[1] ಪರಲೋಕದಲ್ಲಿ ಒಂದು ಮಹಾ ಚಿಹ್ನೆಯು ಕಾಣಿಸಿತು. ಸ್ತ್ರೀಯೊಬ್ಬಳು ಸೂರ್ಯಭೂಶಿತಳಾಗಿದ್ದಳು. ಆಕೆಯ ಪಾದದಡಿಯಲ್ಲಿ ಚಂದ್ರನಿದ್ದನು. ಆಕೆಯ ತಲೆಯ ಮೇಲೆ ಹನ್ನೆರಡು ನಕ್ಷತ್ರಗಳಿಂದ ಮಾಡಿದ್ದ ಒಂದು ಕಿರೀಟವಿತ್ತು.
[2] ಆಕೆಯು ಗರ್ಭಿಣಿಯಾಗಿದ್ದು ಹೆರುವುದಕ್ಕೆ ಪ್ರಸವವೇದನೆಯಿಂದ ನರಳುತ್ತಾ ಅಳುತ್ತಿದ್ದಳು.
[3] ಪರಲೋಕದಲ್ಲಿ ಮತ್ತೊಂದು ಚಿಹ್ನೆಯು ಕಾಣಿಸಿತು. ಅಲ್ಲಿ ಕೆಂಪು ಘಟಸರ್ಪವೊಂದು ಇತ್ತು. ಅದಕ್ಕೆ ಏಳು ತಲೆಗಳೂ ಹತ್ತು ಕೊಂಬುಗಳು ಇದ್ದವು. ಅದರ ತಲೆಗಳ ಮೇಲೆ ಏಳು ಕಿರೀಟಗಳು ಇದ್ದವು.
[4] ಅದು ತನ್ನ ಬಾಲದಿಂದ ಆಕಾಶದ ನಕ್ಷತ್ರಗಳಲ್ಲಿ ಮೂರರಲ್ಲೊಂದು ಭಾಗವನ್ನು ಎಳೆದು ಭೂಮಿಗೆ ಎಸೆಯಿತು. ಹೆರುತ್ತಿದ್ದ ಆ ಸ್ತ್ರೀಯು ಹೆತ್ತ ಕೂಡಲೇ ಆಕೆಯ ಮಗುವನ್ನು ನುಂಗಿಬಿಡಬೇಕೆಂದು ಆ ಘಟಸರ್ಪವು ಆಕೆಯ ಮುಂದೆ ನಿಂತುಕೊಂಡಿತ್ತು.
[5] ಆಕೆ ಜನಾಂಗಗಳನ್ನು ಕಬ್ಬಿಣದ ಕೋಲಿನಿಂದ ಆಳಬೇಕಾದ ಒಂದು ಗಂಡು ಮಗುವನ್ನು ಹೆತ್ತಳು. ಆಕೆಯ ಕೂಸು ಪಕ್ಕನೆ ದೇವರ ಬಳಿಗೂ ಆತನ ಸಿಂಹಾಸನದ ಬಳಿಗೂ ಎತ್ತಲ್ಪಟ್ಟಿತು.
[6] ಮತ್ತು ಆ ಸ್ತ್ರೀಯು ಅರಣ್ಯಕ್ಕೆ ಓಡಿಹೋದಳು. ಅಲ್ಲಿ ಆಕೆಗೆ ಸಾವಿರದ ಇನ್ನೂರ ಅರವತ್ತು ದಿನಗಳ ವರೆಗೆ ಪೋಷಣೆಮಾಡುವುದಕ್ಕಾಗಿ ದೇವರು ಸಿದ್ಧಮಾಡಿದ್ದ ಸ್ಥಳವನ್ನು ಅವಳು ಕಂಡಳು.
[7] ಪರಲೋಕದಲ್ಲಿ ಯುದ್ಧ ನಡೆಯಿತು. ಮೀಕಾಯೇಲನೂ ಅವನ ದೂತರೂ ಘಟಸರ್ಪದ ವಿರುದ್ಧ ಯುದ್ಧ ಮಾಡಿದರು. ಘಟಸರ್ಪವೂ ಅವನ ದೂತರೂ ಯುದ್ಧ ಮಾಡಿ ಕಾದಾಡಿದರು.
[8] ಆದರೆ ಘಟಸರ್ಪಕ್ಕೆ ಸಾಕಷ್ಟು ಸಾಮರ್ಥ್ಯವಿಲ್ಲದ್ದರಿಂದ ಅದು ಸೋಲನ್ನಪ್ಪಿತು. ಹೀಗೆ ಪರಲೋಕದಲ್ಲಿ ಅವರಿಗೂ ಸ್ಥಳವಿಲ್ಲದಂತಾಯಿತು.
[9] ಭೂಲೋಕದವರನ್ನೆಲ್ಲಾ ಮರುಳುಗೊಳಿಸಿ ಪಾಪ ಮಾಡಿಸುತ್ತಿದ್ದ ಆ ಮಹಾ ಘಟಸರ್ಪವು ಅಂದರೆ ಪಿಶಾಚನೆಂತಲೂ ಸೈತಾನನೆಂತಲೂ ಹೆಸರುಳ್ಳ ಆ ಪುರಾತನ ಸರ್ಪವನ್ನು ಭೂಮಿಗೆ ತಳ್ಳಲಾಯಿತು. ಅವನ ದೂತರು ಅವನೊಂದಿಗೆ ದೊಬ್ಬಲ್ಪಟ್ಟರು.
[10] ಆಗ ಪರಲೋಕದಲ್ಲಿ ಮಹಾಶಬ್ದವನ್ನು ಕೇಳಿದೆನು. ಅದು, “ಈಗ ನಮ್ಮ ದೇವರ ರಕ್ಷಣೆಯೂ, ಶಕ್ತಿಯೂ, ರಾಜ್ಯವೂ, ಆತನ ಕ್ರಿಸ್ತನ ಅಧಿಪತ್ಯ ಆರಂಭವಾಗಿದೆ. ಹಗಲಿರುಳು ನಮ್ಮ ಸಹೋದರರನ್ನು ಕುರಿತು ನಮ್ಮ ದೇವರ ಮುಂದೆ ಸದಾ ದೂರು ಹೇಳುತ್ತಿದ್ದ ದೂರುಗಾರನು ದೊಬ್ಬಲ್ಪಟ್ಟಿದ್ದಾನೆ.
[11] ಅವರು ಮರಣದವರೆಗೆ ತಮ್ಮ ಪ್ರಾಣವನ್ನು ಪ್ರೀತಿಸದೆ, ಯಜ್ಞದ ಕುರಿಮರಿಯಾದಾತನ ರಕ್ತದಿಂದಲೂ ತಮ್ಮ ಸಾಕ್ಷಿಯ ವಾಕ್ಯದಿಂದಲೂ ಅವನನ್ನು ಜಯಿಸಿದರು.
[12] ಆದ್ದರಿಂದ ಪರಲೋಕವೇ, ಅದರಲ್ಲಿ ವಾಸಮಾಡುವವರೇ, ಹರ್ಷಗೊಳ್ಳಿರಿ. ಆದರೆ ಭೂಮಿ, ಸಮುದ್ರಗಳೇ ನಿಮ್ಮ ದುರ್ಗತಿಯನ್ನು ಏನೆಂದು ಹೇಳಲಿ ಏಕೆಂದರೆ ಸೈತಾನನು ತನಗಿರುವ ಕಾಲವು ಇನ್ನು ಸ್ವಲ್ಪಮಾತ್ರವೆಂದು ತಿಳಿದು ಮಹಾ ರೋಷವುಳ್ಳವನಾಗಿ ನಿಮ್ಮ ಕಡೆಗೆ ಇಳಿದು ಬಂದಿದ್ದಾನೆ” ಎಂಬುದಾಗಿ ಹೇಳಿತು.
[13] ಘಟಸರ್ಪನು ತಾನು ದೊಬ್ಬಲ್ಪಟ್ಟು ಭೂಮಿಗೆ ಬಿದ್ದಿರುವುದನ್ನು ಗ್ರಹಿಸಿಕೊಂಡು, ಗಂಡು ಮಗುವನ್ನು ಹೆತ್ತ ಸ್ತ್ರೀಯನ್ನು ಹಿಂಸಿಸುವುದಕ್ಕೆ ಅಟ್ಟಿಸಿಕೊಂಡು ಹೋಯಿತು.
[14] ಆದರೆ ಆ ಸ್ತ್ರೀಯು ಮರುಭೂಮಿಯಲ್ಲಿದ್ದ ತನ್ನ ಸ್ಥಳಕ್ಕೆ ಹಾರಿಹೋಗುವುದಕ್ಕಾಗಿ ಆಕೆಗೆ ದೊಡ್ಡ ಹದ್ದಿನ ಎರಡು ರೆಕ್ಕೆಗಳು ಕೊಡಲ್ಪಟ್ಟವು. ಅಲ್ಲಿ ಆಕೆಯು ಒಂದು ಕಾಲ, ಎರಡು ಕಾಲ, ಅರ್ಧ ಕಾಲ ಸರ್ಪನಿಗೆ ಸಿಗದಂತೆ ಪೋಷಣೆ ಹೊಂದಿದಳು.
[15] ಆ ಸರ್ಪನು ಪ್ರವಾಹದಿಂದ ಸ್ತ್ರೀಯನ್ನು ಸೆಳೆದುಕೊಂಡು ಹೋಗಬೇಕೆಂದು ಆಕೆಯ ಹಿಂದೆ ತನ್ನ ಬಾಯೊಳಗಿಂದ ನೀರನ್ನು ನದಿಯಂತೆ ಸುರಿಸಿದನು.
[16] ಆದರೆ ಭೂಮಿಯು ಆ ಸ್ತ್ರೀಗೆ ಸಹಾಯಮಾಡಿತು. ಅದು ತನ್ನ ಬಾಯಿ ತೆರೆದು ಘಟಸರ್ಪನು ತನ್ನ ಬಾಯೊಳಗಿಂದ ಬಿಟ್ಟ ನದಿಯನ್ನು ನುಂಗಿಬಿಟ್ಟಿತ್ತು.
[17] ಆಗ ಘಟಸರ್ಪನು ಸ್ತ್ರೀಯ ಮೇಲೆ ಬಹು ಕೋಪಗೊಂಡು, ಆಕೆಯ ಸಂತಾನದವರಲ್ಲಿ ಉಳಿದವರ ಮೇಲೆ ಅಂದರೆ, ದೇವರ ಆಜ್ಞೆಗಳನ್ನು ಕೈಗೊಂಡು ನಡೆದು ಯೇಸುವಿನ ವಿಷಯವಾದ ಸಾಕ್ಷಿಯನ್ನು ಹೊಂದಿದವರ ಮೇಲೆ ಯುದ್ಧಮಾಡುವುದಕ್ಕೆ ಹೊರಟು,
[18] ಸಮುದ್ರ ತೀರದ ಮರಳಿನ ಮೇಲೆ ನಿಂತನು.