Skip to content
Opens in a new window
Listen to this chapter • 4:27

[1] ಆ ಮೇಲೆ ಅವನು ಸ್ಫಟಿಕದಂತೆ ಅತಿಶುದ್ಧವಾಗಿದ್ದ ಜೀವಜಲದ ನದಿಯನ್ನು ನನಗೆ ತೋರಿಸಿದನು. ಅದು ದೇವರ ಮತ್ತು ಯಜ್ಞದ ಕುರಿಮರಿಯಾದಾತನ ಸಿಂಹಾಸನದಿಂದ ಹೊರಟು,

[2] ಪಟ್ಟಣದ ಬೀದಿಯ ಮಧ್ಯದಲ್ಲಿ ಹರಿಯುತ್ತಿತ್ತು. ಆ ನದಿಯ ಎರಡು ದಡಗಳಲ್ಲಿ ಜೀವವೃಕ್ಷವಿತ್ತು. ಅದು ಪ್ರತಿ ತಿಂಗಳು ಒಂದೊಂದ್ದು ತರಹದ ಫಲವನ್ನು ಬಿಡುತ್ತಾ ಹನ್ನೆರಡು ತರಹದ ಫಲಗಳನ್ನು ಕೊಡುತ್ತದೆ. ಆ ಮರದ ಎಲೆಗಳು ಜನಾಂಗಗಳವರನ್ನು ವಾಸಿಮಾಡುವಂಥದಾಗಿದ್ದವು.

[3] ಇನ್ನೂ ಯಾವ ಶಾಪವು ಇರುವುದಿಲ್ಲ. ಆ ಪಟ್ಟಣದಲ್ಲಿ ದೇವರ ಮತ್ತು ಯಜ್ಞದ ಕುರಿಮರಿಯಾದಾತನ ಸಿಂಹಾಸನವಿರುವುದು. ಆತನ ಸೇವಕರು ಆತನಿಗೆ ಸೇವೆ ಮಾಡುವರು.

[4] ಅವರು ಆತನ ಮುಖವನ್ನು ನೋಡುವರು. ಅವರ ಹಣೆಯ ಮೇಲೆ ಆತನ ಹೆಸರು ಇರುವುದು.

[5] ಇನ್ನು ರಾತ್ರಿಯೇ ಇರುವುದಿಲ್ಲ. ಅವರಿಗೆ ದೀಪದ ಬೆಳಕೂ ಸೂರ್ಯನ ಬೆಳಕೂ ಬೇಕಾಗಿರುವುದಿಲ್ಲ. ದೇವರಾದ ಕರ್ತನೇ ಅವರಿಗೆ ಬೆಳಕಾಗಿರುವನು. ಅವರು ಯುಗಯುಗಾಂತರಗಳಲ್ಲಿಯೂ ಆಳುವರು.

[6] ಆ ಮೇಲೆ ದೇವದೂತನು ನನಗೆ, “ಈ ಮಾತುಗಳು ನಂಬತಕ್ಕವುಗಳೂ ಸತ್ಯವಾದವುಗಳೂ ಆಗಿವೆ. ಪ್ರವಾದಿಗಳ ಆತ್ಮಗಳನ್ನು ಪ್ರೇರೇಪಿಸುವ ದೇವರಾದ ಕರ್ತನು ಅತಿಶೀಘ್ರದಲ್ಲಿ ಸಂಭವಿಸತಕ್ಕ ಸಂಗತಿಗಳನ್ನು ತನ್ನ ದಾಸರಿಗೆ ತೋರಿಸುವುದಕ್ಕಾಗಿ ತನ್ನ ದೇವದೂತನನ್ನು ಕಳುಹಿಸಿಕೊಟ್ಟನು.

[7] “ಇಗೋ ನೋಡು! ನಾನು ಅತಿಬೇಗನೆ ಬರುತ್ತೇನೆ! ಈ ಪುಸ್ತಕದಲ್ಲಿ ಬರೆದಿರುವ ಪ್ರವಾದನಾ ವಾಕ್ಯಗಳನ್ನು ಕೈಕೊಂಡು ನಡೆಯುವವನು ಧನ್ಯನು” ಎಂದು ಹೇಳಿದನು.

[8] ಯೋಹಾನನೆಂಬ ನಾನೇ, ಈ ಸಂಗತಿಗಳನ್ನು ಕೇಳಿದವನೂ ನೋಡಿದವನೂ ಆಗಿದ್ದೇನೆ. ನಾನು ಈ ಸಂಗತಿಗಳನ್ನು ಕೇಳಿ ಕಂಡಾಗ, ಈ ಸಂಗತಿಗಳನ್ನು ನನಗೆ ತೋರಿಸಿದ ದೇವದೂತನನ್ನು ಆರಾಧಿಸಬೇಕೆಂದು ಅವನ ಪಾದಕ್ಕೆ ಬಿದ್ದೆನು.

[9] ಆದರೆ ಅವನು ನನಗೆ, “ನೀನು ಹಾಗೆ ಮಾಡಬೇಡ! ನೋಡು. ನಾನು ನಿನಗೂ ಪ್ರವಾದಿಗಳಾಗಿರುವ ನಿನ್ನ ಸಹೋದರರಿಗೂ, ಈ ಪುಸ್ತಕದಲ್ಲಿ ಬರೆದಿರುವ ವಾಕ್ಯಗಳನ್ನು ಕೈಕೊಂಡು ನಡೆಯುವವರಿಗೂ ಸೇವೆಯನ್ನು ಮಾಡುವ ಸೇವಕನಾಗಿದ್ದೇನೆ. ದೇವರನ್ನೇ ಆರಾಧಿಸು” ಎಂದು ಹೇಳಿದನು.

[10] ಇದಲ್ಲದೆ ಅವನು ನನಗೆ ಈ ಪುಸ್ತಕದಲ್ಲಿರುವ “ಪ್ರವಾದನಾ ವಾಕ್ಯಗಳಿಗೆ ಮುದ್ರೆಹಾಕಬೇಡ. ಏಕೆಂದರೆ ಇವು ನೆರವೇರುವ ಕಾಲವು ಸಮೀಪವಾಗಿದೆ.

[11] ಅನ್ಯಾಯ ಮಾಡುವವನು ಇನ್ನೂ ಅನ್ಯಾಯ ಮಾಡಲಿ. ಮೈಲಿಗೆಯಾಗಿರುವವನು ತನ್ನನ್ನು ಇನ್ನು ಮೈಲಿಗೆಯ ಮಾಡಿಕೊಳ್ಳಲಿ, ನೀತಿವಂತನು ಇನ್ನೂ ನೀತಿವಂತನಾಗಲಿ ಮತ್ತು ಪವಿತ್ರನು ತನ್ನನ್ನು ಇನ್ನೂ ಪವಿತ್ರ ಮಾಡಿಕೊಳ್ಳಲಿ.”

[12] “ನೋಡು! ನಾನು ಬೇಗನೇ ಬರುತ್ತೇನೆ. ನಾನು ಪ್ರತಿಯೊಬ್ಬನಿಗೂ ಅವನವನ ನಡತೆಗೆ ತಕ್ಕಂತೆ ಕೊಡತಕ್ಕ ಪ್ರತಿಫಲವು ನನ್ನಲ್ಲಿದೆ.

[13] ನಾನೇ ಆದಿಯೂ, ಅಂತ್ಯವೂ, ಮೊದಲನೆಯವನೂ, ಕಡೆಯವನೂ, ಪ್ರಾರಂಭವೂ, ಸಮಾಪ್ತಿಯೂ ಆಗಿದ್ದೇನೆ.

[14] “ತಮ್ಮ ನಿಲುವಂಗಿಗಳನ್ನು ತೊಳೆದುಕೊಂಡು ಶುದ್ಧರಾಗಿರುವವರು ಧನ್ಯರು. ಅವರಿಗೆ ಜೀವವೃಕ್ಷದ ಹಕ್ಕು ಇರುವುದು. ಅವರು ಬಾಗಿಲುಗಳ ಮೂಲಕ ಆ ಪಟ್ಟಣದೊಳಗೆ ಬಂದು ಸೇರುವರು.

[15] ಆದರೆ ನಾಯಿಗಳಂತಿರುವವರೂ, ಮಾಟಗಾರರೂ, ಜಾರರೂ, ಕೊಲೆಗಾರರೂ, ವಿಗ್ರಹಾರಾಧಕರೂ, ಸುಳ್ಳನ್ನು ಪ್ರೀತಿಸಿ ಅದನ್ನು ಅಭ್ಯಾಸಮಾಡುವವರೆಲ್ಲರೂ ಹೊರಗಿರುವರು” ಎಂದು ಹೇಳಿದನು.

[16] “ಯೇಸುವೆಂಬ ನಾನು ನನ್ನ ಸಭೆಗಳ ವಿಷಯವಾಗಿ ನಿಮಗೆ ಸಾಕ್ಷಿ ಹೇಳುವುದಕ್ಕೆ ನನ್ನ ದೂತನನ್ನು ಕಳುಹಿಸಿಕೊಟ್ಟೆನು. ನಾನು ದಾವೀದನ ವಂಶವೆಂಬ ಬುಡದಿಂದ ಹುಟ್ಟಿದ ಬೇರೂ ಅವನ ಸಂತತಿಯೂ ಪ್ರಕಾಶಮಾನವಾದ ಉದಯ ನಕ್ಷತ್ರವೂ ಆಗಿದ್ದೇನೆ.”

[17] ಆತ್ಮನು ಮತ್ತು ಮದಲಗಿತ್ತಿಯು, “ಬಾ” ಎನ್ನುತ್ತಾರೆ. ಕೇಳುವವನು, “ಬಾ” ಎನ್ನಲಿ. ಬಾಯಾರಿದವನು ಬರಲಿ, ಇಷ್ಟವುಳ್ಳವನು ಜೀವಜಲವನ್ನು ಕ್ರಯವಿಲ್ಲದೆ ಉಚಿತವಾಗಿ ತೆಗೆದುಕೊಳ್ಳಲಿ.

[18] ಈ ಪುಸ್ತಕದ ಪ್ರವಾದನಾ ವಾಕ್ಯಗಳನ್ನು ಕೇಳುವ ಪ್ರತಿಯೊಬ್ಬನಿಗೆ ನಾನು ಹೇಳುವ ಸಾಕ್ಷಿ ಏನೆಂದರೆ, ಇವುಗಳಿಗೆ ಯಾವನಾದರೂ ಹೆಚ್ಚು ಮಾತುಗಳನ್ನು ಕೂಡಿಸಿದರೆ, ದೇವರು ಅವನ ಮೇಲೆ ಈ ಪುಸ್ತಕದಲ್ಲಿ ಬರೆದಿರುವ ಉಪದ್ರವಗಳನ್ನು ಕೊಡುವನು.

[19] ಯಾವನಾದರೂ ಈ ಪ್ರವಾದನಾ ಪುಸ್ತಕದಲ್ಲಿರುವ ಮಾತುಗಳಲ್ಲಿ ಒಂದನ್ನಾದರೂ ತೆಗೆದುಬಿಟ್ಟರೆ ಈ ಪುಸ್ತಕದಲ್ಲಿ ಬರೆದಿರುವ ಪರಿಶುದ್ಧ ಪಟ್ಟಣದಲ್ಲಿಯೂ ಜೀವವೃಕ್ಷದಲ್ಲಿಯೂ ಅವನಿಗಿರುವ ಪಾಲನ್ನು ದೇವರು ತೆಗೆದುಬಿಡುವನು.

[20] ಈ ವಿಷಯಗಳಲ್ಲಿ ಸಾಕ್ಷಿ ಹೇಳುವವನು, “ಹೌದು ನಾನು ನಿಜವಾಗಿ ಬೇಗನೇ ಬರುತ್ತೇನೆ!” ಎಂದು ಹೇಳುತ್ತಾನೆ. ಆಮೆನ್. ಕರ್ತನಾದ ಯೇಸುವೇ ಬಾ.

[21] ಕರ್ತನಾದ ಯೇಸುವಿನ ಕೃಪೆಯು ಎಲ್ಲರೊಂದಿಗೆ ಇರಲಿ. ಆಮೆನ್!

ಪ್ರಕಟಣೆ — Chapters