[1] ದಾವೀದನ ಕಾಲದಲ್ಲಿ ಮೂರು ವರ್ಷಗಳ ವರೆಗೂ ಎಡಬಿಡದೆ ಬರವಿತ್ತು. ದಾವೀದನು ಯೆಹೋವನನ್ನು ವಿಚಾರಿಸಲು ಆತನು, “ಸೌಲನು ಗಿಬ್ಯೋನ್ಯರನ್ನು ಕೊಲ್ಲಿಸಿದ್ದರಿಂದ ಅವನ ಮೇಲೆಯೂ, ಅವನ ಮನೆಯವರ ಮೇಲೆಯೂ ರಕ್ತಾಪರಾಧವಿದೆ” ಎಂದು ಉತ್ತರ ಕೊಟ್ಟನು.
[2] ಗಿಬ್ಯೋನ್ಯರು ಇಸ್ರಾಯೇಲ್ಯರ ಕುಲಕ್ಕೆ ಸೇರಿದವರಲ್ಲ. ಸಂಹೃತರಾಗದೆ ಉಳಿದ ಅಮೋರಿಯರಷ್ಟೆ. ಇಸ್ರಾಯೇಲ್ಯರು ತಾವು ಇವರನ್ನು ಕೊಲ್ಲುವುದಿಲ್ಲವೆಂದು ಪ್ರಮಾಣಮಾಡಿದ್ದರು. ಆದರೂ ಸೌಲನು ಇಸ್ರಾಯೇಲ್ ಮತ್ತು ಯೆಹೂದ ಕುಲಗಳ ಮೇಲೆ ತನಗಿದ್ದ ಅಭಿಮಾನದ ನಿಮಿತ್ತ ಇವರನ್ನು ನಿರ್ನಾಮಗೊಳಿಸಬೇಕೆಂದಿದ್ದನು.
[3] ಆಗ ಅರಸನಾದ ದಾವೀದನು ಗಿಬ್ಯೋನ್ಯರನ್ನು ಕರೆದು, “ನಾನು ನಿಮಗೋಸ್ಕರ ಏನು ಮಾಡಬೇಕೆನ್ನುತ್ತೀರಿ? ನಿಮಗೆ ಪ್ರಾಯಶ್ಚಿತ್ತವಾಗಿ ಯಾವುದನ್ನು ಮಾಡಿದರೆ ನೀವು ಯೆಹೋವನ ಸ್ವತ್ತನ್ನು ಆಶೀರ್ವದಿಸುವಿರಿ?” ಎಂದು ಕೇಳಿದನು.
[4] ಅದಕ್ಕೆ ಅವರು, “ಸೌಲನ ಸಂತಾನದವರಿಗೂ ನಮಗೂ ಇರುವ ವ್ಯಾಜ್ಯವು ಬೆಳ್ಳಿ ಬಂಗಾರದಿಂದ ಮುಗಿಯಲಾರದು. ಇಸ್ರಾಯೇಲ್ಯರನ್ನು ಕೊಲ್ಲುವ ಅಧಿಕಾರವು ನಮಗಿಲ್ಲ” ಎಂದು ಉತ್ತರ ಕೊಟ್ಟರು. ಆಗ ಅರಸನು ಅವರಿಗೆ, “ಏನು ಮಾಡಬೇಕು ಹೇಳಿರಿ ಮಾಡುತ್ತೇನೆ” ಅಂದನು.
[5] ಆಗ ಅವರು, “ನಮ್ಮನ್ನು ಇಸ್ರಾಯೇಲರ ಪ್ರಾಂತ್ಯಗಳಿಂದ ಹೊರಡಿಸುವುದಕ್ಕೂ, ನಿರ್ನಾಮಗೊಳಿಸುವುದಕ್ಕೂ ಪ್ರಯತ್ನಿಸಿದ ಆ ಮನುಷ್ಯನ ಮಕ್ಕಳಲ್ಲಿ ಏಳು ಮಂದಿಯನ್ನು ನಮಗೆ ಒಪ್ಪಿಸು.
[6] ಯೆಹೋವನಿಂದ ಆರಿಸಲ್ಪಟ್ಟ ಸೌಲನು ವಾಸವಾಗಿದ್ದ ಗಿಬೆಯದಲ್ಲಿ ನಾವು ಅವರನ್ನು ಕೊಂದು, ಯೆಹೋವನ ಸನ್ನಿಧಿಯಲ್ಲಿ ಅವರನ್ನು ನೇತು ಹಾಕುವೆವು” ಎಂದರು. ಅದಕ್ಕೆ ಅರಸನು, “ಆಗಲಿ ಅವರನ್ನು ನಿಮಗೆ ಒಪ್ಪಿಸುತ್ತೇನೆ” ಅಂದನು.
[7] ದಾವೀದನು ತಾನು ಸೌಲನ ಮಗನಾದ ಯೋನಾತಾನನಿಗೆ ಯೆಹೋವನ ಹೆಸರಿನಲ್ಲಿ ಮಾಡಿದ ಪ್ರಮಾಣವನ್ನು ನೆನಪುಮಾಡಿಕೊಂಡು ಸೌಲನ ಮೊಮ್ಮಗನೂ ಯೋನಾತಾನನ ಮಗನೂ ಆದ ಮೆಫೀಬೋಶೆತನನ್ನು ಉಳಿಸಿದನು.
[8] ಆದರೆ ಸೌಲನಿಗೆ ಅಯ್ಯಾಹನ ಮಗಳಾದ ರಿಚ್ಪಳಲ್ಲಿ ಹುಟ್ಟಿದ ಅರ್ಮೋನೀ ಮತ್ತು ಮೆಫೀಬೋಶೆತ್ ಎಂಬ ಇಬ್ಬರು ಮಕ್ಕಳನ್ನೂ, ಮೆಹೋಲದ ಬರ್ಜಿಲ್ಲೈಯ ಮಗನಾದ ಅದ್ರಿಯೇಲನಿಗೆ ಸೌಲನ ಮಗಳಾದ ಮೀಕಲಳಲ್ಲಿ ಹುಟ್ಟಿದ ಐದು ಮಂದಿ ಮಕ್ಕಳನ್ನೂ ಕರೆದುಕೊಂಡು ಅವರನ್ನು ಗಿಬ್ಯೋನ್ಯರಿಗೆ ಒಪ್ಪಿಸಿದರು.
[9] ಅವರು ಇವರನ್ನು ಕೊಂದು, ಗುಡ್ಡದ ಮೇಲೆ ಯೆಹೋವನ ಸನ್ನಿಧಿಯಲ್ಲಿ ನೇತುಹಾಕಿದರು. ಈ ಏಳು ಮಂದಿಯೂ ಏಕ ಕಾಲದಲ್ಲಿ ಸತ್ತುಹೋದರು. ಇವರನ್ನು ಕೊಂದಾಗ ಜವೆಗೋದಿಯ ಸುಗ್ಗಿ ಆರಂಭವಾಗಿತ್ತು
[10] ಆಗ ಅಯ್ಯಾಹನ ಮಗಳಾದ ರಿಚ್ಪಳು ಒಂದು ಗೋಣಿತಟ್ಟನ್ನು ತೆಗೆದುಕೊಂಡು, ಅದನ್ನು ಬಂಡೆಯ ಮೇಲೆ ಹಾಸಿ, ಸುಗ್ಗಿಯ ಆರಂಭದಿಂದ ಶವಗಳ ಮೇಲೆ ಮಳೆ ಬೀಳುವ ತನಕ ಅದರ ಮೇಲೆ ಕುಳಿತುಕೊಂಡು, ಹಗಲಿನಲ್ಲಿ ಆಕಾಶದ ಪಕ್ಷಿಗಳೂ, ರಾತ್ರಿಯಲ್ಲಿ ಕಾಡು ಮೃಗಗಳೂ ಅವುಗಳನ್ನು ತಿನ್ನದಂತೆ ಕಾಯುತ್ತಿದ್ದಳು.
[11] ಅಯ್ಯಾಹನ ಮಗಳೂ, ಸೌಲನ ಉಪಪತ್ನಿಯೂ ಆದ ರಿಚ್ಪಳು ಮಾಡಿದ ಈ ಕಾರ್ಯವು ದಾವೀದನಿಗೆ ಗೊತ್ತಾಯಿತು.
[12] ಆಗ ಅವನು ಸೌಲನ ಮತ್ತು ಅವನ ಮಗನಾದ ಯೋನಾತಾನನ ಎಲುಬುಗಳನ್ನು ತರುವುದಕ್ಕೋಸ್ಕರ ಯಾಬೇಷ್ ಗಿಲ್ಯಾದಿಗೆ ಹೋದನು. ಫಿಲಿಷ್ಟಿಯರು ಸೌಲನನ್ನು ಗಿಲ್ಬೋವದಲ್ಲಿ ಸೋಲಿಸಿದ ನಂತರ ಅವನ ಮತ್ತು ಯೋನಾತಾನನ ಶವಗಳನ್ನು ಬೇತ್ ಷೆಯಾನಿನ ಬೀದಿಗಳಲ್ಲಿ ನೇತುಹಾಕಿದ್ದರು. ಯಾಬೇಷ್ ಗಿಲ್ಯಾದಿನವರು ಅಲ್ಲಿಂದ ಅವುಗಳನ್ನು ಕದ್ದುಕೊಂಡು ಹೋಗಿದ್ದರು.
[13] ದಾವೀದನು ಯಾಬೇಷಿನಲ್ಲಿದ್ದ ಸೌಲ ಮತ್ತು ಯೋನಾತಾನರ ಎಲುಬುಗಳನ್ನು ಗಿಬ್ಯೋನಿನಲ್ಲಿ ಹತರಾದವರ ಎಲುಬುಗಳನ್ನೂ ತೆಗೆದುಕೊಂಡರು.
[14] ಅವರು ಅ ಎಲಬುಗಳನ್ನೆಲ್ಲಾ ಬೆನ್ಯಾಮೀನ್ ದೇಶದ ಚೇಲಾ ಊರಿನಲ್ಲಿ ಸೌಲನ ತಂದೆಯಾದ ಕೀಷನ ಸ್ಮಶಾನಭೂಮಿಯಲ್ಲಿ ಸಮಾಧಿಮಾಡಿಸಿದನು. ಅರಸನ ಅಪ್ಪಣೆಯಂತೆ ಇದೆಲ್ಲಾ ಆದ ನಂತರ ದೇಶದ ಮೇಲೆ ದೇವರಿಗಿದ್ದ ಕೋಪವು ಶಾಂತವಾಗಿ, ಅವನು ಅವರ ಪ್ರಾರ್ಥನೆಗಳಿಗೆ ಉತ್ತರಕೊಟ್ಟನು.
[15] ಫಿಲಿಷ್ಟಿಯರಿಗೂ ಇಸ್ರಾಯೇಲರಿಗೂ ಪುನಃ ಯುದ್ಧವಾಯಿತು. ದಾವೀದನು ತನ್ನ ಸೇವಕರನ್ನು ಕರೆದುಕೊಂಡು ಫಿಲಿಷ್ಟಿಯರಿಗೆ ವಿರೋಧವಾಗಿ ಯುದ್ಧಕ್ಕೆ ಹೋದಾಗ ಬಹಳವಾಗಿ ದಣಿದಿದ್ದನು.
[16] ಆಗ ರೆಫಾಯರಲ್ಲೊಬ್ಬನಾದ ಇಷ್ಬಿಬೆನೋಬ್ ಎಂಬುವನು ದಾವೀದನನ್ನು ಕೊಲ್ಲುಬೇಕೆಂದಿದ್ದನು. ಅವನ ತಾಮ್ರದ ಬರ್ಜಿಯು ಮುನ್ನೂರು ಶೆಕಲ್ (ಬೆಳ್ಳಿನಾಣ್ಯ) ತೂಕದ್ದು. ಅವನು ಸೊಂಟಕ್ಕೆ ಹೊಸ ಕತ್ತಿಯನ್ನು ಕಟ್ಟಿಕೊಂಡಿದ್ದನು.
[17] ಆದರೆ ಚೆರೂಯಳ ಮಗನಾದ ಅಬೀಷೈಯು ದಾವೀದನ ಸಹಾಯಕ್ಕೆ ಬಂದು, ಆ ಫಿಲಿಷ್ಟಿಯನನ್ನು ಕೊಂದು ಹಾಕಿದನು. ಆಗ ಜನರು ದಾವೀದನಿಗೆ, “ಇಸ್ರಾಯೇಲರ ದೀಪವು ಆರಿಹೋಗದಂತೆ ನೀನು ಇನ್ನು ಮುಂದೆ ನಮ್ಮ ಜೊತೆಯಲ್ಲಿ ಯುದ್ಧಕ್ಕೆ ಬರಬಾರದು” ಎಂದು ಖಂಡಿತವಾಗಿ ಹೇಳಿದನು.
[18] ಅನಂತರ ಫಿಲಿಷ್ಟಿಯರ ಸಂಗಡ ಗೋಬಿನಲ್ಲಿ ಯುದ್ಧ ನಡೆಯಿತು. ಆಗ ಹುಷಾ ಊರಿನವನಾದ ಸಿಬ್ಬೆಕೈ ಎಂಬುವನು ರೆಫಾಯನಾದ ಸೆಫ ಎಂಬುವನನ್ನು ಕೊಂದನು.
[19] ಗೋಬಿನಲ್ಲಿ ಫಿಲಿಷ್ಟಿಯರೊಡನೆ ಇನ್ನೊಮ್ಮೆ ಯುದ್ಧ ನಡೆದಾಗ ಬೇತ್ಲೆಹೇಮಿನವನಾದ ಯಾರೇಯೋರೆಗೀಮ್ ಎಂಬುವವನ ಮಗನಾದ ಎಲ್ಹಾನಾನನು ಗಿತ್ತೀಯನಾದ ಗೊಲ್ಯಾತನನ್ನು ಕೊಂದನು. ಗೊಲ್ಯಾತನ ಬರ್ಜಿಯ ಹಿಡಿಕೆಯು ನೇಕಾರರ ಕುಂಟೆಯಷ್ಟು ಗಾತ್ರವಿತ್ತು.
[20] ಮತ್ತೊಂದು ಸಾರಿ ಗತ್ ಊರಿನಲ್ಲಿ ಯುದ್ಧ ನಡೆಯಿತು. ಅಲ್ಲಿ ಒಬ್ಬ ಎತ್ತರವಾದ ಪುರುಷನಿದ್ದನು. ಅವನ ಕೈಕಾಲುಗಳಿಗೆ ಆರಾರು ಬೆರಳುಗಳಂತೆ ಒಟ್ಟಿಗೆ ಇಪ್ಪತ್ತನಾಲ್ಕು ಬೆರಳುಗಳಿದ್ದವು ಅವನು ರೆಫಾಯನಿಗೆ ಹುಟ್ಟಿದವನಾಗಿದ್ದನು.
[21] ಅವನು ಇಸ್ರಾಯೇಲರನ್ನು ನಿಂದಿಸಿದಾಗ ದಾವೀದನ ಅಣ್ಣನಾದ ಶಿಮಿಯಾನನ ಮಗ ಯೋನಾತಾನನು ಅವನನ್ನು ಕೊಂದು ಹಾಕಿದನು.
[22] ಗತ್ ಊರಿನವರಾದ ಈ ನಾಲ್ಕು ಮಂದಿ ರೆಫಾಯರೂ ದಾವೀದನಿಂದಲೂ ಅವನ ಸೇವಕರಿಂದಲೂ ಹತರಾದರು.