[1] ಇದಲ್ಲದೆ ಸೊಲೊಮೋನನು ತಾಮ್ರದ ಯಜ್ಞವೇದಿಯನ್ನು ಮಾಡಿಸಿದನು. ಅದರ ಉದ್ದ ಇಪ್ಪತ್ತು ಮೊಳ, ಅಗಲ ಇಪ್ಪತ್ತು ಮೊಳ, ಎತ್ತರ ಹತ್ತು ಮೊಳವು ಆಗಿತ್ತು.
[2] ಸೊಲೊಮೋನನು ಒಂದು ಕಂಚಿನ ಕಡಲು ಎಂಬ ಪಾತ್ರೆಯನ್ನು ಮಾಡಿಸಿದನು. ಅದು ಚಕ್ರಾಕಾರವಾಗಿ ಅಂಚಿನಿಂದ ಅಂಚಿಗೆ ಹತ್ತು ಮೊಳವಾಗಿಯೂ ಇತ್ತು. ಅದರ ಎತ್ತರವು ಐದು ಮೊಳವಾಗಿಯೂ, ಸುತ್ತಳತೆ ಮೂವತ್ತು ಮೊಳ ನೂಲಳತೆಯಾಗಿತ್ತು.
[3] ಅದರ ಕೆಳಭಾಗದಲ್ಲಿ ಅದರ ಸುತ್ತಲೂ ಎತ್ತುಗಳ ರೂಪಗಳಿದ್ದವು. ಅವು ಒಂದೊಂದು ಮೊಳಕ್ಕೆ ಹತ್ತರಂತೆ ಆ ಕೊಳದ ಪಾತ್ರೆಯ ಸುತ್ತಲೂ ಇದ್ದವು. ಇದು ಎರಕ ಹೊಯ್ಯಲ್ಪಡುವಾಗ ಎತ್ತುಗಳ ರೂಪ ಎರಡು ಸಾಲಾಗಿ ಎರಕ ಹೊಯ್ಯಲ್ಪಟ್ಟಿದ್ದವು.
[4] ಅದು ಹನ್ನೆರಡು ಎರಕದ ಎತ್ತುಗಳ ಮೇಲೆ ನಿಂತಿತ್ತು. ಮೂರು ಉತ್ತರ ದಿಕ್ಕಿಗೂ, ಮೂರು ಪಶ್ಚಿಮ ದಿಕ್ಕಿಗೂ, ಮೂರು ದಕ್ಷಿಣ ದಿಕ್ಕಿಗೂ, ಮೂರು ಪೂರ್ವ ದಿಕ್ಕಿಗೂ ಮುಖ ಮಾಡಿಕೊಂಡಿದ್ದವು. ಆ ಕಂಚಿನ ಕಡಲು ಪಾತ್ರೆ ಅವುಗಳ ಬೆನ್ನಿನ ಮೇಲೆ ಇತ್ತು. ಅವುಗಳ ಹಿಂಭಾಗಗಳೆಲ್ಲಾ ಒಳಭಾಗದಲ್ಲಿತ್ತು.
[5] ಕಡಲಿನ ಪಾತ್ರೆಯು ನಾಲ್ಕು ಬೆರಳಿನಷ್ಟು ದಪ್ಪವಾಗಿತ್ತು. ಅದರ ಅಂಚುಪಾತ್ರೆಯ ಅಂಚಿನ ಹಾಗೆಯೂ ಅರಳಿದ ಕಮಲಪುಷ್ಪದ ಹಾಗೆ ಇತ್ತು. ಅದರೊಳಗೆ ಮೂರು ಸಾವಿರ ಕೊಳಗ ನೀರು ಹಿಡಿಯುತ್ತಿತ್ತು.
[6] ಇದಲ್ಲದೆ ಅವನು ಹತ್ತು ಬೋಗುಣಿಗಳನ್ನು ಮಾಡಿಸಿ, ಅವುಗಳಲ್ಲಿ ಸರ್ವಾಂಗಹೋಮ ಸಮರ್ಪಣೆಯ ಸಾಮಾನುಗಳನ್ನು ತೊಳೆದು ಶುದ್ಧ ಮಾಡುವುದಕ್ಕಾಗಿ ಐದನ್ನು ಬಲಗಡೆಯಲ್ಲಿಯೂ, ಐದನ್ನು ಎಡಗಡೆಯಲ್ಲಿಯೂ ಇರಿಸಿದನು. ಆದರೆ ಆ ಕಡಲಿನೊಳಗಿನ ನೀರು ಯಾಜಕರ ಸ್ನಾನಮಾಡಿ ತಮ್ಮನ್ನು ಶುದ್ಧಮಾಡಿಕೊಳ್ಳುವುದಕ್ಕಾಗಿ ಇತ್ತು.
[7] ಅವನು ಬಂಗಾರದ ಹತ್ತು ದೀಪಸ್ತಂಭಗಳನ್ನು ಮಾಡಿಸಿ ಐದನ್ನು ದೇವಾಲಯದೊಳಗೆ ಬಲಗಡೆಯಲ್ಲಿ, ಐದನ್ನು, ಎಡಗಡೆಯಲ್ಲಿಯೂ ಇರಿಸಿದನು.
[8] ಹತ್ತು ಮೇಜುಗಳನ್ನು ಮಾಡಿಸಿ, ದೇವಾಲಯದೊಳಗೆ ಬಲಗಡೆಯಲ್ಲಿ ಐದನ್ನೂ, ಎಡಗಡೆಯಲ್ಲಿ ಐದನ್ನೂ ಇರಿಸಿ ನೂರು ಬಂಗಾರದ ಬೋಗುಣಿಗಳನ್ನು ಮಾಡಿಸಿದನು.
[9] ಇದಲ್ಲದೆ ಯಾಜಕರ ಪ್ರಾಕಾರವನ್ನೂ, ಮಹಾಪ್ರಾಕಾರವನ್ನೂ, ಮಹಾಪ್ರಾಕಾರಕ್ಕೆ ಬಾಗಿಲುಗಳನ್ನೂ ಮಾಡಿಸಿದನು; ಅವುಗಳ ಬಾಗಿಲುಗಳನ್ನು ತಾಮ್ರದ ತಗಡಿನಿಂದ ಹೊದಿಸಿದನು.
[10] ಕಡಲು ಎನಿಸಿಕೊಳ್ಳುವ ಪಾತ್ರೆಯನ್ನು ದೇವಾಲಯದ ಬಲಗಡೆಯಲ್ಲಿ ಅಂದರೆ ಪೂರ್ವಭಾಗದ ಬಲಗಡೆಯಲ್ಲಿ ದಕ್ಷಿಣಕ್ಕೆ ಎದುರಾಗಿ ಇರಿಸಿದನು.
[11] ಇದಲ್ಲದೆ ಹೂರಾಮನು ಹಂಡೆಗಳನ್ನೂ, ಸಲಿಕೆಗಳನ್ನೂ ಬೋಗುಣಿಗಳನ್ನೂ ಮಾಡಿದನು. ಹೀಗೆಯೇ ಹೂರಾಮನು ದೇವಾಲಯಕ್ಕೋಸ್ಕರ ಅರಸನಾದ ಸೊಲೊಮೋನನ ಅಪ್ಪಣೆಯಂತೆ ದೇವಾಲಯ ಕಾರ್ಯಕ್ಕಾಗಿ ಮಾಡಿ ಮುಗಿಸಿದನು.
[12] ಎರಡು ಸ್ತಂಭಗಳು ಅವುಗಳ ಮೇಲಿರುವ ಕುಂಭಾಕಾರದ ಎರಡು ತಲೆಗಳು, ಕುಂಭಗಳ ಮೇಲೆ ಹಾಕುವುದಕ್ಕೋಸ್ಕರ ಎರಡು ಜಾಲರಿಗಳು,
[13] ಸ್ತಂಭಗಳ ತುದಿಯಲ್ಲಿರುವ ಕುಂಭಗಳ ಜಾಲರಿಗಳ ಮೇಲೆ ಎರಡೆರಡನ್ನು ಸಾಲಾಗಿ ಸಿಕ್ಕಿಸುವುದಕ್ಕೋಸ್ಕರ ತಾಮ್ರದ ನಾನೂರು ದಾಳಿಂಬೆ ಹಣ್ಣುಗಳು, ಪೀಠಗಳು,
[14] ಅವುಗಳ ಮೇಲಣ ಬೋಗುಣಿಗಳು, ಕಡಲು ಎನಿಸಿಕೊಳ್ಳುವ ಎರಕದ ಪಾತ್ರೆ,
[15] ಅದನ್ನು ಹೊರುವ ಹನ್ನೆರಡು ಎರಕದ ಹೋರಿಗಳು,
[16] ಹಂಡೆ, ಸಲಿಕೆ, ಮುಳ್ಳುಸೌಟುಗಳು ಹೀಗೆ ಹೂರಾಮಾಬೀವನು ಅರಸನಾದ ಸೊಲೊಮೋನನ ಅಪ್ಪಣೆಯ ಮೇರೆಗೆ ಯೆಹೋವನ ಆಲಯಕ್ಕಾಗಿ ಅದರ ಎಲ್ಲಾ ಸಾಮಾನುಗಳನ್ನು ಒಪ್ಪ ಹಾಕಿದ ತಾಮ್ರದಿಂದ ಮಾಡಿ ಮುಗಿಸಿದನು.
[17] ಅರಸನು ಯೊರ್ದನ್ ತಗ್ಗಿನಲ್ಲಿ ಸುಕ್ಕೋತಿಗೂ ಚೆರೇದಕ್ಕೂ ಮಧ್ಯದಲ್ಲಿರುವ ಕುಲುಮೆಯ ಜೇಡಿಮಣ್ಣಿನ ಸ್ಥಳದಲ್ಲಿ ಎರಕ ಹೊಯ್ಯಿಸಿದನು.
[18] ಹೀಗೆ ಸೊಲೊಮೋನನು ಮಾಡಿಸಿದ ಸಾಮಾನುಗಳು ಅನೇಕವಾಗಿದ್ದುದರಿಂದ ಅವುಗಳ ತಾಮ್ರದ ತೂಕ ಎಷ್ಟೆಂಬುದು ಗೊತ್ತಾಗದೆ ಹೋಯಿತು.
[19] ಸೊಲೊಮೋನನು ಯೆಹೋವನ ದೇವಾಲಯಕ್ಕಾಗಿ ಮಾಡಿಸಿದ ಒಳಗಿನ ಸಾಮಾನುಗಳು ಯಾವುದೆಂದರೆ: ಬಂಗಾರದ ಧೂಪವೇದಿ, ನೈವೇದ್ಯ ರೊಟ್ಟಿಗಳನ್ನಿಡುವ ಮೇಜುಗಳು,
[20] ನಿಯಮದ ಪ್ರಕಾರ ಮಹಾಪರಿಶುದ್ಧ ಸ್ಥಳದ ಮುಂದೆ ಉರಿಯುತ್ತಿರುವುದಕ್ಕಾಗಿ ಪುಷ್ಟಾಲಂಕಾರವುಳ್ಳ ಬಂಗಾರದ ದೀಪ ಸ್ತಂಭಗಳು,
[21] ಅವುಗಳ ದೀಪಗಳು, ಹೂವುಗಳು, ಹಣತೆಗಳು, ಇಕ್ಕಳಗಳು ಇವು ಸ್ವಚ್ಛ ಬಂಗಾರದಿಂದ ಮಾಡಿದವುಗಳಾಗಿದ್ದವು.
[22] ಹಾಗೆಯೇ ಕತ್ತರಿಗಳನ್ನೂ, ಬೋಗುಣಿಗಳನ್ನೂ ಧೂಪಾರತಿಗಳನ್ನೂ, ಅಗ್ಗಿಷ್ಟಿಕೆಗಳನ್ನು, ದೇವಾಲಯದ ಮಹಾಪರಿಶುದ್ಧ ಸ್ಥಳಕ್ಕಾಗಿರುವ ಬಂಗಾರದ ಕದಗಳು, ಪರಿಶುದ್ಧ ಸ್ಥಳದ ಬಂಗಾರದ ಕದಗಳು ಇವುಗಳೇ.