Skip to content
Opens in a new window
Listen to this chapter • 5:59

[1] ಅನಂತರ ದಾವೀದನು ಯೆಹೋವನನ್ನು, “ನಾನು ಯೆಹೂದ ದೇಶದ ಯಾವುದಾದರು ಒಂದು ಪಟ್ಟಣಕ್ಕೆ ಹೋಗಬಹುದೋ?” ಎಂದು ಕೇಳಲು ಆತನು ಹೋಗಬಹುದು ಅಂದನು. ಅವನು ತಿರುಗಿ, “ಯಾವ ಊರಿಗೆ ಹೋಗಲಿ?” ಎಂದು ಕೇಳಿದ್ದಕ್ಕೆ ಹೆಬ್ರೋನಿಗೆ ಹೋಗು ಎಂದು ಉತ್ತರ ಸಿಕ್ಕಿತು.

[2] ಆಗ ದಾವೀದನು ತನ್ನ ಇಬ್ಬರು ಹೆಂಡತಿಯರಾದ ಇಜ್ರೇಲಿನ ಅಹೀನೋವಮಳನ್ನೂ, ಕರ್ಮೇಲ್ಯನಾದ ನಾಬಾಲನ ಹೆಂಡತಿಯಾಗಿದ್ದ ಅಬೀಗೈಲಳನ್ನೂ ಕರೆದುಕೊಂಡು ಅಲ್ಲಿಗೆ ಹೋದನು.

[3] ದಾವೀದನ ಜನರೂ ತಮ್ಮ ತಮ್ಮ ಕುಟುಂಬಗಳನ್ನು ಕರೆದುಕೊಂಡು ಅವನ ಜೊತೆಯಲ್ಲಿ ಹೋಗಿ ಹೆಬ್ರೋನಿಗೆ ಸೇರಿದ ಊರುಗಳಲ್ಲಿ ವಾಸಮಾಡಿದರು.

[4] ತರುವಾಯ ಯೆಹೂದ್ಯರು ಅಲ್ಲಿಗೆ ಬಂದು ದಾವೀದನನ್ನು ಅಭಿಷೇಕಿಸಿ, ತಮ್ಮ ಕುಲಕ್ಕೆ ಅರಸನನ್ನಾಗಿ ಮಾಡಿಕೊಂಡರು. ಸೌಲನ ಶವವನ್ನು ಸಮಾಧಿಮಾಡಿದವರು ಯಾಬೇಷ್ ಗಿಲ್ಯಾದ್ ದೇಶದವರೇ ಎಂಬ ಸಂಗತಿಯು ದಾವೀದನಿಗೆ ಗೊತ್ತಾಯಿತು.

[5] ಆಗ ದಾವೀದನು ಅವರ ಬಳಿಗೆ ದೂತರನ್ನು ಕಳುಹಿಸಿ, “ನೀವು ನಿಷ್ಠೆಯಿಂದ ನಿಮ್ಮ ಒಡೆಯನಾದ ಸೌಲನ ಶವವನ್ನು ಸಮಾಧಿ ಮಾಡಿದ್ದಕ್ಕಾಗಿ ನಿಮಗೆ ಯೆಹೋವನ ಆಶೀರ್ವಾದವುಂಟಾಗಲಿ.

[6] ಯೆಹೋವನ ಒಡಂಬಡಿಕೆಯ ನಂಬಿಕೆ ಮತ್ತು ಸತ್ಯ ನಿಮ್ಮೊಂದಿಗಿರಲಿ. ಈ ಕಾರ್ಯಕ್ಕಾಗಿ ನಾನೂ ನಿಮಗೆ ಉಪಕಾರ ಮಾಡುವೆನು.

[7] ಯೆಹೂದ್ಯರು ನನ್ನನ್ನು ಅಭಿಷೇಕಿಸಿ, ತಮ್ಮ ಅರಸನನ್ನಾಗಿ ಮಾಡಿಕೊಂಡಿದ್ದಾರೆ. ನಿಮ್ಮ ಅರಸನಾದ ಸೌಲನು ಸತ್ತುಹೋದರೂ ನೀವು ಶೂರರಾಗಿರಿ, ನಿಮ್ಮ ಕೈಗಳು ಜೋಲುಬೀಳದಿರಲಿ” ಎಂದು ಹೇಳಿ ಕಳುಹಿಸಿದನು.

[8] ಸೌಲನ ಸೇನಾಧಿಪತಿಯೂ ನೇರನ ಮಗನೂ ಆದ ಅಬ್ನೇರನು ಸೌಲನ ಮಗನಾದ ಈಷ್ಬೋಶೆತನನ್ನು ಹೊಳೆಯ ಆಚೆಯಲ್ಲಿರುವ ಮಹನಯಿಮಿಗೆ ಕರೆದುಕೊಂಡು ಹೋಗಿ

[9] ಅವನನ್ನು ಗಿಲ್ಯಾದ್, ಆಶೇರ್, ಇಜ್ರೇಲ, ಎಫ್ರಾಯೀಮ್, ಬೆನ್ಯಾಮೀನ ಜನರಿಗೂ ಬೇರೆ ಎಲ್ಲಾ ಇಸ್ರಾಯೇಲರಿಗೂ ಅರಸನನ್ನಾಗಿ ಮಾಡಿದನು.

[10] ಸೌಲನ ಮಗನಾದ ಈಷ್ಬೋಶೆತನು ನಲ್ವತ್ತು ವರ್ಷದವನಾದಾಗ ಇಸ್ರಾಯೇಲರನ್ನು ಆಳತೊಡಗಿ ಎರಡು ವರ್ಷ ರಾಜ್ಯಭಾರ ಮಾಡಿದನು. ಯೆಹೂದ್ಯರು ಮಾತ್ರ ದಾವೀದನನ್ನು ಹಿಂಬಾಲಿಸಿದರು.

[11] ದಾವೀದನು ಹೆಬ್ರೋನಿನಲ್ಲಿ ಯೆಹೂದ್ಯರ ಅರಸನಾಗಿದ್ದದ್ದು ಏಳು ವರ್ಷ ಆರು ತಿಂಗಳುಗಳು.

[12] ಒಂದು ದಿನ ನೇರನ ಮಗನಾದ ಅಬ್ನೇರನೂ, ಸೌಲನ ಮಗನಾದ ಈಷ್ಬೋಶೆತನ ಸೇವಕರೂ ಮಹನಯಿಮಿನಿಂದ ಹೊರಟು ಗಿಬ್ಯೋನಿಗೆ ಬಂದರು.

[13] ಚೆರೂಯಳ ಮಗನಾದ ಯೋವಾಬನೂ ದಾವೀದನ ಸೇವಕರು ಹೊರಟು ಅವರನ್ನು ಗಿಬ್ಯೋನಿನ ಕೆರೆಯ ಹತ್ತಿರ ಸಂಧಿಸಿ, ಒಂದು ಗುಂಪು ಕೆರೆಯ ಈಚೆಯಲ್ಲಿಯೂ ಇನ್ನೊಂದು ಗುಂಪು ಆಚೆಯಲ್ಲಿಯೂ ಕುಳಿತುಕೊಂಡರು.

[14] ಆಗ ಅಬ್ನೇರನು ಯೋವಾಬನಿಗೆ, “ಎರಡು ಕಡೆಯ ತರುಣರು ಎದ್ದು ನಮ್ಮ ಮುಂದೆ ಸ್ಪರ್ಧಿಸಲಿ” ಎಂದು ಹೇಳಲು ಯೋವಾಬನು, “ಆಗಲಿ” ಅಂದನು.

[15] ಆಗ ಸೌಲನ ಮಗನಾದ ಈಷ್ಬೋಶೆತನ ಕಡೆಯವರಾದ ಹನ್ನೆರಡು ಮಂದಿ ಬೆನ್ಯಾಮೀನ್ಯರು, ದಾವೀದನ ಸೇವಕರಲ್ಲಿ ಹನ್ನೆರಡು ಮಂದಿಯೂ ಸಮಸಂಖ್ಯೆಯಾಗಿ ಹೊರಟು ಬಂದರು.

[16] ಅವರಲ್ಲಿ ಪ್ರತಿಯೊಬ್ಬನೂ ತನ್ನ ತನ್ನ ಎದುರಾಳಿಯ ತಲೆಹಿಡಿದು, ಕತ್ತಿಯಿಂದ ಪಕ್ಕೆಯಲ್ಲಿ ತಿವಿದಿದ್ದರಿಂದ ಎಲ್ಲರೂ ಸತ್ತು ಬಿದ್ದರು. ಆದ್ದರಿಂದ ಗಿಬ್ಯೋನಿನಲ್ಲಿರುವ ಆ ಸ್ಥಳಕ್ಕೆ “ಹೆಲ್ಕಾತ್ ಹಸ್ಸೂರಿಂ” ಎಂದು ಹೆಸರಾಯಿತು.

[17] ಅನಂತರ ಆ ದಿನ ಘೋರ ಯುದ್ಧವಾಯಿತು. ಅಬ್ನೇರನೂ ಇಸ್ರಾಯೇಲ್ಯರೂ ದಾವೀದನ ಸೇವಕರಿಂದ ಸೋಲಿಸಲ್ಪಟ್ಟರು.

[18] ಚೆರೂಯಳ ಮೂರು ಮಂದಿ ಮಕ್ಕಳಾದ ಯೋವಾಬ, ಅಬೀಷೈ, ಅಸಾಹೇಲ ಎಂಬುವರು ಅಲ್ಲಿಗೆ ಬಂದಿದ್ದರು. ಅಸಾಹೇಲನು ಅಡವಿಯ ಜಿಂಕೆಯಂತೆ ಚುರುಕು ಕಾಲಿನವನಾಗಿದ್ದನು.

[19] ಇವನು ಎಡಕ್ಕಾದರೂ ಬಲಕ್ಕಾದರೂ ತಿರುಗದೇ ಅಬ್ನೇರನನ್ನು ಹಿಂದಟ್ಟಿದನು.

[20] ಅಬ್ನೇರನು ಹಿಂತಿರುಗಿ ನೋಡಿ, “ನೀನು ಅಸಾಹೇಲನೋ?” ಎಂದು ಕೇಳಿದ್ದಕ್ಕೆ ಅವನು ಹೌದೆಂದು ಉತ್ತರಕೊಟ್ಟನು.

[21] ಆಗ ಅಬ್ನೇರನು ಅವನಿಗೆ, “ನನ್ನನ್ನು ಬಿಟ್ಟು ಎಡಕ್ಕಾಗಲಿ, ಬಲಕ್ಕಾಗಲಿ ತಿರುಗಿಕೊಂಡು ಯುವಕರಲ್ಲೊಬ್ಬನನ್ನು ಹಿಡಿದು ಸುಲಿದುಕೋ” ಎಂದು ಹೇಳಿದನು. ಆದರೆ ಅಸಾಹೇಲನು ಒಪ್ಪಲಿಲ್ಲ.

[22] ಅಬ್ನೇರನು ತಿರುಗಿ ಅಸಾಹೇಲನಿಗೆ, “ನನ್ನನ್ನು ಬಿಟ್ಟು ಹೋಗು, ನಾನೇಕೆ ನಿನ್ನನ್ನು ನೆಲಕ್ಕುರುಳಿಸಬೇಕು? ಹಾಗೆ ಮಾಡಿದರೆ ನಿನ್ನ ಅಣ್ಣನಾದ ಯೋವಾಬನಿಗೆ ಹೇಗೆ ಮುಖ ತೋರಿಸಲಿ” ಅಂದನು.

[23] ಅಸಾಹೇಲನು ಬಿಟ್ಟು ಹೋಗುವುದಕ್ಕೆ ಒಪ್ಪದ ಕಾರಣ ಅಬ್ನೇರನು ಬರ್ಜಿಯನ್ನು ಹಿಂದಿನಿಂದ ಅವನ ಹೊಟ್ಟೆಯೊಳಗೆ ತಿವಿದನು. ಬರ್ಜಿಯು ಅವನ ಬೆನ್ನಿನಿಂದ ಹಾಯ್ದು ಹೊರಗೆ ಬಂದಿತು. ಅವನು ಕೂಡಲೇ ಅಲ್ಲೇ ಬಿದ್ದು ಸತ್ತನು. ಅಸಾಹೇಲನು ಸತ್ತು ಬಿದ್ದ ಸ್ಥಳಕ್ಕೆ ಬಂದವರೆಲ್ಲರೂ ಅಲ್ಲೇ ನಿಂತರು.

[24] ಆದರೆ ಯೋವಾಬನೂ, ಅಬೀಷೈಯೂ ಅಬ್ನೇರನನ್ನು ಹಿಂದಟ್ಟಿದರು. ಹೀಗೆ ಅವರು “ಅಮ್ಮಾ” ಎಂಬ ಗುಡ್ಡಕ್ಕೆ ಬರುವಷ್ಟರಲ್ಲಿ ಸೂರ್ಯಾಸ್ತಮಾನವಾಯಿತು. ಆ ಗುಡ್ಡವು ಗಿಬ್ಯೋನಿನ ಅರಣ್ಯ ಮಾರ್ಗದ ಬಳಿಯಲ್ಲಿರುವ ಗೀಯದ ಎದುರಿನಲ್ಲಿರುತ್ತದೆ.

[25] ಬೆನ್ಯಾಮೀನ್ಯರು ಒಂದೇ ಗುಂಪಾಗಿ ಕೂಡಿಕೊಂಡು ಅಬ್ನೇರನ ಬಳಿಗೆ ಬಂದು ಗುಡ್ಡದ ಮೇಲೆ ನಿಂತರು.

[26] ಆಗ ಅಬ್ನೇರನು, “ಯೋವಾಬನನ್ನು ಕತ್ತಿಯು ಯಾವಾಗಲೂ ತಿನ್ನುತ್ತಲೇ ಇರಬೇಕೋ? ಹಗೆತನವೇ ಇದರ ಅಂತ್ಯಫಲವೆಂದು ನಿನಗೆ ಗೊತ್ತಾಗಲಿಲ್ಲವೋ? ಸಹೋದರರನ್ನು ಹಿಂದಟ್ಟುವುದು ಸಾಕೆಂದು ನಿನ್ನ ಜನರಿಗೆ ಯಾವಾಗ ಆಜ್ಞಾಪಿಸುವಿ” ಎಂದನು.

[27] ಅದಕ್ಕೆ ಯೋವಾಬನು, “ದೇವರ ಜೀವದಾಣೆ, ಈಗ ನೀನು ಈ ಮಾತುಗಳನ್ನು ಹೇಳದಿದ್ದರೆ ಜನರು ನಾಳೆ ಬೆಳಗಾಗುವವರೆಗೆ ತಮ್ಮ ಬಂಧುಗಳನ್ನು ಹಿಂದಟ್ಟದೆ ಬಿಡುವುದಿಲ್ಲ” ಎಂದು ಉತ್ತರಕೊಟ್ಟು ಕೂಡಲೇ ತುತ್ತೂರಿಯನ್ನು ಊದಿಸಿದನು.

[28] ಆಗ ಅವರು ಇಸ್ರಾಯೇಲ್ಯರನ್ನು ಹಿಂದಟ್ಟದೆ ಬಿಟ್ಟಿದ್ದರಿಂದ ಯುದ್ಧವು ನಿಂತುಹೋಯಿತು.

[29] ಅಬ್ನೇರನೂ ಅವನ ಜನರೂ ಅರಾಬಾ ತಗ್ಗಿನಲ್ಲಿ ರಾತ್ರಿಯೆಲ್ಲಾ ಪ್ರಯಾಣ ಮಾಡಿ ಯೊರ್ದನ್ ಹೊಳೆದಾಟಿ, ಬಿಥ್ರೋನ ಕಣಿವೆಯನ್ನು ಹಾದು, ಮಹನಯಿಮಿಗೆ ಸೇರಿದರು.

[30] ಯೋವಾಬನು ಅಬ್ನೇರನನ್ನು ಹಿಂದಟ್ಟದೆ ಬಿಟ್ಟು, ಹಿಂದಿರುಗಿ ಬಂದು, ಜನರನ್ನು ಸೇರಿಸಿ ಲೆಕ್ಕಮಾಡಿದಾಗ ಅವರಲ್ಲಿ ದಾವೀದನ ಹತ್ತೊಂಬತ್ತು ಮಂದಿ ಸೈನಿಕರೂ ಅಸಾಹೇಲನೂ ಇರಲಿಲ್ಲ.

[31] ಆದರೆ ದಾವೀದನ ಸೈನಿಕರು ಅಬ್ನೇರನ ಜನರಾಗಿರುವ ಬೆನ್ಯಾಮೀನ್ಯರಲ್ಲಿ ಮುನ್ನೂರ ಅರವತ್ತು ಮಂದಿಯನ್ನು ಕೊಂದಿದ್ದರು.

[32] ಅವರು ಅಸಾಹೇಲನ ಶವವನ್ನು ತಂದು ಅದನ್ನು ಬೇತ್ಲೆಹೇಮಿನಲ್ಲಿರುವ ಅವನ ತಂದೆಯ ಸ್ಮಶಾನಭೂಮಿಯಲ್ಲಿ ಸಮಾಧಿಮಾಡಿದರು. ಅನಂತರ ಯೋವಾಬನೂ, ಅವನ ಜನರೂ ರಾತ್ರಿಯೆಲ್ಲಾ ಪ್ರಯಾಣಮಾಡಿ ಹೆಬ್ರೋನಿಗೆ ಬಂದರು. ಆಗ ಸೂರ್ಯೋದಯವಾಯಿತು.

2 ಸಮುವೇಲನು — Chapters