Skip to content
Opens in a new window
Listen to this chapter • 7:45

[1] ಬಹು ದಿನಗಳವರೆಗೆ ಸೌಲನ ವಂಶದವರಿಗೂ ಮತ್ತು ದಾವೀದನ ವಂಶದವರಿಗೂ ಯುದ್ಧ ನಡೆಯಿತು. ದಾವೀದನು ಬಲಗೊಳ್ಳುತ್ತಾ ಬಂದನು. ಸೌಲನ ವಂಶವು ದುರ್ಬಲವಾಗುತ್ತಾ ಬಂತು.

[2] ಹೆಬ್ರೋನಿನಲ್ಲಿರುವಾಗ ದಾವೀದನಿಗೆ ಹುಟ್ಟಿದ ಮಕ್ಕಳು; ಚೊಚ್ಚಲ ಮಗನು ಅಮ್ನೋನನು, ಇವನು ಇಜ್ರೇಲಿನವಳಾದ ಅಹೀನೋವಮಳಲ್ಲಿ ಹುಟ್ಟಿದವನು.

[3] ಎರಡನೆಯವನು ಕಿಲಾಬನು. ಇವನು ಕರ್ಮೆಲ್ಯನಾದ ನಾಬಾಲನ ಹೆಂಡತಿಯಾಗಿದ್ದ ಅಬೀಗೈಲಳಲ್ಲಿ ಹುಟ್ಟಿದವನು. ಮೂರನೆಯವನು ಅಬ್ಷಾಲೋಮನು. ಇವನು ಗೆಷೂರಿನ ಅರಸನಾದ ತಲ್ಮೈ ಎಂಬುವನ ಮಗಳಾದ ಮಾಕಳ ಪುತ್ರನು.

[4] ನಾಲ್ಕನೆಯವನು ಅದೋನೀಯನು. ಇವನು ಹಗ್ಗೀತಳ ಮಗನು. ಐದನೆಯವನು ಶೆಫಟ್ಯನು, ಇವನು ಅಬೀಟಲಳ ಮಗನು.

[5] ಆರನೆಯವನು ಇತ್ರಾಮನು. ಇವನು ದಾವೀದನಿಗೆ ಅವನ ಹೆಂಡತಿಯಾದ ಎಗ್ಲಳಲ್ಲಿ ಹುಟ್ಟಿದವನು. ಹೆಬ್ರೋನಿನಲ್ಲಿರುವಾಗ ದಾವೀದನಿಗೆ ಹುಟ್ಟಿದ ಮಕ್ಕಳು ಇವರೇ.

[6] ಸೌಲನ ವಂಶದವರಿಗೂ ದಾವೀದನ ವಂಶದವರಿಗೂ ಯುದ್ಧ ನಡೆಯುತ್ತಿರುವಾಗ ಸೌಲನ ವಂಶದವರಲ್ಲಿ ಅಬ್ನೇರನೇ ಬಲಿಷ್ಠನಾಗಿದ್ದನು.

[7] ಅಯಾಹನ ಮಗಳಾದ ರಿಚ್ಪಳು ಸೌಲನ ಉಪಪತ್ನಿಯಾಗಿದ್ದಳು. ಒಂದು ದಿನ ಈಷ್ಬೋಶೆತನು ಅಬ್ನೇರನನ್ನು, “ನೀನು ನನ್ನ ತಂದೆಯ ಉಪಪತ್ನಿಯರನ್ನು ಕೂಡಿದ್ದೇಕೆ?” ಎಂದು ಕೇಳಿದನು.

[8] ಅಬ್ನೇರನು ಈ ಮಾತನ್ನು ಕೇಳಿ ಕೋಪಗೊಂಡು ಈಷ್ಬೋಶೆತನಿಗೆ, “ಈ ವರೆಗೆ ನಾನು ನಿನ್ನ ತಂದೆಯಾದ ಸೌಲನ ಕುಟುಂಬಕ್ಕೂ ಅವನ ಬಂಧು ಮಿತ್ರರಿಗೂ ದಯೆತೋರಿಸುತ್ತಿದ್ದೇನಲ್ಲಾ. ನಿನ್ನನ್ನು ದಾವೀದನ ಕೈಗೆ ಒಪ್ಪಿಸಿಕೊಡಲಿಲ್ಲವಷ್ಟೆ. ಈಗ ಈ ಹೆಂಗಸಿನ ದೆಸೆಯಿಂದ ನನ್ನಲ್ಲಿ ತಪ್ಪುಹಿಡಿಯುವುದಕ್ಕೆ ನಾನೇನು ಯೆಹೂದ ನಾಯಿಯ ತಲೆಯೋ?

[9] ನಾನು ಅರಸುತನವನ್ನು ಸೌಲನ ಕುಟುಂಬದಿಂದ ತೆಗೆದು ದಾನಿನಿಂದ ಬೇರ್ಷೆಬದ ವರೆಗಿರುವ ಎಲ್ಲಾ ಇಸ್ರಾಯೇಲರಲ್ಲಿಯೂ, ಯೆಹೂದ್ಯರಲ್ಲಿಯೂ ದಾವೀದನ ಸಿಂಹಾಸನವನ್ನು ಸ್ಥಿರಪಡಿಸಿ,

[10] ಯೆಹೋವನಾದ ದೇವರು ದಾವೀದನಿಗೆ ಮಾಡಿದ ವಾಗ್ದಾನವನ್ನು ನೆರವೇರಿಸದೆ ಹೋದರೆ, ಆತನು ನನಗೆ ಬೇಕಾದದ್ದನ್ನು ಮಾಡಲಿ” ಅಂದನು.

[11] ಈಷ್ಬೋಶೆತನು ಅವನಿಗೆ ಹೆದರಿ ಏನೂ ಉತ್ತರಕೊಡಲಾರದೆ ಹೋದನು.

[12] ಅನಂತರ ಅಬ್ನೇರನು ದಾವೀದನ ಬಳಿಗೆ ದೂತರನ್ನು ಕಳುಹಿಸಿ ಅವನಿಗೆ, “ದೇಶವು ಯಾರದು? ನೀನು ನನ್ನೊಡನೆ ಒಡಂಬಡಿಕೆ ಮಾಡಿಕೊಂಡರೆ ಇಸ್ರಾಯೇಲರನ್ನೆಲ್ಲಾ ನಿನ್ನ ಕಡೆಗೆ ತಿರುಗಿಸುವ ಪ್ರಯತ್ನದಲ್ಲಿ ನಾನು ನಿನ್ನ ಸಂಗಡ ಕೈಜೋಡಿಸುತ್ತೇನೆ” ಎಂದು ಹೇಳಿಸಿದನು.

[13] ಅದಕ್ಕೆ ದಾವೀದನು, “ಒಳ್ಳೆಯದು, ನಿನ್ನ ಸಂಗಡ ಒಡಂಬಡಿಕೆ ಮಾಡಿಕೊಳ್ಳುತ್ತೇನೆ. ಆದರೆ ನಿನ್ನಿಂದ ನನಗೆ ಒಂದು ಸಹಾಯ ಬೇಕು. ನನ್ನನ್ನು ನೋಡುವುದಕ್ಕೆ ಬರುವಾಗ ಸೌಲನ ಮಗಳಾದ ಮೀಕಲಳನ್ನು ಕರೆದುಕೊಂಡು ಬರಬೇಕು. ಹಾಗೆ ಕರೆದುಕೊಂಡು ಬಾರದಿದ್ದರೆ, ನೀನು ನನ್ನ ಮುಖವನ್ನು ನೋಡಕೂಡದು” ಎಂದು ಉತ್ತರಕೊಟ್ಟನು.

[14] ಆಗ ದಾವೀದನು ಸೌಲನ ಮಗನಾದ ಈಷ್ಬೋಶೆತನ ಬಳಿಗೆ ದೂತರನ್ನು ಕಳುಹಿಸಿ ಅವನಿಗೆ, “ನಾನು ನೂರು ಮಂದಿ ಫಿಲಿಷ್ಟಿಯರ ಮುಂದೊಗಲನ್ನು ತಂದು ಕೊಟ್ಟು ವರಿಸಿದ ನನ್ನ ಹೆಂಡತಿಯಾದ ಮೀಕಲಳನ್ನು ನನಗೊಪ್ಪಿಸು” ಎಂಬುದಾಗಿ ಆಜ್ಞಾಪಿಸಿದನು.

[15] ಈಷ್ಬೋಶೆತನು ಲಯಿಷನ ಮಗನೂ ಆಕೆಯ ಗಂಡನೂ ಆದ ಪಲ್ಟೀಯೇಲನ ಮನೆಗೆ ಆಳುಗಳನ್ನು ಕಳುಹಿಸಿ ಆಕೆಯನ್ನು ಕರೆಯಿಸಿದನು.

[16] ಆಗ ಪಲ್ಟೀಯೇಲನು ಬಹುರೀಮಿನವರೆಗೆ ಅಳುತ್ತಾ ಆಕೆಯ ಹಿಂದೆ ಹೋದನು. ಅನಂತರ ಅಬ್ನೇರನು ಅವನಿಗೆ, “ಹಿಂದಿರುಗಿ ಮನೆಗೆ ಹೋಗು” ಎಂದು ಹೇಳಲು ಅವನು ಹಿಂದಿರುಗಿ ಹೋದನು.

[17] ಅಬ್ನೇರನು ಇಸ್ರಾಯೇಲರ ಹಿರಿಯರಿಗೆ, “ದಾವೀದನು ನಮ್ಮ ಅರಸನಾಗಬೇಕೆಂದು ನೀವು ಮೊದಲು ಅಪೇಕ್ಷಿಸಿದಂತೆಯೇ ಈಗ ಮಾಡಿರಿ.

[18] ಯೆಹೋವನು ದಾವೀದನ ವಿಷಯವಾಗಿ ನನ್ನ ಸೇವಕನಾದ ದಾವೀದನ ಮುಖಾಂತರವಾಗಿ ನನ್ನ ಪ್ರಜೆಗಳಾದ ಇಸ್ರಾಯೇಲ್ಯರನ್ನು ಫಿಲಿಷ್ಟಿಯರ ಕೈಗೂ ಬೇರೆ ಎಲ್ಲಾ ಶತ್ರುಗಳ ಕೈಗೂ ತಪ್ಪಿಸುವನೆಂದು ನುಡಿದಿದ್ದಾನಲ್ಲಾ” ಎಂದು ಹೇಳಿದನು.

[19] ಅವನು ಬೆನ್ಯಾಮೀನ್ಯರಿಗೂ ಇದೇ ಪ್ರಕಾರ ಹೇಳಿದನು. ತರುವಾಯ ಅವನು ಇಸ್ರಾಯೇಲರೂ ಬೆನ್ಯಾಮೀನ್ಯರೆಲ್ಲರೂ ಒಪ್ಪಿಕೊಂಡು ಹೇಳಿದ ಮಾತುಗಳನ್ನು ದಾವೀದನಿಗೆ ತಿಳಿಸುವುದಕ್ಕೋಸ್ಕರ ಹೆಬ್ರೋನಿಗೆ ಹೊರಟನು.

[20] ಅವನು ಹೆಬ್ರೋನಿಗೆ ಬಂದಾಗ ದಾವೀದನು ಅವನಿಗೂ ಅವನ ಸಂಗಡ ಬಂದಿದ್ದ ಇಪ್ಪತ್ತು ಜನರಿಗೂ ಔತಣ ಮಾಡಿಸಿದನು.

[21] ಅಬ್ನೇರನು ದಾವೀದನಿಗೆ, “ನಾನು ಹೊರಟುಹೋಗಿ ಇಸ್ರಾಯೇಲರನ್ನೆಲ್ಲಾ ಕೂಡಿಸಿ, ನನ್ನ ಒಡೆಯನಾದ ಅರಸನ ಬಳಿಗೆ ಕರೆದುಕೊಂಡು ಬರುವೆನು. ಅವರು ನಿನ್ನ ಸಂಗಡ ಒಡಂಬಡಿಕೆ ಮಾಡಿಕೊಳ್ಳುವರು. ನೀನು ನಿನ್ನ ಅಪೇಕ್ಷೆಯಂತೆ ಎಲ್ಲರ ಮೇಲೆ ದೊರೆತನಮಾಡಬಹುದು” ಎಂದು ಹೇಳಲು ದಾವೀದನು ಅವನನ್ನು ಸಮಾಧಾನದಿಂದ ಕಳುಹಿಸಿಕೊಟ್ಟನು.

[22] ಸುಲಿಗೆ ಮಾಡುವುದಕ್ಕಾಗಿ ಹೋಗಿದ್ದ ದಾವೀದನ ಭಟರು ಯೋವಾಬನೂ ದೊಡ್ಡ ಕೊಳ್ಳೆಯೊಡನೆ ಅಷ್ಟರಲ್ಲಿ ಹಿಂತಿರುಗಿ ಬಂದರು. ಅವನು ಹೆಬ್ರೋನಿಗೆ ಬಂದಾಗ ಅಬ್ನೇರನು ದಾವೀದನ ಹತ್ತಿರ ಇರಲಿಲ್ಲ. ದಾವೀದನು ಅವನನ್ನು ಸುರಕ್ಷಿತವಾಗಿ ಕಳುಹಿಸಿಬಿಟ್ಟಿದ್ದನು.

[23] ಸೈನ್ಯಸಹಿತವಾಗಿ ಹಿಂದಿರುಗಿ ಬಂದ ಯೋವಾಬನು ನೇರನ ಮಗನಾದ ಅಬ್ನೇರನು ಬಂದಿದ್ದನೆಂದೂ, ಅರಸನು ಅವನನ್ನು ಸುರಕ್ಷಿತವಾಗಿ ಕಳುಹಿಸಿದನೆಂದೂ ತಿಳಿದು, ಅರಸನ ಬಳಿಗೆ ಹೋಗಿ,

[24] “ನೀನು ಮಾಡಿದ್ದೇನು? ಅಬ್ನೇರನು ನಿನ್ನ ಬಳಿಗೆ ಬಂದಿದ್ದನಂತೆ. ನೀನು ಅವನನ್ನು ಸುರಕ್ಷಿತವಾಗಿ ಕಳುಹಿಸಿಬಿಟ್ಟಿದ್ದೇಕೆ?

[25] ನೇರನ ಮಗನಾದ ಅಬ್ನೇರನ ಸಂಗತಿ ನಿನಗೆ ಗೊತ್ತಿಲ್ಲವೋ? ಅವನು ನಿನ್ನನ್ನು ವಂಚಿಸುವುದಕ್ಕೂ ನಿನ್ನ ಸ್ಥಿತಿಗತಿಗಳನ್ನು ತಿಳಿದುಕೊಳ್ಳುವುದಕ್ಕೂ ನೀನು ಏನೇನು ಮಾಡುತ್ತಿರುತ್ತೀ ಎಂಬುದನ್ನು ಕಂಡುಹಿಡಿಯುವುದಕ್ಕೂ ಬಂದಿದ್ದನಷ್ಟೇ” ಎಂದು ಹೇಳಿ,

[26] ಯೋವಾಬನು ದಾವೀದನನ್ನು ಬಿಟ್ಟು, ಹೊರಗೆ ಹೋಗಿ, ಅಬ್ನೇರನನ್ನು ಕರೆತರುವಂತೆ ದೂತರನ್ನು ಕಳುಹಿಸಿದನು. ಇವರು ಹೋಗಿ ಸಿರಾ ಬಾವಿಯ ಬಳಿಯಿಂದ ಅವನನ್ನು ಕರೆದುಕೊಂಡು ಬಂದರು. ಇದು ದಾವೀದನಿಗೆ ಗೊತ್ತಿರಲಿಲ್ಲ.

[27] ಅಬ್ನೇರನು ಹೆಬ್ರೋನಿಗೆ ಬಂದಾಗ ಯೋವಾಬನು ಅವನನ್ನು ರಹಸ್ಯ ಸಂಭಾಷಣೆಗೋ ಎಂಬಂತೆ ಊರಬಾಗಿಲಿನೊಳಗೆ ಕರೆದುಕೊಂಡು ಹೋಗಿ ತನ್ನ ತಮ್ಮನಾದ ಅಸಾಹೇಲನನ್ನು ಕೊಂದದ್ದಕ್ಕೆ ಪ್ರತಿಯಾಗಿ ಅವನನ್ನು ಹೊಟ್ಟೆಯಲ್ಲಿ ತಿವಿದು ಕೊಂದನು.

[28] ಸ್ವಲ್ಪ ಹೊತ್ತಾದ ಮೇಲೆ ಈ ವರ್ತಮಾನವು ದಾವೀದನಿಗೆ ಮುಟ್ಟಿತು. ಆಗ ಅವನು, “ನೇರನ ಮಗನಾದ ಅಬ್ನೇರನ ರಕ್ತಾಪರಾಧಕ್ಕೆ ನಾನೂ, ನನ್ನ ರಾಜ್ಯವೂ ಯೆಹೋವನ ಮುಂದೆ ಸದಾ ನಿರ್ದೋಷಿಗಳು.

[29] ಈ ಅಪರಾಧವು ಯೋವಾಬನ ಮೇಲೆಯೂ ಅವನ ಸಂತಾನದವರ ಮೇಲೆಯೂ ಇರಲಿ. ಅವನ ಮನೆಯಲ್ಲಿ ಮೇಹಸ್ರಾವವುಳ್ಳವರೂ (ರಕ್ತ, ಕೀವುಸ್ರವಿಸುವ ಚರ್ಮ ರೋಗ), ಕುಷ್ಠರೋಗಿಗಳೂ, ಕುಂಟರೂ, ಕತ್ತಿಯಿಂದ ಹತರಾಗುವವರೂ, ಭಿಕ್ಷೇ ಬೇಡುವವರು ಇದ್ದೇ ಇರಲಿ” ಅಂದನು.

[30] ಅಬ್ನೇರನು ಗಿಬ್ಯೋನಿನ ಸಮೀಪದಲ್ಲಾದ ಯುದ್ಧದಲ್ಲಿ ಯೋವಾಬ ಅಬೀಷೈಯರ ತಮ್ಮನಾದ ಅಸಾಹೇಲನನ್ನು ಸಾಯಿಸಿದ್ದರಿಂದ ಅವರು ಇವನನ್ನು ಕೊಂದು ಹಾಕಿದರು.

[31] ಅರಸನಾದ ದಾವೀದನು ಯೋವಾಬನಿಗೂ ಅವನ ಸಂಗಡ ಇದ್ದ ಜನರಿಗೂ, “ನಿಮ್ಮ ಬಟ್ಟೆಗಳನ್ನು ಹರಿದುಕೊಂಡು, ಗೋಣಿತಟ್ಟುಗಳನ್ನು ಕಟ್ಟಿಕೊಂಡು, ಗೋಳಾಡುತ್ತಾ ಅಬ್ನೇರನ ಶವದ ಮುಂದೆ ನಡೆಯಿರಿ” ಎಂದು ಆಜ್ಞಾಪಿಸಿ ತಾನು ಶವಯಾತ್ರೆ ಹಿಂದೆ ಹೋದನು.

[32] ಅಬ್ನೇರನ ಶವವನ್ನು ಹೆಬ್ರೋನಿನಲ್ಲಿ ಸಮಾಧಿಮಾಡಿದರು. ಅರಸನು ಅವನ ಸಮಾಧಿಯ ಹತ್ತಿರ ನಿಂತು ಗಟ್ಟಿಯಾಗಿ ಅತ್ತನು. ಜನರೆಲ್ಲರೂ ಅತ್ತರು.

[33] ದಾವೀದನು ಅಬ್ನೇರನನ್ನು ಕುರಿತು, “ಅಬ್ನೇರನೇ ನಿನಗೆ ಮೂರ್ಖರಿಗಾಗುವಂತೆ ದುರ್ಮರಣವಾಯಿತೋ?

[34] ನಿನ್ನ ಕೈಗಳು ಕಟ್ಟಲ್ಪಡಲಿಲ್ಲ. ನಿನ್ನ ಕಾಲುಗಳಿಗೆ ಬೇಡಿಗಳು ಹಾಕಿರಲಿಲ್ಲ. ನೀನು ದುಷ್ಟರಿಂದ ಹತನಾದಂತೆ ಹತನಾದಿ” ಎಂದು ಶೋಕಗೀತೆಯನ್ನು ಹಾಡಲು ಜನರು ತಿರುಗಿ ಅತ್ತರು.

[35] ಸೂರ್ಯಸ್ತಮಾನಕ್ಕೆ ಮೊದಲೇ ಜನರೆಲ್ಲರೂ ದಾವೀದನ ಬಳಿಗೆ ಬಂದು ಅವನನ್ನು ಊಟಕ್ಕೆ ಎಬ್ಬಿಸಬೇಕೆಂದು ಪ್ರಯತ್ನಿಸಿದರು. ಆದರೆ ಅವನು, “ಸೂರ್ಯನು ಮುಣುಗುವ ಮೊದಲು ನಾನು ರೊಟ್ಟಿಯನ್ನಾಗಲಿ, ಬೇರೆ ಯಾವುದನ್ನಾಗಲಿ ಬಾಯಲ್ಲಿ ಹಾಕಿದರೆ ದೇವರು ನನಗೆ ಬೇಕಾದದ್ದನ್ನು ಮಾಡಲಿ” ಎಂದು ಆಣೆಯಿಟ್ಟು ಹೇಳಿದನು.

[36] ಜನರು ಇದನ್ನು ಕಂಡು ಮೆಚ್ಚಿದರು. ಅರಸನು ಮಾಡಿದ್ದೆಲ್ಲವೂ ಅವರಿಗೆ ಒಪ್ಪಿಗೆಯಾಯಿತು.

[37] ನೇರನ ಮಗನಾದ ಅಬ್ನೇರನ ಕೊಲೆಯಲ್ಲಿ ಅರಸನು ಕೈಹಾಕಲಿಲ್ಲವೆಂಬುದು ಅವನ ಎಲ್ಲಾ ಜನರಿಗೂ ಇಸ್ರಾಯೇಲರಿಗೂ ಅದೇ ದಿನ ಗೊತ್ತಾಯಿತು.

[38] ಅರಸನು ತನ್ನ ಸೇವಕರಿಗೆ, “ಈ ದಿನ ಇಸ್ರಾಯೇಲರಲ್ಲಿ ಹತವಾದವನು, ಪ್ರಭುವೂ, ಮಹಾಪುರುಷನೂ ಆಗಿದ್ದಾನೆಂಬುದು ನಿಮಗೆ ಗೊತ್ತಿದೆಯಲ್ಲಾ.

[39] ನಾನು ರಾಜ್ಯಾಭಿಷೇಕ ಹೊಂದಿದವನಾಗಿದ್ದರೂ ಈಗ ಏನೂ ಮಾಡಲಾರದವನಾಗಿದ್ದೇನೆ. ಚೆರೂಯಳ ಮಕ್ಕಳಾದ ಇವರು ನನ್ನ ಹತೋಟಿಗೆ ಬಾರದವರು ಯೆಹೋವನೇ ಕೆಡುಕರಿಗೆ ಮುಯ್ಯಿ ತೀರಿಸಲಿ” ಎಂದು ಹೇಳಿದನು.

2 ಸಮುವೇಲನು — Chapters