Skip to content
Opens in a new window
Listen to this chapter • 3:32

[1] ಅನಂತರ ದಾವೀದನು ಹೋಗಿ ಫಿಲಿಷ್ಟಿಯರ ಮೇಲೆ ಮುತ್ತಿಗೆ ಹಾಕಿ, ಅವರನ್ನು ಸೋಲಿಸಿ, ಅವರ ರಾಜಧಾನಿಯನ್ನು ವಶಪಡಿಸಿಕೊಂಡು, ಆಡಳಿತವನ್ನು ತನ್ನ ಸ್ವಾಧೀನದಲ್ಲಿಟ್ಟುಕೊಂಡನು.

[2] ಇದಲ್ಲದೆ ಅವನು ಮೋವಾಬ್ಯರನ್ನು ಸೋಲಿಸಿ, ಅವರನ್ನು ನೆಲಕ್ಕೆ ಉರುಳಿಸಿ, ಹಗ್ಗದಿಂದ ಅಳತೆಮಾಡಿಸಿ, ಪ್ರತಿ ಮೂರನೆಯ ಎರಡು ಭಾಗದ ಜನರನ್ನು ಕೊಲ್ಲಿಸಿ, ಮೂರನೆ ಭಾಗದ ಜನರನ್ನು ಉಳಿಸಿದನು. ಉಳಿದ ಮೋವಾಬ್ಯರು ದಾವೀದನ ದಾಸರಾಗಿ ಅವನಿಗೆ ಕಪ್ಪಕೊಡಬೇಕಾಯಿತು.

[3] ದಾವೀದನು ಯೂಫ್ರೆಟಿಸ್ ನದಿಯ ಸುತ್ತಣ ಪ್ರದೇಶದಲ್ಲಿ ತನ್ನ ರಾಜ್ಯಾಧಿಕಾರವನ್ನು ಸ್ಥಾಪಿಸುವುದಕ್ಕೆ ಹೋಗುತ್ತಿದ್ದ ರೆಹೋಬನ ಮಗನೂ ಚೋಬದ ಅರಸನೂ ಆದ ಹದದೆಜೆರನನ್ನು ಸೋಲಿಸಿದನು.

[4] ಅವನು ಅವರ ಸಾವಿರದ ಏಳುನೂರು ರಾಹುತರನ್ನೂ ಇಪ್ಪತ್ತು ಸಾವಿರ ಮಂದಿ ಕಾಲಾಳುಗಳನ್ನೂ ಸೆರೆಹಿಡಿದು ನೂರು ಕುದುರೆಗಳನ್ನಿಟ್ಟುಕೊಂಡು ಮಿಕ್ಕಾದ ಕುದುರೆಗಳ ಹಿಂಗಾಲಿನ ನರಗಳನ್ನು ಕತ್ತರಿಸಿಬಿಟ್ಟನು.

[5] ದಮಸ್ಕದ ಅರಾಮ್ಯರು, ಚೋಬದ ಅರಸನಾದ ಹದದೆಜೆರನನ್ನು ರಕ್ಷಿಸಲು ಬಂದಾಗ ದಾವೀದನು ಅವರನ್ನೂ ಸೋಲಿಸಿ ಅವರಲ್ಲಿ ಇಪ್ಪತ್ತೆರಡು ಸಾವಿರ ಜನರನ್ನು ಕೊಂದನು.

[6] ಅನಂತರ ದಾವೀದನು ದಮಸ್ಕದ ಅರಾಮ್ಯ ದೇಶದಲ್ಲಿ ಕಾವಲುದಂಡನ್ನಿರಿಸಿದನು. ಹೀಗೆ ಅರಾಮ್ಯರು ಅವನ ಸೇವಕರಾಗಿ ಅವನಿಗೆ ಕಪ್ಪಕೊಡುವವರಾದರು. ಯೆಹೋವನ ಅನುಗ್ರಹದಿಂದ ದಾವೀದನಿಗೆ ಎಲ್ಲಿ ಹೋದರೂ ಜಯದೊರಕಿತು.

[7] ಅವನು ಹದದೆಜೆರನ ಸೇವಕರ ಬಳಿ ಇದ್ದ ಬಂಗಾರದ ಗುರಾಣಿಗಳನ್ನು ಯೆರೂಸಲೇಮಿಗೆ ತೆಗೆದುಕೊಂಡು ಹೋದನು.

[8] ಇದಲ್ಲದೆ ಅರಸನಾದ ದಾವೀದನು ಹದದೆಜೆರನ ಪಟ್ಟಣಗಳಾದ ಬೆಟಹದಿಂದಲೂ ಬೇರೋತೈಯಿಂದಲೂ ಬಹಳ ತಾಮ್ರವನ್ನು ತೆಗೆದುಕೊಂಡು ಹೋದನು.

[9] ದಾವೀದನು ಹದದೆಜೆರನ ಸೈನ್ಯವನ್ನು ಸೋಲಿಸಿದನೆಂಬ ವರ್ತಮಾನವು ಹಮಾತಿನ ಅರಸನಾದ ತೋವಿಗೆ ಮುಟ್ಟಿತು.

[10] ತೋವಿಗೂ ಹದದೆಜೆರನಿಗೂ ವಿರೋಧವಿತ್ತು. ದಾವೀದನು ಹದದೆಜೆರನ ಮೇಲೆ ದಾಳಿಮಾಡಿ, ಅವನನ್ನು ಸೋಲಿಸಿದ್ದರಿಂದ ತೋವು ದಾವೀದನನ್ನು ವಂದಿಸುವುದಕ್ಕೂ ಹರಸುವುದಕ್ಕೂ ತನ್ನ ಮಗನಾದ ಯೋರಾಮನನ್ನು ಕಳುಹಿಸಿದನು. ಇವನು ಬರುವಾಗ ದಾವೀದನಿಗೋಸ್ಕರ ತಾಮ್ರ, ಬೆಳ್ಳಿ, ಬಂಗಾರದ ಪಾತ್ರೆಗಳನ್ನು ತಂದನು.

[11] ಅರಸನಾದ ದಾವೀದನು ಇವುಗಳನ್ನು ತನ್ನಿಂದ ಅಪಜಯಹೊಂದಿದ ಅರಾಮ್ಯರೂ, ಮೋವಾಬ್ಯರೂ, ಅಮ್ಮೋನಿಯರೂ, ಫಿಲಿಷ್ಟಿಯರೂ, ಅಮಾಲೇಕ್ಯರೂ ಎಂಬ ಈ ಸುತ್ತಣ ಜನಾಂಗಗಳಿಂದಲೂ,

[12] ಚೋಬದ ಅರಸನಾದ ರೆಹೋಬನ ಮಗ ಹದದೆಜೆರನಿಂದಲೂ ಪಡೆದುಕೊಂಡ ಬೆಳ್ಳಿ, ಬಂಗಾರವನ್ನೂ ಯೆಹೋವನಿಗೋಸ್ಕರ ಪ್ರತಿಷ್ಠಿಸಿದನು.

[13] ಇದಲ್ಲದೆ ದಾವೀದನು ಹೋಗಿ ಉಪ್ಪಿನ ತಗ್ಗಿನಲ್ಲಿ ಅರಾಮ್ಯರ ಹದಿನೆಂಟು ಸಾವಿರ ಮಂದಿ ಸೈನಿಕರನ್ನು ಸೋಲಿಸಿದಂದಿನಿಂದ ಬಹು ಪ್ರಖ್ಯಾತಿ ಹೊಂದಿದನು.

[14] ದಾವೀದನು ಎದೋಮಿನಲ್ಲೆಲ್ಲಾ ಕಾವಲುದಂಡನ್ನಿರಿಸಿದನು. ಎದೋಮ್ಯರೆಲ್ಲರೂ ದಾವೀದನ ದಾಸರಾದರು. ಯೆಹೋವನ ಅನುಗ್ರಹದಿಂದ ದಾವೀದನಿಗೆ ಎಲ್ಲಿ ಹೋದರೂ ಜಯವುಂಟಾಯಿತು.

[15] ದಾವೀದನು ಇಸ್ರಾಯೇಲ್ಯರ ಅರಸನಾಗಿ, ಎಲ್ಲಾ ಪ್ರಜೆಗಳನ್ನು ನೀತಿನ್ಯಾಯಗಳಿಂದ ನಡೆಸುತ್ತಾ ಬಂದನು.

[16] ಚೆರೂಯಳ ಮಗನಾದ ಯೋವಾಬನೂ ಅವನ ಸೇನಾಧಿಪತಿಯೂ ಅಹೀಲೂದನ ಮಗನಾದ ಯೆಹೋಷಾಫಾಟನು ರಾಜವಂಶಸ್ಥದ ಇತಿಹಾಸಕಾರನಾಗಿದ್ದನು.

[17] ಅಹೀಟೂಬನ ಮಗನಾದ ಚಾದೋಕನೂ ಅಹೀಮೆಲೆಕನ ಮಗನಾದ ಎಬ್ಯಾತಾರನೂ ಅವನ ಯಾಜಕರು, ಸೆರಾಯನು ಲೇಖಕನು,

[18] ಯೆಹೋಯಾದಾವನ ಮಗನಾದ ಬೆನಾಯನು ಕೆರೇತ್ಯ ಮತ್ತು ಪೆಲೇತ್ಯ ಎಂಬ ಕಾವಲು ದಂಡುಗಳ ಮುಖ್ಯಸ್ಥನು. ದಾವೀದನ ಮಕ್ಕಳು ರಾಜನ ಮುಖ್ಯಸಲಹೆಗಾರರಾಗಿದ್ದರು.

2 ಸಮುವೇಲನು — Chapters