Skip to content
Opens in a new window
Listen to this chapter • 7:50

[1] ಯೋಷೀಯನು ಅರಸನಾದಾಗ ಅವನು ಎಂಟು ವರ್ಷದವನಾಗಿದ್ದನು. ಅವನು ಯೆರೂಸಲೇಮಿನಲ್ಲಿ ಮೂವತ್ತೊಂದು ವರ್ಷಗಳ ಕಾಲ ಆಳಿದನು.

[2] ಅವನು ಯೆಹೋವನನ್ನು ಬಿಟ್ಟು ಎಡಕ್ಕಾಗಲಿ ಬಲಕ್ಕಾಗಲಿ ತಿರುಗಿಕೊಳ್ಳದೆ ತನ್ನ ಪೂರ್ವಿಕನಾದ ದಾವೀದನ ಮಾರ್ಗದಲ್ಲೇ ಯೆಹೋವನ ಚಿತ್ತಾನುಸಾರವಾಗಿ ನಡೆದನು.

[3] ಅವನು ತನ್ನ ಆಳ್ವಿಕೆಯ ಎಂಟನೆಯ ವರ್ಷದಲ್ಲಿ ಇನ್ನೂ ಯೌವನಸ್ಥನಾಗಿರುವಾಗಲೇ ತನ್ನ ಪೂರ್ವಿಕನಾದ ದಾವೀದನ ದೇವರನ್ನು ಹುಡುಕುವವನಾದನು. ಹನ್ನೆರಡನೆಯ ವರ್ಷ ಯೆಹೂದದಲ್ಲಿಯೂ ಯೆರೂಸಲೇಮಿನಲ್ಲಿ ಇದ್ದ ಪೂಜಾಸ್ಥಳಗಳನ್ನೂ, ಅಶೇರ ಸ್ತಂಭಗಳನ್ನೂ, ಕೆತ್ತಿದ ಮತ್ತು ಎರಕದ ವಿಗ್ರಹಗಳನ್ನೂ ತೆಗೆದುಹಾಕಿ ದೇಶವನ್ನು ಶುದ್ಧಿಗೊಳಿಸಿದನು.

[4] ಇದಲ್ಲದೆ ಅವನು ಬಾಳ್ ದೇವತೆಗಳ ಯಜ್ಞವೇದಿಗಳನ್ನು ತನ್ನೆದುರಿನಲ್ಲಿಯೇ ಕೆಡವಿಸಿ ಅವುಗಳ ಮೇಲಿದ್ದ ಸೂರ್ಯಸ್ತಂಭಗಳನ್ನು ಕಡಿಸಿ, ಕೆತ್ತಿಸಿದ ಅಶೇರ ಸ್ತಂಭ ಮತ್ತು ಎರಕದ ವಿಗ್ರಹಗಳನ್ನು ಒಡೆದುಹಾಕಿಸಿ ಪುಡಿಪುಡಿ ಮಾಡಿಸಿ ಅವುಗಳಿಗೆ ಯಜ್ಞವನ್ನರ್ಪಿಸಿದವರ ಸಮಾಧಿಗಳ ಮೇಲೆ ಆ ಧೂಳನ್ನು ಚೆಲ್ಲಿಸಿದನು.

[5] ಪೂಜಾರಿಗಳ ಎಲುಬುಗಳನ್ನು ಆ ಯಜ್ಞವೇದಿಗಳ ಮೇಲೆ ಸುಡಿಸಿ ಯೆಹೂದ ಮತ್ತು ಯೆರೂಸಲೇಮನ್ನು ಶುದ್ಧಪಡಿಸಿದನು.

[6] ಮನಸ್ಸೆ, ಎಫ್ರಾಯೀಮ್, ಸಿಮೆಯೋನ್, ನಫ್ತಾಲಿ ಪ್ರಾಂತ್ಯಗಳ ಸುತ್ತಣ ಊರುಗಳಲಿಯೂ ಬಯಲುಗಳಲ್ಲಿದ್ದ,

[7] ಯಜ್ಞವೇದಿಗಳನ್ನು ಕೆಡವಿಸಿ ಅಶೇರ ಸ್ತಂಭಗಳನ್ನೂ, ವಿಗ್ರಹಗಳನ್ನೂ ಒಡೆದು ಪುಡಿಪುಡಿ ಮಾಡಿಸಿ ಇಸ್ರಾಯೇಲ್ ದೇಶದಲ್ಲಿದ್ದ ಸೂರ್ಯಸ್ತಂಭಗಳನ್ನು ಕೆಡವಿಹಾಕಿಸಿ ಯೆರೂಸಲೇಮಿಗೆ ಹಿಂದಿರುಗಿದನು.

[8] ಅವನು ತನ್ನ ಆಳ್ವಿಕೆಯ ಹದಿನೆಂಟನೆಯ ವರ್ಷದಲ್ಲಿ ದೇಶವನ್ನೂ, ದೇವಾಲಯವನ್ನೂ ಶುದ್ಧಿಪಡಿಸಿದ ಮೇಲೆ ತನ್ನ ದೇವರಾದ ಯೆಹೋವನ ಆಲಯವನ್ನು ಜೀರ್ಣೋದ್ಧಾರ ಮಾಡಿಸುವುದಕ್ಕಾಗಿ ಅಚಲ್ಯನ ಮಗನಾದ ಶಾಫಾನನನ್ನೂ ಪಟ್ಟಣದ ಅಧಿಕಾರಿಯಾದ ಮಾಸೇಯನನ್ನೂ ಪ್ರಧಾನಮಂತ್ರಿಯಾಗಿದ್ದ ಯೋವಾಹಾಜನ ಮಗನಾದ ಯೋವಾಹನನ್ನೂ ಕಳುಹಿಸಿದನು.

[9] ಇವರು ಮಹಾಯಾಜಕನಾದ ಹಿಲ್ಕೀಯನ ಬಳಿಗೆ ಹೋಗಿ ದೇವಾಲಯಕ್ಕಾಗಿ ಸಂಗ್ರಹವಾದ ಹಣವನ್ನು ಅಂದರೆ ದ್ವಾರಪಾಲಕರಾದ ಲೇವಿಯರು ಮನಸ್ಸೆ, ಎಫ್ರಾಯೀಮ್ ಮುಂತಾದ ಇಸ್ರಾಯೇಲ್ ಕುಲಗಳಲ್ಲಿ ಉಳಿದವರಿಂದಲೂ, ಎಲ್ಲಾ ಯೆಹೂದ ಬೆನ್ಯಾಮೀನ್ಯರಿಂದಲೂ, ಯೆರೂಸಲೇಮಿನವರಿಂದಲೂ ಕೂಡಿಸಿದ್ದ ಹಣವನ್ನು

[10] ಯೆಹೋವನ ದೇವಾಲಯದ ಕೆಲಸಮಾಡಿಸುವವರಿಗೆ ಕೊಡುವುದಕ್ಕಾಗಿ ಅವನಿಗೆ ಒಪ್ಪಿಸಿದರು. ದೇವಾಲಯದ ಕೆಲಸಮಾಡಿಸುತ್ತಿದ್ದವರು ಆ ಹಣವನ್ನು

[11] ಕೆತ್ತಿದ ಕಲ್ಲು, ಜೋಡಿಸತಕ್ಕ ತೊಲೆ ಇವುಗಳನ್ನು ಕೊಂಡುಕೊಳ್ಳುವುದಕ್ಕಾಗಿಯೂ, ಯೆಹೂದ ರಾಜರ ಅಲಕ್ಷ್ಯದಿಂದ ಹಾಳಾಗಿದ್ದ ಕಟ್ಟಡಗಳಿಗೆ ಮಾಳಿಗೆ ಹಾಕುವುದಕ್ಕಾಗಿಯೂ, ದೇವಾಲಯವನ್ನೂ ಜೀರ್ಣೋದ್ಧಾರಮಾಡಿ ಭದ್ರಪಡಿಸುವುದಕ್ಕೆ ಬಡಗಿಗಳಿಗೂ ಶಿಲ್ಪಿಗಳಿಗೂ ಕೊಟ್ಟರು.

[12] ಕೆಲಸಮಾಡುವವರು ನಂಬಿಗಸ್ತರಾಗಿದ್ದರು; ಮೆರಾರಿಯರಲ್ಲಿ ಯಹತ್, ಓಬದ್ಯ ಎಂಬ ಲೇವಿಯರೂ ಕೆಹಾತ್ಯರಲ್ಲಿ ಜೆಕರ್ಯ, ಮೆಷುಲ್ಲಾಮ್ ಎಂಬ ಲೇವಿಯರೂ ಅವರ ಮೇಲ್ವಿಚಾರಕರಾಗಿದ್ದರು.

[13] ಗಾಯನ ನಿಪುಣರಾದ ಲೇವಿಯರೆಲ್ಲರೂ ಹೊರೆಹೊರುವವರ ಮೇಲ್ವಿಚಾರಕರಾಗಿದ್ದು ಎಲ್ಲಾ ವಿಧವಾದ ಕೆಲಸಮಾಡುವವರನ್ನು ನಡೆಸುತ್ತಿದ್ದರು; ಲೇವಿಯರಲ್ಲಿ ಕೆಲವರು ಲೇಖಕರೂ, ಕೆಲವರು ಅಧಿಕಾರಿಗಳೂ, ದ್ವಾರಪಾಲಕರೂ ಲೇವಿಯರೇ ಆಗಿದ್ದರು.

[14] ಯೆಹೋವನ ಆಲಯದಲ್ಲಿ ಸಂಗ್ರಹವಾಗಿದ್ದ ಹಣವನ್ನು ಹೊರಗೆ ತೆಗೆಯುವಾಗ ಮೋಶೆಯ ಮುಖಾಂತರವಾಗಿ ಕೊಡಲ್ಪಟ್ಟ ಯೆಹೋವನ ಧರ್ಮೋಪದೇಶ ಗ್ರಂಥವು ಯಾಜಕನಾದ ಹಿಲ್ಕೀಯನಿಗೆ ಸಿಕ್ಕಿತು.

[15] ಹಿಲ್ಕೀಯನು ಲೇಖಕನಾದ ಶಾಫಾನನಿಗೆ, “ಯೆಹೋವನ ಆಲಯದಲ್ಲಿ ನನಗೆ ಧರ್ಮೋಪದೇಶ ಗ್ರಂಥವು ಸಿಕ್ಕಿರುತ್ತದೆ” ಎಂದು ಹೇಳಿ ಅದನ್ನು ಅವನ ಕೈಯಲ್ಲಿ ಕೊಟ್ಟನು.

[16] ಶಾಫಾನನು ಆ ಗ್ರಂಥವನ್ನು ಅರಸನ ಬಳಿಗೆ ತೆಗೆದುಕೊಂಡು ಹೋಗಿ, “ನೀನು ಆಜ್ಞಾಪಿಸಿದ್ದೆಲ್ಲವನ್ನೂ ನಿನ್ನ ಸೇವಕರು ಮಾಡುತ್ತಿದ್ದಾರೆ.

[17] ಯೆಹೋವನ ದೇವಾಲಯದಲ್ಲಿ ಸಂಗ್ರಹವಾದ ಹಣವನ್ನು ತೆಗೆದು ಕೆಲಸ ಮಾಡಿಸುವವರಿಗೂ, ಮಾಡುವವರಿಗೂ ಒಪ್ಪಿಸಿದರು” ಎಂದು ತಿಳಿಸಿದನು.

[18] ಇದಲ್ಲದೆ, ಲೇಖಕನಾದ ಶಾಫಾನನು ಅರಸನಿಗೆ, “ಯಾಜಕನಾದ ಹಿಲ್ಕೀಯನು ನನಗೊಂದು ಗ್ರಂಥವನ್ನು ಕೊಟ್ಟಿದ್ದಾನೆ” ಎಂದು ಹೇಳಿ ಅವನ ಮುಂದೆ ಅದನ್ನು ಓದಿದನು.

[19] ಅರಸನು ಧರ್ಮಶಾಸ್ತ್ರದ ವಾಕ್ಯಗಳನ್ನು ಕೇಳಿದಾಗ ಬಟ್ಟೆಗಳನ್ನು ಹರಿದುಕೊಂಡನು.

[20] ಅರಸನು ಹಿಲ್ಕೀಯ, ಶಾಫಾನನ ಮಗನಾದ ಅಹೀಕಾಮ್, ಮೀಕನ ಮಗನಾದ ಅಬ್ದೋನ್, ಲೇಖಕನಾದ ಶಾಫಾನ್, ಅರಸನ ಸಹಕಾರಿಯಾದ ಅಸಾಯ ಎಂಬುವವರಿಗೆ ಅಜ್ಞಾಪಿಸಿದೇನೆಂದರೆ,

[21] “ನಮ್ಮ ಪೂರ್ವಿಕರು ಈ ಗ್ರಂಥದಲ್ಲಿ ಬರೆದಿರುವ ಯೆಹೋವನ ಆಜ್ಞೆಗಳನ್ನೆಲ್ಲಾ ಕೈಕೊಳ್ಳದೆ ಹೋದುದರಿಂದಲೇ ಯೆಹೋವನು ತನ್ನ ಮಹಾರೌದ್ರವನ್ನು ನಮ್ಮ ಮೇಲೆ ಸುರಿದಿದ್ದಾನೆ; ಆದುದರಿಂದ ನೀವು ನನಗೋಸ್ಕರವೂ ಹಾಗೂ ಇಸ್ರಾಯೇಲ್ಯರಲ್ಲಿ, ಯೆಹೂದ್ಯರಲ್ಲಿ ಉಳಿದಿರುವವರಿಗೋಸ್ಕರವೂ ಯೆಹೋವನ ಬಳಿಗೆ ಹೋಗಿ ನಮಗೆ ಸಿಕ್ಕಿರುವ ಈ ಗ್ರಂಥದ ವಾಕ್ಯಗಳ ಅರ್ಥವನ್ನು ವಿವರವಾಗಿ ತಿಳಿದು ಬರಲು” ಆಜ್ಞಾಪಿಸಿದನು.

[22] ಆಗ ಹಿಲ್ಕೀಯನೂ ಅರಸನ ಜನರೂ ಹುಲ್ದ ಎಂಬ ಪ್ರವಾದಿನಿಯ ಬಳಿಗೆ ಹೋಗಿ, ಆಕೆಯ ಹತ್ತಿರ ವಿಚಾರಿಸಿದರು. ಹಸ್ರನ ಮೊಮ್ಮಗನೂ ತೊಕ್ಹತನ ಮಗನೂ ರಾಜವಸ್ತ್ರಾಗಾರದ ಅಧಿಪತಿಯೂ ಆಗಿದ್ದ ಶಲ್ಲೂಮನು ಆಕೆಯ ಗಂಡನು. ಆಕೆಯು ಯೆರೂಸಲೇಮಿನ ಎರಡನೆಯ ಕೇರಿಯಲ್ಲಿ ವಾಸವಾಗಿದ್ದಳು.

[23] ಹುಲ್ದಳು ಅವರಿಗೆ, ನಿಮ್ಮನ್ನು ಕಳುಹಿಸಿದವನಿಗೆ ಇಸ್ರಾಯೇಲ್ ದೇವರಾದ ಯೆಹೋವನ ಮಾತುಗಳನ್ನು ತಿಳಿಸಿರಿ,

[24] ಯೆಹೋವನು ಹೇಳಿದ್ದೇನೆಂದರೆ, “ಈ ದೇಶದ ಮೇಲೆಯೂ, ಜನರ ಮೇಲೆಯೂ ಯೆಹೂದದ ಅರಸನ ಮುಂದೆ ಪಾರಾಯಣವಾದ ಆ ಗ್ರಂಥದಲ್ಲಿ ಬರೆದಿರುವ ಎಲ್ಲಾ ಶಾಪಗಳನ್ನು ಬರಮಾಡುವೆನು;

[25] ಅವರು ನನ್ನನ್ನು ಬಿಟ್ಟು ಅನ್ಯ ದೇವತೆಗಳಿಗೆ ಧೂಪಹಾಕಿ ತಮ್ಮ ದುಷ್ಕೃತ್ಯಗಳಿಂದ ನನ್ನನ್ನು ರೇಗಿಸಿದ್ದರಿಂದ ಈ ದೇಶದ ಮೇಲೆ ಉರಿಯುತ್ತಿರುವ ನನ್ನ ಕೋಪಾಗ್ನಿಯು ಆರಿಹೋಗುವುದಿಲ್ಲ” ಎನ್ನುತ್ತಾನೆ.

[26] ತಾನು ಕೇಳಿದ ವಾಕ್ಯಗಳ ವಿಷಯವಾಗಿ, ಇಸ್ರಾಯೇಲ್ ದೇವರಾದ ಯೆಹೋವನ ಬಳಿಯಲ್ಲಿ ವಿಚಾರಿಸುವುದಕ್ಕೆ ನಿಮ್ಮನ್ನು ಕಳುಹಿಸಿದ ಯೆಹೂದದ ಅರಸನಿಗೆ ನೀವು ತಿಳಿಸಬೇಕಾದ ಮಾತೇನೆಂದರೆ,

[27] “ಇಸ್ರಾಯೇಲಿನ ದೇವರಾದ ಯೆಹೋವನು ಇಂತೆನ್ನುತ್ತಾನೆ; ಈ ದೇಶದ ಮತ್ತು ಅದರ ನಿವಾಸಿಗಳ ವಿಷಯ ನಾನು ಹೇಳಿದ ಮಾತುಗಳನ್ನು ಕೇಳಿದಾಗ ನೀನು ದುಃಖಪಟ್ಟು ದೇವರಾದ ನನ್ನ ಮುಂದೆ ತಗ್ಗಿಸಿಕೊಂಡಿದ್ದರಿಂದಲೂ, ದೀನಮನಸ್ಸಿನಿಂದ ಬಟ್ಟೆಗಳನ್ನು ಹರಿದುಕೊಂಡು ಕಣ್ಣೀರು ಸುರಿಸಿದ್ದರಿಂದಲೂ ನಿನ್ನನ್ನು ಲಕ್ಷಿಸಿದೆನು.

[28] ನಾನು ಈ ದೇಶದ ಮೇಲೆಯೂ, ಅದರ ನಿವಾಸಿಗಳ ಮೇಲೆಯೂ ಬರಮಾಡುವ ಶಿಕ್ಷೆಗಳಲ್ಲಿ ನೀನು ಒಂದನ್ನೂ ನೋಡದೆ ಸಮಾಧಾನದಿಂದ ಮರಣಹೊಂದಿ ಸಮಾಧಿ ಸೇರುವಂತೆ ಅನುಗ್ರಹಿಸುವೆನು ಎಂಬುದಾಗಿ ತಿಳಿಸಿದೆ ಎಂದು ಅರಸನಿಗೆ ತಿಳಿಸಿರಿ” ಎಂದು ಹೇಳಿದಳು.

[29] ಅನಂತರ ಅರಸನು ದೂತರ ಮುಖಾಂತರ ಯೆರೂಸಲೇಮಿನ ಮತ್ತು ಯೆಹೂದದ ಎಲ್ಲಾ ಹಿರಿಯರನ್ನು ಒಟ್ಟಾಗಿ ಸೇರಿಸಿದನು.

[30] ಅರಸನು ಯೆರೂಸಲೇಮಿನವರನ್ನೂ, ಬೇರೆ ಎಲ್ಲಾ ಯೆಹೂದ್ಯರನ್ನೂ, ಯಾಜಕರನ್ನೂ, ಲೇವಿಯರನ್ನೂ ಕರೆದುಕೊಂಡು ಯೆಹೋವನ ಆಲಯಕ್ಕೆ ಹೋದನು. ದೊಡ್ಡವರು ಮೊದಲುಗೊಂಡು ಚಿಕ್ಕವರವರೆಗೂ ಎಲ್ಲರೂ ಅವನನ್ನು ಹಿಂಬಾಲಿಸಿದರು. ಅಲ್ಲಿ ಅವನು ಎಲ್ಲರಿಗೂ ಕೇಳಿಸುವಂತೆ ಯೆಹೋವನ ಆಲಯದಲ್ಲಿ ಸಿಕ್ಕಿದ ಒಡಂಬಡಿಕೆಯ ಗ್ರಂಥವನ್ನು ಸಂಪೂರ್ಣವಾಗಿ ಓದಿಸಿದನು.

[31] ಅರಸನು ತನ್ನ ಸ್ಥಳದಲ್ಲಿ ನಿಂತು, ತಾನು ಯೆಹೋವನ ಮಾರ್ಗದಲ್ಲಿ ನಡೆಯುವುದಾಗಿಯೂ ಆತನ ಆಜ್ಞಾನಿಯಮ ವಿಧಿಗಳನ್ನು ಪೂರ್ಣಮನಸ್ಸಿನಿಂದಲೂ, ಪೂರ್ಣಪ್ರಾಣದಿಂದಲೂ, ಕೈಕೊಳ್ಳುವುದಾಗಿಯೂ ಮತ್ತು ನಿಬಂಧನ ಗ್ರಂಥದಲ್ಲಿ ಬರೆದಿರುವ ಎಲ್ಲಾ ವಾಕ್ಯಗಳನ್ನು ನೆರವೇರಿಸುವುದಾಗಿಯೂ ಯೆಹೋವನಿಗೆ ಪ್ರಮಾಣಮಾಡಿದನು.

[32] ಆಮೇಲೆ ಎಲ್ಲಾ ಯೆರೂಸಲೇಮಿನವರಿಂದಲೂ, ಬೆನ್ಯಾಮೀನ್ಯರಿಂದಲೂ ಪ್ರಮಾಣಮಾಡಿಸಿದನು. ಯೆರೂಸಲೇಮಿನವರು ಏಕದೇವರಾದ ತಮ್ಮ ಪೂರ್ವಿಕರ ದೇವರ ನಿಬಂಧನೆಯನ್ನು ಕೈಕೊಳ್ಳುವವರಾದರು.

[33] ಯೋಷೀಯನು ಇಸ್ರಾಯೇಲರಿಗೆ ಸೇರಿದ ಎಲ್ಲಾ ಪ್ರಾಂತ್ಯಗಳೊಳಗಿನ ಅಸಹ್ಯ ಮೂರ್ತಿಗಳನ್ನೆಲ್ಲಾ ತೆಗೆದುಹಾಕಿಸಿ, ಇಸ್ರಾಯೇಲರಲ್ಲಿ ಉಳಿದಿರುವವರು ತಮ್ಮ ದೇವರಾದ ಯೆಹೋವನನ್ನೇ ಆರಾಧಿಸುವಂತೆ ಮಾಡಿದನು. ಅವನ ಜೀವಮಾನದಲ್ಲೆಲ್ಲಾ ಅವರು ತಮ್ಮ ಪೂರ್ವಿಕರ ದೇವರಾದ ಯೆಹೋವನನ್ನು ಬಿಡದೆ ಹಿಂಬಾಲಿಸಿದರು.

2 ಪೂರ್ವಕಾಲವೃತ್ತಾಂತ — Chapters