[1] ನಾನು ಸಿಂಹಾಸನದ ಮೇಲೆ ಕುಳಿತಿದ್ದಾತನ ಬಲಗೈಯಲ್ಲಿ ಒಂದು ಸುರುಳಿಯನ್ನು ಕಂಡೆನು. ಅದರ ಒಳಭಾಗದಲ್ಲಿಯೂ ಮತ್ತು ಹೊರಭಾಗದಲ್ಲಿಯೂ ಬರೆಯಲ್ಪಟ್ಟಿತ್ತು. ಅದು ಏಳು ಮುದ್ರೆಗಳಿಂದ ಮುದ್ರಿತವಾಗಿತ್ತು.
[2] ಇದಲ್ಲದೆ ಬಲಿಷ್ಠನಾದ ಒಬ್ಬ ದೇವದೂತನು “ಈ ಸುರುಳಿಯನ್ನು ಬಿಚ್ಚುವುದಕ್ಕೂ ಇದರ ಮುದ್ರೆಗಳನ್ನು ಒಡೆಯುವುದಕ್ಕೂ ಯಾವನು ಯೋಗ್ಯನು?” ಎಂದು ಮಹಾಶಬ್ದದಿಂದ ಕೂಗುವುದನ್ನು ಕಂಡೆನು.
[3] ಆದರೆ ಆ ಸುರುಳಿಯನ್ನು ತೆರೆಯುವುದಕ್ಕಾದರೂ ಅದರೊಳಗೆ ನೋಡುವುದಕ್ಕಾದರೂ ಪರಲೋಕದಲ್ಲಿಯಾಗಲಿ, ಭೂಮಿಯಲ್ಲಿಯಾಗಲಿ, ಭೂಮಿಯ ಕೆಳಗಾಗಲಿ ಯಾರಿಂದಲೂ ಆಗಲಿಲ್ಲ.
[4] ಸುರುಳಿಯನ್ನು ತೆರೆಯುವುದಕ್ಕಾಗಲಿ ಅದನ್ನು ನೋಡುವುದಕ್ಕಾಗಲಿ ಯೋಗ್ಯನಾದವನು ಒಬ್ಬನೂ ಸಿಕ್ಕಲಿಲ್ಲವೆಂದು ನಾನು ಬಹಳವಾಗಿ ದುಃಖಿಸುತ್ತಿರುವಾಗ.
[5] ಹಿರಿಯರಲ್ಲಿ ಒಬ್ಬನು ನನಗೆ, “ಅಳಬೇಡ ನೋಡು, ಯೂದ ಕುಲದಲ್ಲಿ ಜನಿಸಿದ ಸಿಂಹವೂ ದಾವೀದನ ವಂಶಜನೂ ಆಗಿರುವ ಒಬ್ಬನು, ಆ ಸುರುಳಿಯನ್ನು ಅದರ ಏಳು ಮುದ್ರೆಗಳನ್ನೂ ತೆರೆಯುವುದಕ್ಕೆ ಜಯವೀರನಾಗಿದ್ದಾನೆ” ಎಂದು ಹೇಳಿದನು.
[6] ಸಿಂಹಾಸನವು, ನಾಲ್ಕು ಜೀವಿಗಳೂ ಇದ್ದ ಸ್ಥಳಕ್ಕೂ ಮತ್ತು ಹಿರಿಯರು ಇದ್ದ ಸ್ಥಳಕ್ಕೂ ಮಧ್ಯದಲ್ಲಿ ಒಂದು ಕುರಿಮರಿಯು ವಧಿಸಲ್ಪಟಂತೆ ನಿಂತಿರುವುದನ್ನು ಕಂಡೆನು. ಅದಕ್ಕೆ ಏಳು ಕೊಂಬುಗಳೂ ಏಳು ಕಣ್ಣುಗಳೂ ಇದ್ದವು. ಅವು ಏನೆಂದರೆ ಭೂಮಿಯ ಮೇಲೆಲ್ಲಾ ಕಳುಹಿಸಲ್ಪಟ್ಟಿರುವ ದೇವರ ಏಳು ಆತ್ಮಗಳೇ.
[7] ಈತನು ಮುಂದೆ ಬಂದು ಸಿಂಹಾಸನದ ಮೇಲೆ ಕುಳಿತಿದ್ದಾತನ ಬಲಗೈಯೊಳಗಿಂದ ಆ ಸುರುಳಿಯನ್ನು ತೆಗೆದುಕೊಂಡನು.
[8] ಅದನ್ನು ತೆಗೆದುಕೊಂಡಾಗ ಆ ನಾಲ್ಕು ಜೀವಿಗಳೂ ಇಪ್ಪತ್ನಾಲ್ಕು ಮಂದಿ ಹಿರಿಯರೂ ಕುರಿಮರಿಯಾದಾತನ ಪಾದಕ್ಕೆ ಅಡ್ಡ ಬಿದ್ದರು. ಹಿರಿಯರ ಕೈಗಳಲ್ಲಿ ವೀಣೆಗಳೂ ದೇವಜನರ ಪ್ರಾರ್ಥನೆಗಳೆಂಬ ಧೂಪದಿಂದ ತುಂಬಿದ್ದ ಚಿನ್ನದ ಧೂಪಾರತಿಗಳೂ ಇದ್ದವು.
[9] ಅವರು ಹೊಸಹಾಡನ್ನು ಹಾಡುತ್ತಾ, “ನೀನು ಸುರುಳಿಯನ್ನು ಸ್ವೀಕರಿಸಲು ಅದರ ಮುದ್ರೆಯನ್ನು ಒಡೆಯಲು ನೀನು ಅರ್ಹನಾಗಿದ್ದಿ. ನೀನು ವಧಿಸಲ್ಪಟ್ಟು, ಯಜ್ಞಾರ್ಪಿತನಾಗಿ ನಿನ್ನ ರಕ್ತದಿಂದ ಸಕಲ ಕುಲ, ಭಾಷೆ, ಜನ, ಜನಾಂಗಗಳನ್ನು ದೇವರಿಗಾಗಿ ಕೊಂಡುಕೊಂಡಿರುವೆ.
[10] ಅವರನ್ನು ನಮ್ಮ ದೇವರಿಗೋಸ್ಕರ ರಾಜ್ಯವನ್ನಾಗಿಯೂ, ಯಾಜಕರನ್ನಾಗಿಯೂ ಮಾಡಿರುವೆ. ಅವರು ಭೂಮಿಯನ್ನು ಆಳುವರು.”
[11] ಇದಲ್ಲದೆ ನಾನು ನೋಡಲಾಗಿ ಸಿಂಹಾಸನದ, ಜೀವಿಗಳ ಹಾಗೂ ಹಿರಿಯರ ಸುತ್ತಲೂ ಬಹುಮಂದಿ ದೇವದೂತರ ಧ್ವನಿಯನ್ನು ಕೇಳಿದೆನು. ಅವರ ಸಂಖ್ಯೆಯು ಲಕ್ಷೋಪಲಕ್ಷವಾಗಿಯೂ ಕೋಟ್ಯಾನುಕೋಟಿಯಾಗಿಯೂ ಇತ್ತು.
[12] ಅವರು “ವಧಿಸಲ್ಪಟ್ಟ ಕುರಿಮರಿಯು ಬಲ, ಐಶ್ವರ್ಯ, ಜ್ಞಾನ, ಸಾಮರ್ಥ್ಯ, ಘನತೆ, ಮಹಿಮೆ ಸ್ತೋತ್ರಗಳನ್ನು ಹೊಂದುವುದಕ್ಕೆ ಯೋಗ್ಯನು” ಎಂದು ಮಹಾಧ್ವನಿಯಿಂದ ಹಾಡಿದರು.
[13] ಇದಲ್ಲದೆ ಆಕಾಶದಲ್ಲಿಯೂ, ಭೂಮಿಯ ಮೇಲೆಯೂ, ಭೂಮಿಯ ಕೆಳಗಡೆಯೂ, ಸಮುದ್ರದಲ್ಲಿಯೂ ಇರುವ ಎಲ್ಲಾ ಸೃಷ್ಟಿಗಳೂ ಅಂದರೆ ಭೂಮ್ಯಾಕಾಶ ಸಮುದ್ರಗಳೊಳಗೆ ಇರುವುದೆಲ್ಲವೂ, “ಸಿಂಹಾಸನದ ಮೇಲೆ ಕುಳಿತಿದ್ದಾತನಿಗೂ ಕುರಿಮರಿಯಾದಾತನಿಗೂ ಸ್ತೋತ್ರ, ಗೌರವ, ಮಹಿಮೆ, ಅಧಿಪತ್ಯಗಳು ಯುಗಯುಗಾಂತರಗಳಲ್ಲಿಯೂ ಇರಲಿ” ಎಂದು ಹೇಳುವುದನ್ನು ಕೇಳಿದೆನು.
[14] ಆಗ ನಾಲ್ಕು ಜೀವಿಗಳು “ಆಮೆನ್” ಅಂದವು ಮತ್ತು ಹಿರಿಯರು ಅಡ್ಡಬಿದ್ದು ಆರಾಧಿಸಿದರು.