Skip to content
Opens in a new window
Listen to this chapter • 4:22

[1] ಆಗ ಆಲಯದೊಳಗಿಂದ ಬಂದ ಮಹಾಧ್ವನಿಯನ್ನು ನಾನು ಕೇಳಿದೆನು. ಅದು ಆ ಏಳು ಮಂದಿ ದೇವದೂತರಿಗೆ, “ನೀವು ಹೋಗಿ ಆ ಏಳು ಬಟ್ಟಲುಗಳಲ್ಲಿರುವ ದೇವರ ಕೋಪವನ್ನು ಭೂಮಿಯ ಮೇಲೆ ಸುರಿಯಿರಿ” ಎಂದು ಹೇಳಿತು.

[2] ಆಗ ಮೊದಲನೆಯ ದೇವದೂತನು ಹೋಗಿ ತನ್ನ ಬಟ್ಟಲಲ್ಲಿ ಇದ್ದದ್ದನ್ನು ಭೂಮಿಯ ಮೇಲೆ ಸುರಿಯಲು ಮೃಗದ ಗುರುತನ್ನು ಹಾಕಿಸಿಕೊಂಡವರು, ಅದರ ವಿಗ್ರಹವನ್ನು ಆರಾಧಿಸುವ ಎಲ್ಲಾ ಜನರ ಮೇಲೆ ಭೀಕರವಾದ ಕೆಟ್ಟ ಹುಣ್ಣುಗಳು ಎದ್ದವು.

[3] ಎರಡನೆಯ ದೇವದೂತನು ತನ್ನ ಬಟ್ಟಲಲ್ಲಿ ಇದ್ದದ್ದನ್ನು ಸಮುದ್ರದಲ್ಲಿ ಸುರಿದನು. ಅದು ಸತ್ತ ಮನುಷ್ಯನ ರಕ್ತದ ಹಾಗಾಯಿತು ಮತ್ತು ಸಮುದ್ರದಲ್ಲಿದ್ದ ಸಕಲ ಜೀವಿಗಳೂ ಸತ್ತವು.

[4] ಮೂರನೆಯ ದೇವದೂತನು ತನ್ನ ಬಟ್ಟಲಲ್ಲಿ ಇದ್ದದ್ದನ್ನು ನದಿಗಳ ಮತ್ತು ನೀರಿನ ಬುಗ್ಗೆಗಳ ಮೇಲೆ ಸುರಿದನು. ಆಗ ಅವುಗಳ ನೀರು ರಕ್ತವಾಯಿತು.

[5] ಆ ಮೇಲೆ ಜಲಾಧಿಪತಿಯಾದ ದೂತನು, “ನೀನು ಇರುವಾತನೂ ಇದ್ದಾತನೂ ಪರಿಶುದ್ಧನಾಗಿರುವಾತನು ಆಗಿರುವ ದೇವರು, ಏಕೆಂದರೆ ನೀನು ಈ ರೀತಿ ನ್ಯಾಯತೀರ್ಪುಗಳನ್ನು ಮಾಡಿದ್ದರಿಂದ ನೀತಿಸ್ವರೂಪನೇ ಆಗಿರುವಿ.

[6] ಅವರು ನೀತಿವಂತರ ಮತ್ತು ಪ್ರವಾದಿಗಳ ರಕ್ತವನ್ನು ಸುರಿಸಿದ್ದರಿಂದ, ನೀನು ಅವರಿಗೆ ರಕ್ತವನ್ನೇ ಕುಡಿಯುವುದಕ್ಕೆ ಕೊಟ್ಟಿದ್ದೀ ಅದಕ್ಕೆ ಅವರು ಪಾತ್ರರು.” ಎಂದು ಹೇಳುವುದನ್ನು ಕೇಳಿದೆನು.

[7] ಆ ಮೇಲೆ ಯಜ್ಞವೇದಿಯು ಮಾತನಾಡುತ್ತಾ, “ದೇವರಾದ ಕರ್ತನೇ ಸರ್ವಶಕ್ತನೇ, ನಿನ್ನ ನ್ಯಾಯತೀರ್ಪುಗಳು ಸತ್ಯವೂ ನ್ಯಾಯವೂ ಆಗಿವೆ” ಎಂದು ಹೇಳುವುದನ್ನು ಕೇಳಿದೆನು.

[8] ನಾಲ್ಕನೆಯ ದೇವದೂತನು ತನ್ನ ಬಟ್ಟಲಲ್ಲಿ ಇದ್ದದ್ದನ್ನು ಸೂರ್ಯನ ಮೇಲೆ ಸುರಿದನು. ಆಗ ಸೂರ್ಯನಿಗೆ ಬೆಂಕಿಯಂಥ ಬಿಸಿಲಿನಿಂದ ಮನುಷ್ಯರನ್ನು ಸುಡುವ ಅನುಮತಿ ಕೊಡಲ್ಪಟ್ಟಿತು.

[9] ಮನುಷ್ಯರು ಬಲವಾದ ಬಿಸಿಲಿನಿಂದ ಸುಟ್ಟುಹೋದಾಗ್ಯೂ ಅವರು ಈ ಉಪದ್ರವಗಳ ಮೇಲೆ ಅಧಿಕಾರ ಹೊಂದಿರುವ ದೇವರ ನಾಮವನ್ನು ದೂಷಿಸಿದಲ್ಲದೆ, ಅವರು ಪಶ್ಚಾತ್ತಾಪಪಡಲಿಲ್ಲ ಆತನಿಗೆ ಮಹಿಮೆಯನ್ನು ಸಲ್ಲಿಸಲಿಲ್ಲ.

[10] ಐದನೆಯ ದೇವದೂತನು ತನ್ನ ಬಟ್ಟಲಲ್ಲಿ ಇದ್ದದ್ದನ್ನು ಮೃಗದ ಸಿಂಹಾಸನದ ಮೇಲೆ ಸುರಿಯಲು ಅದರ ರಾಜ್ಯವು ಕತ್ತಲಾಯಿತು. ಜನರು ಯಾತನೆಯಿಂದ ತಮ್ಮ ನಾಲಿಗೆಗಳನ್ನು ಕಚ್ಚಿಕೊಂಡು,

[11] ತಮ್ಮ ಯಾತನೆಗಳಿಗಾಗಿಯೂ ಹುಣ್ಣುಗಳ ದೆಸೆಯಿಂದಲೂ ಪರಲೋಕದ ದೇವರನ್ನು ದೂಷಿಸಿದಲ್ಲದೆ. ಅವರು ತಮ್ಮ ಕೃತ್ಯಗಳಿಗಾಗಿ ಮಾನಸಾಂತರ ಹೊಂದಲಿಲ್ಲ.

[12] ಆರನೆಯ ದೇವದೂತನು ತನ್ನ ಬಟ್ಟಲಲ್ಲಿ ಇದ್ದದ್ದನ್ನು ಯೂಫ್ರೆಟಿಸ್ ಎಂಬ ಮಹಾ ನದಿಯಲ್ಲಿ ಸುರಿಯಲು, ಪೂರ್ವದಿಕ್ಕಿನಿಂದ ಬರುವ ರಾಜರಿಗೆ ಮಾರ್ಗ ಸಿದ್ಧವಾಗುವಂತೆ ಅದರ ನೀರು ಬತ್ತಿಹೋಯಿತು.

[13] ಆಗ ಘಟಸರ್ಪದ ಬಾಯಿಂದ, ಮೃಗದ ಬಾಯಿಂದ ಮತ್ತು ಸುಳ್ಳುಪ್ರವಾದಿಯ ಬಾಯಿಂದ ಕಪ್ಪೆಗಳಂತಿದ್ದ ಮೂರು ಅಶುದ್ಧಾತ್ಮಗಳು ಬರುವುದನ್ನು ಕಂಡೆನು.

[14] ಇವು ಸೂಚಕಕಾರ್ಯಗಳನ್ನು ಮಾಡುವ ಭೂತಾತ್ಮಗಳಾಗಿದ್ದು ಭೂಲೋಕದ ಎಲ್ಲಾ ರಾಜರುಗಳ ಬಳಿಗೆ ಹೋಗಿ ಸರ್ವಶಕ್ತನಾದ ದೇವರ ಮಹಾದಿನದ ಯುದ್ಧಕ್ಕಾಗಿ ಅವರನ್ನು ಕೂಡಿಸುತ್ತಿದ್ದವು.

[15] “ಇಗೋ ಕಳ್ಳನು ಬರುವಂತೆ ಬರುತ್ತೇನೆ. ತಾನು ಬೆತ್ತಲೆಯಾಗಿ ತಿರುಗಾಡಿ ಜನರಿಂದ ಅವಮಾನಕ್ಕೆ ಗುರಿಯಾಗದಂತೆ ಎಚ್ಚರವಾಗಿದ್ದು ತನ್ನ ವಸ್ತ್ರಗಳನ್ನು ಜಾಗರೂಕತೆಯಿಂದ ಕಾಪಾಡಿಕೊಳ್ಳುವವನು ಧನ್ಯನು.”

[16] ಆಗ ಅವು ಭೂರಾಜರನ್ನು ಇಬ್ರಿಯ ಭಾಷೆಯಲ್ಲಿ ಅರ್ಮಗೆದ್ದೋನ್ ಎಂದು ಕರೆಯಲ್ಪಡುವ ಸ್ಥಳಕ್ಕೆ ಕೂಡಿಸಿದವು.

[17] ಏಳನೆಯ ದೇವದೂತನು ತನ್ನ ಬಟ್ಟಲಲ್ಲಿ ಇದ್ದದ್ದನ್ನು ವಾಯುಮಂಡಲದ ಮೇಲೆ ಸುರಿಯಲು ಆಗ ಆಲಯದ ಸಿಂಹಾಸನದಿಂದ ಮಹಾಧ್ವನಿಯು ಉಂಟಾಗಿ “ಸಂಭವಿಸಿ ಆಯಿತು” ಎಂದು ಹೇಳಿತು.

[18] ಆಗ ಮಿಂಚುಗಳೂ, ನಾದಗಳೂ, ಗುಡುಗುಗಳೂ ಉಂಟಾದವು ಇದಲ್ಲದೆ ಮಹಾ ಭೂಕಂಪವಾಯಿತು. ಮನುಷ್ಯರು ಭೂಮಿಯ ಮೇಲೆ ಇದ್ದಂದಿನಿಂದ ಅಂಥ ದೊಡ್ಡ ಭೂಕಂಪವಾಗಿರಲಿಲ್ಲ.

[19] ಮಹಾ ಪಟ್ಟಣವು ಮೂರು ಭಾಗವಾಗಿ ಬಿರಿಯಿತು ಮತ್ತು ಜನಾಂಗಗಳ ಪಟ್ಟಣಗಳು ಬಿದ್ದವು. ಆಗ ದೇವರು ತನ್ನ ಸನ್ನಿಧಿಯಲ್ಲಿ ಬಾಬೆಲನ್ನು ಜ್ಞಾಪಿಸಿಕೊಂಡು ತನ್ನ ಉಗ್ರಕೋಪವೆಂಬ ದ್ರಾಕ್ಷಾರಸದಿಂದ ತುಂಬಿದ ಪಾತ್ರೆಯನ್ನು ಆ ನಗರಕ್ಕೆ ಕೊಟ್ಟನು.

[20] ಆಗ ಪ್ರತಿಯೊಂದು ದ್ವೀಪವು ಓಡಿಹೋಗಿ ಮರೆಯಾದವು ಬೆಟ್ಟಗಳು ಕಾಣದಂತಾದವು.

[21] ಮತ್ತು ಆಕಾಶದಿಂದ ಮನುಷ್ಯರ ಮೇಲೆ ದೊಡ್ಡ ಆಲಿಕಲ್ಲಿನ ಮಳೆ ಸುರಿಯಿತು. ಒಂದೊಂದು ಅಲಿಕಲ್ಲು ಸುಮಾರು ನಲ್ವತ್ತು ಕಿಲೊಗ್ರಾಮಿನಷ್ಟು ತೂಕವಾಗಿತ್ತು. ಆ ಆಲಿಕಲ್ಲಿನ ಮಳೆಯ ಉಪದ್ರವವು ಬಹಳ ವಿಪರೀತವಾದ್ದರಿಂದ ಆ ಮಳೆಯಲ್ಲಿ ಸಿಕ್ಕಿಕೊಂಡ ಮನುಷ್ಯರು ದೇವರನ್ನು ದೂಷಿಸಿದರು.

ಪ್ರಕಟಣೆ — Chapters