[1] ಐದನೆಯ ದೇವದೂತನು ತುತ್ತೂರಿಯನ್ನೂದಿದಾಗ ಆಕಾಶದಿಂದ ಭೂಮಿಗೆ ಬಿದ್ದ ಒಂದು ನಕ್ಷತ್ರವನ್ನು ಕಂಡೆನು. ಅವನಿಗೆ ಅಧೋಲೋಕಕ್ಕೆ ಹೋಗುವ ಕೂಪದ ಬೀಗದ ಕೈ ಕೊಡಲ್ಪಟ್ಟಿತು.
[2] ಅವನು ಅಧೋಲೋಕದ ಕೂಪವನ್ನು ತೆರೆಯಲು ಕೂಪದಿಂದ ಬಂದ ಹೊಗೆ ದೊಡ್ಡ ಕುಲುಮೆಯ ಹೊಗೆಯಂತೆ ಏರಿತು. ಕೂಪದ ಹೊಗೆಯಿಂದ ಸೂರ್ಯನೂ ಆಕಾಶವೂ ಕಪ್ಪಾಗಿ ಹೋದವು.
[3] ಹೊಗೆಯೊಳಗಿಂದ ಮಿಡತೆಗಳು ಭೂಮಿಯ ಮೇಲೆ ಹೊರಟುಬಂದವು. ಭೂಮಿಯಲ್ಲಿರುವ ಚೇಳುಗಳಿಗಿರುವಂಥ ಶಕ್ತಿಯನ್ನು ಅವುಗಳಿಗೆ ಕೊಡಲಾಯಿತು.
[4] ಭೂಮಿಯ ಮೇಲಿರುವ ಹುಲ್ಲನ್ನಾಗಲಿ ಯಾವ ಹಣ್ಣು ತರಕಾರಿಗಳನ್ನಾಗಲಿ, ಮರವನ್ನಾಗಲಿ ನಾಶಮಾಡದೆ, ಹಣೆಯ ಮೇಲೆ ದೇವರ ಮುದ್ರೆಯಿಲ್ಲದವರಾದ ಮನುಷ್ಯರನ್ನು ಮಾತ್ರ ನಾಶಮಾಡಬಹುದೆಂದು ಅವುಗಳಿಗೆ ಅಪ್ಪಣೆಯಾಯಿತು.
[5] ಅವರನ್ನು ಕೊಲ್ಲದೆ ಐದು ತಿಂಗಳುಗಳವರೆಗೂ ಹಿಂಸಿಸುವುದಕ್ಕೆ ಅಧಿಕಾರವು ದೊರೆಯಿತು. ಅವರಿಗುಂಟಾದ ಯಾತನೆಯು ಮನುಷ್ಯನಿಗೆ ಚೇಳು ಕಡಿತದಿಂದುಂಟಾಗುವ ಯಾತನೆಗೆ ಸಮಾನವಾಗಿತ್ತು.
[6] ಆ ಕಾಲದಲ್ಲಿ ಮನುಷ್ಯರು ಮರಣವನ್ನು ಬಯಸುವರು, ಆದರೆ ಅದು ಪ್ರಾಪ್ತವಾಗುವುದಿಲ್ಲ. ಸಾಯಬೇಕೆಂದು ಕೋರುವರು, ಆದರೆ ಮೃತ್ಯುವು ಅವರನ್ನು ಬಿಟ್ಟು ಓಡಿಹೋಗುವುದು.
[7] ಆ ಮಿಡತೆಗಳ ರೂಪವು ಯುದ್ಧಕ್ಕೆ ಸನ್ನದ್ಧವಾಗಿರುವ ಕುದುರೆಗಳ ರೂಪದಂತೆ ಇತ್ತು. ಅವುಗಳ ತಲೆಯ ಮೇಲೆ ಚಿನ್ನದ ಕಿರೀಟಗಳಂತೆಯೂ, ಅವುಗಳ ಮುಖಗಳು ಮನುಷ್ಯರ ಮುಖಗಳಂತೆಯೂ ಇದ್ದವು.
[8] ಅವುಗಳ ಕೂದಲು ಸ್ತ್ರೀಯರ ಕೂದಲಿನಂತೆಯೂ ಹಲ್ಲುಗಳು ಸಿಂಹದ ಹಲ್ಲುಗಳಂತೆಯೂ ಇದ್ದವು.
[9] ಅವುಗಳಿಗೆ ಉಕ್ಕಿನ ಕವಚಗಳಂತಿದ್ದ ಕವಚಗಳು ಇದ್ದವು. ಅವುಗಳ ರೆಕ್ಕೆಗಳ ಶಬ್ದವು ಯುದ್ಧಕ್ಕೆ ಓಡುವ ರಥಾಶ್ವಗಳ ಶಬ್ದದಂತೆ ಇತ್ತು.
[10] ಚೇಳಿಗಿರುವಂತೆ ಅವುಗಳಿಗೆ ಬಾಲಗಳೂ, ಕೊಂಡಿಗಳೂ ಇದ್ದವು. ಮನುಷ್ಯರನ್ನು ಐದು ತಿಂಗಳುಗಳವರೆಗೂ ಪೀಡಿಸುವ ಸಾಮರ್ಥ್ಯವು ಅವುಗಳ ಬಾಲಗಳಲ್ಲಿಯೇ ಇರುವುದು.
[11] ಅಧೋಲೋಕದ ಅಧಿಕಾರಿಯಾದ ದೂತನೇ ಅವುಗಳನ್ನಾಳುವ ಅರಸನು. ಅವನಿಗೆ ಇಬ್ರಿಯ ಭಾಷೆಯಲ್ಲಿ ಅಬದ್ದೋನನೆಂತಲೂ, ಗ್ರೀಕ್ ಭಾಷೆಯಲ್ಲಿ ಅಪೊಲ್ಲುವೋನನೆಂತಲೂ ಹೆಸರುಂಟು.
[12] ಮೊದಲನೆಯ ವಿಪತ್ತು ಕಳೆದು ಹೋಯಿತು. ಇಗೋ, ಇನ್ನೂ ಎರಡು ವಿಪತ್ತುಗಳು ಅದರ ಬೆನ್ನಹಿಂದೆಯೇ ಬಂದವು.
[13] ಆರನೆಯ ದೇವದೂತನು ತುತ್ತೂರಿಯನ್ನೂದಿದಾಗ ದೇವರ ಸಮ್ಮುಖದಲ್ಲಿರುವ ಚಿನ್ನದ ಯಜ್ಞವೇದಿಯ ಕೊಂಬುಗಳಿಂದ ಹೊರಟ ಒಂದು ಧ್ವನಿಯನ್ನು ಕೇಳಿದೆನು.
[14] ಅದು ತುತ್ತೂರಿಯನ್ನು ಹಿಡಿದಿದ್ದ ಆರನೆಯ ದೇವದೂತನಿಗೆ, “ಯೂಫ್ರೆಟಿಸ್ ಎಂಬ ಮಹಾ ನದಿಯ ಬಳಿಯಲ್ಲಿ ಕಟ್ಟಿಹಾಕಿರುವ ನಾಲ್ಕು ಮಂದಿ ದೇವದೂತರನ್ನು ಬಿಚ್ಚಿಬಿಡು” ಎಂದು ಹೇಳಿತು.
[15] ಆಗ ಮನುಷ್ಯರೊಳಗೆ ಮೂರರಲ್ಲಿ ಒಂದು ಭಾಗದ ಜನರನ್ನು ಸಂಹಾರಮಾಡುವುದಕ್ಕಾಗಿ ಗಂಟೆ, ದಿನ, ತಿಂಗಳು, ವರ್ಷ ಎಲ್ಲವನ್ನೂ ನಿಗದಿಮಾಡಲಾಗಿತ್ತು. ಅದಕ್ಕೆ ಸಿದ್ಧರಿದ್ದ ಆ ನಾಲ್ಕು ಮಂದಿ ದೇವದೂತರನ್ನು ಬಿಡುಗಡೆ ಮಾಡಲಾಯಿತು.
[16] ಕುದುರೆ ದಂಡಿನವರ ಸಂಖ್ಯೆಯು ಇಪ್ಪತ್ತು ಕೋಟಿ ಎಂದು ನನಗೆ ಕೇಳಿಸಿತು.
[17] ನಾನು ದರ್ಶನದಲ್ಲಿ ಕಂಡ ಕುದುರೆಗಳ ಮತ್ತು ಸವಾರರ ವಿವರಣೆ ಹೇಗಿತ್ತೆಂದರೆ, ಸವಾರರ ಕವಚಗಳ ಬಣ್ಣವು ಬೆಂಕಿ, ಹೊಗೆ, ಗಂಧಕ ಇವುಗಳ ಬಣ್ಣದ ಹಾಗಿತ್ತು ಕುದುರೆಗಳ ತಲೆಗಳು ಸಿಂಹಗಳ ತಲೆಗಳಂತಿದ್ದವು.
[18] ಅವುಗಳ ಬಾಯಿಂದ ಹೊರಟ ಆ ಬೆಂಕಿ, ಹೊಗೆ, ಗಂಧಕ ಎಂಬ ಮೂರು ಉಪದ್ರವಗಳಿಂದ ಮನುಷ್ಯರೊಳಗೆ ಮೂರರಲ್ಲಿ ಒಂದು ಭಾಗವು ಹತವಾಯಿತು.
[19] ಆ ಕುದುರೆಗಳ ಸಾಮರ್ಥ್ಯವು ಅವುಗಳ ಬಾಯಲ್ಲಿಯೂ ಬಾಲಗಳಲ್ಲಿಯೂ ಇದ್ದವು. ಅವುಗಳ ಬಾಲಗಳು ತಲೆಗಳುಳ್ಳವುಗಳಾಗಿ ಸರ್ಪಗಳ ಹಾಗೆ ಇದ್ದವು. ಅವುಗಳಿಂದಲೇ ಕೇಡನ್ನುಂಟುಮಾಡುವುದು.
[20] ಉಪದ್ರವಗಳಿಂದ ಸಾಯದೆ ಉಳಿದ ಜನರು ತಾವೇ ಮಾಡಿಕೊಂಡ ವಿಗ್ರಹಗಳನ್ನು ಬಿಟ್ಟು ದೇವರ ಕಡೆಗೆ ತಿರುಗಲಿಲ್ಲ. ಅವರು ಭೂತ, ಪ್ರೇತಗಳ ಪೂಜೆಯನ್ನೂ ಬಂಗಾರ, ಬೆಳ್ಳಿ, ತಾಮ್ರ, ಕಲ್ಲು, ಮರ ಮೊದಲಾದವುಗಳಿಂದ ಮಾಡಲ್ಪಟ್ಟ ನೋಡಲಾರದೆ, ಕೇಳಲಾರದೆ, ನಡೆಯಲಾರದೆ ಇರುವ ವಿಗ್ರಹಗಳ ಪೂಜೆಯನ್ನೂ ಬಿಡಲಿಲ್ಲ.
[21] ಇದಲ್ಲದೆ ತಾವು ನಡೆಸುತ್ತಿದ್ದ ಕೊಲೆ, ಮಾಟ, ಜಾರತ್ವ, ಕಳ್ಳತನ ಇವುಗಳೊಳಗೆ ಒಂದನ್ನೂ ಬಿಡದೆ ಮಾನಸಾಂತರಪಡಲಿಲ್ಲ.