[1] ರೆಹಬ್ಬಾಮನು ಶೆಕೆಮಿಗೆ ಹೋದನು. ಅಲ್ಲಿ ಎಲ್ಲಾ ಇಸ್ರಾಯೇಲರೂ ಅವನನ್ನು ಅರಸನನ್ನಾಗಿ ಮಾಡುವುದಕ್ಕೆ ಕೂಡಿಬಂದಿದ್ದರು.
[2] ಇದಲ್ಲದೆ ಅರಸನಾದ ಸೊಲೊಮೋನನಿಂದ ತಪ್ಪಿಸಿಕೊಂಡು ಐಗುಪ್ತಕ್ಕೆ ಓಡಿ ಹೋಗಿದ್ದ ನೆಬಾಟನ ಮಗನಾದ ಯಾರೊಬ್ಬಾಮನು ನಡೆದ ಸಂಗತಿಗಳನ್ನು ಕೇಳಿದೊಡನೆ ಐಗುಪ್ತದಿಂದ ಹಿಂತಿರುಗಿ ಬಂದಿದ್ದನು.
[3] ಇಸ್ರಾಯೇಲರು ಅವನನ್ನೂ ತಮ್ಮ ಬಳಿಗೆ ಕರೆಸಿಕೊಂಡರು. ಯಾರೊಬ್ಬಾಮನು ಎಲ್ಲಾ ಇಸ್ರಾಯೇಲರೊಡನೆ ರೆಹಬ್ಬಾಮನ ಬಳಿಗೆ ಹೋಗಿ,
[4] ಅವನಿಗೆ, “ನಿನ್ನ ತಂದೆಯು ನಮ್ಮ ಮೇಲೆ ಹೊರೆಯನ್ನು ಹೊರಿಸಿದ್ದನು; ನಿನ್ನ ತಂದೆಯು ನೇಮಿಸಿದ ಬಿಟ್ಟಿ ಕೆಲಸವನ್ನು ನೀನು ಕಡಿಮೆ ಮಾಡಿ, ನಮ್ಮ ಮೇಲಿರುವ ಭಾರವಾದ ನೊಗವನ್ನು ಹಗುರ ಮಾಡುವುದಾದರೆ, ನಾವು ನಿನ್ನನ್ನು ಸೇವಿಸುವೆವು” ಎಂದು ಹೇಳಿದರು.
[5] ಅದಕ್ಕೆ ರೆಹಬ್ಬಾಮನು, “ನೀವು ಮೂರು ದಿನಗಳ ಬಳಿಕ ಬನ್ನಿರಿ” ಎಂದು ಉತ್ತರಕೊಟ್ಟನು; ಜನರು ಹೊರಟು ಹೋದರು.
[6] ಆಗ ಅರಸನಾದ ರೆಹಬ್ಬಾಮನು ತನ್ನ ತಂದೆಯಾದ ಸೊಲೊಮೋನನ ಕಾಲದಲ್ಲಿ ಮಂತ್ರಿಗಳಾಗಿದ್ದ ಹಿರಿಯರನ್ನು ಕರೆಸಿ ಅವರಿಗೆ, “ಈ ಜನರಿಗೆ ಉತ್ತರ ಕೊಡಲು ನೀವು ಯಾವ ಆಲೋಚನೆಯನ್ನು ನನಗೆ ಹೇಳುವಿರಿ?” ಎಂದನು.
[7] ಅವರು ಅವನಿಗೆ, “ನೀನು ಈ ಜನರಿಗೆ ದಯತೋರಿಸಿ, ಅವರನ್ನು ಮೆಚ್ಚಿಸುವ ಒಳ್ಳೆಯ ಉತ್ತರ ಕೊಟ್ಟರೆ ಅವರು ಯಾವಾಗಲೂ ನಿನಗೆ ಅಧೀನರಾಗಿರುವರು” ಎಂದರು.
[8] ಆದರೆ ಅವನು ಅ ಹಿರಿಯರ ಆಲೋಚನೆಯನ್ನು ನಿರಾಕರಿಸಿ, ತನ್ನ ಸಂಗಡವೇ ಬೆಳೆದು ತನಗೆ ಮಂತ್ರಿಗಳಾದ ಯೌವನಸ್ಥರನ್ನು ಕರೆಯಿಸಿದನು.
[9] “ನನ್ನ ತಂದೆಯು ಹೇರಿದ ನೊಗವನ್ನು ಹಗುರ ಮಾಡಬೇಕೆಂದು ಬೇಡಿಕೊಳ್ಳುವ ಈ ಜನರಿಗೆ ಯಾವ ಉತ್ತರವನ್ನು ಕೊಡಬೇಕು? ಈ ವಿಷಯದಲ್ಲಿ ನಿಮ್ಮ ಆಲೋಚನೆ ಏನು?” ಎಂದು ಕೇಳಿದನು.
[10] ಅವರು ಅವನಿಗೆ, “ನಿನ್ನ ತಂದೆಯು ನಮ್ಮ ಮೇಲೆ ಹೇರಿರುವ ಭಾರವಾದ ನೊಗವನ್ನು ಹಗುರ ಮಾಡು ಎಂಬುದಾಗಿ ನಿನ್ನನ್ನು ಬೇಡಿಕೊಂಡಿರುವ ಈ ಜನರಿಗೆ ನೀನು, ‘ನನ್ನ ತಂದೆಯ ನಡುವಿಗಿಂತ ನನ್ನ ಕಿರುಬೆರಳು ದಪ್ಪವಾಗಿದೆ.
[11] ನನ್ನ ತಂದೆಯು ನಿಮ್ಮ ಮೇಲೆ ಭಾರವಾದ ನೊಗವನ್ನು ಹೇರಿರುವುದು ನಿಜ; ಆದರೆ ನಾನು ಅದಕ್ಕೆ ಇನ್ನೂ ಹೆಚ್ಚಿನ ಭಾರವನ್ನು ಕೂಡಿಸುತ್ತೇನೆ; ಅವನು ನಿಮ್ಮನ್ನು ಬಾರುಕೋಲುಗಳಿಂದ ಹೊಡೆದದ್ದು ನಿಜ; ನಾನಾದರೋ ನಿಮ್ಮನ್ನು ಮುಳ್ಳುಕೊರಡೆಗಳಿಂದ ದಂಡಿಸುವೆನು’ ಎಂಬುದಾಗಿ ಹೇಳಬೇಕು” ಎಂದು ಉತ್ತರಕೊಟ್ಟರು.
[12] ಯಾರೊಬ್ಬಾಮನೂ ಮತ್ತು ಜನರೆಲ್ಲರೂ ಅರಸನಾದ ರೆಹಬ್ಬಾಮನ ಅಪ್ಪಣೆಯಂತೆ ಮೂರನೆಯ ದಿನ ಹಿಂತಿರುಗಿ ಅವನ ಬಳಿಗೆ ಬಂದರು.
[13] ಅರಸನಾದ ರೆಹಬ್ಬಾಮನು ಅವರಿಗೆ ಕಠಿಣವಾದ ಉತ್ತರವನ್ನು ಕೊಟ್ಟನು. ಅವನು ಹಿರಿಯರ ಆಲೋಚನೆಯನ್ನು ನಿರಾಕರಿಸಿದನು.
[14] ಯೌವನಸ್ಥರ ಆಲೋಚನೆಗನುಸಾರವಾಗಿ ಜನರಿಗೆ, “ನನ್ನ ತಂದೆಯು ನಿಮ್ಮ ಮೇಲೆ ಭಾರವಾದ ನೊಗವನ್ನೂ ಹೇರಿರುವದು ನಿಜ; ಆದರೆ ನಾನು ಅದಕ್ಕೆ ಇನ್ನೂ ಹೆಚ್ಚಿನ ಭಾರವನ್ನು ಕೂಡಿಸುವೆನು. ಅವನು ನಿಮ್ಮನ್ನು ಬಾರುಕೋಲುಗಳಿಂದ ಹೊಡೆದದ್ದು ನಿಜ; ನಾನಾದರೋ ನಿಮ್ಮನ್ನು ಮುಳ್ಳುಕೊರಡೆಗಳಿಂದ ದಂಡಿಸುವೆನು” ಎಂದು ನುಡಿದನು.
[15] ಅರಸನು ಜನರ ಮಾತನ್ನು ಕೇಳದೆ ಹೋದದ್ದು ದೈವಯೋಗದಿಂದಲೇ. ಈ ಪ್ರಕಾರ ಯೆಹೋವನು ಶೀಲೋವಿನವನಾದ ಅಹೀಯನ ಮುಖಾಂತರವಾಗಿ ನೆಬಾಟನ ಮಗನಾದ ಯಾರೊಬ್ಬಾಮನಿಗೆ ಹೇಳಿದ ಮಾತು ನೆರವೇರಿತು.
[16] ಅರಸನು ತಮ್ಮ ಮಾತನ್ನು ಲಕ್ಷಿಸಲಿಲ್ಲ ಎಂದು ತಿಳಿದು; ಇಸ್ರಾಯೇಲರೆಲ್ಲರು ಅವನಿಗೆ, “ದಾವೀದನಿಗೂ ನಮಗೂ ಇನ್ನು ಮೇಲೆ ಏನೂ ಸಂಬಂಧವಿಲ್ಲ. ಇಷಯನ ಮಗನಿಗೂ ನಮಗೂ ಯಾವ ಬಾಧ್ಯತೆಯೂ ಇಲ್ಲ. ಇಸ್ರಾಯೇಲರೇ, ನಿಮ್ಮ ನಿಮ್ಮ ಸ್ವತ್ತುಗಳಿಗೆ ಹೋಗಿರಿ; ದಾವೀದನ ಕಡೆಯವರೇ, ನಿಮ್ಮ ಕುಲವನ್ನು ನೀವೇ ನೋಡಿಕೊಳ್ಳಿರಿ” ಎಂದು ಹೇಳಿ ತಮ್ಮ ತಮ್ಮ ಗುಡಾರಗಳಿಗೆ ಹಿಂತಿರುಗಿದರು.
[17] ಯೆಹೂದ ಪಟ್ಟಣದಲ್ಲಿದ್ದ ಇಸ್ರಾಯೇಲರಾದರೋ ಅರಸನಾದ ರೆಹಬ್ಬಾಮನ ಅಧೀನದಲ್ಲಿದ್ದರು.
[18] ರೆಹಬ್ಬಾಮನು ಬಿಟ್ಟೀಕೆಲಸದವರ ಮೇಲ್ವಿಚಾರಕನಾದ ಹದೋರಾಮನನ್ನು ಇಸ್ರಾಯೇಲರ ಬಳಿಗೆ ಕಳುಹಿಸಿದಾಗ, ಅವರು ಅವನನ್ನು ಕಲ್ಲೆಸೆದು ಕೊಂದರು. ಆಗ ಅರಸನಾದ ರೆಹಬ್ಬಾಮನು ಬೇಗನೆ ರಥವನ್ನೇರಿ ಯೆರೂಸಲೇಮಿಗೆ ಓಡಿ ಹೋದನು.
[19] ಇಸ್ರಾಯೇಲರು ಅಂದಿನಿಂದ ಇಂದಿನವರೆಗೂ ದಾವೀದನ ಕುಟುಂಬದವರೊಡನೆ ಸಮಾಧಾನವಾಗಲೇ ಇಲ್ಲ.