[1] ದಾವೀದನ ಕೊನೆಯ ಮಾತುಗಳು - ಇಷಯನ ಮಗನಾದ ದಾವೀದನು, ಉನ್ನತ ಸ್ಥಾನದಲ್ಲಿ ಸ್ಥಾಪಿಸಲ್ಪಟ್ಟವನು, ಯಾಕೋಬನ ದೇವರಿಂದ ಅಭಿಷೇಕಿಸಲ್ಪಟ್ಟವನೂ, ಇಸ್ರಾಯೇಲ್ಯರ ವರಕವಿಯೂ ಆಗಿರುವವನ ನುಡಿಗಳು:
[2] “ಯೆಹೋವನ ಆತ್ಮವು ನನ್ನ ಮೂಲಕ ಮಾತನಾಡಿತು. ಆತನ ವಾಕ್ಯವು ನನ್ನ ಬಾಯಲ್ಲಿತ್ತು.
[3] ಇಸ್ರಾಯೇಲರ ಶರಣನೂ, ದೇವರೂ ಆಗಿರುವಾತನು ಹೇಳಿದ್ದೇನೆಂದರೆ, ದೇವರಲ್ಲಿ ಭಯಭಕ್ತಿಯುಳ್ಳವನಾಗಿ ಜನರನ್ನು ನೀತಿಯಿಂದ ಆಳುವವನು,
[4] ಮೋಡಗಳಿಲ್ಲದ ಪ್ರಾತಃಕಾಲದಲ್ಲಿ ತೇಜೋಮಯನಾಗಿ ಉದಯಿಸಿ, ಮೋಡಗಳನ್ನು ಚದುರಿಸಿಬಿಟ್ಟು, ಮಳೆಬಿದ್ದ ಭೂಮಿಯಿಂದ ಹುಲ್ಲನ್ನು ಮೊಳೆಯಿಸುವ ಸೂರ್ಯನಿಗೆ ಸಮಾನನಾಗಿದ್ದಾನೆ.
[5] ನನ್ನ ಮನೆಯು ಯೆಹೋವನ ಸನ್ನಿಧಿಯಲ್ಲಿ ಹೀಗೆಯೇ ಸ್ಥಿರವಾಗಿರುತ್ತದಲ್ಲವೇ? ಆತನು ನನ್ನೊಡನೆ ಒಡಂಬಡಿಕೆ ಮಾಡಿಕೊಂಡಿದ್ದಾನಲ್ಲವೋ? ಅದು ಎಂದಿಗೂ ಬಿದ್ದುಹೋಗದೆ ಎಲ್ಲಾ ವಿಷಯಗಳಲ್ಲಿಯೂ ಖಚಿತವಾಗಿರುತ್ತದೆ. ನನ್ನ ರಕ್ಷಣೆಯ ಮೂಲವೂ, ನನ್ನ ಅಭಿಲಾಷೆಯನ್ನು ಪೂರ್ತಿಗೊಳಿಸುವವನೂ ಆತನೇ ಅಲ್ಲವೋ?
[6] ದುಷ್ಟರು ದೂರಕ್ಕೆ ಬಿಸಾಡಲ್ಪಟ್ಟ ಮುಳ್ಳುಗಳಂತಿರುತ್ತಾರೆ. ಅವುಗಳನ್ನು ಹಿಡಿಯಬೇಕೆಂದಿರುವವನು ತನ್ನ ಕೈಯಿಂದ ಹಿಡಿಯಲಾರದೆ,
[7] ಕಬ್ಬಿಣದ ಆಯುಧವನ್ನೂ, ಬರ್ಜಿಯ ಹಿಡಿಯನ್ನೂ ಉಪಯೋಗಿಸಬೇಕು. ಅವು ಬಿದ್ದಲ್ಲಿಯೇ ಬೆಂಕಿಯಿಂದ ಸುಟ್ಟುಹೋಗುವವು.”
[8] ದಾವೀದನೊಂದಿಗಿದ್ದ ರಣವೀರರ ಪಟ್ಟಿ: ತಹ್ಕೆಮೋನ್ಯನಾದ ಯೋಷಬ್ ಬಷ್ಬೆಬೆತನು ಸರದಾರರಲ್ಲಿ ಮುಖ್ಯಸ್ಥನು. ಎಚ್ನೀಯನಾದ ಅದೀನೋ ಅನ್ನಿಸಿಕೊಳ್ಳುವ ಇವನು ಒಂದೇ ಸಾರಿ ಎಂಟುನೂರು ಮಂದಿಯನ್ನು ಕೊಂದನು.
[9] ಎರಡನೆಯವನು ಅಹೋಹ್ಯನಾದ ದೋದೋ ಎಂಬುವವನ ಮಗನಾಗಿರುವ ಎಲ್ಲಾಜಾರನು. ಫಿಲಿಷ್ಟಿಯರು ಯುದ್ಧಕ್ಕೆ ಕೂಡಿಕೊಂಡಾಗ ಅವರನ್ನು ನಿಂದಿಸುವುದಕ್ಕೆ ದಾವೀದನ ಜೊತೆಯಲ್ಲಿ ಹೋದ ಮೂರು ಮಂದಿ ಶೂರರಲ್ಲಿ ಇವನೂ ಒಬ್ಬನಾಗಿದ್ದನು.
[10] ಇಸ್ರಾಯೇಲರು ಹೋದ ನಂತರ ಇವನು ನಿಂತುಕೊಂಡು, ಕತ್ತಿ ಹಿಡಿದು, ಕೈ ಸೋತು ಹೋಗುವ ತನಕ ಫಿಲಿಷ್ಟಿಯರನ್ನು ಕೊಲ್ಲುತ್ತಲೇ ಇದ್ದನು. ಆ ದಿನದಲ್ಲಿ ಯೆಹೋವನು ಮಹಾಜಯವನ್ನುಂಟುಮಾಡಲು ಇಸ್ರಾಯೇಲರು ಸುಲಿದುಕೊಳ್ಳುವುದಕ್ಕಾಗಿ ಹಿಂದಿರುಗಿದರು.
[11] ಮೂರನೆಯವನು ಹರಾರ್ಯನಾದ ಆಗೇಯನ ಮಗ ಶಮ್ಮ ಎಂಬುವವನು. ಫಿಲಿಷ್ಟಿಯರು ದೊಡ್ಡ ಗುಂಪಾಗಿ ಒಂದು ಅಲಸಂದಿಯ ಹೊಲಕ್ಕೆ ಬಂದರು.
[12] ಇಸ್ರಾಯೇಲ್ಯರು ಅವರ ಎದುರಿನಿಂದ ಓಡಿಹೋದಾಗ, ಇವನು ಆ ಹೊಲದ ಮಧ್ಯದಲ್ಲೇ ನಿಂತುಕೊಂಡು, ಫಿಲಿಷ್ಟಿಯರನ್ನು ಕೊಂದು, ಹೊಲವನ್ನು ಕಾಪಾಡಿದನು. ಹೀಗೆ ಯೆಹೋವನು ಮಹಾಜಯವನ್ನುಂಟುಮಾಡಿದನು.
[13] ಮೂವತ್ತು ಮಂದಿ ಪ್ರಸಿದ್ಧ ಶೂರರಲ್ಲಿ ದಾವೀದನು ಅದುಲ್ಲಾಮ್ ಗವಿಯಲ್ಲಿದ್ದಾಗ ಸುಗ್ಗಿಕಾಲದಲ್ಲಿ ಅವನ ಬಳಿಗೆ ಮೂವರು ಬಂದರು. ಫಿಲಿಷ್ಟಿಯರು ದಂಡೆತ್ತಿ ಬಂದು ರೆಫಾಯೀಮ್ ತಗ್ಗಿನಲ್ಲಿ ಪಾಳೆಯಮಾಡಿಕೊಂಡಾಗ,
[14] ದಾವೀದನು ಆ ಅದುಲ್ಲಾಮ್ ದುರ್ಗದಲ್ಲಿದ್ದನು. ಫಿಲಿಷ್ಟಿಯರು ಬೇತ್ಲೆಹೇಮಿನಲ್ಲಿ ಕಾವಲುದಂಡನ್ನಿಟ್ಟಿದ್ದರು.
[15] ಅದೇ ಸಮಯದಲ್ಲಿ ದಾವೀದನು ಲವಲವಿಕೆಯಿಂದ “ಬೇತ್ಲೆಹೇಮ್ ಊರಿನ ಬಾಗಿಲ ಬಳಿಯಲ್ಲಿರುವ ಬಾವಿಯ ನೀರನ್ನು ಯಾರಾದರೂ ನನಗೆ ತಂದುಕೊಡುವುದಾದರೆ ಎಷ್ಟೋ ಒಳ್ಳೆಯದು” ಎಂದೂ ಕೇಳಿದನು.
[16] ಕೂಡಲೇ ಆ ಮೂರು ಮಂದಿ ಪರಾಕ್ರಮಶಾಲಿಗಳು ಫಿಲಿಷ್ಟಿಯರ ದಂಡಿನಲ್ಲಿ ನುಗ್ಗಿ ಹೋಗಿ, ಬೇತ್ಲೆಹೇಮಿನ ಬಾಗಿಲ ಬಳಿಯಲ್ಲಿರುವ ಬಾವಿಯ ನೀರನ್ನು ಸೇದಿ, ದಾವೀದನಿಗೆ ತಂದು ಕೊಟ್ಟರು.
[17] ಆದರೆ ಅವನು ಅದನ್ನು ಕುಡಿಯಲೊಲ್ಲದೆ, “ಯೆಹೋವನೇ, ಈ ನೀರನ್ನು ಕುಡಿಯುವುದು ನನಗೆ ದೂರವಾಗಿರಲಿ. ಜೀವದಾಶೆ ತೊರೆದವರ ರಕ್ತವನ್ನು ನಾನು ಕುಡಿಯಬೇಕೆ? ಇದನ್ನು ಕುಡಿಯುವುದೇ ಇಲ್ಲ” ಎಂದು ಹೇಳಿ, ಅದನ್ನು ಯೆಹೋವನ ಮುಂದೆ ಹೊಯ್ದನು. ಆ ಮೂರು ಜನರು ಪರಾಕ್ರಮಶಾಲಿಗಳಾಗಿದ್ದರು.
[18] ಚೆರೂಯಳ ಮಗನೂ ಯೋವಾಬನ ತಮ್ಮನೂ ಆದ ಅಬೀಷೈಯು ಈ ಮೂರು ಜನರಲ್ಲಿ ಮುಖ್ಯಸ್ಥನು. ಅವನು ತನ್ನ ಬರ್ಜಿಯನ್ನು ಬೀಸುತ್ತಾ ಹೋಗಿ, ಮುನ್ನೂರು ಜನರನ್ನು ಕೊಂದು ಈ ಮೂವರಲ್ಲಿ ಕೀರ್ತಿಹೊಂದಿದನು.
[19] ಅ ಮೂವರಲ್ಲಿ ಘನತೆಯುಳ್ಳವನೂ, ನಾಯಕನೂ ಇವನೇ. ಇವನು ಮೊದಲಿನ ಮೂರು ಜನರಿಗಿಂತ ಹೆಚ್ಚು ಪ್ರಸಿದ್ಧನಾಗಿದ್ದನಲ್ಲವೇ?
[20] ಯೆಹೋಯಾದಾವನ ಮಗನೂ ಕಬ್ಜಯೇಲಿನ ಪರಾಕ್ರಮಶಾಲಿಯೂ ಆದ ಬೆನಾಯನು ಇನ್ನೊಬ್ಬನು. ಇವನು ಅನೇಕ ಶೂರಕೃತ್ಯಗಳನ್ನು ಮಾಡಿದನು. ಅದಕ್ಕೆ ದೃಷ್ಟಾಂತವೆಂದರೆ ಒಂದು ಸಾರಿ ಮೋವಾಬ್ಯನಾದ ಅರೀಯೇಲನ ಇಬ್ಬರು ಮಕ್ಕಳನ್ನು ಕೊಂದನು. ಇನ್ನೊಮ್ಮೆ ಹಿಮಕಾಲದಲ್ಲಿ ಒಂದು ಸಿಂಹವು ಗುಂಡಿಯಲ್ಲಿ ಬಿದ್ದಿರಲು ಇವನು ಆ ಗುಂಡಿಗೆ ಇಳಿದು ಹೋಗಿ ಅದನ್ನು ಕೊಂದನು.
[21] ಮತ್ತೊಮ್ಮೆ ಉನ್ನತನಾದ ಒಬ್ಬ ಐಗುಪ್ತ್ಯನನ್ನು ಕೊಂದನು. ಆ ಐಗುಪ್ತ್ಯನ ಕೈಯಲ್ಲಿ ಒಂದು ಬರ್ಜಿಯಿತ್ತು. ಇವನು ಕೈಯಲ್ಲಿ ಒಂದು ಕೋಲನ್ನು ಮಾತ್ರ ಹಿಡಿದುಕೊಂಡು ಹೋಗಿ ಅವನ ಕೈಯಲ್ಲಿದ್ದ ಬರ್ಜಿಯನ್ನು ಕಿತ್ತುಕೊಂಡು ಅದರಿಂದ ಅವನನ್ನು ಕೊಂದನು.
[22] ಈ ಪರಾಕ್ರಮದ ಕೃತ್ಯದಿಂದ ಯೆಹೋಯಾದಾವನ ಮಗನಾದ ಬೆನಾಯನು ಈ ಮೂವರಲ್ಲಿ ಹೆಸರುವಾಸಿಯಾದನು.
[23] ಮೂವತ್ತು ಮಂದಿಯಲ್ಲಿ ಇವನು ವಿಶೇಷ ಕೀರ್ತಿಯನ್ನು ಹೊಂದಿದ್ದರೂ, ಮೊದಲಿನ ಮೂವರು ಸೈನಿಕರಿಗೆ ಸಮಾನನಾಗಿರಲಿಲ್ಲ. ದಾವೀದನು ಇವನನ್ನು ತನ್ನ ಕಾವಲುದಂಡಿನ ಮುಖ್ಯಸ್ಥನನ್ನಾಗಿ ಮಾಡಿದನು.
[24] ಮೂವತ್ತು ಮಂದಿ ರಣವೀರರ ಪಟ್ಟಿ - ಯೋವಾಬನ ತಮ್ಮನಾದ ಅಸಾಹೇಲನು,
[25] ಬೇತ್ಲೆಹೇಮಿನ ದೋದೋವಿನ ಮಗನಾದ ಎಲ್ಹಾನಾನ್, ಹರೋದಿನವರಾದ ಶಮ್ಮ ಮತ್ತು ಎಲೀಕರು.
[26] ಪೆಲೆಟಿನವನಾದ ಹೆಲೆಚ್, ತೆಕೋವದ ಇಕ್ಕೇಷನ ಮಗನಾದ ಈರಾ,
[27] ಅಣತೋತಿನವನಾದ ಅಬೀಯೆಜೆರ್, ಹುಷಾ ಊರಿನವನಾದ ಮೆಬುನ್ನೈ,
[28] ಅಹೋಹಿನವನಾದ ಚಲ್ಮೋನ್, ನೆಟೋಫದವನಾದ ಮಹರೈ,
[29] ನೆಟೋಫದವನಾದ ಬಾಣನ ಮಗ ಹೇಲೆಬ್, ಬೆನ್ಯಾಮೀನ್ ದೇಶದ ಗಿಬೆಯ ಊರಿನ ರೀಬೈ ಎಂಬುವನ ಮಗನಾದ ಇತ್ತೈ,
[30] ಪಿರಾತೋನ್ಯನಾದ ಬೆನಾಯ, ನಹಲೇ ಗಾಷಿನವನಾದ ಹಿದ್ದೈ.
[31] ಅರಾಬಾ ತಗ್ಗಿನವನಾದ ಅಬೀ ಅಲ್ಬೋನ್, ಬರ್ಹುಮ್ಯನಾದ ಅಜ್ಮಾವೇತ್,
[32] ಶಾಲ್ಬೋನ್ಯನಾದ ಎಲೆಯಖ್ಬಾ, ಯಾಷೇನನ ಮಕ್ಕಳು, ಯೋನಾತಾನನು,
[33] ಹರಾರ್ಯನಾದ ಶಮ್ಮ, ಅರಾರ್ಯನಾದ ಶಾರಾರನ ಮಗ ಅಹೀಯಾಮ್,
[34] ಮಾಕಾ ಊರಿನ ಅಹಸ್ಬೈ ಎಂಬುವನ ಮಗನಾದ ಎಲೀಫೆಲೆಟ್, ಗಿಲೋವಿನ ಅಹೀತೋಫೆಲ ಎಂಬುವನ ಮಗನಾದ ಎಲೀಯಾಮ್,
[35] ಕರ್ಮೆಲ್ಯನಾದ ಹೆಚ್ರೋ, ಅರ್ಬೀಯನಾದ ಪಾರೈ,
[36] ಚೋಬ ಊರಿನ ನಾತಾನ ಎಂಬುವನ ಮಗನಾದ ಇಗಾಲ್, ಗಾದ್ಯನಾದ ಬಾನೀ,
[37] ಅಮ್ಮೋನಿಯನಾದ ಚೆಲೆಕ್, ಬೇರೋತ್ಯನೂ ಚೆರೂಯಳ ಮಗನಾದ ಯೋವಾಬನ ಆಯುಧವಾಹಕನೂ ಆಗಿದ್ದ ನಹರೈ
[38] ಇತ್ರೀಯರಾದ ಈರಾ ಮತ್ತು ಗಾರೇಬರು,
[39] ಹಿತ್ತಿಯನಾದ ಊರೀಯ, ಒಟ್ಟಿಗೆ ಮೂವತ್ತೇಳು ಮಂದಿ.