[1] ಆಕಸ್ಮಾತ್ತಾಗಿ ಬೆನ್ಯಾಮೀನ ಕುಲದವನೂ, ಬಿಕ್ರೀಯ ಮಗನೂ ಆದ ಶೆಬನೆಂಬ ಒಬ್ಬ ದುಷ್ಟಮನುಷ್ಯನು ಅಲ್ಲಿ ಹೇಗೋ ಬಂದಿದ್ದನು. ಅವನು ಕಹಳೆಯನ್ನು ಊದಿ, “ಇಸ್ರಾಯೇಲರೇ, ದಾವೀದನಲ್ಲಿ ನಮಗೆ ಪಾಲಿಲ್ಲ. ಇಷಯನ ಮಗನಲ್ಲಿ ನಮಗೆ ಸ್ವತ್ತು ಇಲ್ಲ. ಪ್ರತಿಯೊಬ್ಬನೂ ನಮ್ಮ ನಮ್ಮ ನಿವಾಸಗಳಿಗೆ ಹೋಗೋಣ” ಎಂದನು.
[2] ಆಗ ಇಸ್ರಾಯೇಲರೆಲ್ಲರೂ ದಾವೀದನನ್ನು ಬಿಟ್ಟು, ಬಿಕ್ರೀಯ ಮಗನಾದ ಶೆಬನನ್ನು ಹಿಂಬಾಲಿಸಿದರು. ಆದರೆ ಯೆಹೂದ್ಯರು ತಮ್ಮ ಅರಸನನ್ನು ಅಂಟಿಕೊಂಡು ಯೊರ್ದನ್ ತಗ್ಗಿನಿಂದ ಯೆರೂಸಲೇಮಿನ ವರೆಗೂ ಅವನ ಜೊತೆಯಲ್ಲಿ ಹೋದರು.
[3] ಅರಸನಾದ ದಾವೀದನು ಯೆರೂಸಲೇಮಿಗೆ ಬಂದ ಮೇಲೆ ತಾನು ಅರಮನೆ ಕಾಯುವುದಕ್ಕೋಸ್ಕರ ಇಟ್ಟಿದ್ದ ತನ್ನ ಹತ್ತು ಮಂದಿ ಉಪಪತ್ನಿಯರನ್ನು ಪ್ರತ್ಯೇಕವಾಗಿ ಒಂದು ಮನೆಯಲ್ಲಿಟ್ಟು, ಅವರಿಗೆ ಅನ್ನವಸ್ತ್ರ ಕೊಡುತ್ತಿದ್ದನು. ಆದರೆ ಅವರನ್ನು ತಿರುಗಿ ಸಂಗಮಿಸಲಿಲ್ಲ. ಅವರು ಜೀವದಿಂದಿರುವವರೆಗೂ ವಿಧೆವೆಯರಂತಿದ್ದು ಕಾವಲಲ್ಲಿ ಇರಬೇಕಾಯಿತು.
[4] ಅನಂತರ ಅರಸನು ಅಮಾಸನಿಗೆ, “ನೀನು ಮೂರು ದಿನಗಳೊಳಗೆ ಯೆಹೂದ್ಯರನ್ನು ಕೂಡಿಸಿಕೊಂಡು ಇಲ್ಲಿ ಸಿದ್ಧವಾಗಿರು” ಎಂದು ಆಜ್ಞಾಪಿಸಿದನು.
[5] ಅಮಾಸನು ಹೋಗಿ ಯೆಹೂದ್ಯರನ್ನು ಕೂಡಿಸಿದನು. ಆದರೆ ಅವನು ನೇಮಕವಾದ ಸಮಯಕ್ಕೆ ಬಾರದೆ ತಡಮಾಡಿದ್ದರಿಂದ
[6] ಅರಸನು ಅಬೀಷೈಗೆ, “ಅಬ್ಷಾಲೋಮನಿಗಿಂತ ಬಿಕ್ರೀಯ ಮಗನಾದ ಶೆಬನು ನಮಗೆ ಹೆಚ್ಚಿನ ಕೇಡು ಮಾಡುವಂತಿದೆ. ಆದುದರಿಂದ ನೀನು ನನ್ನ ಸ್ವಂತ ಆಳುಗಳನ್ನು ಕರೆದುಕೊಂಡು ಹೋಗಿ ಅವನನ್ನು ಬೆನ್ನಟ್ಟಿಜಡಿಸು. ಇಲ್ಲವಾದರೆ ಅವನು ನಮ್ಮ ಕಣ್ಣಿಗೆ ಮರೆಯಾಗಿ ಹೋಗಿ ಕೋಟೆಕೊತ್ತಲುಗಳುಳ್ಳ ಪಟ್ಟಣಗಳನ್ನು ಸೇರಿಕೊಂಡಾನು” ಎಂದನು.
[7] ಆಗ ಅವನು ಯೋವಾಬನ ಸೈನಿಕರನ್ನೂ, ಕೆರೇತ್ಯ ಮತ್ತು ಪೆಲೇತ್ಯ ಎಂಬ ಕಾವಲು ದಂಡುಗಳನ್ನೂ ಎಲ್ಲಾ ಶೂರರನ್ನೂ ಕರೆದುಕೊಂಡು ಬಿಕ್ರೀಯ ಮಗನಾದ ಶೆಬನನ್ನು ಬೆನ್ನಟ್ಟುವುದಕ್ಕೋಸ್ಕರ ಯೆರೂಸಲೇಮಿನಿಂದ ಹೊರಟರು.
[8] ಅವರು ಗಿಬ್ಯೋನಿನಲ್ಲಿದ್ದ ದೊಡ್ಡ ಕಲ್ಲನ್ನು ಸಮೀಪಿಸಿದಾಗ ಅಮಾಸನು ಅವನೆದುರು ಬಂದನು. ಯುದ್ಧವಸ್ತ್ರಗಳನ್ನು ಧರಿಸಿಕೊಂಡಿದ್ದ ಯೋವಾಬನೂ ಅವನನ್ನು ವಧಿಸುವುದಕ್ಕೆ ಹೋಗುತ್ತಿರುವಾಗ ಅವನ ಸೊಂಟಕ್ಕೆ ಕಟ್ಟಿದ ಕತ್ತಿಯೂ ಒರೆಯಿಂದ ಕೆಳಗೆ ಬಿದ್ದಿತು.
[9] ಅವನು ಅಮಾಸನನ್ನು, “ಸಹೋದರನೇ ಕ್ಷೇಮವೋ” ಎಂದು ಕೇಳಿ ಮುದ್ದಿಡುವುದಕ್ಕೋಸ್ಕರವೋ ಎಂಬಂತೆ ಬಲಗೈಯಿಂದ ಅವನ ಗಡ್ಡವನ್ನು ಹಿಡಿದು,
[10] ಕೈಯಲ್ಲಿದ್ದ ಕತ್ತಿಯನ್ನು ಗಮನಿಸದಿದ್ದ ಅಮಾಸನ ಹೊಟ್ಟೆಯೊಳಗೆ ತಿವಿದನು. ಅದರಿಂದ ಅವನ ಕರಳುಗಳೆಲ್ಲಾ ಹೊರಗೆ ಬಂದವು. ಎರಡನೆಯ ಸಾರಿ ತಿವಿಯಲಿಲ್ಲ. ಅಷ್ಟಕ್ಕೆ ಅವನು ಸತ್ತನು. ಯೋವಾಬನೂ ಅವನ ತಮ್ಮನಾದ ಅಬೀಷೈಯೂ ಮತ್ತು ಬಿಕ್ರೀಯ ಮಗನಾದ ಶೆಬನನ್ನು ಹಿಂದಟ್ಟುವುದಕ್ಕೋಸ್ಕರ ಮುಂದೆ ನಡೆದಾಗ,
[11] ಯೋವಾಬನ ಆಳುಗಳಲ್ಲೊಬ್ಬನು ಅಮಾಸನ ಹತ್ತಿರ ನಿಂತು, “ದಾವೀದ ಹಾಗೂ ಯೋವಾಬರ ಕಡೆಯವರು ಯೋವಾಬನನ್ನು ಹಿಂಬಾಲಿಸಲಿ” ಎಂದು ಕೂಗಿದನು
[12] ಮಾರ್ಗದ ಮಧ್ಯದಲ್ಲಿ ರಕ್ತದಲ್ಲಿ ಹೊರಳಾಡುತ್ತಿದ್ದ ಅಮಾಸನನ್ನು ನೋಡುತ್ತಾ ಎಲ್ಲಾ ಜನರು ನಿಂತರು. ಬಂದವರೆಲ್ಲರೂ ಅಲ್ಲೇ ನಿಲ್ಲುವುದನ್ನು ಕಂಡ ಆ ಆಳು ಅಮಾಸನ ಶವವನ್ನು ದಾರಿಯಿಂದ ಎಳೆದು, ಹೊಲದಲ್ಲಿ ಹಾಕಿ, ಅದನ್ನು ಬಟ್ಟೆಯಿಂದ ಮುಚ್ಚಿದನು.
[13] ಶವವನ್ನು ಆಚೆ ಹಾಕಿದ ನಂತರ ಜನರೆಲ್ಲರೂ ಬಿಕ್ರೀಯ ಮಗನಾದ ಶೆಬನನ್ನು ಹಿಂದಟ್ಟುವುದಕ್ಕೊಸ್ಕರ ಯೋವಾಬನನ್ನು ಹಿಂಬಾಲಿಸಿದರು.
[14] ಶೆಬನು ಇಸ್ರಾಯೇಲರ ಪ್ರಾಂತ್ಯಗಳಲ್ಲಿ ಸಂಚರಿಸುತ್ತಾ ಆಬೇಲ್, ಬೇತ್ಮಾಕಾಕ್ಕೂ ಬಂದನು. ಬೇರಿಯರೆಲ್ಲರೂ ಸೇರಿಕೊಂಡು ಅವನೊಡನೆ ಆ ಊರನ್ನು ಸೇರಿದರು.
[15] ಯೋವಾಬನ ಕಡೆಯವರು ಆಬೇಲ್ ಬೇತ್ಮಾಕಾಕ್ಕೆ ಊರಿಗೆ ಮುತ್ತಿಗೆ ಹಾಕಿ ಅದಕ್ಕೆ ಎದುರಾಗಿ ಊರು ಗೋಡೆಗೆ ಹತ್ತಿರ ಒಂದು ಮಣ್ಣಿನ ದಿಬ್ಬವನ್ನು ಮಾಡಿ, ಗೋಡೆಯನ್ನು ಕೆಡವಿಬಿಡುವುದಕ್ಕೆ ಪ್ರಯತ್ನಿಸಿದರು.
[16] ಆಗ ಆ ಊರಿನ ಬುದ್ಧಿವಂತೆಯಾದ ಒಬ್ಬಳು ಹೆಂಗಸು ಅವರಿಗೆ, “ಕೇಳಿರಿ, ದಯವಿಟ್ಟು ಕೇಳಿರಿ. ಯೋವಾಬನೊಂದಿಗೆ ನಾನು ಮಾತನಾಡುವುದಕ್ಕಾಗಿ ನನ್ನ ಬಳಿಗೆ ಬರಬೇಕೆಂದು ಹೇಳಿ” ಎಂದು ಕೂಗಿದಳು.
[17] ಯೋವಾಬನು ಬರಲು ಆ ಸ್ತ್ರೀಯು, “ನೀನು ಯೋವಾಬನೋ?” ಎಂದು ಅವನನ್ನು ಕೇಳಲು ಅವನು “ಹೌದು ನಾನೇ” ಎಂದು ಉತ್ತರ ಕೊಟ್ಟನು. ಆಕೆಯು, “ನಿನ್ನ ದಾಸಿಯ ಮಾತನ್ನು ಕೇಳು” ಅನ್ನಲು ಅವನು, “ಕೇಳುತ್ತೇನೆ” ಎಂದನು.
[18] ಆಗ ಆಕೆಯು, “ಪೂರ್ವಕಾಲದಲ್ಲಿ ಜನರು ಆಬೇಲಿನವರ ಆಲೋಚನೆಯನ್ನು ಕೇಳೋಣ ಅಂದುಕೊಂಡು ಅವರ ಆಲೋಚನೆಯ ಮೇರೆಗೆ ತೀರ್ಮಾನವನ್ನು ತೆಗೆದುಕೊಳ್ಳುತ್ತಿದ್ದರು.
[19] ನಮ್ಮ ಪಟ್ಟಣವು ಇಸ್ರಾಯೇಲರಲ್ಲಿ ಸಮಾಧಾನವುಳ್ಳದ್ದೂ, ರಾಜನಿಷ್ಠೆಯುಳ್ಳದ್ದೂ ಆಗಿದೆ. ನೀನು ಇಸ್ರಾಯೇಲರ ಪಟ್ಟಣಗಳಲ್ಲಿ ತಾಯಿಯೆಂದು ಹೆಸರುಗೊಂಡ ಈ ಪಟ್ಟಣವನ್ನು ಹಾಳುಮಾಡಬೇಕೆಂದಿರುವೆ. ನೀನು ಯೆಹೋವನ ಸ್ವತ್ತನ್ನು ನುಂಗಿಬಿಡುವುದೇಕೆ?” ಎಂದಳು.
[20] ಅದಕ್ಕೆ ಯೋವಾಬನು, “ನುಂಗಿಬಿಡುವುದಾಗಲಿ, ಹಾಳುಮಾಡುವುದಾಗಲಿ ನನಗೆ ದೂರವಾಗಿರಲಿ ಅಂಥದ್ದು ಬೇಡವೇ ಬೇಡ.
[21] ಎಫ್ರಾಯೀಮಿನ ಪರ್ವತಪ್ರದೇಶದ ಬಿಕ್ರೀಯ ಮಗನಾದ ಶೆಬನೆಂಬುವವನು ಅರಸನಾದ ದಾವೀದನಿಗೆ ವಿರೋಧವಾಗಿ ಕೈಯೆತ್ತಿದ್ದಾನೆ. ಅವನ್ನನ್ನೇ ಒಪ್ಪಿಸಿರಿ, ನಾನು ಊರನ್ನು ಬಿಟ್ಟು ಹೋಗುತ್ತೇನೆ” ಎಂದು ಹೇಳಿದನು. ಆ ಸ್ತ್ರೀಯು ಯೋವಾಬನಿಗೆ, “ನೋಡು ಈಗಲೇ ಅವನ ತಲೆಯು ಗೋಡೆಯ ಕಿಂಡಿಯಿಂದ ನಿನ್ನ ಕಡೆಗೆ ಒಗೆಯಲ್ಪಡುವುದು” ಎಂದು ಉತ್ತರ ಕೊಟ್ಟು,
[22] ತನ್ನ ಜನರ ಬಳಿಗೆ ಹೋಗಿ ಅವರಿಗೆ ವಿವೇಕದೊಡನೆ ಈ ಸಂಗತಿಯನ್ನು ತಿಳಿಸಿದಳು. ಅವರು ಬಿಕ್ರೀಯ ಮಗನಾದ ಶೆಬನ ತಲೆಯನ್ನು ಕತ್ತರಿಸಿ ಯೋವಾಬನಿದ್ದಲ್ಲಿಗೆ ಎಸೆದರು. ಕೂಡಲೆ ಅವನು ಕಹಳೆಯನ್ನು ಊದಿಸಿದನು. ಜನರು ಆ ಪಟ್ಟಣವನ್ನು ಬಿಟ್ಟು ತಮ್ಮ ತಮ್ಮ ನಿವಾಸಗಳಿಗೆ ಹೋದರು. ಯೋವಾಬನು ಹಿಂದಿರುಗಿ ಯೆರೂಸಲೇಮಿನಲ್ಲಿದ್ದ ಅರಸನ ಬಳಿಗೆ ಹೋದನು.
[23] ಯೋವಾಬನು ಇಸ್ರಾಯೇಲರ ಮುಖ್ಯ ಸೇನಾಧಿಪತಿ. ಯೆಹೋಯಾದಾವನ ಮಗನಾದ ಬೆನಾಯನು ಕೆರೇತ್ಯ ಮತ್ತು ಪೆಲೇತ್ಯ ಎಂಬ ಕಾವಲುದಂಡುಗಳ ಅಧಿಪತಿ.
[24] ಅದೋರಾಮನು ಬಿಟ್ಟೀಕೆಲಸ ಮಾಡಿಸುವವನು. ಅಹೀಲೂದನ ಮಗನಾದ ಯೆಹೋಷಾಫಾಟನು ಮುಖ್ಯ ದಾಖಲೆಮಾಡುವ ಲೇಖಕ.
[25] ಶೆವನು ಕಾರ್ಯದರ್ಶಿ, ಚಾದೋಕ್ ಮತ್ತು ಎಬ್ಯಾತಾರರು ಯಾಜಕರು.
[26] ಯಾಯೀರಿನವನಾದ ಈರನೂ ದಾವೀದನ ಯಾಜಕನು.