[1] ಅನಂತರ ಇಸ್ರಾಯೇಲರ ಎಲ್ಲಾ ಕುಲಗಳವರು ಹೆಬ್ರೋನಿನಲ್ಲಿದ್ದ ದಾವೀದನ ಬಳಿಗೆ ಬಂದು ಅವನಿಗೆ, “ನಾವು ನಿನ್ನ ರಕ್ತಸಂಬಂಧಿಗಳಾಗಿದ್ದೇವೆ,
[2] ಹಿಂದಿನ ದಿನಗಳಲ್ಲಿ ಅಂದರೆ, ಸೌಲನ ಆಡಳಿತದಲ್ಲಿ, ಇಸ್ರಾಯೇಲರ ದಳಾಧಿಪತಿಯಾಗಿ ಹೋಗುತ್ತಾ ಬರುತ್ತಾ ಇದ್ದವನು ನೀನೇ. ನಿನ್ನನ್ನು ಕುರಿತು ಯೆಹೋವನು, ‘ನೀನು ನನ್ನ ಪ್ರಜೆಗಳಾದ ಇಸ್ರಾಯೇಲರ ನಾಯಕನೂ ಪಾಲಕನೂ ಆಗಿರುವಿಯೆಂದು ಹೇಳಿದ್ದಾನೆ’” ಅಂದರು.
[3] ಹೆಬ್ರೋನಿನಲ್ಲಿದ್ದ ಅರಸನಾದ ದಾವೀದನು ತನ್ನ ಬಳಿಗೆ ಬಂದಿದ್ದ ಇಸ್ರಾಯೇಲರ ಹಿರಿಯರೆಲ್ಲರೊಡನೆ ಅಲ್ಲಿಯೇ ಯೆಹೋವನ ಸನ್ನಿಧಿಯಲ್ಲಿ ಒಡಂಬಡಿಕೆ ಮಾಡಿಕೊಂಡನು. ಅವರು ದಾವೀದನನ್ನು ಅಭಿಷೇಕಿಸಿ, ಇಸ್ರಾಯೇಲರ ಅರಸನನ್ನಾಗಿ ಮಾಡಿದರು.
[4] ದಾವೀದನು ಮೂವತ್ತು ವರ್ಷದವನಾದಾಗ ಅರಸನಾಗಿ, ನಲ್ವತ್ತು ವರ್ಷ ಆಳಿದನು.
[5] ಅವನು ಹೆಬ್ರೋನಿನಲ್ಲಿದ್ದು ಯೆಹೂದ ಕುಲವೊಂದನ್ನೇ ಆಳಿದ್ದು ಏಳು ವರ್ಷ ಆರು ತಿಂಗಳು. ಯೆರೂಸಲೇಮಿನಲ್ಲಿದ್ದು ಯೆಹೂದ್ಯರನ್ನು ಮತ್ತು ಎಲ್ಲಾ ಇಸ್ರಾಯೇಲರನ್ನು ಆಳಿದ್ದು ಮೂವತ್ತು ಮೂರು ವರ್ಷಗಳು.
[6] ದಾವೀದನು ತನ್ನ ಜನರನ್ನು ಕರೆದುಕೊಂಡು ಯೆರೂಸಲೇಮಿನಲ್ಲಿದ್ದ ದೇಶದ ಮೂಲನಿವಾಸಿಗಳಾದ ಯೆಬೂಸಿಯರಿಗೆ ವಿರೋಧವಾಗಿ ಹೊರಟನು. ಅವರು ಇವನು ಒಳಗೆ ಬರುವುದಿಲ್ಲವೆಂದು ತಿಳಿದು ದಾವೀದನಿಗೆ, “ನೀನು ಒಳಗೆ ಬರಲಾರೆ, ಕುರುಡರು ಕುಂಟರು ಇವರೇ ನಿನ್ನನ್ನು ಅಟ್ಟಿಬಿಡುವರು” ಎಂದು ಹೇಳಿದರು.
[7] ಅದರೂ ದಾವೀದನು ದಾವೀದನಗರ ಎನ್ನಿಸಿಕೊಳ್ಳುವ ಚೀಯೋನಿನ ಕೋಟೆಯನ್ನು ಸ್ವಾಧೀನಪಡಿಸಿಕೊಂಡನು.
[8] ಆ ದಿನ ದಾವೀದನು, “ಯೆಬೂಸಿಯರನ್ನು ಜಯಿಸಬೇಕೆಂದಿರುವವನು, ಜಲದ್ವಾರದ ಮೂಲಕ ಹತ್ತಿ ಹೋಗಿ, ನನ್ನನ್ನು ದ್ವೇಷಿಸುವ ಕುರುಡರನ್ನು ಮತ್ತು ಕುಂಟರನ್ನು ಕಂದಕದಲ್ಲಿ ನಾಶಪಡಿಸಬೇಕು” ಎಂದು ಹೇಳಿದನು. ಆದುದರಿಂದ “ಕುರುಡರೂ ಕುಂಟರೂ ಅರಮನೆಯ ಒಳಗೆ ಬರಲಾಗದು” ಎಂಬ ಗಾದೆಯುಂಟು.
[9] ದಾವೀದನು ಆ ಕೋಟೆಗೆ ದಾವೀದ ನಗರವೆಂದು ಹೆಸರಿಟ್ಟು ಅಲ್ಲೇ ವಾಸಿಸುತ್ತಾ, ಅದರ ಸುತ್ತಲೂ ಮಿಲ್ಲೋವಿನಿಂದ ಪ್ರಾರಂಭಿಸಿ, ಒಳಗಣ ಪೌಳಿಗೋಡೆಯನ್ನು ಕಟ್ಟಿಸಿದನು.
[10] ಸೇನಾಧೀಶ್ವರನಾದ ಯೆಹೋವ ದೇವರು ಅವನ ಸಂಗಡ ಇದ್ದುದರಿಂದ ಅವನು ಆಧಿಕ ಪ್ರಬಲಗೊಳ್ಳುತ್ತಾ ಬಂದನು.
[11] ತೂರಿನ ಅರಸನಾದ ಹೀರಾಮನು ದಾವೀದನಿಗೆ ದೂತರನ್ನೂ, ದೇವದಾರುಮರಗಳನ್ನೂ, ಬಡಗಿಯವರನ್ನೂ ಶಿಲ್ಪಿಗಳನ್ನೂ ಕಳುಹಿಸಲು ಅವರು ದಾವೀದನಿಗೋಸ್ಕರ ಅರಮನೆಯನ್ನು ಕಟ್ಟಿದರು.
[12] ಇದರಿಂದ ದಾವೀದನು, “ಯೆಹೋವನು ನನ್ನನ್ನು ಇಸ್ರಾಯೇಲರ ರಾಜನನ್ನಾಗಿ ಸ್ಥಿರಪಡಿಸಿ, ತನ್ನ ಪ್ರಜೆಗಳಾದ ಇಸ್ರಾಯೇಲರ ನಿಮಿತ್ತವಾಗಿ ನನ್ನ ರಾಜ್ಯವನ್ನು ವೃದ್ಧಿಪಡಿಸಿದ್ದಾನೆ” ಎಂದು ತಿಳಿದುಕೊಂಡನು.
[13] ದಾವೀದನು ಹೆಬ್ರೋನಿನಿಂದ ಯೆರೂಸಲೇಮಿಗೆ ಬಂದ ಮೇಲೆ ಅಲ್ಲಿಯೂ ಅನೇಕ ಸ್ತ್ರೀಯರನ್ನು ಪತ್ನಿಯರನ್ನಾಗಿಯೂ ಮತ್ತು ಉಪಪತ್ನಿಯರನ್ನಾಗಿಯೂ ಮಾಡಿಕೊಂಡಿದ್ದರಿಂದ ಅವನಿಗೆ ಇನ್ನೂ ಕೆಲವು ಮಂದಿ ಗಂಡು ಹೆಣ್ಣು ಮಕ್ಕಳು ಹುಟ್ಟಿದರು.
[14] ಅಲ್ಲಿ ಅವನಿಗೆ ಹುಟ್ಟಿದ ಮಕ್ಕಳ ಹೆಸರುಗಳು: ಶಮ್ಮೂವ, ಶೋಬಾಬ್, ನಾತಾನ್, ಸೊಲೊಮೋನ್,
[15] ಇಬ್ಹಾರ್, ಎಲೀಷೂವ, ನೆಫೆಗ್, ಯಾಫೀಯ,
[16] ಎಲೀಷಾಮ, ಎಲ್ಯಾದ ಮತ್ತು ಎಲೀಫೆಲೆಟ್.
[17] ಇಸ್ರಾಯೇಲರು ದಾವೀದನನ್ನು ಅಭಿಷೇಕಿಸಿ, ತಮ್ಮ ಅರಸನನ್ನಾಗಿ ಮಾಡಿಕೊಂಡರೆಂಬ ವರ್ತಮಾನವು ಫಿಲಿಷ್ಟಿಯರಿಗೆ ತಲುಪಿದಾಗ ಅವರು ಅವನನ್ನು ಸೆರೆಹಿಡಿಯುವುದಕ್ಕೆ ಹೊರಟರು. ದಾವೀದನು ಇದನ್ನು ಕೇಳಿ ದುರ್ಗಕ್ಕೆ ಹೋದನು.
[18] ಫಿಲಿಷ್ಟಿಯರು ದೇಶದೊಳಗೆ ನುಗ್ಗಿ ರೆಫಾಯೀಮ್ ತಗ್ಗಿಗೆ ಬಂದು ಅಲ್ಲಿ ಪಾಳೆಯಮಾಡಿಕೊಂಡಿದ್ದರು.
[19] ಅದನ್ನು ತಿಳಿದು ದಾವೀದನು ಯೆಹೋವನನ್ನು, “ನಾನು ಫಿಲಿಷ್ಟಿಯರಿಗೆ ವಿರೋಧವಾಗಿ ಹೋಗಬಹುದೋ? ಅವರನ್ನು ನನ್ನ ಕೈಗೆ ಒಪ್ಪಿಸಿಕೊಡುವಿಯೋ?” ಎಂದು ಕೇಳಿದನು. ಅದಕ್ಕೆ ಯೆಹೋವನು, “ಹೋಗು ನಾನು ಹೇಗೂ ಅವರನ್ನು ನಿನ್ನ ಕೈಗೆ ಒಪ್ಪಿಸಿಕೊಡುವೆನು” ಎಂದು ಉತ್ತರಕೊಟ್ಟನು.
[20] ಆಗ ಅವನು ಹೋಗಿ ಅವರನ್ನು ಸೋಲಿಸಿ, “ಯೆಹೋವನು ಕಟ್ಟೆ ಒಡೆದ ಪ್ರವಾಹದಂತೆ ತನ್ನ ಶತ್ರುಗಳ ಮೇಲೆ ಬಿದ್ದು, ಅವರನ್ನು ನನ್ನ ಕಣ್ಣ ಮುಂದೆಯೇ ನಾಶಮಾಡಿದ್ದಾನೆ” ಎಂದು ಹೇಳಿ ಆ ಯುದ್ಧ ಸ್ಥಳಕ್ಕೆ “ಬಾಳ್ ಪೆರಾಚೀಮ್” ಎಂದು ಹೆಸರಿಟ್ಟನು.
[21] ಫಿಲಿಷ್ಟಿಯರು ಅಲ್ಲಿ ಬಿಟ್ಟು ಹೋಗಿದ್ದ ವಿಗ್ರಹಗಳನ್ನು ದಾವೀದನೂ ಅವನ ಜನರೂ ತೆಗೆದುಕೊಂಡು ಬಂದರು.
[22] ಫಿಲಿಷ್ಟಿಯರು ಇನ್ನೊಮ್ಮೆ ಹೊರಟು ಬಂದು ರೆಫಾಯೀಮ್ ತಗ್ಗಿನಲ್ಲಿ ಇಳಿದುಕೊಂಡರು.
[23] ದಾವೀದನು ಯೆಹೋವನ ಸನ್ನಿಧಿಯಲ್ಲಿ ವಿಚಾರಿಸಿದಾಗ ಆತನು ಅವನಿಗೆ, “ನೀನು ನೇರವಾಗಿ ಹೋಗಿ ಅವರನ್ನು ಮುತ್ತಿಗೆ ಹಾಕಬೇಡ. ಅವರಿಗೆ ತಿಳಿಯದಂತೆ ಸುತ್ತಿಕೊಂಡು ಹೋಗಿ ಹಿಂಬಾಲಿಸಿ, ಬಾಕಾ ಮರಗಳಿರುವ ಕಡೆಯಿಂದ ಅವರ ಮೇಲೆ ಬೀಳು.
[24] ಆ ಬಾಕಾ ಮರಗಳ ತುದಿಯಲ್ಲಿ ಹೆಜ್ಜೆಗಳ ಸಪ್ಪಳ ಕೇಳಿಸುವಾಗ ಯೆಹೋವನು ಫಿಲಿಷ್ಟಿಯರ ಸೈನ್ಯವನ್ನು ಸೋಲಿಸುವುದಕ್ಕೋಸ್ಕರ ನಿನ್ನ ಮುಂದಾಗಿ ಹೊರಟನೆಂದು ತಿಳಿದು ಅವರ ಮೇಲೆ ದಾಳಿಮಾಡು” ಎಂದನು.
[25] ದಾವೀದನು ಯೆಹೋವನ ಆಜ್ಞಾನುಸಾರವಾಗಿ ಮಾಡಿ, ಫಿಲಿಷ್ಟಿಯರನ್ನು ಗೆಬದಿಂದ ಗೆಜೆರಿನವರೆಗೂ ಸಂಹರಿಸಿದನು.