[1] ದಾವೀದನ ಮಗನಾದ ಅಬ್ಷಾಲೋಮನಿಗೆ ತಾಮಾರಳೆಂಬ ಬಹು ಸುಂದರಿಯಾದ ಒಬ್ಬಳು ತಂಗಿಯಿದ್ದಳು. ದಾವೀದನ ಮಗ ಅಮ್ನೋನನು ಆಕೆಯನ್ನು ಮೋಹಿಸಿದನು.
[2] ಅವನು ಆಕೆಯ ಮೇಲಿನ ಮೋಹದಿಂದ ಪೀಡಿತನಾಗಿ ಅಸ್ವಸ್ಥನಾದನು. ತಾಮಾರಳು ಕನ್ಯೆಯಾಗಿದ್ದರಿಂದ ಆಕೆಗೆ ಏನು ಮಾಡಲು ಸಾಧ್ಯವಿಲ್ಲವೆಂದು ಅಮ್ನೋನನು ತಿಳಿದನು.
[3] ಅವನಿಗೆ ಯೋನಾದಾಬನೆಂಬ ಒಬ್ಬ ಗೆಳೆಯನಿದ್ದನು. ಇವನು ದಾವೀದನ ಅಣ್ಣನಾದ ಶಿಮ್ಮನ ಮಗನು.
[4] ಬಹು ಯುಕ್ತಿವಂತನಾದ ಇವನು ಒಂದು ದಿನ ಅಮ್ನೋನನನ್ನು, “ರಾಜಪುತ್ರನೇ ನೀನು ದಿನೇ ದಿನೇ ಕ್ಷೀಣನಾಗುತ್ತಾ ಬರುವುದೇಕೆ? ನನಗೆ ತಿಳಿಸುವುದಿಲ್ಲವೋ” ಎಂದು ಕೇಳಲು ಅವನು, “ನನ್ನ ತಮ್ಮನಾದ ಅಬ್ಷಾಲೋಮನ ತಂಗಿ ತಾಮಾರಳ ಮೇಲೆ ನನಗೆ ಮೋಹ ಉಂಟಾಗಿದೆ” ಎಂದು ಉತ್ತರ ಕೊಟ್ಟನು.
[5] ಆಗ ಯೋನಾದಾಬನು ಅವನಿಗೆ, “ನೀನು ಅಸ್ವಸ್ಥನಾದವನಂತೆ ಹಾಸಿಗೆಯ ಮೇಲೆ ಮಲಗಿಕೋ. ನಿನ್ನ ತಂದೆಯು ನಿನ್ನನ್ನು ನೋಡುವುದಕ್ಕೆ ಬಂದಾಗ ಅವನಿಗೆ, ‘ದಯವಿಟ್ಟು ನನ್ನ ತಂಗಿಯಾದ ತಾಮಾರಳನ್ನು ನನಗಾಗಿ ಆಹಾರ ಸಿದ್ಧಮಾಡುವುದಕ್ಕೆ ಕಳುಹಿಸು. ಆಕೆ ನನ್ನೆದುರಿನಲ್ಲಿಯೆ ಸಿದ್ಧಮಾಡಿ, ತನ್ನ ಕೈಯಿಂದಲೇ ಊಟಮಾಡಿಸಲಿ’ ಎಂದು ಹೇಳು” ಎಂದನು.
[6] ಅಮ್ನೋನನು ಅಸ್ವಸ್ಥನಾದವನಂತೆ ಮಲಗಿಕೊಂಡನು. ಅರಸನು ಅವನನ್ನು ನೋಡುವುದಕ್ಕೆ ಬಂದಾಗ ಅವನು ಅರಸನಿಗೆ, “ದಯವಿಟ್ಟು ನನ್ನ ತಂಗಿಯಾದ ತಾಮಾರಳನ್ನು ನನ್ನ ಬಳಿಗೆ ಕಳುಹಿಸು. ಆಕೆ ನನಗೋಸ್ಕರ ನನ್ನ ಕಣ್ಣ ಮುಂದೆಯೇ ಆಹಾರವನ್ನು ಸಿದ್ಧಮಾಡಿಕೊಡುವುದಾದರೆ ಊಟಮಾಡುವೆನು” ಎಂದು ಹೇಳಿದನು.
[7] ಆಗ ದಾವೀದನು ಅರಮನೆಗೆ ಆಳುಗಳನ್ನು ಕಳುಹಿಸಿ ಆಕೆಗೆ, “ನೀನು ನಿನ್ನ ಅಣ್ಣನಾದ ಅಮ್ನೋನನ ಮನೆಗೆ ಹೋಗಿ ಅವನಿಗೋಸ್ಕರ ಆಹಾರವನ್ನು ಸಿದ್ಧಮಾಡು” ಎಂದು ಹೇಳಿದನು.
[8] ಕೂಡಲೆ ಆಕೆಯು ತನ್ನ ಅಣ್ಣನಾದ ಅಮ್ನೋನನ ಮನೆಗೆ ಹೋದಳು. ಅವನು ಮಲಗಿದ್ದನು. ಆಕೆಯು ಹೋಗಿ ಹಿಟ್ಟು ತೆಗೆದುಕೊಂಡು ನಾದಿ, ಅವನ ಕಣ್ಣ ಮುಂದೆಯೇ ರೊಟ್ಟಿಗಳನ್ನು ಮಾಡಿದಳು.
[9] ಅನಂತರ ಆಕೆಯು ಅವುಗಳನ್ನು ಪಾತ್ರೆಯಿಂದ ತೆಗೆದು, ಅವನ ಮುಂದೆ ಇಟ್ಟಳು. ಅವನು ಊಟಮಾಡದೆ ಎಲ್ಲಾ ಜನರನ್ನು ತನ್ನ ಬಳಿಯಿಂದ ಹೊರಡಿಸಬೇಕೆಂದು ಅಪ್ಪಣೆ ಮಾಡಿದನು.
[10] ಎಲ್ಲರೂ ಹೋದ ಮೇಲೆ ಅವನು ತಾಮಾರಳಿಗೆ, “ಆಹಾರವನ್ನು ಈ ಕೋಣೆಗೆ ತೆಗೆದುಕೊಂಡು ಬಾ; ನೀನಾಗಿ ತಂದುಕೊಟ್ಟರೆ ಊಟಮಾಡುತ್ತೇನೆ” ಎಂದು ಹೇಳಿದನು. ಆಗ ತಾಮಾರಳು ತಾನು ಮಾಡಿದ ಆಹಾರವನ್ನು ಅಣ್ಣನಾದ ಅಮ್ನೋನನಿದ್ದ ಕೋಣೆಗೆ ತೆಗೆದುಕೊಂಡು ಹೋಗಿ ಅವನ ಮುಂದಿಟ್ಟಳು.
[11] ಕೂಡಲೆ ಅವನು ಆಕೆಯನ್ನು ಹಿಡಿದು “ನನ್ನ ತಂಗಿಯೇ ಬಂದು ನನ್ನ ಸಂಗಡ ಮಲಗಿಕೋ” ಎಂದನು.
[12] ಆಕೆಯು; “ಅಣ್ಣನೇ, ಬೇಡ, ನನ್ನನ್ನು ಅಪಮಾನಪಡಿಸಬೇಡ, ಇಸ್ರಾಯೇಲರಲ್ಲಿ ಇಂಥ ನೀಚಕಾರ್ಯವು ನಡೆಯಬಾರದು. ಇಂಥ ಅವಮಾನಕರವಾದ ಕೆಲಸವನ್ನು ಮಾಡಬೇಡ.
[13] ಈ ಅಪಮಾನವನ್ನು ನಾನು ಮರೆಮಾಡುವುದಾದರೂ ಹೇಗೆ? ನಿನಗಂತೂ ಇಸ್ರಾಯೇಲರಲ್ಲಿ ನೀಚನೆಂಬ ಹೆಸರು ತಪ್ಪದು. ಆದುದರಿಂದ ದಯವಿಟ್ಟು ಅರಸನ ಸಂಗಡ ಮಾತನಾಡು. ಅವನು ನನ್ನನ್ನು ನಿನಗೆ ಕೊಡದಿರಲಾರನು” ಎಂದಳು.
[14] ಆದರೆ ಅವನು ಆಕೆಗಿಂತಲೂ ಬಲಶಾಲಿಯಾಗಿದ್ದರಿಂದ ಆಕೆಯ ಮಾತನ್ನು ಕೇಳದೆ ಬಲಾತ್ಕಾರದಿಂದ ಆಕೆಯನ್ನು ಕೆಡಿಸಿದನು.
[15] ಇದಾದ ಮೇಲೆ ಅವನಿಗೆ ಆಕೆಯ ಮೇಲೆ ದ್ವೇಷಹುಟ್ಟಿತು. ಅವಳ ಬಗ್ಗೆ ಇದ್ದ ಪ್ರೀತಿಗಿಂತ ಆಕೆಯ ಮೇಲಿನ ದ್ವೇಷವೇ ಹೆಚ್ಚಾಯಿತು.
[16] ಅಮ್ನೋನನು ಆಕೆಗೆ, “ಎದ್ದು ಹೋಗು” ಎಂದು ಹೇಳಿದಾಗ ಆಕೆಯು, “ಹಾಗೆ ಮಾಡಬೇಡ, ನನ್ನನ್ನು ಹೊರಡಿಸಿಬಿಡುವುದು ನೀನು ಮಾಡಿದ ಮೊದಲನೆಯ ಅನ್ಯಾಯಕ್ಕಿಂತ ಹೆಚ್ಚಿನ ಅನ್ಯಾಯವಾಗಿದೆ” ಅಂದಳು.
[17] ಆದರೆ ಅವನು ಆಕೆಯ ಮಾತನ್ನು ಕೇಳದೆ, ಯಾವಾಗಲೂ ತನ್ನೊಂದಿಗೆ ಇರುತ್ತಿದ್ದ ಆಳನ್ನು ಕರೆದು ಅವನಿಗೆ, “ಇವಳನ್ನು ಹೊರಗೆ ತಳ್ಳಿ ಕದವನ್ನು ಮುಚ್ಚು” ಎಂದು ಆಜ್ಞಾಪಿಸಿದನು.
[18] ಆಕೆಯು ನಾನಾ ವರ್ಣವುಳ್ಳ ಒಂದು ನಿಲುವಂಗಿಯನ್ನು ಧರಿಸಿಕೊಂಡಿದ್ದಳು. ಕನ್ಯೆಯರಾದ ರಾಜಪುತ್ರಿಯರು ಇದೇ ತರಹದ ವಸ್ತ್ರಗಳನ್ನು ಹಾಕಿಕೊಳ್ಳುತ್ತಿದ್ದರು. ಆತನ ಸೇವಕರು ಆಕೆಯನ್ನು ಹೊರಗೆ ಕಳುಹಿಸಿ ಕದವನ್ನು ಮುಚ್ಚಿದನು.
[19] ತಾಮಾರಳು ತಲೆಯ ಮೇಲೆ ಬೂದಿ ಹಾಕಿಕೊಂಡು ನಿಲುವಂಗಿಯನ್ನು ಹರಿದುಕೊಂಡು ಕೈಗಳನ್ನು ತಲೆಯ ಮೇಲಿಟ್ಟು ಗೋಳಾಡುತ್ತಾ ಹೋದಳು.
[20] ಆಕೆಯ ಸಹೋದರನಾದ ಅಬ್ಷಾಲೋಮನು ಆಕೆಯನ್ನು ಕಂಡು, “ನಿನ್ನ ಅಣ್ಣನಾದ ಅಮ್ನೋನನು ನಿನ್ನನ್ನು ಸಂಗಮಿಸಿದನೋ? ತಂಗಿ, ಈಗ ಸುಮ್ಮನಿರು. ಅವನು ನಿನ್ನ ಅಣ್ಣನಲ್ಲವೋ? ಈ ಸಂಗತಿಯನ್ನು ಮನಸ್ಸಿಗೆ ಹಚ್ಚಿಕೊಳ್ಳಬೇಡ” ಎಂದು ಹೇಳಿದನು. ತಾಮಾರಳು ಒಂಟಿಯಾಗಿ ತನ್ನ ಅಣ್ಣನಾದ ಅಬ್ಷಾಲೋಮನ ಮನೆಯಲ್ಲೇ ವಾಸಮಾಡಿದಳು.
[21] ಅರಸನಾದ ದಾವೀದನು ಈ ಸಂಗತಿಯನ್ನು ಕೇಳಿ ಬಹಳವಾಗಿ ಕೋಪಗೊಂಡನು.
[22] ಅಬ್ಷಾಲೋಮನು ಅಮ್ನೋನನ ಸಂಗಡ ಒಳ್ಳೆಯ ಮಾತುಗಳನ್ನಾಗಲಿ ಕೆಟ್ಟ ಮಾತುಗಳನ್ನಾಗಲಿ ಆಡಲಿಲ್ಲ. ತನ್ನ ತಂಗಿಯಾದ ತಾಮಾರಳನ್ನು ಕೆಡಿಸಿದ್ದಕ್ಕಾಗಿ ಅವನು ಅಮ್ನೋನನನ್ನು ದ್ವೇಷಿಸಿದನು.
[23] ಎರಡು ವರ್ಷಗಳಾದ ನಂತರ ಅಬ್ಷಾಲೋಮನು ಒಂದು ದಿನ ಎಫ್ರಾಯೀಮಿನ ಬಳಿಯಲ್ಲಿರುವ ಬಾಳ್ ಹಾಚೋರಿನಲ್ಲಿ ಕುರಿಗಳ ಉಣ್ಣೆಯನ್ನು ಕತ್ತರಿಸುವಾಗ ಎಲ್ಲಾ ರಾಜಪುತ್ರರನ್ನು ಔತಣಕ್ಕೆ ಕರೆದನು.
[24] ಅವನು ಅರಸನ ಬಳಿಗೆ ಹೋಗಿ ಅವನನ್ನು, “ಸ್ವಾಮೀ, ನಿನ್ನ ಸೇವಕನು ಕುರಿಗಳ ಉಣ್ಣೆ ಕತ್ತರಿಸುವವರನ್ನು ಕರೆಸಿದ್ದಾನೆ. ಅರಸನು ತನ್ನ ಸೇವಕರೊಡನೆ ಅವನ ಬಳಿಗೆ ಬರಲಿ” ಎಂದು ಬೇಡಿಕೊಂಡನು.
[25] ಅರಸನು ಅವನಿಗೆ, “ಮಗನೇ ಬೇಡ ನಾವೆಲ್ಲರೂ ಬಂದರೆ ನಿನಗೆ ಭಾರವಾದೀತು” ಅನ್ನಲು ಅಬ್ಷಾಲೋಮನು ಅವನನ್ನು ಬಹಳವಾಗಿ ಒತ್ತಾಯಪಡಿಸಿದನು. ಆದರೂ ಅರಸನು ಹೋಗಲಿಲ್ಲ. ಅವನನ್ನು ಆಶೀರ್ವದಿಸಿದನು ಅಷ್ಟೇ.
[26] ಆಗ ಅಬ್ಷಾಲೋಮನು, “ನೀನು ಬಾರದಿದ್ದರೆ ನನ್ನ ಅಣ್ಣನಾದ ಅಮ್ನೋನನನ್ನು ಕಳುಹಿಸು” ಅಂದನು. ಅದಕ್ಕೆ ಅರಸನು, “ಅವನೇಕೆ ನಿನ್ನ ಸಂಗಡ ಬರಬೇಕು?” ಎಂದು ಕೇಳಿದನು.
[27] ಆದರೆ ಅಬ್ಷಾಲೋಮನು ಬಹಳವಾಗಿ ಒತ್ತಾಯಪಡಿಸಿದ್ದರಿಂದ ಅರಸನು ಅಮ್ನೋನನನ್ನೂ ತನ್ನ ಬೇರೆ ಎಲ್ಲಾ ಮಕ್ಕಳನ್ನು ಕಳುಹಿಸಿದನು.
[28] ಇದಕ್ಕೆ ಮೊದಲೇ ಅಬ್ಷಾಲೋಮನು ತನ್ನ ಆಳುಗಳಿಗೆ, “ಕೇಳಿರಿ, ಅಮ್ನೋನನು ದ್ರಾಕ್ಷಾರಸ ಕುಡಿದು ಮತ್ತನಾಗಿರುವಾಗ ನಾನು ಹೊಡೆಯಬೇಕೆಂದು ಹೇಳಿದ ಕೂಡಲೆ ಅವನನ್ನು ಹೊಡೆದು ಕೊಂದುಹಾಕಿರಿ. ಹೆದರಬೇಡಿರಿ, ನಿಮಗೆ ಆಜ್ಞಾಪಿಸಿದವನು ನಾನಲ್ಲವೇ? ಧೈರ್ಯದಿಂದಿರಿ ಮತ್ತು ಶೂರರಾಗಿರಿ” ಎಂದು ಹೇಳಿದನು.
[29] ಅಬ್ಷಾಲೋಮನ ಆಳುಗಳು ಅವನ ಆಜ್ಞೆಯಂತೆ ಅಮ್ನೋನನನ್ನು ಕೊಂದರು. ರಾಜಪುತ್ರರೆಲ್ಲರೂ ತಮ್ಮ ತಮ್ಮ ಹೇಸರಗತ್ತೆಗಳನ್ನು ಹತ್ತಿ ಓಡಿಹೋದರು.
[30] ಅವರು ಇನ್ನೂ ಮಾರ್ಗದಲ್ಲಿರುವಾಗಲೇ ದಾವೀದನಿಗೆ, “ಅಬ್ಷಾಲೋಮನು ರಾಜಪುತ್ರರೆಲ್ಲರನ್ನು ಕೊಂದು ಹಾಕಿದನು ಒಬ್ಬನನ್ನೂ ಉಳಿಸಲಿಲ್ಲ” ಎಂಬ ಸುದ್ದಿ ಮುಟ್ಟಿತು.
[31] ಆಗ ಅರಸನು ಎದ್ದು ತನ್ನ ಬಟ್ಟೆಗಳನ್ನು ಹರಿದುಕೊಂಡು ನೆಲದ ಮೇಲೆ ಬಿದ್ದನು. ಅವನ ಸೇವಕರೆಲ್ಲರೂ ತಮ್ಮ ತಮ್ಮ ಬಟ್ಟೆಗಳನ್ನು ಹರಿದುಕೊಂಡು ಅವನ ಹತ್ತಿರ ನಿಂತರು.
[32] ಆಗ ದಾವೀದನ ಅಣ್ಣನಾದ ಶಿಮ್ಮನ ಮಗ ಯೋನಾದಾಬನು ದಾವೀದನಿಗೆ, “ರಾಜಪುತ್ರರೆಲ್ಲರನ್ನೂ ಕೊಂದು ಹಾಕಿದ್ದಾರೆಂದು ನನ್ನ ಒಡೆಯನು ನೆನಸದಿರಲಿ. ಅಮ್ನೋನನೊಬ್ಬನೇ ಸತ್ತಿರಬೇಕು. ಅವನು ಅಬ್ಷಾಲೋಮನ ತಂಗಿಯಾದ ತಾಮಾರಳನ್ನು ಕೆಡಿಸಿದ್ದಾಗಿನಿಂದ ಹೀಗಾಗುವುದೆಂದು ಅಬ್ಷಾಲೋಮನ ಮುಖದಿಂದಲೇ ತೋರುತ್ತಿತ್ತು.
[33] ಆದುದರಿಂದ ರಾಜಪುತ್ರರೆಲ್ಲರೂ ಸತ್ತರೆಂಬ ಸುದ್ದಿಗೆ ಅರಸನು ಲಕ್ಷ್ಯಕೊಡದಿರಲಿ. ಅಮ್ನೋನನೊಬ್ಬನೇ ಸತ್ತಿದ್ದಾನಷ್ಟೆ” ಎಂದು ಹೇಳಿ ಸಂತೈಸಿದನು.
[34] ಅಬ್ಷಾಲೋಮನು ತಪ್ಪಿಸಿಕೊಂಡು ಓಡಿಹೋದನು. ಅಷ್ಟರಲ್ಲಿ ದಾರಿನೋಡುತ್ತಿದ್ದ ಕಾವಲುಗಾರನು, ಒಂದು ದೊಡ್ಡ ಗುಂಪು ಹೋರೋನಿನ ಮಾರ್ಗವಾಗಿ ಗುಡ್ಡ ಇಳಿದು ಬರುವುದನ್ನು ಕಂಡನು.
[35] ಯೋನಾದಾಬನು ಅರಸನಿಗೆ, “ಇಗೋ ರಾಜಕುಮಾರರು ಬರುತ್ತಿದ್ದಾರೆ. ನಿನ್ನ ಸೇವಕನ ಮಾತಿನಂತೆಯೆ ಆಯಿತಲ್ಲವೋ?” ಎಂದು ಹೇಳಿ ಮುಗಿಸುವಷ್ಟರಲ್ಲಿ,
[36] ರಾಜಕುಮಾರರು ಬಂದು ಗಟ್ಟಿಯಾಗಿ ಅತ್ತರು. ಅರಸನೂ ಅವನ ಸೇವಕರೂ ಬಹಳವಾಗಿ ಗೋಳಾಡಿದರು.
[37] ದಾವೀದನು ತನ್ನ ಮಗನಿಗೋಸ್ಕರ ಪ್ರತಿದಿನವೂ ದುಃಖಪಡುತ್ತಿದ್ದನು.
[38] ಅಬ್ಷಾಲೋಮನು ತಪ್ಪಿಸಿಕೊಂಡು ಗೆಷೂರಿಗೆ ಓಡಿಹೋಗಿ ಅಲ್ಲಿನ ಅರಸನೂ ಅಮ್ಮೀಹೂದನ ಮಗನೂ ಆದ ತಲ್ಮೈಯ ಬಳಿಯಲ್ಲಿ ಮೂರು ವರ್ಷ ಇದ್ದನು.
[39] ಅರಸನಾದ ದಾವೀದನು ಅಮ್ನೋನನ ಮರಣದ ವಿಷಯವಾಗಿ ಆದರಣೆಹೊಂದಿ ತನ್ನ ಮಗನಾದ ಅಬ್ಷಾಲೋಮನನ್ನು ನೋಡುವುದಕ್ಕಾಗಿ ಬಹಳ ಆಸೆಪಟ್ಟನು.