್ ಊರಿನ ದೋದೋವಿನ ಮಗ ಎಲ್ಹನಾನನು;
[25] ಹರೋದಿನವನಾದ ಶಮ್ಮನು; ಹರೋದಿನವನಾದ ಎಲೀಕನು;
[26] ಪೆಲೆಟಿನವನಾದ ಹೆಲೆಚನು; ತೆಕೋವದ ಇಕ್ಕೇಷನ ಮಗನಾದ ಈರನು;
[27] ಅನಾತೋತಿನವನಾದ ಅಬೀಯೆಜೆರನು; ಹುಷಾ ಊರಿನವನಾದ ಮೆಬುನೈ,
[28] ಅಹೋಹ್ಯನಾದ ಚಲ್ಮೋನನು; ನೆಟೋಫದವನಾದ ಮಹರೈ;
[29] ನೆಟೋಫದವನಾದ ಬಾಣನ ಮಗ ಹೆಲೇಬ್, ಬೆನ್ಯಾಮೀನ್ಯರಿಗೆ ಸೇರಿದ ಗಿಬೆಯ ಊರಿನ ರೀಬೈ ಎಂಬುವನ ಮಗನಾದ ಇತ್ತೈ;
[30] ಪಿರಾತೋನ್ಯನಾದ ಬೆನಾಯನು; ಹೊಳೆಗಳುಳ್ಳ ಗಾಷ್ ಊರಿನವನಾದ ಹಿದ್ದೈ;
[31] ಅರಾಬಾ ತಗ್ಗಿನವನಾದ ಅಬೀ ಅಲ್ಬೋನನು; ಬಹರೂಮ್ಯನಾದ ಅಜ್ಮಾವೆತನು;
[32] ಶಾಲ್ಬೋನ್ಯನಾದ ಎಲೆಯಖ್ಬಾನು; ಯಾಷೇನನ ಪುತ್ರರಲ್ಲಿ ಒಬ್ಬನು ಯೋನಾತಾನನು;
[33] ಹರಾರ್ಯನಾದ ಶಮ್ಮನು; ಹರಾರ್ಯನಾದ ಶಾರಾರನ ಮಗ ಅಹೀಯಾಮ್;
[34] ಮಾಕಾ ಊರಿನ ಅಹಸ್ಬೈ ಎಂಬುವನ ಮಗನಾದ ಎಲೀಫೆಲೆಟನು; ಗಿಲೋವಿನ ಅಹೀತೋಫೆಲ್ ಎಂಬವನ ಮಗ ಎಲೀಯಾಮ್;
[35] ಕರ್ಮೇಲ್ಯನಾದ ಹೆಚ್ರೋ; ಅರ್ಬಿಯನಾದ ಪಾರೈ;
[36] ಹಗ್ರೀಯನ ಮಗನಾದ ಚೋಬ ಊರಿನವನಾದ ನಾತಾನನ ಮಗ ಇಗಾಲನು, ಗಾದ್ಯನಾದ ಬಾನೀ.
[37] ಅಮ್ಮೋನಿಯನಾದ ಚೆಲೆಕನು; ಚೆರೂಯಳ ಮಗನಾದ ಯೋವಾಬನ ಆಯುಧವಾಹಕನು ಆಗಿದ್ದ ಬೇರೋತ್ಯನಾದ ನಹರೈ;
[38] ಯೆತೆರಿಯನಾದ ಈರನು; ಯೆತೆರಿಯನಾದ ಗಾರೇಬನು;
[39] ಹಿತ್ತಿಯನಾದ ಊರೀಯನು. ಹೀಗೆ ಇವರು ಸೇರಿ ಒಟ್ಟು ಮೂವತ್ತೇಳು ಮಂದಿ ರಣಧೀರರಿದ್ದರು.