[1] ತರುವಾಯ ನೂತನ ಆಕಾಶವನ್ನೂ ನೂತನ ಭೂಮಿಯನ್ನೂ ಕಂಡೆನು. ಮೊದಲಿನ ಆಕಾಶವೂ ಮೊದಲಿನ ಭೂಮಿಯೂ ಗತಿಸಿ ಹೋದವು. ಇನ್ನು ಸಮುದ್ರವು ಇಲ್ಲ.
[2] ಇದಲ್ಲದೆ ಪರಲೋಕದಿಂದ ಪರಿಶುದ್ಧ ಪಟ್ಟಣವಾದ ಹೊಸ ಯೆರೂಸಲೇಮ್ ದೇವರ ಬಳಿಯಿಂದ ಇಳಿದು ಬರುವುದನ್ನು ಕಂಡೆನು. ಅದು ತನ್ನ ಪತಿಗೋಸ್ಕರ ಸಿದ್ಧಳಾಗಿರುವ ಮದಲಗಿತ್ತಿಯಂತೆ ಶೃಂಗರಿಸಲ್ಪಟ್ಟಿತ್ತು.
[3] ಇದಲ್ಲದೆ ಸಿಂಹಾಸನದೊಳಗಿಂದ ಬಂದ ಮಹಾಧ್ವನಿಯು ನನಗೆ ಕೇಳಿಸಿತು. ಅದು, “ಇಗೋ ದೇವರ ನಿವಾಸವು ಮನುಷ್ಯರೊಂದಿಗೆ ಇದೆ. ಆತನು ಅವರೊಡನೆ ವಾಸಮಾಡುವನು. ಅವರು ಆತನಿಗೆ ಪ್ರಜೆಗಳಾಗಿರುವರು. ದೇವರು ತಾನೇ ಅವರ ಸಂಗಡ ಇರುವನು ಮತ್ತು ಅವರ ದೇವರಾಗಿರುವನು.
[4] ಅವರ ಕಣ್ಣೀರನ್ನೆಲ್ಲಾ ಆತನೇ ಒರಸಿಬಿಡುವನು. ಇನ್ನು ಮರಣವಿರುವುದಿಲ್ಲ. ಇನ್ನು ದುಃಖವಾಗಲಿ, ಗೋಳಾಟವಾಗಲಿ, ಕಷ್ಟವಾಗಲಿ ಇರುವುದಿಲ್ಲ. ಮೊದಲಿದ್ದದ್ದೆಲ್ಲಾ ಇಲ್ಲದಂತಾಯಿತು” ಎಂದು ಹೇಳಿತು.
[5] ಆಗ ಸಿಂಹಾಸನದ ಮೇಲೆ ಕುಳಿತಿದ್ದಾತನು, “ಇಗೋ, ನಾನು ಎಲ್ಲವನ್ನು ನೂತನಗೊಳಿಸುತ್ತೇನೆ” ಎಂದನು. ಮತ್ತು ಒಬ್ಬನು ನನಗೆ, “ನೀನು ಇದನ್ನು ಬರೆ. ಏಕೆಂದರೆ ಈ ಮಾತುಗಳು ನಂಬತಕ್ಕವೂ, ಸತ್ಯವಾದವೂ ಆಗಿವೆ” ಎಂದು ಹೇಳಿದನು.
[6] ಆಗ ಸಿಂಹಾಸನದ ಮೇಲೆ ಕುಳಿತಿದ್ದಾತನು, “ಎಲ್ಲಾ ನೆರವೇರಿತು, ನಾನೇ ಆದಿಯು, ಅಂತ್ಯವೂ, ಪ್ರಾರಂಭವೂ, ಸಮಾಪ್ತಿಯೂ ಆಗಿದ್ದೇನೆ. ದಾಹವುಳ್ಳವನಿಗೆ ಜೀವಜಲದ ಬುಗ್ಗೆಯಿಂದ ಕ್ರಯವಿಲ್ಲದೆ ಕುಡಿಯುವುದಕ್ಕೆ ಕೊಡುವೆನು.
[7] ಜಯ ಹೊಂದುವವನು ಇವುಗಳಿಗೆ ಬಾಧ್ಯನಾಗುವನು. ನಾನು ಅವನಿಗೆ ದೇವರಾಗಿರುವೆನು. ಅವನು ನನಗೆ ಮಗನಾಗಿರುವನು.
[8] ಆದರೆ ಹೇಡಿಗಳು, ನಂಬಿಕೆಯಿಲ್ಲದವರು, ಅಸಹ್ಯವಾದದ್ದರಲ್ಲಿ ಪಾಳುಗಾರರಾಗಿರುವವರು, ಕೊಲೆಗಾರರು, ಜಾರರು, ಮಾಟಗಾರರು, ವಿಗ್ರಹಾರಾಧಕರು, ಎಲ್ಲಾ ಸುಳ್ಳುಗಾರರು ಇವರಿಗೆ ಸಿಕ್ಕುವ ಪಾಲು ಬೆಂಕಿ ಗಂಧಕಗಳುರಿಯುವ ಕೆರೆಯೇ, ಅದು ಎರಡನೆಯ ಮರಣವು” ಎಂದು ನನಗೆ ಹೇಳಿದನು.
[9] ಕಡೇ ಏಳು ಉಪದ್ರವಗಳಿಂದ ತುಂಬಿದ ಏಳು ಬಟ್ಟಲುಗಳನ್ನು ಹಿಡಿದಿದ್ದ ಏಳು ಮಂದಿ ದೇವದೂತರಲ್ಲಿ ಒಬ್ಬನು ಬಂದು ನನ್ನ ಸಂಗಡ ಮಾತನಾಡುತ್ತಾ, “ಬಾ ಕುರಿಮರಿಯಾದಾತನಿಗೆ ಹೆಂಡತಿಯಾಗಲಿರುವ ವಧುವನ್ನು ನಿನಗೆ ತೋರಿಸುವೆನು” ಎಂದು ಹೇಳಿ,
[10] ದೇವರಾತ್ಮನಲ್ಲಿ ನನ್ನನ್ನು ಎತ್ತರವಾದ ದೊಡ್ಡ ಬೆಟ್ಟಕ್ಕೆ ಎತ್ತಿಕೊಂಡು ಹೋಗಿ, ಯೆರೂಸಲೇಮೆಂಬ ಪರಿಶುದ್ಧ ಪಟ್ಟಣವು ಪರಲೋಕದೊಳಗಿಂದ, ದೇವರ ಬಳಿಯಿಂದ ಇಳಿದುಬರುವುದನ್ನು ನನಗೆ ತೋರಿಸಿದನು.
[11] ಅದು ದೇವರ ತೇಜಸ್ಸಿನಿಂದ ಕೂಡಿತ್ತು. ಪಟ್ಟಣವು ಅಮೂಲ್ಯ ರತ್ನದ ಪ್ರಕಾಶಕ್ಕೆ ಸಮಾನವಾಗಿತ್ತು, ಸ್ವಚ್ಛವಾದ ಸ್ಫಟಿಕದಂತೆ ಶುಭ್ರವಾಗಿತ್ತು.
[12] ಆ ಪಟ್ಟಣಕ್ಕೆ ಎತ್ತರವಾದ ದೊಡ್ಡ ಗೋಡೆ ಇತ್ತು. ಅದಕ್ಕೆ ಹನ್ನೆರಡು ಹೆಬ್ಬಾಗಿಲುಗಳಿದ್ದವು. ಆ ಬಾಗಿಲುಗಳ ಬಳಿಯಲ್ಲಿ ಹನ್ನೆರಡು ಮಂದಿ ದೇವದೂತರಿದ್ದರು. ಅವುಗಳ ಮೇಲೆ ಇಸ್ರಾಯೇಲ್ಯರ ಹನ್ನೆರಡು ಕುಲಗಳ ಹೆಸರುಗಳು ಬರೆಯಲ್ಪಟ್ಟಿದ್ದವು.
[13] ಪೂರ್ವ ದಿಕ್ಕಿನಲ್ಲಿ ಮೂರು ಬಾಗಿಲುಗಳು, ಉತ್ತರ ದಿಕ್ಕಿನಲ್ಲಿ ಮೂರು ಬಾಗಿಲುಗಳು ದಕ್ಷಿಣ ದಿಕ್ಕಿನಲ್ಲಿ ಮೂರು ಬಾಗಿಲುಗಳು ಪಶ್ಚಿಮ ದಿಕ್ಕಿನಲ್ಲಿ ಮೂರು ಬಾಗಿಲುಗಳು ಇದ್ದವು.
[14] ಪಟ್ಟಣದ ಪ್ರಾಕಾರಕ್ಕೆ ಹನ್ನೆರಡು ಅಸ್ತಿವಾರಗಳಿದ್ದವು. ಅವುಗಳ ಮೇಲೆ ಯಜ್ಞದ ಕುರಿಮರಿಯಾದಾತನ ಹನ್ನೆರಡು ಮಂದಿ ಅಪೊಸ್ತಲರ ಹೆಸರುಗಳಿದ್ದವು.
[15] ನನ್ನ ಸಂಗಡ ಮಾತನಾಡುತ್ತಿದ್ದವನು ಆ ಪಟ್ಟಣವನ್ನೂ ಅದರ ಬಾಗಿಲುಗಳನ್ನೂ ಅದರ ಗೋಡೆಯನ್ನೂ ಅಳತೆ ಮಾಡುವುದಕ್ಕಾಗಿ ತನ್ನ ಕೈಯಲ್ಲಿ ಚಿನ್ನದ ಅಳತೆ ಕೋಲನ್ನು ಹಿಡಿದಿದ್ದನು.
[16] ಆ ಪಟ್ಟಣವು ಚಚ್ಚೌಕವಾಗಿತ್ತು. ಅದರ ಉದ್ದವು ಅದರ ಅಗಲದಷ್ಟಿತ್ತು. ಅವನು ಆ ಪಟ್ಟಣವನ್ನು ಕೋಲಿನಿಂದ ಅಳತೆ ಮಾಡಿದನು. ಅಳತೆಯು ಸುಮಾರು 2,200 ಕಿಲೋಮೀಟರುಗಳಷ್ಟಿತ್ತು. ಅದರ ಉದ್ದವು, ಅಗಲವು, ಎತ್ತರವು ಸಮವಾಗಿದ್ದವು.
[17] ಅವನು ಅದರ ಗೋಡೆಯನ್ನು ಅಳತೆ ಮಾಡಿದನು. ಅದು ನೂರನಲ್ವತ್ತು ನಾಲ್ಕು ಮೊಳವಾಗಿತ್ತು. ಈ ಲೆಕ್ಕದಲ್ಲಿ ಮನುಷ್ಯನ ಮೊಳ ಎಂದರೆ ದೇವದೂತನ ಮೊಳ.
[18] ಆ ಗೋಡೆಯು ಸೂರ್ಯಕಾಂತ ಶಿಲೆಯಿಂದ ಕಟ್ಟಲ್ಪಟ್ಟಿತ್ತು ಪಟ್ಟಣವು ಶುದ್ಧ ಗಾಜಿನಂತಿರುವ ಅಪ್ಪಟ ಬಂಗಾರವಾಗಿತ್ತು.
[19] ಪಟ್ಟಣದ ಗೋಡೆಯ ಅಸ್ತಿವಾರಗಳು ಸಕಲ ವಿಧವಾದ ರತ್ನಗಳಿಂದ ಅಲಂಕೃತವಾಗಿದ್ದವು. ಮೊದಲನೆಯ ಅಸ್ತಿವಾರವು ಸೂರ್ಯಕಾಂತಶಿಲೆ ಎರಡನೆಯದು ನೀಲಮಣಿ ಮೂರನೆಯದು ಪಚ್ಚೆ. ನಾಲ್ಕನೆಯದು ಪದ್ಮರಾಗ,
[20] ಐದನೆಯದು ಗೋಮೇಧಿಕ, ಆರನೆಯದು ಮಾಣಿಕ್ಯ, ಏಳನೆಯದು ಪೀತರತ್ನ, ಎಂಟನೆಯದು ಬೆರುಲ್ಲ, ಒಂಭತ್ತನೆಯದು ಪುಷ್ಯರಾಗ, ಹತ್ತನೆಯದು ಗರುಡಪಚ್ಚೆ, ಹನ್ನೊಂದನೆಯದು ಇಂದ್ರನೀಲ, ಹನ್ನೆರಡನೆಯದು ನೀಲಸ್ಫಟಿಕ,
[21] ಹನ್ನೆರಡು ಹೆಬ್ಬಾಗಿಲುಗಳು ಹನ್ನೆರಡು ಮುತ್ತುಗಳಾಗಿದ್ದವು. ಪ್ರತಿ ಹೆಬ್ಬಾಗಿಲೂ ಒಂದೊಂದು ಮುತ್ತಿನಿಂದ ಮಾಡಲ್ಪಟ್ಟಿತ್ತು. ಪಟ್ಟಣದ ಬೀದಿಯು ಶುದ್ಧವಾದ ಗಾಜಿನಂತಿರುವ ಅಪ್ಪಟ ಬಂಗಾರವಾಗಿತ್ತು.
[22] ಪಟ್ಟಣದಲ್ಲಿ ನಾನು ದೇವಾಲಯವನ್ನು ಕಾಣಲಿಲ್ಲ. ಏಕೆಂದರೆ ಸರ್ವಶಕ್ತನಾಗಿರುವ ದೇವರಾದ ಕರ್ತನೂ ಯಜ್ಞದ ಕುರಿಮರಿಯಾದಾತನೂ ಅದರ ದೇವಾಲಯವಾಗಿದ್ದಾರೆ.
[23] ಪಟ್ಟಣಕ್ಕೆ ಬೆಳಕು ಕೊಡಲು ಸೂರ್ಯನಾಗಲಿ ಚಂದ್ರನಾಗಲಿ ಬೇಕಾಗಿರಲಿಲ್ಲ, ಏಕೆಂದರೆ ಅದಕ್ಕೆ ದೇವರ ಮಹಿಮೆಯೇ ಪ್ರಕಾಶವನ್ನು ಕೊಡುತ್ತಿತ್ತು. ಯಜ್ಞದ ಕುರಿಮರಿಯಾದಾತನೇ ಅದರ ದೀಪವು.
[24] ಅದರ ಬೆಳಕಿನಿಂದ ಜನಾಂಗಗಳವರು ನಡೆದಾಡುವರು. ಭೂರಾಜರು ತಮ್ಮ ವೈಭವವನ್ನು ಅದರೊಳಗೆ ತರುವರು.
[25] ಅದರ ಹೆಬ್ಬಾಗಿಲುಗಳನ್ನು ಹಗಲಿನಲ್ಲಿ ಮುಚ್ಚುವುದೇ ಇಲ್ಲ. ಅಲ್ಲಿ ರಾತ್ರಿಯಂತೂ ಇಲ್ಲವೇ ಇಲ್ಲ.
[26] ಜನಾಂಗಗಳ ವೈಭವವೂ ಗೌರವವೂ ಅಲ್ಲಿಗೆ ತರಲ್ಪಡುವವು.
[27] ಅದರಲ್ಲಿ ಅಶುದ್ಧವಾದದ್ದೊಂದು ಸೇರುವುದಿಲ್ಲ. ಅವಮಾನವಾದದ್ದಾಗಲಿ ವಂಚನೆಯಾಗಲಿ ಮಾಡುವವನು ಅದರೊಳಗೆ ಪ್ರವೇಶಿಸಲಾರನು. ಆದರೆ ಯಜ್ಞದ ಕುರಿಮರಿಯಾದಾತನ ಜೀವಬಾಧ್ಯರ ಪುಸ್ತಕದಲ್ಲಿ ಯಾರಾರ ಹೆಸರುಗಳು ಬರೆಯಲ್ಪಟ್ಟಿವೆಯೋ ಅವರು ಮಾತ್ರ ಸೇರುವರು.