Skip to content
Opens in a new window
Listen to this chapter • 4:07

[1] ಯೇಸು ಕ್ರಿಸ್ತನ ಪ್ರಕಟನೆಯು, ಆತನು ಬೇಗನೆ ಸಂಭವಿಸಬೇಕಾಗಿರುವ ಸಂಗತಿಗಳನ್ನು ತನ್ನ ದಾಸರಿಗೆ ತೋರಿಸುವುದಕ್ಕಾಗಿ ದೇವರಿಂದ ಈ ಪ್ರಕಟಣೆಯನ್ನು ಹೊಂದಿದನು. ಇದಲ್ಲದೆ ಆತನು ತನ್ನ ದೂತನನ್ನು ಕಳುಹಿಸಿ ಅವನ ಮೂಲಕ ಆ ಸಂಗತಿಗಳನ್ನು ತನ್ನ ದಾಸನಾದ ಯೋಹಾನನಿಗೆ ತಿಳಿಸಿದನು.

[2] ಯೋಹಾನನು ದೇವರ ವಾಕ್ಯದ ಕುರಿತಾಗಿಯೂ ಯೇಸು ಕ್ರಿಸ್ತನು ಹೇಳಿದ ಸಾಕ್ಷಿಯ ವಿಷಯವಾಗಿಯೂ ತಾನು ಕಂಡದ್ದನ್ನೆಲ್ಲಾ ತಿಳಿಸುವವನಾಗಿ ಸಾಕ್ಷಿಕೊಟ್ಟನು.

[3] ಈ ಪ್ರವಾದನಾ ವಾಕ್ಯಗಳನ್ನು ಓದುವವನೂ, ಕೇಳುವವರೂ ಮತ್ತು ಇದರಲ್ಲಿ ಬರೆದಿರುವುದನ್ನು ಕೈಕೊಂಡು ನಡೆಯುವವರೂ ಧನ್ಯರು. ಏಕೆಂದರೆ ಅವು ನೆರವೇರುವ ಕಾಲವು ಸಮೀಪವಾಗಿದೆ.

[4] ಆಸ್ಯಸೀಮೆಯಲ್ಲಿರುವ ಏಳು ಸಭೆಗಳಿಗೆ ಯೋಹಾನನು ಬರೆಯುವುದೇನಂದರೆ; ಇರುವಾತನೂ, ಇದ್ದಾತನೂ, ಬರುವಾತನೂ ಆಗಿರುವಾತನಿಂದ ಮತ್ತು ಆತನ ಸಿಂಹಾಸನದ ಮುಂದಿರುವ ಏಳು ಆತ್ಮಗಳಿಂದ

[5] ಮತ್ತು ನಂಬಿಗಸ್ತ ಸಾಕ್ಷಿಯೂ, ಸತ್ತವರೊಳಗಿಂದ ಮೊದಲು ಎದ್ದುಬಂದಾತನೂ ಮತ್ತು ಭೂರಾಜರ ಅಧಿಪತಿಯೂ ಆಗಿರುವ ಯೇಸು ಕ್ರಿಸ್ತನಿಂದ ನಿಮಗೆ ಕೃಪೆಯೂ ಶಾಂತಿಯೂ ಆಗಲಿ. ನಮ್ಮನ್ನು ಪ್ರೀತಿಸುವಾತನೂ ತನ್ನ ಪವಿತ್ರವಾದ ರಕ್ತದ ಮೂಲಕ ನಮ್ಮನ್ನು ಪಾಪಗಳಿಂದ ಬಿಡಿಸಿದಾತನೂ,

[6] ನಮ್ಮನ್ನು ದೇವರ ರಾಜ್ಯವನ್ನಾಗಿಯೂ ತನ್ನ ತಂದೆಯಾದ ದೇವರಿಗೆ ಯಾಜಕರನ್ನಾಗಿಯೂ ಮಾಡಿದಾತನಿಗೆ ಯುಗಯುಗಾಂತರಗಳಲ್ಲಿಯೂ ಮಹಿಮೆಯು ಬಲವು ಉಂಟಾಗಲಿ. ಆಮೆನ್.

[7] ನೋಡಿರಿ, ಆತನು ಮೇಘಗಳೊಂದಿಗೆ ಬರುತ್ತಾನೆ, ಎಲ್ಲರ ಕಣ್ಣುಗಳು ಆತನನ್ನು ನೋಡುವವು, ಆತನನ್ನು ಇರಿದವರು ಸಹ ಅದನ್ನು ಕಾಣುವರು, ಭೂಮಿಯಲ್ಲಿರುವ ಎಲ್ಲಾ ಕುಲದವರು ಆತನ ನಿಮಿತ್ತ ದುಃಖಿಸುವರು. ಹೌದು, ಹಾಗೆಯೇ ಆಗುವುದು. ಆಮೆನ್.

[8] “ನಾನೇ ಆದಿಯೂ ಅಂತ್ಯವೂ, ಇರುವಾತನೂ, ಇದ್ದಾತನೂ, ಬರುವಾತನೂ, ಸರ್ವಶಕ್ತನೂ” ಎಂದು ದೇವರಾದ ಕರ್ತನು ಹೇಳುತ್ತಾನೆ.

[9] ನಿಮ್ಮ ಸಹೋದರನೂ ಯೇಸುವಿನ ನಿಮಿತ್ತ ಹಿಂಸೆಯಲ್ಲಿ, ರಾಜ್ಯದಲ್ಲಿ, ತಾಳ್ಮೆಯಲ್ಲಿ, ನಿಮ್ಮೊಂದಿಗೆ ಪಾಲುಗಾರನೂ ಆಗಿರುವ ಯೋಹಾನನೆಂಬ ನಾನು ದೇವರ ವಾಕ್ಯಕ್ಕೋಸ್ಕರ ಯೇಸುವಿನ ವಿಷಯವಾಗಿ ಸಾಕ್ಷಿ ನೀಡಲು ಪತ್ಮೊಸ್ ಎಂಬ ದ್ವೀಪದಲ್ಲಿದ್ದೆನು.

[10] ನಾನು ಕರ್ತನ ದಿನದಲ್ಲಿ ದೇವರಾತ್ಮವಶನಾಗಿರಲು, ನನ್ನ ಬೆನ್ನ ಹಿಂದೆ ಮಹಾಶಬ್ದವೊಂದು ಕೇಳಿಸಿತು. ಅದು ತುತ್ತೂರಿಯ ನಾದದಂತಿತ್ತು.

[11] ಅದು, “ನೀನು ನೋಡುವುದನ್ನು ಒಂದು ಪುಸ್ತಕದಲ್ಲಿ ಬರೆದು ಎಫೆಸ, ಸ್ಮುರ್ನ, ಪೆರ್ಗಮ, ಥುವತೈರ, ಸಾರ್ದಿಸ್, ಫಿಲದೆಲ್ಫಿಯ, ಲವೊದಿಕೀಯ, ಎಂಬೀ ಏಳು ಸಭೆಗಳಿಗೆ ಕಳುಹಿಸಬೇಕು” ಎಂದು ನುಡಿಯಿತು.

[12] ನನ್ನ ಸಂಗಡ ಮಾತನಾಡುತ್ತಿದ್ದ ಶಬ್ದವು ಯಾರದೆಂದು ನೋಡುವುದಕ್ಕೆ ನಾನು ಹಿಂದಕ್ಕೆ ತಿರುಗಿದೆನು. ತಿರುಗಿದಾಗ ಏಳು ಚಿನ್ನದ ದೀಪಸ್ತಂಭಗಳನ್ನೂ

[13] ಆ ದೀಪಸ್ತಂಭಗಳ ಮಧ್ಯದಲ್ಲಿ ಮನುಷ್ಯಕುಮಾರನಂತೆ ಇರುವವನನ್ನೂ ಕಂಡೆನು. ಆತನು ನಿಲುವಂಗಿಯನ್ನು ಧರಿಸಿ ಚಿನ್ನದ ಪಟ್ಟಿಯನ್ನು ಎದೆಗೆ ಕಟ್ಟಿಕೊಂಡಿದ್ದನು.

[14] ಆತನ ತಲೆಯ ಕೂದಲು ಬಿಳೀ ಉಣ್ಣೆಯಂತೆಯೂ ಹಿಮದಂತೆಯೂ ಬೆಳ್ಳಗಿತ್ತು. ಆತನ ಕಣ್ಣುಗಳು ಬೆಂಕಿಯ ಜ್ವಾಲೆಯಂತೆಯೂ,

[15] ಆತನ ಪಾದಗಳು ಕುಲುಮೆಯಲ್ಲಿ ಕಾಯಿಸಿದ ತಾಮ್ರದಂತೆಯೂ, ಆತನ ಧ್ವನಿಯು ಜಲಪ್ರವಾಹದ ಘೋಷದಂತೆಯೂ ಇದ್ದವು.

[16] ಆತನ ಬಲಗೈಯಲ್ಲಿ ಏಳು ನಕ್ಷತ್ರಗಳಿದ್ದವು, ಆತನ ಬಾಯೊಳಗಿಂದ ಹದವಾದ ಇಬ್ಬಾಯಿ ಕತ್ತಿಯು ಹೊರಡುತ್ತಿತ್ತು. ಆತನ ಮುಖವು ಪ್ರಬಲವಾಗಿ ಪ್ರಕಾಶಿಸುವ ಸೂರ್ಯನಂತಿತ್ತು.

[17] ನಾನು ಆತನನ್ನು ಕಂಡಾಗ ಸತ್ತವನ ಹಾಗೆ ಆತನ ಪಾದಗಳ ಮುಂದೆ ಬಿದ್ದೆನು. ಆತನು ತನ್ನ ಬಲಗೈಯನ್ನು ನನ್ನ ಮೇಲಿಟ್ಟು, “ಹೆದರಬೇಡ, ನಾನು ಮೊದಲನೆಯವನೂ, ಕಡೆಯವನೂ,

[18] ಸದಾ ಜೀವಿಸುವವನೂ ಆಗಿದ್ದೇನೆ. ಸತ್ತವನಾಗಿದ್ದೆನು, ಆದರೆ ಇಗೋ ಯುಗಯುಗಾಂತರಕ್ಕೂ ಜೀವಿಸುವವನಾಗಿದ್ದೇನೆ. ಮೃತ್ಯುವಿನ ಮತ್ತು ಪಾತಾಳದ ಬೀಗದ ಕೈಗಳು ನನ್ನಲ್ಲಿ ಇವೆ.

[19] ಆದ್ದರಿಂದ ನೀನು ಕಂಡವುಗಳನ್ನೂ ಈಗ ನಡೆಯುತ್ತಿರುವವುಗಳನ್ನೂ ಮುಂದೆ ಆಗಬೇಕಾದವುಗಳನ್ನೂ ಬರೆ.

[20] ನನ್ನ ಬಲಗೈಯಲ್ಲಿ ನೀನು ಕಂಡ ಏಳು ನಕ್ಷತ್ರಗಳ ಮತ್ತು ಏಳು ಚಿನ್ನದ ದೀಪಸ್ತಂಭಗಳ ಗೂಢಾರ್ಥವನ್ನು ವಿವರಿಸುತ್ತೇನೆ. ಆ ಏಳು ನಕ್ಷತ್ರಗಳು ಅಂದರೆ ಏಳು ಸಭೆಗಳ ದೂತರು, ಆ ಏಳು ದೀಪಸ್ತಂಭಗಳು ಅಂದರೆ ಆ ಏಳು ಸಭೆಗಳು.”

ಪ್ರಕಟಣೆ — Chapters