[1] ಕುರಿಮರಿಯಾದಾತನು ಆ ಏಳು ಮುದ್ರೆಗಳಲ್ಲಿ ಒಂದು ಮುದ್ರೆಯನ್ನು ಒಡೆಯುವಾಗ ನಾನು ನೋಡಿದೆನು ಮತ್ತು ಆ ನಾಲ್ಕು ಜೀವಿಗಳಲ್ಲಿ ಒಂದು ಜೀವಿಯು ಗುಡುಗಿನಂತಿದ್ದ ಸ್ವರದಿಂದ “ಬಾ!” ಎಂದು ಹೇಳುವುದನ್ನು ಕೇಳಿದೆನು.
[2] ನಾನು ನೋಡಲು ಇಗೋ ಒಂದು ಬಿಳಿ ಕುದುರೆ ಕಾಣಿಸಿತು. ಅದರ ಮೇಲೆ ಕುಳಿತಿದ್ದವನು ಕೈಯಲ್ಲಿ ಒಂದು ಬಿಲ್ಲನ್ನು ಹಿಡಿದಿದ್ದನು. ಅವನಿಗೆ ಒಂದು ಕಿರೀಟವು ಕೊಡಲ್ಪಟ್ಟಿತು. ಅವನು ಜಯಿಸುವವನಾಗಿ ಜಯಿಸುವುದಕ್ಕೋಸ್ಕರ ಹೊರಟನು.
[3] ಆತನು ಎರಡನೆಯ ಮುದ್ರೆಯನ್ನು ಒಡೆದಾಗ ಎರಡನೆಯ ಜೀವಿಯು “ಬಾ”! ಎಂದು ಹೇಳುವುದನ್ನು ಕೇಳಿದೆನು.
[4] ಆಗ ಕೆಂಪಾಗಿರುವ ಮತ್ತೊಂದು ಕುದುರೆಯು ಹೊರಟು ಬಂದಿತು. ಅದರ ಮೇಲೆ ಸವಾರಿಮಾಡುವವನಿಗೆ ಭೂಲೋಕದಿಂದ ಸಮಾಧಾನವನ್ನು ತೆಗೆದುಬಿಡುವುದಕ್ಕೆ ಅಧಿಕಾರ ಕೊಡಲ್ಪಟ್ಟಿತು, ಇದರಿಂದ ಜನರು ಒಬ್ಬರನ್ನೊಬ್ಬರು ಕೊಲ್ಲುವವರಾದರು. ಅವನಿಗೆ ದೊಡ್ಡದೊಂದು ಖಡ್ಗವೂ ಕೊಡಲ್ಪಟ್ಟಿತು.
[5] ಆತನು ಮೂರನೆಯ ಮುದ್ರೆಯನ್ನು ಒಡೆದಾಗ ಮೂರನೆಯ ಜೀವಿಯು “ಬಾ”! ಎಂದು ಹೇಳುವುದನ್ನು ಕೇಳಿದೆನು. ಆಗ, ನಾನು ನೋಡಲು ಇಗೋ, ನನಗೆ ಕಪ್ಪು ಕುದುರೆಯು ಕಾಣಿಸಿತು. ಅದರ ಮೇಲೆ ಕುಳಿತಿದ್ದವನ ಕೈಯಲ್ಲಿ ತಕ್ಕಡಿ ಇತ್ತು.
[6] ಆ ಮೇಲೆ ನಾಲ್ಕು ಜೀವಿಗಳ ಮಧ್ಯದಿಂದ ಒಬ್ಬನ ಧ್ವನಿಯು ಹೊರಟ ಹಾಗೆ ಕೇಳಿದೆನು. ಒಂದು “ದೀನಾರಿಗೆ ಒಂದು ಸೇರು ಗೋದಿ ಮತ್ತು ಒಂದು ದೀನಾರಿಗೆ ಮೂರು ಸೇರು ಜವೆಗೋದಿ, ಆದರೆ ಎಣ್ಣೆಯನ್ನು ಮತ್ತು ದ್ರಾಕ್ಷಾರಸವನ್ನು ಕೆಡಿಸಬೇಡ” ಎಂದು ಹೇಳಿತು.
[7] ಆತನು ನಾಲ್ಕನೆಯ ಮುದ್ರೆಯನ್ನು ಒಡೆದಾಗ ನಾಲ್ಕನೆಯ ಜೀವಿಯು “ಬಾ”! ಎನ್ನುವ ಶಬ್ದವನ್ನು ಕೇಳಿದೆನು.
[8] ಆಗ ನಾನು ನೋಡಲು ಇಗೋ, ನಸು ಹಸಿರು ಬಣ್ಣದ ಕುದುರೆಯು ಕಾಣಿಸಿತು. ಅದರ ಮೇಲೆ ಕುಳಿತಿದ್ದವನ ಹೆಸರು ಮೃತ್ಯು ಎಂದು. ಮೃತ್ಯುಲೋಕ ಅವನನ್ನು ಹಿಂಬಾಲಿಸುತ್ತಿತ್ತು. ಅವನಿಗೆ ಭೂಮಿಯ ನಾಲ್ಕನೇ ಒಂದು ಭಾಗವನ್ನು ಕತ್ತಿಯಿಂದಲೂ, ಕ್ಷಾಮದಿಂದಲೂ, ಅಂಟುರೋಗದಿಂದಲೂ, ಭೂಮಿಯ ಕಾಡುಮೃಗಗಳಿಂದಲೂ ಕೊಂದುಹಾಕುವುದಕ್ಕೆ ಅಧಿಕಾರ ಕೊಡಲಾಗಿತ್ತು.
[9] ಆತನು ಐದನೆಯ ಮುದ್ರೆಯನ್ನು ಒಡೆದಾಗ, ದೇವರ ವಾಕ್ಯದ ನಿಮಿತ್ತವಾಗಿಯೂ, ತಮಗಿದ್ದ ದೃಢವಾದ ಸಾಕ್ಷಿಯ ನಿಮಿತ್ತವಾಗಿಯೂ, ಹತರಾದವರ ಆತ್ಮಗಳು ಯಜ್ಞವೇದಿಯ ಕೆಳಗಿರುವುದನ್ನು ಕಂಡೆನು.
[10] ಅವರು, “ಸರ್ವಶಕ್ತನಾದ ಕರ್ತನೇ, ಪರಿಶುದ್ಧನೂ, ಸತ್ಯವಂತನೂ, ಆಗಿರುವಾತನೇ, ನಮ್ಮ ರಕ್ತವನ್ನು ಸುರಿಸಿದ ಭೂಲೋಕ ನಿವಾಸಿಗಳಿಗೆ ನೀನು ಇನ್ನೆಷ್ಟು ಸಮಯ ನ್ಯಾಯತೀರಿಸದೆಯೂ, ಪ್ರತಿದಂಡನೆ ಮಾಡದೆಯೂ ಇರುವಿ?” ಎಂದು ಮಹಾಶಬ್ದದಿಂದ ಕೂಗಿದರು.
[11] ಆಗ ಅವರಲ್ಲಿ ಪ್ರತಿಯೊಬ್ಬನಿಗೆ ಒಂದೊಂದು ಬಿಳೀ ನಿಲುವಂಗಿಯು ಕೊಡಲ್ಪಟ್ಟಿತು ಇನ್ನೂ ಸ್ವಲ್ಪ ಸಮಯ ವಿಶ್ರಮಿಸಿಕೊಂಡಿರಬೇಕು. ನಿಮ್ಮ ಹಾಗೆ ವಧಿಸಲ್ಪಡಬೇಕಾಗಿರುವ ನಿಮ್ಮ ಸಹೋದರರ ಮತ್ತು ನಿಮ್ಮ ಜೊತೆ ಸೇವಕರ ಸಂಖ್ಯೆ ಪೂರ್ಣವಾಗುವ ತನಕ ಕಾದಿರಬೇಕೆಂದು ಅವರಿಗೆ ಅಪ್ಪಣೆಯಾಯಿತು.
[12] ಆತನು ಆರನೆಯ ಮುದ್ರೆಯನ್ನು ಒಡೆಯುವುದನ್ನು ಕಂಡೆನು. ಆಗ ಮಹಾಭೂಕಂಪ ಉಂಟಾಯಿತು. ಸೂರ್ಯನು ಕರೀಕಂಬಳಿಯಂತೆ ಕಪ್ಪಾದನು ಮತ್ತು ಪೂರ್ಣಚಂದ್ರನು ರಕ್ತದಂತಾದನು.
[13] ಅಂಜೂರದ ಮರವು ಬಿರುಗಾಳಿಯಿಂದ ಬಡಿಯಲ್ಪಟ್ಟು ತನ್ನ ಕಾಯಿಗಳನ್ನು ಉದುರಿಸುವ ಹಾಗೆ ಆಕಾಶದಿಂದ ನಕ್ಷತ್ರಗಳು ಭೂಮಿಗೆ ಉದುರಿ ಬಿದ್ದವು.
[14] ಆಕಾಶವು ಸುರುಳಿಯಂತೆ ಸುತ್ತಲ್ಪಟ್ಟು ಮರೆಯಾಯಿತು. ಎಲ್ಲಾ ಬೆಟ್ಟಗಳು ಮತ್ತು ದ್ವೀಪಗಳು ತಮ್ಮತಮ್ಮ ಸ್ಥಳಗಳಿಂದ ಕದಲಿದವು.
[15] ಆಗ ಭೂರಾಜರುಗಳೂ, ಮಹಾಪುರುಷರೂ, ಸಹಸ್ರಾಧಿಪತಿಗಳೂ, ಐಶ್ವರ್ಯವಂತರೂ, ಪರಾಕ್ರಮಶಾಲಿಗಳೂ, ಎಲ್ಲಾ ದಾಸರೂ ಮತ್ತು ಸ್ವತಂತ್ರರೂ ಬೆಟ್ಟಗಳ ಗವಿಗಳಿಗೂ ಮತ್ತು ಬಂಡೆಗಳ ಸಂದುಗಳಿಗೂ ಓಡಿಹೋಗಿ ತಮ್ಮನ್ನು ಮರೆಮಾಡಿಕೊಂಡರು.
[16] ಬೆಟ್ಟಗಳಿಗೂ ಬಂಡೆಗಳಿಗೂ, “ನಮ್ಮ ಮೇಲೆ ಬೀಳಿರಿ!, ಸಿಂಹಾಸನದ ಮೇಲೆ ಕುಳಿತಿರುವಾತನ ಮುಖವನ್ನು ನೋಡದ ಹಾಗೆಯೂ ಕುರಿಮರಿಯ ಕೋಪಾಗ್ನಿಯು ತಟ್ಟದ ಹಾಗೆಯೂ ನಮ್ಮನ್ನು ಮರೆಮಾಡಿರಿ.
[17] ಏಕೆಂದರೆ ಅವರ ಕೋಪಾಗ್ನಿಯು ಕಾಣಿಸುವ ಮಹಾ ದಿನವು ಬಂದಿದೆ, ಅದರ ಮುಂದೆ ನಿಲ್ಲುವುದಕ್ಕೆ ಯಾರಿಂದಾದೀತು?” ಎಂದು ಹೇಳಿದರು.