[1] ದಾವೀದನ ಮಗನಾದ ಸೊಲೊಮೋನನು ತನ್ನ ರಾಜ್ಯದಲ್ಲಿ ಸಂಪೂರ್ಣ ಪ್ರಭುತ್ವ ಹೊಂದಿದನು. ಅವನ ದೇವರಾದ ಯೆಹೋವನು ಅವನ ಸಂಗಡ ಇದ್ದು ಅವನನ್ನು ಬಲಾಢ್ಯನಾಗುವಂತೆ ಆಶೀರ್ವದಿಸಿ ನಡೆಸಿದನು.
[2] ಆಗ ಸೊಲೊಮೋನನು ಸಮಸ್ತ ಇಸ್ರಾಯೇಲರ ಶತಾಧಿಪತಿಗಳೊಂದಿಗೂ, ಸಹಸ್ರಾಧಿಪತಿಗಳೊಂದಿಗೂ, ನ್ಯಾಯಾಧಿಪತಿಗಳೊಂದಿಗೂ, ಗೋತ್ರ ಪ್ರಧಾನರಾದವರೊಂದಿಗೂ, ಇಸ್ರಾಯೇಲ್ ಪ್ರಭುಗಳೊಂದಿಗೂ ಮಾತನಾಡಿದನು.
[3] ಅವನ ಸಂಗಡ ಇದ್ದ ಸರ್ವಸಮೂಹದೊಡನೆ ಗಿಬ್ಯೋನಿನಲ್ಲಿರುವ ಪೂಜಾಸ್ಥಳಕ್ಕೆ ಹೋದನು. ಏಕೆಂದರೆ ಯೆಹೋವನ ಸೇವಕನಾದ ಮೋಶೆಯು ಅರಣ್ಯದಲ್ಲಿ ಮಾಡಿದ ದೇವದರ್ಶನದ ಗುಡಾರವು ಅಲ್ಲಿತ್ತು.
[4] ದಾವೀದನು ದೇವರ ಮಂಜೂಷವನ್ನು ಕಿರ್ಯತ್ಯಾರೀಮಿನಿಂದ ತಾನು ಅದನ್ನಿರಿಸಲು ಸಿದ್ಧ ಮಾಡಿದ ಸ್ಥಳಕ್ಕೆ ತೆಗೆದುಕೊಂಡು ಬಂದಿದ್ದನು. ಅವನು ಯೆರೂಸಲೇಮಿನಲ್ಲಿ ಅದಕ್ಕಾಗಿ ಗುಡಾರವನ್ನು ಮಾಡಿಸಿದ್ದನು.
[5] ಇದಲ್ಲದೆ ಹೂರನ ಮಗನಾದ ಊರಿಯ, ಈತನ ಮಗನಾದ ಬೆಚಲೇಲನು ಮಾಡಿದ ತಾಮ್ರದ ಯಜ್ಞವೇದಿಯು ಅಲ್ಲೇ ಯೆಹೋವನ ಗುಡಾರದ ಮುಂದಿತ್ತು. ಸೊಲೊಮೋನನೂ ಆ ಸಮೂಹದವರೂ ಅಲ್ಲಿಗೆ ಹೋದರು.
[6] ಆಗ ಸೊಲೊಮೋನನು ದೇವದರ್ಶನ ಗುಡಾರದ ಬಳಿಯಲ್ಲಿ ಯೆಹೋವನ ಮುಂದೆ ಇರುವ ತಾಮ್ರದ ಯಜ್ಞವೇದಿಯ ಬಳಿಗೆ ಹೋಗಿ ಅದರ ಮೇಲೆ ಸಾವಿರ ಸರ್ವಾಂಗಹೋಮಗಳನ್ನು ಸಮರ್ಪಿಸಿದನು.
[7] ಅದೇ ರಾತ್ರಿಯಲ್ಲಿ ದೇವರು ಸೊಲೊಮೋನನಿಗೆ ಕಾಣಿಸಿಕೊಂಡು ಅವನಿಗೆ, “ನಿನಗೆ, ಯಾವ ವರ ಬೇಕು ಕೇಳಿಕೋ” ಎಂದು ಹೇಳಲು
[8] ಸೊಲೊಮೋನನು ದೇವರಿಗೆ, “ನೀನು ನನ್ನ ತಂದೆಯಾದ ದಾವೀದನಿಗೆ ಮಹಾ ದಯೆಯನ್ನು ತೋರಿಸಿ ಅವನಿಗೆ ಬದಲಾಗಿ ನಾನು ಅರಸನಾಗುವಂತೆ ಮಾಡಿದೆ.
[9] ಈಗ ಯೆಹೋವನಾದ ದೇವರೇ, ನೀನು ನನ್ನ ತಂದೆಯಾದ ದಾವೀದನಿಗೆ ಮಾಡಿದ ವಾಗ್ದಾನವು ನೆರವೇರಲಿ. ಏಕೆಂದರೆ ಭೂಮಿಯ ಧೂಳಿನಷ್ಟು ಅಸಂಖ್ಯವಾದ ಜನಾಂಗದವರಿಗೆ ನನ್ನನ್ನು ಅರಸನನ್ನಾಗಿ ನೇಮಿಸಿದ್ದೀ.
[10] ನಿನ್ನ ಪ್ರಜೆಗಳಾದ ಈ ಮಹಾ ಜನಾಂಗವನ್ನು ಮುನ್ನಡೆಸುವುದಕ್ಕೂ, ಆಳುವುದಕ್ಕೂ, ನ್ಯಾಯತೀರಿಸುವುದಕ್ಕೂ ಜ್ಞಾನ ವಿವೇಕಗಳನ್ನು ಅನುಗ್ರಹಿಸು” ಎಂದು ಕೇಳಿದನು.
[11] ಆಗ ದೇವರು ಸೊಲೊಮೋನನಿಗೆ, “ಇದು ನಿನ್ನ ಆಕಾಂಕ್ಷೆಯಾಗಿ ಇದ್ದುದರಿಂದಲೂ ಘನವನ್ನೂ, ಧನವನ್ನೂ, ಐಶ್ವರ್ಯವನ್ನೂ, ನಿನ್ನ ವೈರಿಗಳ ಪ್ರಾಣವನ್ನಾಗಲಿ, ದೀರ್ಘಾಯುಷ್ಯವನ್ನಾಗಲಿ ಕೇಳದೆ, ನಾನು ಯಾರನ್ನು ಮುನ್ನಡೆಸಲು ನಿನ್ನನ್ನು ಅರಸನನ್ನಾಗಿ ಮಾಡಿದೆನೋ ಆ ನನ್ನ ಜನರಿಗೆ ನ್ಯಾಯ ತೀರಿಸುವ ಹಾಗೆ ಜ್ಞಾನ, ವಿವೇಕಗಳನ್ನು ನೀನು ಕೇಳಿಕೊಂಡದ್ದರಿಂದಲೂ ಜ್ಞಾನವೂ, ವಿವೇಕವೂ ನಿನಗೆ ಕೊಡಲ್ಪಟ್ಟಿವೆ.
[12] ಇದಲ್ಲದೆ ನಿನಗಿಂತ ಮೊದಲು ಇದ್ದ ಅರಸುಗಳಲ್ಲಿ ಯಾರಿಗೂ ಇಲ್ಲದಂಥ, ನಿನ್ನ ತರುವಾಯ ಯಾರಿಗೂ ಇರದಂಥ ಘನ, ಧನ, ಐಶ್ವರ್ಯಗಳನ್ನೂ ಅನುಗ್ರಹಿಸುವೆನು” ಎಂದನು.
[13] ಆನಂತರ ಸೊಲೊಮೋನನು ದೇವದರ್ಶನದ ಗುಡಾರವನ್ನು ಬಿಟ್ಟು, ಗಿಬ್ಯೋನಿನಲ್ಲಿರುವ ಪೂಜಾಸ್ಥಳದಿಂದ ಯೆರೂಸಲೇಮಿಗೆ ಬಂದು, ಇಸ್ರಾಯೇಲ್ ರಾಜ್ಯವನ್ನು ಆಳಿದನು.
[14] ಅರಸನಾದ ಸೊಲೊಮೋನನು ರಥಗಳನ್ನೂ ರಾಹುತರನ್ನೂ ಸಂಗ್ರಹಿಸಿದನು. ಸಾವಿರದ ನಾನೂರು ರಥಗಳೂ ಮತ್ತು ಹನ್ನೆರಡು ಸಾವಿರ ರಾಹುತರೂ ಅವನಿಗೆ ಇದ್ದರು. ಇವರನ್ನು ರಥದ ಪಟ್ಟಣಗಳಲ್ಲಿಯೂ ಕೆಲವರನ್ನು ಯೆರೂಸಲೇಮಿನಲ್ಲಿ ಅರಸನೊಂದಿಗೂ ಇರಿಸಿದನು. ಉಳಿದವುಗಳನ್ನು ರಥಗಳಿಗಾಗಿ ನೇಮಿಸಿದ ಪಟ್ಟಣದಲ್ಲಿ ಇರಿಸಿದನು.
[15] ಅರಸನು ಯೆರೂಸಲೇಮಿನಲ್ಲಿ ಬೆಳ್ಳಿ ಬಂಗಾರವು ಹೇರಳವಾಗಿದ್ದು ಅವು ಕಲ್ಲಿನಂತೆಯೂ, ಹಾಗು ದೇವದಾರು ಮರಗಳು ತಗ್ಗಿನಲ್ಲಿರುವ ಅತ್ತಿಮರಗಳಂತೆ ಹೇರಳವಾಗಿರುವಂತೆ ಮಾಡಿದನು.
[16] ಅರಸನಾದ ಸೊಲೊಮೋನನ ಕುದುರೆಗಳು ಐಗುಪ್ತ್ಯ ದೇಶದವುಗಳಾಗಿದ್ದವು. ಅವನ ವರ್ತಕರು ಅವುಗಳನ್ನು ಹಿಂಡು ಹಿಂಡಾಗಿ ಕೊಂಡುಕೊಂಡು ಬರುತ್ತಿದ್ದರು.
[17] ರಥಕ್ಕೆ ಆರುನೂರು ಬೆಳ್ಳಿ ನಾಣ್ಯಗಳಂತೆ, ಕುದುರೆಗೆ ನೂರೈವತ್ತು ಬೆಳ್ಳಿನಾಣ್ಯಗಳಂತೆ ಕೊಟ್ಟು, ರಥಗಳನ್ನೂ, ಕುದುರೆಗಳನ್ನೂ ಐಗುಪ್ತ್ಯ ದೇಶದಿಂದ ತರಿಸುತ್ತಿದ್ದರು. ಇವುಗಳನ್ನು ಹಿತ್ತಿಯರ ಮತ್ತು ಅರಾಮ್ಯರ ಅರಸರ ಮುಖಾಂತರವೇ ತರಿಸುತ್ತಿದ್ದರು.