Skip to content
Opens in a new window
Listen to this chapter • 3:30

[1] ಸೊಲೊಮೋನನು ಯೆರೂಸಲೇಮಿನಲ್ಲಿ ತನ್ನ ತಂದೆಯಾದ ದಾವೀದನಿಗೆ, ಯೆಹೋವನು ಕಾಣಿಸಿಕೊಂಡ ಸ್ಥಳವಾದ ಮೋರೀಯಾ ಬೆಟ್ಟದ ಮೇಲೆ ಆಲಯವನ್ನು ಕಟ್ಟಿಸುವುದಕ್ಕೆ ಪ್ರಾರಂಭಿಸಿದನು. ಇದು ಮುಂಚೆ ಯೆಬೂಸಿಯನಾದ ಒರ್ನಾನನ ಕಣವಾಗಿದ್ದ ಆ ಸ್ಥಳವನ್ನು ದಾವೀದನು ಇದಕ್ಕೋಸ್ಕರ ಸಿದ್ಧಮಾಡಿದ್ದನು.

[2] ಸೊಲೊಮೋನನು ತನ್ನ ಆಳ್ವಿಕೆಯ ನಾಲ್ಕನೆಯ ವರ್ಷದ ಎರಡನೆಯ ತಿಂಗಳಿನ ಎರಡನೆಯ ದಿನದಲ್ಲಿ ಅದನ್ನು ಕಟ್ಟಿಸುವುದಕ್ಕೆ ಪ್ರಾರಂಭಿಸಿದನು.

[3] ಸೊಲೊಮೋನನು ಕಟ್ಟಿಸಿದ ದೇವಾಲಯದ ಅಸ್ತಿವಾರದ ಉದ್ದವು ಮೊದಲಿದ್ದ ಮೊಳದ ಪ್ರಕಾರ ಅರುವತ್ತು ಮೊಳ ಉದ್ದವೂ, ಇಪ್ಪತ್ತು ಮೊಳ ಅಗಲವು ಆಗಿತ್ತು.

[4] ದೇವಾಲಯದ ಮುಂಭಾಗದಲ್ಲಿದ್ದ ಮಂಟಪದ ಉದ್ದವು ಆಲಯದ ಅಗಲಕ್ಕೆ ಸರಿಯಾಗಿ ಇಪ್ಪತ್ತು ಮೊಳ, ಎತ್ತರವು ಇಪ್ಪತ್ತು ಮೊಳ ಆಗಿತ್ತು. ಸೊಲೊಮೋನನು ಅದರ ಒಳಭಾಗವನ್ನು ಶುದ್ಧ ಬಂಗಾರದ ತಗಡಿನಿಂದ ಹೊದಿಸಿದನು.

[5] ದೊಡ್ಡ ಕೋಣೆಯನ್ನು ತುರಾಯಿ ಮರದ ಹಲಗೆಗಳಿಂದ ಮುಚ್ಚಿ, ಅದನ್ನು ಶುದ್ಧ ಬಂಗಾರದಿಂದ ಹೊದಿಸಿ, ಆದರ ಹಲಗೆಗಳ ಮೇಲೆ ಖರ್ಜೂರದ ಮರಗಳನ್ನೂ ಬಳ್ಳಿಗಳನ್ನೂ ಸರಪಣಿಗಳನ್ನು ಕೆತ್ತಿಸಿದನು.

[6] ಅಮೂಲ್ಯವಾದ ರತ್ನದ ಕಲ್ಲುಗಳಿಂದ ಅಲಯವನ್ನು ಅಲಂಕರಿಸಿದನು. ಆದರ ಬಂಗಾರವು ಪರ್ವಯಿಮ್ ದೇಶದ ಬಂಗಾರವಾಗಿತ್ತು.

[7] ಹೀಗೆ ಆಲಯದಲ್ಲಿನ ತೊಲೆಗಳನ್ನೂ, ಹೊಸ್ತಿಲುಗಳನ್ನು, ಗೋಡೆಗಳನ್ನೂ, ಬಾಗಿಲುಗಳನ್ನೂ ಬಂಗಾರದಿಂದ ಹೊದಿಸಿ, ಗೋಡೆಗಳ ಮೇಲೆ ಕೆರೂಬಿಗಳ ಚಿತ್ರಗಳನ್ನು ಕೆತ್ತಿಸಿದನು.

[8] ಇದಲ್ಲದೆ ಅವನು ಮಹಾಪರಿಶುದ್ಧ ಸ್ಥಳವನ್ನು ಕಟ್ಟಿಸಿದನು. ಅದರ ಉದ್ದವು, ಆಲಯದ ಅಗಲಕ್ಕೆ ಸರಿಯಾಗಿ ಇಪ್ಪತ್ತು ಮೊಳ; ಅದರ ಅಗಲವೂ ಇಪ್ಪತ್ತು ಮೊಳವಾಗಿತ್ತು. ಅದನ್ನು ಆರುನೂರು ತಲಾಂತು ಚೊಕ್ಕ ಬಂಗಾರದಿಂದ ಹೊದಿಸಿದನು.

[9] ಬಂಗಾರದ ಮೊಳೆಗಳ ತೂಕ ಐವತ್ತು ತೊಲವಾಗಿತ್ತು. ಮೇಲುಪ್ಪರಿಗೆಗಳನ್ನು ಬಂಗಾರದ ತಗಡಿನಿಂದ ಹೊದಿಸಿದನು.

[10] ಮಹಾಪರಿಶುದ್ಧ ಸ್ಥಳದಲ್ಲಿ ಎರಡು ಕೆರೂಬಿಗಳ ಪ್ರತಿಮೆಗಳನ್ನು ಮಾಡಿಸಿದನು; ಅವುಗಳನ್ನೂ ಬಂಗಾರದ ತಗಡಿನಿಂದ ಹೊದಿಸಿದನು.

[11] ಕೆರೂಬಿಗಳ ರೆಕ್ಕೆಗಳು ಒಟ್ಟು ಇಪ್ಪತ್ತು ಮೊಳ ಉದ್ದವಾಗಿದ್ದವು. ಮೊದಲನೆಯ ಕೆರೂಬಿಯ ಒಂದು ರೆಕ್ಕೆಯು ಐದು ಮೊಳ ಉದ್ದವಾಗಿದ್ದು ಕೋಣೆಯ ಗೋಡೆಯವರೆಗೆ ತಗಲುತ್ತಿತ್ತು; ಐದು ಮೊಳ ಉದ್ದವಾದ ಇನ್ನೊಂದು ರೆಕ್ಕೆಯು ಮತ್ತೊಂದು ಕೆರೂಬಿಯ ರೆಕ್ಕೆಯವರೆಗೆ ತಗಲುತ್ತಿತ್ತು.

[12] ಅದರಂತೆಯೇ ಮತ್ತೊಂದು ಕೆರೂಬಿಯ ರೆಕ್ಕೆಯು ಐದು ಮೊಳ ಉದ್ದವಾಗಿದ್ದು, ಅದು ಕೋಣೆಯ ಗೋಡೆಯವರೆಗೆ ತಗಲುತ್ತಿತ್ತು.; ಇನ್ನೊಂದು ರೆಕ್ಕೆಯು ಐದು ಮೊಳ ಉದ್ದವಾಗಿದ್ದು ಮತ್ತೊಂದು ಕೆರೂಬಿಯ ರೆಕ್ಕೆಯವರೆಗೆ ತಗಲುತ್ತಿತ್ತು.

[13] ಈ ಕೆರೂಬಿಗಳ ರೆಕ್ಕೆಗಳು ಇಪ್ಪತ್ತು ಮೊಳ ಉದ್ದಕ್ಕೆ ಚಾಚಿಕೊಂಡಿದ್ದವು. ಕೆರೂಬಿಗಳು ತಮ್ಮ ಕಾಲುಗಳ ಮೇಲೆ ನಿಂತುಕೊಂಡು, ಪರಿಶುದ್ಧ ಸ್ಥಳದ ಕಡೆಗೆ ಮುಖಮಾಡಿದ್ದವು.

[14] ಸೊಲೊಮೋನನು ಪರದೆಯನ್ನು ನೀಲ, ಧೂಮ್ರ, ರಕ್ತವರ್ಣಗಳುಳ್ಳ ನಯವಾದ ನಾರಿನಿಂದ ಮಾಡಿಸಿದನು. ಅದರಲ್ಲಿ ಕೆರೂಬಿಗಳ ಕಸೂತಿಯನ್ನು ಹಾಕಿಸಿದನು.

[15] ಇದಲ್ಲದೆ ದೇವಾಲಯದ ಮುಂದೆ ಎರಡು ಸ್ತಂಭಗಳನ್ನು ನಿಲ್ಲಿಸಿದನು, ಅವು ಮೂವತ್ತೈದು ಮೊಳ (5.5 ಮೀಟರ್) ಎತ್ತರವಾಗಿದ್ದವು. ಅವುಗಳ ತಲೆಗಳ ಮೇಲಣ ಕುಂಭಗಳು ಐದು ಮೊಳ ಎತ್ತರವಾಗಿದ್ದವು.

[16] ಸೊಲೊಮೋನನು ಗರ್ಭಗೃಹದ ಸರಪಣಿಗಳಂತೆ ಹಾರಗಳನ್ನು ಮಾಡಿಸಿ ಕಂಬಗಳ ಮೇಲಣ ಕುಂಭಗಳಿಗೆ ಸಿಕ್ಕಿಸಿ ಆ ಸರಪಣಿಗಳಲ್ಲಿ ನೂರು ನೂರು ತಾಮ್ರದ ದಾಳಿಂಬೆ ಹಣ್ಣುಗಳನ್ನು ಕೆತ್ತಿಸಿ ಕಟ್ಟಿಸಿದನು.

[17] ಸ್ತಂಭಗಳನ್ನು ದೇವಾಲಯದ ಮುಂಭಾಗದಲ್ಲಿ, ಒಂದನ್ನು ಬಲಗಡೆಗೂ, ಇನ್ನೊಂದನ್ನು ಎಡಗಡೆಗೂ ನಿಲ್ಲಿಸಿದನು. ಬಲಗಡೆಯ ಕಂಬಕ್ಕೆ “ಯಾಕೀನ್” ಎಂದೂ ಎಡಗಡೆಯಿದ್ದ ಕಂಬಕ್ಕೆ “ಬೋವಜ್” ಎಂದೂ ಹೆಸರಿಟ್ಟನು.

2 ಪೂರ್ವಕಾಲವೃತ್ತಾಂತ — Chapters