Skip to content
Opens in a new window
Listen to this chapter • 3:26

[1] ಆಸನ ನಂತರ ಅವನ ಮಗನಾದ ಯೆಹೋಷಾಫಾಟನು ಅರಸನಾದನು. ಅವನು ಇಸ್ರಾಯೇಲರೆದುರು ಪ್ರಬಲನಾಗಿದ್ದನು.

[2] ಅವನು ಯೆಹೂದದ ಕೋಟೆಕೊತ್ತಲುಗಳುಳ್ಳ ಎಲ್ಲಾ ಪಟ್ಟಣಗಳಲ್ಲೂ ಸೈನ್ಯವನ್ನಿರಿಸಿದನು. ಯೆಹೂದ ದೇಶದಲ್ಲಿಯೂ ತನ್ನ ತಂದೆಯಾದ ಆಸನು ವಶಪಡಿಸಿಕೊಂಡಿದ್ದ ಎಫ್ರಾಯೀಮ್ ರ ಪಟ್ಟಣಗಳಲ್ಲಿಯೂ ಅಧಿಕಾರಿಗಳನ್ನು ನೇಮಿಸಿದನು.

[3] ಇವನು ಬಾಳ್ ದೇವರುಗಳನ್ನು ಅವಲಂಬಿಸದೆ, ತನ್ನ ಪೂರ್ವಿಕನಾದ ದಾವೀದನ ಮೊದಲಿನ ನಡತೆಯ ಪ್ರಕಾರ ನಡೆಯುತ್ತಿದ್ದದರಿಂದ ಯೆಹೋವನು ಯೆಹೋಷಾಫಾಟನ ಸಂಗಡ ಇದ್ದನು.

[4] ಇವನು ಇಸ್ರಾಯೇಲರಂತೆ ನಡೆಯದೆ, ತನ್ನ ತಂದೆಯ ದೇವರ ಭಕ್ತನಾಗಿ ಆತನ ಆಜ್ಞೆಗಳನ್ನು ಅನುಸರಿಸಿದನು.

[5] ಆದುದರಿಂದ ಯೆಹೋವನು ಇವನ ರಾಜ್ಯಾಧಿಕಾರವನ್ನು ಸ್ಥಿರಪಡಿಸಿದನು; ಯೆಹೂದ್ಯರೆಲ್ಲರೂ ಯೆಹೋಷಾಫಾಟನಿಗೆ ಕಾಣಿಕೆ ಕೊಡುತ್ತಿದ್ದುದರಿಂದ ಇವನ ಧನ ಘನತೆಗಳು ಹೆಚ್ಚಾದವು.

[6] ಇವನು ಯೆಹೋವನ ಮಾರ್ಗದಲ್ಲಿ ನಡೆದು ಧೈರ್ಯಗೊಂಡನು; ಇದಲ್ಲದೆ ಯೆಹೂದ ದೇಶದಲ್ಲಿದ್ದ ಪೂಜಾಸ್ಥಳಗಳನ್ನೂ, ಅಶೇರ ವಿಗ್ರಹ ಸ್ತಂಭಗಳನ್ನೂ ತೆಗೆದು ಹಾಕಿಸಿದನು.

[7] ಇವನು ತನ್ನ ಆಳ್ವಿಕೆಯ ಮೂರನೆಯ ವರ್ಷದಲ್ಲಿ ತನ್ನ ಅಧಿಕಾರಿಗಳಾದ ಬೆನ್ಹೈಲ್, ಓಬದ್ಯ, ಜೆಕರ್ಯ ನೆತನೇಲ್, ಮಿಕಾಯ ಎಂಬ ಯಾಜಕರನ್ನೂ ಧರ್ಮೋಪದೇಶ ಮಾಡುವುದಕ್ಕೋಸ್ಕರ ಯೆಹೂದ ದೇಶದ ಪಟ್ಟಣಗಳಿಗೆ ಕಳುಹಿಸಿದನು.

[8] ಇವರ ಜೊತೆಯಲ್ಲಿ ಶೆಮಾಯ, ನೆತನ್ಯ, ಜೆಬದ್ಯ, ಅಸಾಹೇಲ್, ಶೆಮೀರಾಮೋತ್, ಯೆಹೋನಾತಾನ್, ಅದೋನೀಯ, ಟೋಬೀಯ, ಟೋಬದೋನೀಯ ಎಂಬ ಲೇವಿಯರು ಇದ್ದರು. ಎಲೀಷಾಮಾ, ಯೆಹೋರಾಮ್,

[9] ಇವರು ಯೆಹೋವನ ಧರ್ಮಶಾಸ್ತ್ರವನ್ನು ತೆಗೆದುಕೊಂಡು ಯೆಹೂದ ದೇಶದ ಪಟ್ಟಣದಲ್ಲೆಲ್ಲಾ ಸಂಚಾರ ಮಾಡಿ ಜನರಿಗೆ ಬೋಧಿಸಿದರು.

[10] ಯೆಹೂದದ ಸುತ್ತಣ ದೇಶಗಳ ರಾಜ್ಯಗಳವರೆಗೆ ಯೆಹೋವನ ಭಯವಿದ್ದುದರಿಂದ ಅವರು ಯೆಹೋಷಾಫಾಟನೊಡನೆ ಯುದ್ಧಕ್ಕೆ ಬರಲಿಲ್ಲ.

[11] ಫಿಲಿಷ್ಟಿಯರಲ್ಲಿ ಕೆಲವರು ಯೆಹೋಷಾಫಾಟನಿಗೆ ಕಾಣಿಕೆಯನ್ನೂ, ಕಪ್ಪವನ್ನಾಗಿ ಬೆಳ್ಳಿಯನ್ನೂ ತಂದುಕೊಡುತ್ತಿದ್ದರು. ಅರಬಿಯರು ತಮ್ಮ ಪಶುಪ್ರಾಣಿಗಳ ಹಿಂಡುಗಳಿಂದ ಏಳು ಸಾವಿರದ ಏಳು ನೂರು ಟಗರುಗಳನ್ನೂ, ಏಳು ಸಾವಿರದ ಏಳು ನೂರು ಆಡುಗಳನ್ನೂ ಕೊಡುತ್ತಿದ್ದರು.

[12] ಹೀಗೆ ಯೆಹೋಷಾಫಾಟನು ಅತ್ಯಧಿಕವಾಗಿ ಅಭಿವೃದ್ಧಿಹೊಂದಿ ಯೆಹೂದ ದೇಶದಲ್ಲಿ ಕೋಟೆಗಳನ್ನೂ ಮತ್ತು ಉಗ್ರಾಣದ ಪಟ್ಟಣಗಳನ್ನೂ ಕಟ್ಟಿಸಿದನು.

[13] ಯೆಹೂದದ ಪಟ್ಟಣಗಳಲ್ಲಿ ದವಸಧಾನ್ಯಗಳ ದೊಡ್ಡ ಮಳಿಗೆಗಳಿದ್ದವು. ಯೆರೂಸಲೇಮಿನಲ್ಲಿ ಯುದ್ಧವೀರರಾದ ಭಟರೂ ಇದ್ದರು.

[14] ಪೂರ್ವಿಕರ ಗೋತ್ರಗಳ ಪ್ರಕಾರ ಲೆಕ್ಕಿಸಲ್ಪಟ್ಟ ಗೋತ್ರ ಪ್ರಧಾನರು ಯಾರೆಂದರೆ: ಯೆಹೂದ್ಯರಲ್ಲಿ ಮೂರು ಲಕ್ಷ ಮಂದಿ ಯುದ್ಧವೀರರ ಅಧಿಪತಿಯಾದ ಅದ್ನ;

[15] ಇವನ ತರುವಾಯ ಎರಡು ಲಕ್ಷದ ಎಂಭತ್ತು ಸಾವಿರ ಮಂದಿ ಯುದ್ಧವೀರರ ಅಧಿಪತಿಯಾದ ಯೆಹೋಹಾನಾನ್;

[16] ತರುವಾಯ ಎರಡು ಲಕ್ಷ ಮಂದಿ ಯುದ್ಧವೀರರೊಡನೆ ಸ್ವಇಚ್ಛೆಯಿಂದ ತನ್ನನ್ನೇ ಯೆಹೋವನಿಗೆ ಪ್ರತಿಷ್ಠಿಸಿಕೊಂಡ ಜಿಕ್ರಿಯನ ಮಗನಾದ ಅಮಸ್ಯ;

[17] ಬೆನ್ಯಾಮೀನ್ಯರಲ್ಲಿ ಬಿಲ್ಲುಗುರಾಣಿಗಳನ್ನು ಹಿಡಿದುಕೊಂಡ ಎರಡು ಲಕ್ಷ ಯುದ್ಧವೀರರ ಅಧಿಪತಿಯಾದ ಎಲ್ಯಾದ;

[18] ಒಂದು ಲಕ್ಷದ ಎಂಭತ್ತುಸಾವಿರ ಮಂದಿ ಯುದ್ಧಸನ್ನದ್ಧ ಸೈನಿಕರ ನಾಯಕನಾದ ಯೆಹೋಜಾಬಾದ್ ಎಂಬುವವರು.

[19] ಅರಸನಿಗೆ ತನ್ನ ಸನ್ನಿಧಿಯಲ್ಲಿ ಸೇವೆ ಮಾಡುತ್ತಿದ್ದ ಈ ಯೋಧರಲ್ಲದೆ, ಕೋಟೆ ಕೊತ್ತಲಗಳುಳ್ಳ ಯೆಹೂದ ಪಟ್ಟಣಗಳಲ್ಲಿಯೂ ಸೈನಿಕರಿದ್ದರು.

2 ಪೂರ್ವಕಾಲವೃತ್ತಾಂತ — Chapters